×
Ad

ರಾಖೈನ್‌ನಲ್ಲಿ ಶಾಲೆಗಳ ಪುನಾರಂಭ: ರೊಹಿಂಗ್ಯಾ ಗ್ರಾಮಗಳಲ್ಲಿ ಮುಂದುವರಿದ ವಲಸೆ

Update: 2017-10-01 22:33 IST

ಯಾಂಗೊನ್,ಅ.1: ಕೋಮು ದಳ್ಳುರಿಯಿಂದ ತತ್ತರಿಸುತ್ತಿರುವ ರಾಖೈನ್ ಪ್ರಾಂತದ ವಸತಿಪ್ರದೇಶಗಳಲ್ಲಿ ಮ್ಯಾನ್ಮಾರ್ ಶಾಲೆಗಳನ್ನು ಶನಿವಾರ ಪುನಾರಂಭಿಸಿದೆ. ಹಿಂಸಾಚಾರ ಪೀಡಿತ ರಾಖೈನ್‌ನಲ್ಲಿ ಶಾಂತಿ ಹಾಗೂ ಸ್ಥಿರತೆ ಹಿಂತಿರುಗಿರುವುದಾಗಿ ಮ್ಯಾನ್ಮಾರ್‌ನ ಸರಕಾರಿ ಸ್ವಾಮ್ಯದ ಮಾಧ್ಯಮಗಳು ರವಿವಾರ ತಿಳಿಸಿದೆ. ಆದಾಗ್ಯೂ, ರಾಖೈನ್‌ನ ಗಲಭೆ ಪೀಡಿತಪ್ರದೇಶಗಳಿಂದ ಸಹಸ್ರಾರು ರೊಹಿಂಗ್ಯರ ವಲಸೆ ಮುಂದುವರಿದಿರುವುದಾಗಿ ವಿದೇಶಿ ಸುದ್ದಿಸಂಸ್ಥೆಗಳು ತಿಳಿಸಿವೆ.

 ರಾಖೈನ್‌ನಲ್ಲಿ ಸ್ಥಿರತೆ ಮರಳಿರುವುದರಿಂದ ವೌಂಗ್‌ಡಾವ್ ಹಾಗೂ ಬುತಿಡಾವುಂಗ್ ವಸತಿಪ್ರದೇಶಗಳಲ್ಲಿ ಶಾಲೆಗಳು ಪುನಾರಂಭಗೊಂಡಿರುವುದಾಗಿ ಮ್ಯಾನ್ಮಾರ್‌ನ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿರುವುದಾಗಿ, ಸರಕಾರದ ಮುಖವಾಣಿ ಗ್ಲೋಬಲ್ ನ್ಯೂಲೈಟ್ ಪತ್ರಿಕೆ ವರದಿ ಮಾಡಿದೆ.

ರಾಖೈನ್ ಪ್ರಾಂತದಲ್ಲಿ ಮ್ಯಾನ್ಮಾರ್ ಸೇನೆ ಹಾಗೂ ಬೌದ್ಧ ಉಗ್ರಗಾಮಿಗಳು ನಡೆಸಿದ ಹಿಂಸಾಚಾರದಿಂದಾಗಿ 30 ಸಾವಿರಕ್ಕೂ ಅಧಿಕ ರೊಹಿಂಗ್ಯರು ನಿರಾಶ್ರಿತರಾಗಿದ್ದು, ಜೀವಭಯದಿಂದ ನೆರೆಯ ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ.

‘‘ಬೌದ್ಧ ಜನಾಂಗೀಯರ ಬಾಹುಳ್ಯವಿರುವ ಪ್ರದೇಶಗಳಲ್ಲಿನ ಶಾಲೆಗಳು ಸುರಕ್ಷಿತವಾಗಿವೆ. ಆದರೆ ಬಂಗಾಳಿಗಳು (ರೊಹಿಂಗ್ಯರು) ಹೆಚ್ಚಾಗಿರುವ ಗ್ರಾಮಗಳಲ್ಲಿನ ಶಾಲೆಗಳನ್ನು ಪುನಾರಂಭಿಸುವ ಬಗ್ಗೆ ಯೋಚಿಸುವ ಅಗತ್ಯವಿದೆ’’ ಎಂದು, ರಾಖೈನ್ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿರುವುದನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News