ಗಾಂಧೀಜಿಯ ಕೊನೆಯ ದಿನಗಳು

Update: 2017-10-01 18:33 GMT

ಗಡಿಯಾರದ ಮುಳ್ಳುಗಳು ನಿರ್ಲಿಪ್ತವಾಗಿ ತಿರುಗುತ್ತಿದ್ದವು. ದಿಲ್ಲಿಯ ಕಾಡ್ಗಿಚ್ಚು ಕ್ರಮೇಣ ಶಮನವಾಗುತ್ತಿತ್ತು. ಆದರೆ ಮತೀಯ ದೇಶದ ಸುಪ್ತ ಕಾಳಸರ್ಪ ಕತ್ತಲೆಯಲ್ಲಿ ಕಣ್ತಪ್ಪಿಸಿ ಸುಳಿಯುತ್ತಲೇ ಇತ್ತು. ಜನವರಿ 26, 1930ರಿಂದಲೂ ಪೂರ್ಣ ಸ್ವರಾಜ್ಯ ಸಾಧನೆಯ ಸಂಕಲ್ಪ ದಿನವನ್ನಾಗಿ ಆಚರಿಸುತ್ತ ಬರುತ್ತಿದ್ದು, ಈ ವರ್ಷ ಸ್ವತಂತ್ರ ಭಾರತ ವಿಶೇಷ ದಿನವನ್ನಾಗಿ ಆಚರಿಸಬೇಕಿತ್ತು. ರಾಜ್ಯಾಂಗದ ಕರಡು ಇನ್ನೂ ಸಿದ್ಧವಾಗಿರಲಿಲ್ಲ. ಗಾಂಧೀಜಿ ಅನಾಸಕ್ತರಾಗಿ ಭವಿಷ್ಯದ ಚಿಂತನೆಯಲ್ಲೇ ಮುಳುಗಿ ಹೋಗಿದ್ದರು. ಸಂಜೆಯ ಪ್ರಾರ್ಥನಾ ಪ್ರವಚನಗಳಲ್ಲಿ ‘‘ರಾಜಕೀಯ ಸ್ವಾತಂತ್ರ ಕೇವಲ ಮೊದಲ ಹೆಜ್ಜೆ. ಭಾರತದಲ್ಲಿ ಕಟ್ಟ ಕಡೆಯ ಪ್ರಜೆಗೆ ನೆಮ್ಮದಿಯ ಬದುಕಿನ ಅವಕಾಶಗಳು ಕರಗತವಾಗಿ ಈ ಸ್ವರಾಜ್ಯದಲ್ಲಿ ತನ್ನ ಸೇವೆಗೂ ಗೌರವದ ಸ್ಥಾನ ಮತ್ತು ಸರಿಸಮಾನವಾದ ಹಕ್ಕುಗಳಿವೆ ಎಂದು ಮನಗಾಣುವಂತೆ ಆಗಬೇಕು’’ ಎಂದು ಒತ್ತಿ ಹೇಳಿದರು.

ಸುತ್ತಲು ಕವಿಯುತ್ತಿರುವ ಸೇಡಿನ ಹಾಲಾಹಲದಿಂದ ನಾವು ಪಾರಾ ಗಬೇಕಾಗಿದೆ. ಶುದ್ಧ ಹೃದಯದ ಪ್ರಾರ್ಥನೆ ಮತ್ತು ಜಗನ್ನಿಯಾಮಕ ಶಕ್ತಿಯ ಅನುಗ್ರಹದಿಂದ ವೀರರ ಅಹಿಂಸಾ ಧರ್ಮ ನಮಗೆ ಲಭಿಸಿದ ಲ್ಲದೆ ಭಾರತ ತನ್ನ ಕನಸಿನ ಭಾರತ ಆಗಲಾರದು ಎಂಬ ಎಂಬ ಖಚಿತ ನಿರ್ಣಯಕ್ಕೆ ರಾಷ್ಟ್ರಪಿತ ಗಾಂಧೀಜಿ ಬಂದು ನಿಂತಿದ್ದರು. ಆ ಸಂಜೆಯ ಗೀತಾಪಠಣ ಅಲ್ಲಿ ನೆರೆದಿದ್ದ ಸಹೃದಯ ಸೋದರ ಸೋದರಿಯರ ಮನ ದಲ್ಲಿ ಗುಣಗುಣಿಸುತ್ತಿತ್ತು.

ರಾಗ ದ್ವೇಷವಿಯುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್ /

ಆತ್ಮವಶ್ಶೈರ್ವಿಧೇಯಾತ್ಮ ಪ್ರಸಾದ ಮಧಿಗಚ್ಛತಿ //

ಸ್ಥಿತ ಪ್ರಜ್ಞಾ ದರ್ಶನದ ಈ ಮನೋಭೂಮಿಕೆಯಲ್ಲಿ ಗಾಂಧೀಜಿ ಲೀನ ವಾಗಿ ಹೋಗಿದ್ದರು. ಉಕ್ಕಿನಂತಹ ಸಂಕಲ್ಪ ಶಕ್ತಿಗಾಗಿ ಭಗವಂತನಲ್ಲಿ ಮೊರೆಯಿಡುತ್ತ ಧ್ಯಾನ ಮಗ್ನರಾಗುತ್ತಿದ್ದರು.

ಜನವರಿ ಇಪ್ಪತ್ತರಂದು ಸಂಜೆ ಎಂದಿನಂತೆ ಲವಲವಿಕೆಯಿಂದ ಗಾಂಧೀಜಿ ಪ್ರಾರ್ಥನಾ ಸಭೆಗೆ ನಡೆದು ಬಂದರು. ಆ ಬೃಹತ್ ಜನ ಸಂಖ್ಯೆಯ ದಿಲ್ಲಿಯಲ್ಲಿ ಸಂಜೆಯ ಪ್ರಾರ್ಥನೆಗೆ ಸುಮಾರು ಮೂನ್ನೂರು ಜನ ಸಾಮಾನ್ಯ ದೈವಭಕ್ತರೂ, ಶಾಂತಿ ಬಯಕೆಯವರೂ ಆದ ಸ್ತ್ರೀ, ಪುರುಷರು, ಹಿಂದೂ, ಮುಸ್ಲಿಮ್, ಸಿಖ್ ಅನುಯಾಯಿಗಳೂ, ಸ್ವಯಂ ಸೇವಾ ಕಾರ್ಯದಲ್ಲಿ ತೊಡಗಿದ್ದ ದೇಶಭಕ್ತರೂ ಸೇರುತ್ತಿದ್ದರು. ಗಣ್ಯ ನಾಯಕರಾಗಲಿ, ಉನ್ನತ ಅಧಿಕಾರಿಗಳ ವರ್ಗದವರಾಗಲಿ, ರಕ್ಷಣಾ ಸಿಬ್ಬಂದಿಯಾಗಲಿ ಇರುತ್ತಲೇ ಇರಲಿಲ್ಲ. ಆ ಸಂಜೆ ಗಂಭೀರ ಶಾಂತತೆ ತುಂಬಿತ್ತು. ಏಕಾಗ್ರತೆಯಿಂದ ಪ್ರಾರ್ಥನಾ ಶ್ಲೋಕಗಳನ್ನು ಪಠಿಸಿದರು. ಒಮ್ಮಿಂದೊಮ್ಮೆಲೆ ಸಭೆಯ ಒಂದು ಮೂಲೆಯಲ್ಲಿ ಬಾಂಬ್ ಸ್ಫೋಟ ಭಯಂಕರವಾಗಿ ಸಿಡಿಯಿತು. ಇರುವೆ ಗೂಡಿಗೆ ಕೊಳ್ಳಿಯಿಟ್ಟಂತಾಗಿ ಹಾಹಾಕಾರವೆದ್ದಿತ್ತು. ಪ್ರಶಾಂತವಾಗಿ ಮಾತನಾಡುತ್ತಿದ್ದ ಬಾಪು ಸ್ವಲ್ಪವೂ ವಿಚಲಿತರಾಗಲಿಲ್ಲ. ಎಲ್ಲರನ್ನೂ ಸಮಾಧಾನಪಡಿಸಿ ಸಭೆಯ ವಾತಾ ವರಣವನ್ನು ತಿಳಿಗೊಳಿಸಿದರು. ಒಂದು ಭವ್ಯ ಶಾಂತಿಯ ಆಶೀರ್ವಾದ ವನ್ನು ಮನಸ್ಸಿಗೆ ತಂದುಕೊಟ್ಟಿದ್ದರು. ಆ ಯುವಕ ಕಟ್ಟ ಹಿಂದುತ್ವವಾದಿಯಾಗಿದ್ದ. 25ವರ್ಷದ ಮದನ್ ಲಾಲ್ ಪಾದ್ವ. ಪಶ್ಚಿಮ ಪಂಜಾಬಿನ ಗಲಭೆಗಳಲ್ಲಿ ಮೂಲೋತ್ಪಾಟನೆ ಗೊಂಡು ದಿಲ್ಲಿಯ ನಿರಾಶ್ರಿತ ಶಿಬಿರಕ್ಕೆ ಬಂದಿದ್ದ. ಗಾಂಧೀಜಿಯ ಬಗ್ಗೆ ರೋಷಗೊಂಡು ಬಾಂಬ್ ಸಿಡಿಸಲು ನಿರ್ಧರಿಸಿಬಿಟ್ಟ. ಅನಿರೀಕ್ಷಿತ ದುರಂತಗಳಿಂದ ತೀವ್ರ ನೊಂದು ನಿರಾಶೆಗೊಂಡಿದ್ದ. ಈ ಯುವಕನ ಮೇಲೆ ಆ ಸಭೆಯಲ್ಲಿರುವವರೆಲ್ಲ ಮೇಲೆ ಬೀಳುತ್ತಿದ್ದುದನ್ನು ಗಾಂಧೀಜಿ ತಪ್ಪಿಸಿ ಹೀಗೆಂದೆರು:-

‘‘ತಾನು ಹಿಂದೂ ಧರ್ಮವನ್ನು ರಕ್ಷಿಸಲು ಈ ಕೃತ್ಯಕ್ಕೆ ಕೈ ಹಾಕಿದುದಾಗಿ ಮದನ್‌ಲಾಲ್ ಹೇಳಿದ್ದಾನೆ. ಇಂಥ ಸಾಹಸಗಳಿಂದ ತನ್ನ ಧರ್ಮಕ್ಕೆ ತಾನೂ ಕಳಂಕ ಬಳಿಯುತ್ತೇನೆಂಬ ಅರಿವು ಆತನಿಗಾಗಬೇಕಿತ್ತು. ಈ ಹುಚ್ಚು ಭಯೋತ್ಪಾದನೆಯಿಂದ ನಾನೆಂದೂ ವಿಚಲಿತನಾಗಲಾರೆ. ಆತ ಮಾಡಿದ ಅಪರಾಧಕ್ಕಾಗಿ ಆ ಹದಿಹರೆಯದ ಯುವಕನನ್ನು ಕ್ಷಮಿಸಿ ಬಿಡಿ’’ ಈ ಬಿನ್ನಹವನ್ನವರು ಪೊಲೀಸರಿಗೂ ತಿಳಿಸಿದರು.

ಅನೇಕ ಗುಪ್ತ ಗುಂಪುಗಳು ಗಾಂಧೀಜಿಯನ್ನು ನಾಶಮಾಡಲು ಹವಣಿಸಿಪಿತೂರಿ ಮಾಡುತ್ತಿವೆ ಎಂಬ ಅಂಶ ಈ ಘಟನೆಯ ವಿಚಾರಣೆಯಿಂದ ಗೋಚರಿಸಿತ್ತು. ಗಾಂಧೀಜಿ ಯಾವುದನ್ನ್ನೂ ಲೆಕ್ಕಿಸದೇ ದೇವರಲ್ಲಿ ಭರವಸೆ ಯಿಟ್ಟು. ರಕ್ಷಣಾ ಸಿಬ್ಬಂದಿಯ ರಕ್ಷಣೆಯನ್ನು ನಿರಾಕರಿಸಿಬಿಟ್ಟರು. ಗೃಹ ಸಚಿವ ಸರ್ದಾರ್ ಪಟೇಲ್‌ರು ನೊಂದು ನಿರಾಶರಾದರು. ದಿನದಿನವೂ ಹೊರಗಿನ ಪಹರೆಯನ್ನು ಹೆಚ್ಚಿಸಿದರು. ದಿನಗಳು ಎಂದಿನಂತೆ ಉರುಳುತ್ತಿದ್ದವು. ಸ್ವಾತಂತ್ರ ದಿನದಂದು ಪ್ರಾರ್ಥನಾ ಪ್ರವಚನದಲ್ಲಿ ‘‘ಸ್ವಾತಂತ್ರ ಸಮರ ದ ಸಮಯದಲ್ಲಿ ಈ ದಿನ ಪವಿತ್ರ ಸಂಕಲ್ಪದ ದಿನವಾಗಿತ್ತು. ನಾವೀಗ ದೇಶವನ್ನು ದಾಸ್ಯದಿಂದ ವಿಮೋಚನೆಗೊಳಿಸಿದ್ದೇವೆ. ಆದರೆ ಏನೋ ಒಂದು ಭ್ರಮನಿರಸನದ ಅನುಭವ ನನ್ನಂತರಂಗದಲ್ಲಿ ಕವಿಯುತ್ತಿದೆ. ಅಂದಿನ ಕನಸುಗಳು ಹುಸಿಯಾದೀತೇ’’ ಎಂದರು ಬಾಪೂ. ಸಮಸ್ತ ದೇಶಪ್ರೇಮೀ ಬಾಂಧವರು ಒಟ್ಟಾಗಿ ನೈತಿಕವಾಗಿಯೂ ತ್ಯಾಗ ಬಲಿದಾನಗಳ ಮೂಲಕವೂ ಶ್ರಮಿಸಿ ಸ್ವಾತಂತ್ರ ಲಭಿಸಿರುವುದೆಂದು ಕಾಂಗ್ರೆಸ್ ಸಂಸ್ಥೆ ಅರಿತುಕೊಳ್ಳಬೇಕೆಂದು ಗಾಂಧೀಜಿ ಹರಿಜನ ಪತ್ರಿಕೆಗೆ ಒಂದು ಲೇಖನ ಬರೆದರು. ಕೇವಲ ಅಧಿಕಾರ ಸ್ಪರ್ಧೆಯಲ್ಲಿ ಮಾತ್ರ ಉಳಿ ಯುವ ಸಂಸದೀಯ ಪಕ್ಷವಾಗಿ ಅದು ಮುಂದುವರಿಯುವುದು ಸರಿಯಲ್ಲ. ಸತ್ಯಾಗ್ರಹ ಆಂದೋಲನದಲ್ಲಿ ಶ್ರದ್ಧೆಯಿರುವ ಪ್ರತಿಯೊಬ್ಬ ಸ್ವಯಂಸೇವಕನೂ ಜನತೆಯಲ್ಲಿ ಲೀನವಾಗಿ ಸೇವಾದೀಕ್ಷೆಯಿಂದ ಗ್ರಾಮಗಳಲ್ಲಿ ನೆಲೆಸುವುದೇ ಋಜು ಮಾರ್ಗ. ಸ್ವಾತಂತ್ರ ಯೋಧರೆಲ್ಲ ‘ಲೋಕಸೇವಕ’ ರಾಗಿ ಗ್ರಾಮಗಳಲ್ಲಿ ನೆಲೆಸುವುದೇ ಋಜು ಮಾರ್ಗ. ಸ್ವಾತಂತ್ರ ಯೋಧರೆಲ್ಲ ‘ಲೋಕಸೇವಕ’ ರಾಗಿ ಗ್ರಾಮಗಳಲ್ಲಿ ನೆಲೆಸಿ, ಮುಂದಿನ ಪ್ರಗತಿಗೆ ಕಾರಣರಾಗುವುದೇ ಧರ್ಮ. ಈ ವಿಷಯ ಕುರಿತು ಕಾಂಗ್ರೆಸ್ಸಿನ ರಾಜ್ಯಾಂಗಕ್ಕೆ ಒಂದು ವ್ಯಾಪಕ ತಿದ್ದುಪಡಿ ಸೂಚಿಸಿ ಮುಂದಿನ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಮಂಡಿಸಲು ಗಾಂಧೀಜಿ ಕರಡನ್ನು ಸಿದ್ಧ ಮಾಡಿಟ್ಟರು.


ಮಾರನೆಯ ದಿನ ಸಚಿವೆ ರಾಜಕುಮಾರಿ ಅಮೃತಕೌರ್ ಬಾಪೂಬಳಿಗೆ ಬಂದರು. ಆತಂಕದಿಂದ ‘‘ಬಾಪೂ ನಿಮ್ಮ ಸಭೆಯಲ್ಲಿ ಈಗಲೂ ಗದ್ದಲಗಳಾಗುತ್ತಿವೆಯೆ?’ ಎಂದು ಕೇಳಿದರು. ಆಕೆಯ ಕಳವಳವನ್ನು ಗಾಂಧೀಜಿ ಗುರ್ತಿಸಿ ಏಕೆ? ನಿನಗೆ ಚಿಂತೆ ಯಾಗಿದೆಯೇ? ಒಬ್ಬ ಉನ್ಮತ್ತನ ಆಕ್ರಮಣಕ್ಕೆ ಗುರಿಯಾಗಿ ಗುಂಡು ಸಿಡಿದು ನಾನು ನಿಧನನಾಗುವುದಾದರೆ ಹರ್ಷದಿಂದ ನಿರ್ಗಮಿಸಬೇಕು. ನನ್ನಲ್ಲಿ ದ್ವೇಷ, ಕೋಪ ಇರಬಾರದು. ಪ್ರೇಮವೇ ನನ್ನ ಹೃದಯದಲ್ಲಿ ದೇವರಂತೆ ಪೂರ್ಣವಾಗಿ ಆವರಿಸಿರಬೇಕು. ಅವನ ನಾಮವೇ ನನ್ನ ನಾಲಿಗೆಗೆ ಬರಬೇಕು. ‘‘ಯಾವುದೋ ದಿವ್ಯ ಮಂದಹಾಸ ಅವರ ತೇಜೋಪೂರ್ಣ ಮುಖ ದಲ್ಲಿ ಲಾಸ್ಯವಾಡುತ್ತಿತ್ತು. ‘‘ನೀನು ಆಗ ಒಂದು ಕಂಬನಿ ಯನ್ನೂ ಸುರಿಸಬಾರದು ಆನಂದಪಡಬೇಕು’’ ಎಂದು ನುಡಿದರು.

(ತೆಂಡೂಲ್ಕರ್ ಮಹಾತ್ಮ ‘8)

ಜನವರಿ 29ರಂದು ತಮ್ಮ ನಿಕಟಾನುವರ್ತಿಯಾಗಿ ಸೇವಾಗ್ರಾಮ ಆಶ್ರಮದಲ್ಲಿದ್ದ ಕಿಶೋರಿಲಾಲ್ ಮಶ್ರುವಾಲಾ ಅವರಿಗೆ ಒಂದು ಚಿಕ್ಕ ಪತ್ರ ಬರೆದರು.

ಪ್ರಿಯ ಕಿಶೋರಿಲಾಲ್,ಜನವರಿ 29, 1948

ಬೆಳಗಿನ ಪ್ರಾರ್ಥನೆಯ ನಂತರ ಈ ಪತ್ರ ಬರೆ ಯುತ್ತಿದ್ದೇನೆ. ಶಂಕರನ್‌ಜಿ (ಮತ್ತೊಬ್ಬ ಆಶ್ರಮ ವಾಸಿ) ಅವರ ಮಗಳ ನಿಧನದ ಬಗ್ಗೆ ನೀನು ಬರೆದುದು ಒಳ್ಳೆಯದೇ ಆಯಿತು. ಅವರಿಗೆ ನಾನು ಪ್ರತ್ಯೇಕವಾಗಿ ಬರೆದೆ. ನಾನು ಸೇವಾ ಗ್ರಾಮಕ್ಕೆ ಇಲ್ಲಿಂದ ಹೊರಟು ಬರುವುದು ಇನ್ನೂ ಇತ್ಯರ್ಥವಾಗಿಲ್ಲ. ಇಲ್ಲಿ ದಿಲ್ಲಿಯಲ್ಲಿ ನಾನು ‘‘ಮಾಡಿ ಮುಗಿಸಿದ್ದೇನೆ’’ ಎಂದಾದರೆ ಮಾತ್ರ ಹೊರಡಬಲ್ಲೆ. ನಾನಿಲ್ಲಿ ಇದ್ದು ನನ್ನ ‘ಮಾಡು ಇಲ್ಲವೆ ಮಡಿ’(ಡು ಆರ್ ಡೈ) ಪ್ರತಿಜ್ಞೆ ಈಡೇರುವುದನ್ನು ಕಾಯ ಬೇಕಾಗುವುದಿಲ್ಲ. ಆದರೆ ಇಲ್ಲಿನ ಜನ ಅದನ್ನು ಇನ್ನೂ ನನಗೆ ಮನದಟ್ಟು ಮಾಡಿಕೊಡಬೇಕಾಗಿದೆ. ಬಹುಶಃ ಇದು ನಾಳೆ ಇತ್ಯರ್ಥ ವಾಗಬಹುದು?

ನಿನ್ನ, ಬಾಪೂ

  (ಮಹಾತ್ಮಾಗಾಂಧಿ: ಪ್ಯಾರಿಲಾಲ್ 8) ಜನವರಿ 30

 ಕೊನೆಯ ಅಂಕ ಕಾದು ನಿಂತಿತ್ತು. ಅಹಿಂಸಾ ಯಜ್ಞದ ಮಹಾ ಕುಂಡ ಸಿದ್ಧವಾಗುತ್ತಿತ್ತು. ಬಿರ್ಲಾ ಭವನದ ಹಸಿರು ಹಾಸಿನ ಮೇಲೆ ಸೂರ್ಯದೇವ ಎಂದಿನಂತೆ ತನ್ನ ಪಾವನ ಕಿರಣಗಳನ್ನು ಪಸರಿಸಿ ಮೆಲ್ಲಗೆ ಕ್ಷಿತಿಜದಲ್ಲಿ ಮೂಡುತ್ತಿದ್ದ. ಆ ಸಮಯಕ್ಕೆ ಎಷ್ಟೋ ಮುಂಚೆ ಬೆಳಗಿನ ಮೂರುವರೆ ಗಂಟೆಗೇ ಗಾಂಧೀಜಿ ಲವಲವಿಕೆಯನ್ನು ಪ್ರಾತಃಸ್ಮರಣೆಯ ಪದ್ಮಾಸನದಲ್ಲಿ ಕುಳಿತರು. ‘‘ಈಶಾವಾಸ್ಯ ಮಿದಮ್ ಸರ್ವಂ’’, ಸಾಮೂಹಿಕ ಧ್ವನಿಮೆಲ್ಲಗೆ ಏರುತ್ತಿತ್ತು. ಧ್ಯಾನಮಗ್ನತೆಯಿಂದ ಭವನದ ಪರಿಸರ ಪಾವನ ವಾಗಿತ್ತು. ದಿನಚರಿಯಲ್ಲಿ ಎಲ್ಲರೂ ಮಗ್ನರಾದರು.

ದೇಶ ವಿಭಜನೆಯ ದಾರುಣ ಘಟನೆಯಿಂದ ಸ್ವತಂತ್ರ ಭಾರತ ಚೇತರಿಸಿ ಕೊಳ್ಳುತ್ತಿತ್ತು. ದೇಶದ ಅಗ್ರಗಣ್ಯ ನಾಯಕತ್ವ ವಹಿಸಿ ಒಗ್ಗೂಡಿ ನಡೆಯಬೇ ಕಾಗಿದ್ದ ಸಮಯದಲ್ಲಿ ಜವಾಹರಲಾಲರಿಗೂ ಸರ್ದಾರ್ ಪಟೇಲ್‌ರಿಗೂ ಕೆಲವು ರಾಷ್ಟ್ರೀಯ ನೀತಿ ಧೋರಣೆಗಳಲ್ಲಿ ಭಿನ್ನಾಭಿಪ್ರಾಯ ಹುಟ್ಟಿದ ಸುದ್ದಿ ಎಲ್ಲರನ್ನೂ ಆತಂಕಗೊಳಿಸಿತ್ತು. ಗಾಂಧೀಜಿಗೂ ಇದರ ಮನವರಿಕೆ ಯಾಗಿತ್ತು. ಕರ್ತವ್ಯ ನಿಷ್ಠೆಯಲ್ಲಿ ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧರಾಗಿದ್ದ ಸರ್ದಾರ್ ಪಟೇಲರು ತಮ್ಮ ನಿರ್ಧಾರಗಳಿಂದ ವಿಚಲಿತರಾಗುತ್ತಿರಲಿಲ್ಲ. ಅನೇಕ ವೇಳೆ ತನ್ನ ಗುರು ಗಾಂಧೀಜಿಯಲ್ಲೂ ಅವರು ವಾದ ಮಾಡುತ್ತಿದ್ದುದುಂಟು. ಆದರೆ ಅವರ ಪ್ರಾಮಾಣಿಕತೆ, ಸಚ್ಚಾರಿತ್ರ, ನಿಸ್ವಾರ್ಥತೆಗಳು ಗಾಂಧೀಜಿಯ ನಿಕಟವರ್ತಿಯನ್ನಾಗಿ ಮಾಡಿದ್ದವು. ಉದಾರಭರಿತರೆ ನಿಸಿಕೊಂಡಿದ್ದ ಜವಾಹರರ ಬಗ್ಗೆ, ಅವರ ಉತ್ತುಂಗ ವ್ಯಕ್ತಿತ್ವ ಪ್ರಭಾವಗಳ ಬಗ್ಗೆ ಗಾಂಧೀಜಿಗೆ ಅಪಾರ ಭರವಸೆ. ಈ ಎರಡೂ ಮಹಾಶಕ್ತಿಗಳು ಪರಸ್ಪರ ಒಂದು ಗೂಡದೇ ಹೋದಲ್ಲಿ ದೇಶಕ್ಕೆ ದೊಡ್ಡ ದುರಂತವಾಯಿತು ಎಂದು ಗಾಂಧೀಜಿ ಆಳವಾಗಿ ಚಿಂತಿಸತೊಡಗಿದ್ದರು. ಆ ಸಂಜೆ ನಾಲ್ಕು ಗಂಟೆಗೆ ಸರ್ದಾರ್ ಪಟೇಲ ರನ್ನು ಬರಮಾಡಿಕೊಂಡರು. ಜೊತೆಯಲ್ಲಿ ಪಟೇಲರ ನೆಚ್ಚಿನ ಪುತ್ರಿ ನಿಷ್ಠಾ ವಂತ ಗಾಂಧೀವಾದಿ, ಮಣಿಬೆನ್ ಪಟೇಲರೂ ಬಂದರು. ದೀರ್ಘವಾಗಿ ಚರ್ಚೆ ನಡೆದು ಅನೇಕ ವಿಷಯಗಳ ಬಗ್ಗೆ ಪಟೇಲರು ವಿಸ್ತಾರವಾಗಿ ತಿಳಿಸಿದರು. ಸಂಜೆಯ ಪ್ರಾರ್ಥನಾ ಸಭೆಗೆ ಹೊತ್ತು ಮೀರುತ್ತಿತ್ತು. ಮಣಿಬೆನ್ ಎಚ್ಚರಿಸಿದರು. ಜವಾಹರಲಾಲರನ್ನೂ ವೌಲಾನ ಆಝಾದರನ್ನೂ ಆ ರಾತ್ರಿಗೆ ಆಹ್ವಾನಿಸುವುದಾಗಿಯೂ ಎಲ್ಲವನ್ನೂ ಚರ್ಚಿಸುವುದಾಗಿಯೂ ಬಾಪೂ ನುಡಿದು ಪಟೇಲರನ್ನು ಬೀಳ್ಕೊಟ್ಟರು. ವಿಧಿಯ ಸೆಳೆತ ಬೇರೆಯೇ ಆಗಿತ್ತು.

ಇಕ್ಕೆಲದಲ್ಲಿ ಮೊಮ್ಮೆಕ್ಕಳಾದ ಮನುಗಾಂಧಿ ಮತ್ತು ಆಭಾಗಾಂಧಿ ಇವರ ಆಸರೆಯ ಊರುಗೋಲುಗಳ ಮೇಲೆ ಕೈಯಿಟ್ಟು, ‘‘ಈ ದಿನ ಪ್ರಾರ್ಥನಾ ಸಭೆಗೆ ಹೊತ್ತಾಯಿತು’’ ಎಂದು ಬಿರ್ಲಾಭವನದ ವಿಶಾಲ ಅಂಗಳಕ್ಕೆ ನಡೆದು ಬಂದರು ಬಾಪೂ. ವೇದಿಕೆಯ ಕಡೆಗೆ ಹೋಗುತ್ತಿ ದ್ದಾಗ ಇದ್ದಕ್ಕಿದ್ದಂತೆ ಕೈ ಜೋಡಿಸಿ ಎದುರಿಗೆ ನಿಂತ ಉನ್ಮತ್ತ ಯುವಕ ನಾಥೂರಾಮ್ ಗೋಡ್ಸೆ, ಮುಚ್ಚಿಟ್ಟುಕೊಂಡಿದ್ದ ರಿವಾಲ್ವರ್ ತೆಗೆದು ಮಹಾತ್ಮನ ವಿಶಾಲ ವಕ್ಷಸ್ಥಳಕ್ಕೆ ತೀರ ಹತ್ತಿರದಿಂದಲೇ ಮೂರು ಗುಂಡುಗಳನ್ನು ಹಾರಿಸಿಬಿಟ್ಟ. ಯಾವ ಪುಣ್ಯ ಪುರುಷ ತನ್ನ ಧರ್ಮದ ಅತ್ಯುನ್ನತ ಆಧ್ಯಾತ್ಮಿಕ ವೌಲ್ಯಗಳಿಗನುಗುಣವಾಗಿ ಬಾಳಿ ಭಾರತದ ಔನ್ನತ್ಯವನ್ನು ಹಿಮಾಲಯದೆತ್ತರಕ್ಕೆ ಕೊಂಡೊಯ್ದಿ ದ್ದರೋ ಅವರನ್ನೇ ಹಿಂದೂ ಧರ್ಮದ ಶತ್ರುವೆಂದು ಭಾವಿಸಿ ಆಕ್ರೋಶದಿಂದ ಈ ನರಹತ್ಯೆಗೆ ಆತ ಧಾವಿಸಿಬಿಟ್ಟ. ರಾಷ್ಟ್ರಪಿತನ ಅತ್ಯಮೂಲ್ಯ ಜೀವ ಕೆಳಕ್ಕುರುಳಿತು. ಮರು ನಿಮಿಷವೇ ಭೂಮಾತೆಯ ತಾಯ್ಮಡಿಲಿನಲ್ಲಿ ಪವಡಿಸಿದಂತೆ ಗಾಂಧೀಜಿಯ ಮೃತದೇಹ ಉರುಳಿ ಬಿದ್ದಿತು. ಕೊನೆಯುಸಿರಿನಲ್ಲಿ ‘ಹೇರಾಮ್’ ಎಂದು ಗದ್ಗರಿಸಿ ಲೋಕಪಾವಕ ಬಾಪೂ ದೈವಾಧೀನರಾಗಿಬಿಟ್ಟರು. ಹಠಾತ್ತನೆ ಸಿಡಿಲೆರಗಿ ಲೋಕಕ್ಕೆ ಲೋಕವೇ ಕತ್ತಲಿಗೆ ಜಾರಿ ಕಣ್ಣೀರಿನ ಕಡಲು ಉಕ್ಕಿ ಹರಿಯಿತು. ‘ಬಾಪೂ’ ಇನ್ನಿಲ್ಲ ಎಂಬ ಕಠೋರ ಸತ್ಯ ಗಂಟೆ ಹೊಡೆದಂತೆ ನಿಂತಿತು. ಸತ್ಯಾನ್ವೇಷಕನನ್ನು ವಿಧಿ ತನ್ನೆಡೆಗೆ ಸೆಳೆದು ಬಿಟ್ಟಿತ್ತು. ಸಂಜೆ 5:20 ಸೂರ್ಯ ನಿಧಾನವಾಗಿ ಮುಳುಗುತ್ತಿದ್ದ.

ಸರ್ದಾರ್ ಪಟೇಲರು ಇನ್ನೂ ಭವನದ ಆವರಣದಲ್ಲೇ ಇದ್ದರು. ಹಾಹಾಕಾರ ಕೇಳಿ ಎದ್ದು ಅವರು ಧಾವಿಸಿ ಬಂದರು. ಎಲ್ಲವೂ ಮುಗಿದು ಹೋಗಿತ್ತು. ಶಿಲಾಪ್ರತಿಮೆಯಂತೆ ಅವರು ದಿಗ್ಮೂಢರಾಗಿ ಕುಳಿತುಬಿಟ್ಟರು. ಕಾಡ್ಗಿಚ್ಚಿನಂತೆ ಹರಡಿದ ಸುದ್ದಿ ಕೋಟಿ ಕೋಟಿ ಹೃದಯಗಳನ್ನು ವಿದ್ರಾವಕಗೊಳಿಸಿತು. ಜವಾಹರಲಾಲರು ಧಾವಿಸಿ ಬಂದು ತಮ್ಮ ಆರಾಧ್ಯ ದೈವದ ಶರೀರವನ್ನಪ್ಪಿ ಮಗು ವಿನಂತತ್ತು ಬಿಟ್ಟರು.

ಆ ರಾತ್ರಿ ಆಕಾಶವಾಣಿಯಲ್ಲಿ ನೆಹರೂ

‘‘ನಮ್ಮ ಜೀವನದ ಬೆಳಕೊಂದು ಹಠಾತ್ತನೆ ನಂದಿ ಹೋಯಿತೇ?.... ಇಲ್ಲ ಇಲ್ಲ ಆ ಮಹಾ ಜ್ಯೋತಿ ಸಾಧಾರಣ ಬೆಳಕಲ್ಲ.! ಈ ದೇಶವನ್ನು ಆವರಿಸಿ ನಿಂತಿದ್ದ ಆ ಕರುಣಾಳು ಬೆಳಕು ಎಂದಿಗೂ ನಂದ ಲಾರದು ಸಾವಿರ ವರ್ಷಗಳಾಚೆಗೂ ಅವರ ಪ್ರಭೆ ಉಜ್ವಲವಾಗಿಯೇ ಇರುತ್ತವೆ. ಭಾರತಕ್ಕೂ ವಿಶ್ವಕ್ಕೂ ಬೆಳಕು ನೀಡಿ ಸನ್ಮಾರ್ಗದ ಮಾರ್ಗ ದರ್ಶಕವಾಗಿಯೇ ನಿಂತಿರುತ್ತದೆ. ಕಾರಣ ಆ ಜಾಜ್ವಲ್ಯಮಾನ ದೀಪಸ್ತಂಭ ಸತ್ಯದ ಜೀವಂತ ಸ್ವರೂಪವನ್ನು ಪ್ರತಿನಿಧಿಸಿತ್ತು’’... ಎಂದರು.

ಗಾಂಧೀಜಿಯ ಆಧ್ಯಾತ್ಮಿಕ ಉತ್ತರಾಧಿಕಾರಿ ಎನಿಸಿದ ಆಚಾರ್ಯ ವಿನೋಬ ಭಾವೆ ಸೇವಾ ಗ್ರಾಮ ಆಶ್ರಮದಲ್ಲಿದ್ದರು. ಕೂಡಲೇ ಪ್ರಾರ್ಥನಾ ಸಭೆ ನಡೆಸಿ ಹೀಗೆಂದರು.

‘ಈ ಮಹಾಪವಿತ್ರಜೀವ ಪರಮಾತ್ಮನಲ್ಲಿ ಲೀನವಾಯಿತು. ಅವರ ದೈಹಿಕ ಅವಶೇಷಗಳನ್ನು ಪ್ರಕೃತಿಯಲ್ಲಿ ಲೀನಗೊಳಿಸುತ್ತಿದ್ದೇವೆ. ಕಾಯದ ಅಳಿವಿನಿಂದ ಆತ್ಮ ಅಳಿಯದು. ಬಾಪೂ ಯಾವ ಧ್ಯೇಯ ಗಳನ್ನು ಬೆಳಗಿಸಿ ಪೋಷಿಸಿದರೋ ಅವು ಇಂದು ನಮ್ಮೆಲ್ಲರ ಹೃದಯಾಂತ ರಗಳನ್ನು ಹೊಕ್ಕಿದೆ. ಆ ಆದರ್ಶಗಳಿಗನುಗುಣವಾಗಿ ನಮ್ಮ ಬಾಳು ರೂಪಿತವಾಗಬೇಕು. ಆ ದಿವ್ಯ ಚೇತನ ಸದಾ ಜಾಗೃತವಾಗಿರಲಿ’

ನಲವತ್ತು ವರ್ಷಗಳಿಗೂ ಮೀರಿ ಬಾಪುವಿನ ಅವಿಬ್ಬಿನ್ನ ಅನುಯಾಯಿ ಯಾಗಿ ಬಾಳಿ ಬದುಕಿದ ಕವಯಿತ್ರಿ ಸರೋಜಿನಿ ನಾಯ್ಡು.

‘‘ನನ್ನ ನೆಚ್ಚಿನ ಓ ಗುರು! ಓ ನನ್ನ ನಾಯಕ! ನಿಮ್ಮಾತ್ಮ ಎಂದಿಗೂ ವಿಶ್ರಮಿಸ ದಿರಲಿ. ನಾವು ನಿಮಗಿತ್ತ ವಚನದಂತೆ ನಡೆದುಕೊಳ್ಳಲು ನಮಗೆ ಶಕ್ತಿ ನೀಡುತ್ತಿರಲಿ. ನಾವು ನಿನ್ನ ಉತ್ತರಾಧಿಕಾರಿಗಳು, ನಿನ್ನ ಪೀಳಿಗೆಯವರು, ನಿನ್ನ ಕನಸಿನ ಭಾರತದ ರಕ್ಷಕರು. ಈ ಮಹಾದೇಶದ ಭವಿಷ್ಯದ ರೂವಾರಿ ಗಳಾಗುತ್ತೇವೆ ಓ ನನ್ನ ಬಾಪೂ’ ಎಂದು ಕಂಬನಿದುಂಬಿ ಉದ್ಗಾರ ನುಡಿದರು.

ನಾಡಿನ ಮೂಲೆಮೂಲೆಗಳಿಂದ ಲಕ್ಷೋಪಲಕ್ಷ ಜನ ದಿಲ್ಲಿಗೆ ಧಾವಿಸಿ ಬಂದರು. ನಾಲ್ಕು ದಶಕಗಳ ಕಾಲ ಭಾರತದ ಅನಭಿಷಿತ್ತ ಚಕ್ರವರ್ತಿ ಎನಿಸಿದ್ದರೂ ಅರೆನಗ್ನ ಫಕೀರನಂತಿದ್ದ ತಮ್ಮ ನೆಚ್ಚಿನ ರಾಷ್ಟ್ರಪಿತನ ಪಾರ್ಥಿವ ಶರೀರದ ಸುತ್ತ ಅತ್ಯಗಾಧ ಜನ ಸಂದಣಿ. ಯಮುನಾ ತೀರದ ರಾಜಘಾಟಿನವರೆಗೂ ಕಣ್ಣೀರಿನ ಕಡಲೇ ಹರಿಯುತ್ತಿತ್ತು. ವೌಂಟ್‌ಬೇಟನ್ ದಂಪತಿ ಸೇರಿ ಸಕಲ ರಾಷ್ಟ್ರ ನಾಯಕರೂ ಜಗತ್ತಿನ ಮಹಾ ರಾಷ್ಟ್ರಗಳೆಲ್ಲದರ ಪ್ರತಿನಿಧಿಗಳೂ ಉಪಸ್ಥಿತರಿದ್ದರು. ಈ ಶತಮಾನದ ಪುಣ್ಯ ಪುರುಷರ ಅಗ್ರಗಣ್ಯ ಸ್ಥಾನದಲ್ಲಿ ಗೌರವಾನ್ವಿತರಾಗಿದ್ದ ಅಹಿಂಸಾ ಪ್ರವಾದಿ ಮಹಾತ್ಮಾ ಗಾಂಧೀಜಿಯ ಮೃತದೇಹ ಪೂರ್ಣಾಹುತಿಯಾಗಿ ಅಗ್ನಿದೇವನಲ್ಲಿ ಲೀನವಾಯಿತು. ಚಿತಾಭಸ್ಮ ರಾಷ್ಟ್ರದ ಮಹಾನದಿಗಳಲ್ಲಿ ಸೇರಿಹೋಯಿತು.

ಕನ್ನಡದ ಕವಿ ಹೃದಯ ಅಶ್ರುತರ್ಪಣವನ್ನರ್ಪಿಸುತ್ತಾ ರಾಷ್ಟ್ರಕವಿ ಕುವೆಂಪುವಿನ ಶ್ರದ್ಧಾರ್ಯಾಲಿಯಲ್ಲಿ ಹೀಗೆ ಸ್ಪಂದಿಸಿತು.

‘‘.... ಒಂದು ಭವ್ಯ ಶಾಂತಿಯ ಅನಿರ್ವಚನೀಯ ಆಶೀರ್ವಾ ದವನ್ನು ಪೂಜ್ಯ ಗಾಂಧೀಜಿಯ ಜೀವನ ಸ್ಮತಿ ಮನಸ್ಸನ್ನು ತುಂಬುತ್ತದೆ. ಅಲೆ ಅಲೆಯಾಗಿ ಮಲೆಮಲೆಗಳನ್ನೂ ಹಬ್ಬಿ, ತಬ್ಬಿ, ದಿಗಂತಗಳಲ್ಲಿಯೂ ಅವಿಶ್ರಾಂತವಾಗಿ ಶೋಭಿಸುವ, ಮಹಾರಣ್ಯ ಶ್ರೇಣಿಗಳಿಂದ ಉದ್ದೀಪನವಾಗುವ, ಒಂದು ಭೂಮಭಾವ ಈ ಲೋಕ ವಂದ್ಯನ ಬಾಳಿನ ರುಂದ್ರ ವಿಸ್ತೀರ್ಣ... ಆತ್ಮ ಶ್ರೀದ್ಯೋತಕವಾದ ಅಮೃತಾತ್ಮ ಚರಿತೆಯಾಗಿ ಚಿರಂಜೀವಿಯಾಗಿದೆ..... ಈ ಜಗದ್ಗುರುವಿನ ಬಾಳು ಬದುಕು ಹಿಮವತ್ ಪರ್ವತದಂತಿದ್ದರೆ ಅವರ ಅಂತಿಮ ನಿರ್ಗಮನ ವ್ಯೋಮಾತೀಕವಾಗಿ ದಿವೌಕಸವಾಗಿದೆ....’’

(ಬಾಪೂಜಿಗೆ ಬಾಷ್ಪಾಂಜಲಿ-ಕುವೆಂಪು)

In the midst of darkness light persisits
in the midst of untruth truth persists
in the midst of hatred love pesists
in the midst of death life persists.
... God is light, truth, love and life
He is the Supreme Good.''
Mahatma Gandhi

(ಕತ್ತಲಿನ ನಡುವೆ ಬೆಳಕು, ಅಸತ್ಯದ ನಡುವೆ ಸತ್ಯ, ದ್ವೇಷದ ಮಧ್ಯೆ ಪ್ರೇಮ ಹಾಗೂ ಸಾವಿನ ನಡುವೆ ಬದುಕು ಚಿರಸ್ಥಾಯಿಯಾಗಿಯೇ ಮುಂದುವರಿಯುತ್ತಿದೆ.... ದೇವರು ಎಂದರೆ ಈ ಬೆಳಕು. ಈ ಸತ್ಯ, ಈ ಪ್ರೇಮ, ಅವನೇ ಪರಮಮಂಗಳ ಶಕ್ತಿ)
ಮಹಾತ್ಮಾಗಾಂಧೀ

Writer - ಕೆ.ಎಸ್. ನಾರಾಯಣ ಸ್ವಾಮಿ

contributor

Editor - ಕೆ.ಎಸ್. ನಾರಾಯಣ ಸ್ವಾಮಿ

contributor

Similar News

ಜಗದಗಲ
ಜಗ ದಗಲ