×
Ad

ಗೋಮೂತ್ರ ಮುಸ್ಲಿಮರಿಗೂ ಸ್ವೀಕಾರಾರ್ಹವಾಗಿರಬೇಕು: ಬಾಬಾ ರಾಮ್‌ದೇವ್

Update: 2017-10-01 22:13 IST

ಹೊಸದಿಲ್ಲಿ, ಅ. 2: ಗೋಮೂತ್ರವನ್ನು ಚಿಕಿತ್ಸೆಯಲ್ಲಿ ಬಳಸುವುದರಿಂದ ಮುಸ್ಲಿಮರಿಗೂ ಸ್ವೀಕಾರಾರ್ಹವಾಗಿರಬೇಕು ಎಂದು ಯೋಗ ಗುರು ಹಾಗೂ ಪತಂಜಲಿಯ ಸ್ಥಾಪಕ ಬಾಬಾ ರಾಮ್‌ದೇವ್ ಹೇಳಿದ್ದಾರೆ.

“ಗೋಮೂತ್ರವನ್ನು ಚಿಕಿತ್ಸೆಗೆ ಬಳಸಲು ಸಾಧ್ಯ ಎಂದು ಕುರ್‌ಆನ್‌ನಲ್ಲಿ ಹೇಳಲಾಗಿದೆ. ಕೆಲವರು ಪತಂಜಲಿಯನ್ನು ಹಿಂದೂ ಕಂಪೆನಿ ಎಂದು ಗುರಿಯಾಗಿಸಿ ವಾಗ್ದಾಳಿ ನಡೆಸುತ್ತಿದ್ದಾರೆ. ನಾನು ಎಂದಾದರೂ ಹಮ್‌ದರ್ದ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದೇನೆಯೇ” ಎಂದು ಅವರು ಪ್ರಶ್ನಿಸಿದ್ದಾರೆ.

  “ನಾನು ಹಮ್‌ದರ್ದ್ ಹಾಗೂ ಹಿಮಾಲಯನ್ ಔಷಧ ಕಂಪೆನಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ. ಹಿಮಾಲಯ ಗುಂಪಿನ ಫಾರೂಕ್ ಭಾ ನನಗೆ ಯೋಗ ಗ್ರಾಮ ನಿರ್ಮಿಸಲು ಭೂಮಿ ದಾನ ಮಾಡಿದ್ದಾರೆ. ಆರೋಪಗಳನ್ನು ಮಾಡುತ್ತಿರುವ ಜನರು ದ್ವೇಷದ ಗೋಡೆಯನ್ನು ಮಾತ್ರ ನಿರ್ಮಿಸಬಲ್ಲರು” ಎಂದು ರಾಮ್‌ದೇವ್ ಟಿ.ವಿ. ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

“10 ಸಾವಿರ ಕೋಟಿ ರೂಪಾಯಿಯ ಪತಂಜಲಿ ಗುಂಪಿಗೆ ಉತ್ತರಾಧಿಕಾರಿಯನ್ನು ರೂಪಿಸಲು ಚಿಂತಿಸುತ್ತಿದ್ದೇನೆ. ನನ್ನಿಂದ ತರಬೇತಿ ಪಡೆದ 500 ಸಾಧುಗಳ ತಂಡ ಉತ್ತರಾಧಿಕಾರಿಯಾಗಲಿದ್ದಾರೆ. ನಾನು ಎಂದಿಗೂ ಸಂಕುಚಿತವಾಗಿ ಚಿಂತಿಸುವುದಿಲ್ಲ. ವಿಶಾಲವಾಗಿ ಚಿಂತಿಸುತ್ತೇನೆ. 500 ವರ್ಷದ ಬಳಿಕದ ನನ್ನ ದೇಶದ ಬಗ್ಗೆ ನಾನು ಚಿಂತಿಸುತ್ತೇನೆ. ಮುಂದಿನ 100 ವರ್ಷಗಳ ಪತಂಜಲಿ ಗುಂಪಿನ ಬಗ್ಗೆ ನಾನು ಚಿಂತಿಸುತ್ತೇನೆ. ನಾನು ಹೋಗುವಾಗ ನನ್ನ ಉತ್ತರಾಧಿಕಾರಿಯನ್ನು ಬಿಟ್ಟು ಹೋಗುತ್ತೇನೆ” ಎಂದು ರಾಮ್‌ದೇವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News