ನಿಮ್ಮ ಮಕ್ಕಳಿಗೆ ನೀವು ಕಲಿಸಲೇಬೇಕಾದ ಒಂಭತ್ತು ಹಣಕಾಸಿನ ಪಾಠಗಳು

Update: 2017-10-01 08:07 GMT

ತುಂಬ ತಡವಾಗುವ ಮುನ್ನವೇ ನಿಮ್ಮ ಮಕ್ಕಳಲ್ಲಿ ಹಣಕಾಸಿನ ವಿಷಯಗಳ ಕುರಿತು ಅರಿವು ಮೂಡಿಸುವುದು ಒಳ್ಳೆಯದು. ಇದು ಅವರ ಉತ್ತಮ ಭವಿಷ್ಯಕ್ಕೆ ಭದ್ರ ಬುನಾದಿಯೂ ಆಗುತ್ತದೆ. ತಮ್ಮ ಹಣಕಾಸನ್ನು ಸೂಕ್ತವಾಗಿ ನಿರ್ವಹಿಸುವ ಮೂಲ ಜ್ಞಾನವೂ ಇಲ್ಲದೆ ಅವರು ಬದುಕುವುದನ್ನು ನೀವು ಖಂಡಿತ ಬಯಸುವುದಿಲ್ಲ. ಅವರು ಹಣಕಾಸಿನ ಬಗ್ಗೆ ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಯಲು ಅವರಿಗೆ ಹಣಕಾಸಿನ ಈ ಒಂಭತ್ತು ಪಾಠಗಳನ್ನು ಅಗತ್ಯವಾಗಿ ಕಲಿಸಿ.

ಕುಟುಂಬದ ಪಾತ್ರ

 ಹಣಕಾಸಿನ ಕುರಿತು ಮಗುವಿನ ಧೋರಣೆಯನ್ನು ರೂಪಿಸುವುದೇ ಕುಟುಂಬ. ಹಣಕಾಸಿಗೆ ಸಂಬಂಧಿಸಿದ ಪ್ರತಿಯೊಂದೂ ನಿರ್ಧಾರವನ್ನು ಚೆನ್ನಾಗಿ ಯೋಚಿಸಿಯೇ ತೆಗೆದುಕೊಳ್ಳುವ ವ್ಯಕ್ತಿ ನೀವಾಗಿದ್ದರೆ ನಿಮ್ಮ ಮಗುವೂ ಅದನ್ನು ಕಲಿತುಕೊಳ್ಳುವ ಸಾಧ್ಯತೆಗಳಿವೆ. ಹಣಕಾಸು ಕುರಿತು ನಿಮ್ಮ ಚಿಂತನೆಗಳನ್ನು ಒಂದು ಕುಟುಂಬವಾಗಿ ಚರ್ಚಿಸಿ. ಇದರಿಂದ ಕಾಲೇಜಿಗೆ ಹೋಗುತ್ತಿರುವ ನಿಮ್ಮ ಮಕ್ಕಳ ನಿರೀಕ್ಷೆಗಳೇನು ಎನ್ನುವುದು ನಿಮಗೆ ತಿಳಿಯುತ್ತದೆ. ಹಣಕಾಸು ಕುರಿತು ಮಕ್ಕಳಲ್ಲಿ ಒಂದು ಖಚಿತವಾದ ಧೋರಣೆಯನ್ನು ರೂಪಿಸಲು ಇದರಿಂದ ಸಾಧ್ಯವಾಗುತ್ತದೆ.

ಹಣ ಮರದಲ್ಲಿ ಬೆಳೆಯುವುದಿಲ್ಲ

ಹಣವು ಮರದಲ್ಲಿ ಬೆಳೆಯುವುದಿಲ್ಲ, ಅದು ಸೀಮಿತ ಸಂಪನ್ಮೂಲ ಎನ್ನುವುದನ್ನು ಮಕ್ಕಳು ತಮ್ಮ ಎಳವೆಯಲ್ಲಿಯೇ ತಿಳಿದುಕೊಳ್ಳುವುದು ತುಂಬ ಮುಖ್ಯವಾಗಿದೆ. ನಿಮ್ಮಲ್ಲಿ ಸಾಕಷ್ಟು ಹಣವಿದ್ದರೂ ಅದಕ್ಕೆ ತಕ್ಕ ಹಾಗೆ ಪರ್ಯಾಯ ಖರ್ಚುಗಳೂ ನಿಮಗೆ ಇರುತ್ತವೆ. ನಿಮ್ಮ ಮಕ್ಕಳಿಗೆ ಪ್ರತಿ ತಿಂಗಳು ನೀಡುವ ಪಾಕೆಟ್ ಮನಿಯ ಮೊತ್ತವನ್ನು ನಿರ್ಧರಿಸಿ ಮತ್ತು ಅವರು ಇಡೀ ತಿಂಗಳು ಅದರಲ್ಲೇ ತಮ್ಮ ಖರ್ಚುಗಳನ್ನು ಕಳೆಯುವುದನ್ನು ಅನಿವಾರ್ಯವಾಗಿಸಿ. ಇದರಿಂದ ಅವರು ಹಿಡಿತದಿಂದ ಹಣ ಖರ್ಚು ಮಾಡುವಂತಾ ಗುತ್ತದೆ.

ಬಜೆಟ್ ರೂಪಿಸುವುದು ಜಂಟಿ ಕಾರ್ಯವಾಗಲಿ

ಕುಟುಂಬದ ವೆಚ್ಚಕ್ಕಾಗಿ ನಿಮ್ಮ ಮಾಸಿಕ ಬಜೆಟ್ ರೂಪಿಸುವಾಗ ಮಕ್ಕಳನ್ನೂ ಸೇರಿಸಿಕೊಳ್ಳಿ. ಇದರಿಂದ ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎನ್ನುವುದನ್ನು ಅವರೂ ಒಪ್ಪಿಕೊಳ್ಳುವಂತಾಗುತ್ತದೆ. ಕಡ್ಡಾಯ ಮತ್ತು ವಿವೇಚಿತ ಖರ್ಚುಗಳು ಸೇರಿದಂತೆ ಜೀವನ ವೆಚ್ಚವನ್ನು ನಿಗದಿ ಮಾಡುವುದನ್ನು ಪಾಲಿಸಬೇಕಾದ ಒಂದು ನಿಯಮವನ್ನಾಗಿ ಮಾಡಿಕೊಳ್ಳಿ. ನಿಮ್ಮ ಮಕ್ಕಳು ಸ್ವಲ್ಪ ಹೆಚ್ಚು ಐಷಾರಾಮವನ್ನು ಬಯಸಿದರೆ ಅರೆಕಾಲಿಕ ಕೆಲಸ ಹುಡುಕಿಕೊಳ್ಳಲು ಅವರನ್ನು ಉತ್ತೇಜಿಸಿ.

ಹಣಕಾಸು ವಹಿವಾಟುಗಳನ್ನು ಕಲಿಸಿ

ಡಿಜಿಟಲ್ ವಹಿವಾಟುಗಳು, ಆನ್‌ಲೈನ್‌ನಲ್ಲಿ ಖಾತೆಯ ಭದ್ರತೆ, ಇಲೆಕ್ಟ್ರಾನಿಕ್ ವ್ಯಾಲೆಟ್ ನಿರ್ವಹಣೆ ಹೇಗೆ ಮತ್ತು ಲೆಕ್ಕಾಚಾರ ಸುಲಭವಾಗಲು ನಗದು ಹಣದ ಕನಿಷ್ಠ ಬಳಕೆಯ ಬಗ್ಗೆ ಅವರಿಗೆ ತಿಳಿಸಿ ಹೇಳಿ. ಅವರ ಖರ್ಚಿನ ವಿವರಗಳನ್ನು ನಿಮ್ಮೆಂದಿಗೆ ಹಂಚಿಕೊಳ್ಳುವುದನ್ನು ಕಡ್ಡಾಯ ಮಾಡಿ.

ಸಾಲದ ಬಗ್ಗೆ ತಿಳುವಳಿಕೆ

ನಿಮ್ಮ ಮಕ್ಕಳು ಹಣವನ್ನು ಖರ್ಚು ಮಾಡುವುದನ್ನು ಅವರ ಸ್ನೇಹಿತರೂ ಗಮನಿಸುತ್ತಿ ರುತ್ತಾರೆ. ಸ್ನೇಹಿತರ ಗುಂಪಿನಲ್ಲಿ ಹಣದ ವಹಿವಾಟುಗಳು ನಡೆಯುವುದಕ್ಕೆ ಇದು ಬುನಾದಿಯಾಗುತ್ತದೆ. ಸ್ನೇಹಿತರೊಂದಿಗಿನ ಖರ್ಚುಗಳನ್ನು ಸಮಾನವಾಗಿ ಹಂಚಿಕೊಳ್ಳು ವಂತೆ ನಿಮ್ಮ ಮಕ್ಕಳಿಗೆ ತಿಳಿಸಿ. ಸ್ನೇಹಿತರಿಂದ ಸಾಲ ಪಡೆಯಕೂಡದು ಮತ್ತು ಅವರಿಗೆ ಸಾಲವನ್ನು ನೀಡಬಾರದು ಎಂದು ತಾಕೀತು ಮಾಡಿ.

ಮಕ್ಕಳಿಗೆ ಹಣ ರವಾನೆ

ನಿಮ್ಮ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಬೇರೆ ಊರಿನಲ್ಲಿ ವಾಸವಾಗಿರಬಹುದು. ಅವರಿಗೆ ಹಣ ಕಳುಹಿಸಲು ನಿರ್ದಿಷ್ಟ ದಿನಾಂಕವನ್ನು ನಿಗದಿ ಪಡಿಸಿಕೊಳ್ಳಿ. ಇದರಿಂದ ಅವರು ತಮ್ಮ ಹಣಕಾಸನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ತುರ್ತು ಸಂದರ್ಭ ಗಳಿಗಾಗಿ ಒಂದಿಷ್ಟು ಹಣವನ್ನು ಅವರ ಬ್ಯಾಂಕ್ ಖಾತೆಯಲ್ಲಿಡಿ ಮತ್ತು ಅದರ ಮೇಲೆ ನಿಗಾ ಇಡಿ. ಇದು ನಿಮ್ಮ ಮಕ್ಕಳಲ್ಲಿ ಹಣಕಾಸು ಶಿಸ್ತನ್ನು ಬೆಳೆಸುತ್ತದೆ. ಖಾತೆಯಲ್ಲಿ ಹಣವಿದೆಯೆಂದು ಅದನ್ನವರು ಬೇಕಾಬಿಟ್ಟಿಯಾಗಿ ಖರ್ಚು ಮಾಡುವುದಿಲ್ಲ.

ಸುರಕ್ಷಿತ ಬ್ಯಾಂಕಿಂಗ್ ಬಗ್ಗೆ ಕಲಿಸಿ

ಸುರಕ್ಷಿತ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಬಳಕೆ ಮತ್ತು ಆನ್‌ಲೈನ್ ವಹಿವಾಟುಗಳ ಕುರಿತು ಮೂಲ ನಿಯಮಗಳನ್ನು ನಿಮ್ಮ ಮಕ್ಕಳು ತಿಳಿದುಕೊಳ್ಳುವಂತೆ ಮಾಡಿ. ತಮ್ಮ ಡೆಬಿಟ್ ಕಾರ್ಡ್ ಕಳೆದುಕೊಂಡಾಗ ಅಥವಾ ಅದರ ದುರುಪಯೋಗ ಪತ್ತೆಯಾದರೆ ಯಾವ ಕ್ರಮಗಳನ್ನು ಅನುಸರಿಸಬೇಕು ಎನ್ನುವುದನ್ನು ಅವರಿಗೆ ಮನದಟ್ಟು ಮಾಡಿ.

ಮೈನರ್ ಖಾತೆಗಳನ್ನು ಮೇಜರ್ ಖಾತೆಗಳನ್ನಾಗಿ ಪರಿವರ್ತಿಸಿ

ನಿಮ್ಮ ಮಕ್ಕಳ ಹೆಸರಿನಲ್ಲಿ ಹೂಡಿಕೆಯ ಮೈನರ್ ಖಾತೆಗಳಿದ್ದರೆ ಅವರಿಗೆ 18 ವರ್ಷಗಳು ತುಂಬಿದ ಬಳಿಕ ಅವುಗಳನ್ನು ನೀವು ನಿರ್ವಹಿಸುವಂತಿಲ್ಲ. ಹೀಗಾಗಿ ಅವರು ಪ್ರಾಪ್ತ ವಯಸ್ಕರಾದಾಗ ಅಂತಹ ಖಾತೆಗಳನ್ನು ಮೇಜರ್ ಖಾತೆಗಳನ್ನಾಗಿ ಪರಿವರ್ತಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ.

ನಿಮ್ಮ ಮಕ್ಕಳು ಹಣಕಾಸಿನ ಸ್ವಾತಂತ್ರವನ್ನು ಅನುಭವಿಸಲು ಬಿಡಿ

ಕಾಲಕ್ರಮೇಣ ನಿಮ್ಮ ಮಕ್ಕಳ ದುಡ್ಡಿನ ಬಗ್ಗೆ ನೀವು ಗಮನ ಹರಿಸುವುದನ್ನು ಬಿಡುತ್ತೀರಿ ಎನ್ನುವುದು ಅವರಿಗೆ ಗೊತ್ತಾಗಲಿ. ಅವರ ವೇತನವೆಷ್ಟು ಎನ್ನುವುದನ್ನು ಪದೇ ಪದೆ ಕೇಳಿ ಕಿರಿಕಿರಿ ಮಾಡಬೇಡಿ ಮತ್ತು ಇತರರ ವೇತನಗಳೊಂದಿಗೆ ಹೋಲಿಸಬೇಡಿ. ಅವರು ಕಠಿಣ ಶ್ರಮ ವಹಿಸಿ ಸಂಪಾದಿಸಿದ ಹಣಕಾಸಿನ ಸ್ವಾತಂತ್ರವನ್ನು ಅವರು ಅನುಭವಿಸಲು ಅವಕಾಶ ನೀಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News