ರಾಮಲೀಲಾ ಕಾರ್ಯಕ್ರಮದಲ್ಲಿ ರಾವಣನ ಪ್ರತಿಕೃತಿ ದಹಿಸಲು ಒಪ್ಪದ 'ಶ್ರೀ ರಾಮ'

Update: 2017-10-02 10:19 GMT

ಜೈಪುರ್,ಅ.2 : ದಸರಾ ಪ್ರಯುಕ್ತ ರಾಜಸ್ಥಾನದ ಸಿರೋಹಿ ಪಟ್ಟಣದಲ್ಲಿ  ಸ್ಥಳೀಯ ಮುನಿಸಿಪಲ್ ಕೌನ್ಸಿಲ್ ಆಯೋಜಿಸಿದ್ದ ರಾಮಲೀಲಾ ಸಮಾರಂಭದಲ್ಲಿ  ನಡೆದ ವಿಲಕ್ಷಣ ಘಟನೆಯೊಂದರಲ್ಲಿ ರಾಮನ ಪಾತ್ರಧಾರಿಯೊಬ್ಬ ರಾವಣನ ಪ್ರತಿಕೃತಿಗೆ ಬಾಣ ಹೊಡೆಯಲು ನಿರಾಕರಿಸಿದ್ದು ಮಾತ್ರವಲ್ಲದೆ ಕಾರ್ಯಕ್ರಮವನ್ನು ಸಂಘಟಿಸಿದ್ದ ಬಿಜೆಪಿಯ ಮಂಡಲ ಘಟಕದ ಅಧ್ಯಕ್ಷ ಸುರೇಶ್ ಸಾಗರವಂಶಿಯೇ ಅಸುರ ರಾಜ ಎಂದು ಹೇಳಿ ಅಲ್ಲಿದ್ದವರಿಗೆಲ್ಲಾ ದೊಡ್ಡ ಆಘಾತವನ್ನೇ ನೀಡಿದ್ದನಲ್ಲದೆ ವೇದಿಕೆಯಲ್ಲಿ ಹಾಜರಿದ್ದ  ಸುರೇಶ್ ಗೆ ಭಾರೀ ಮುಜುಗರ ಸೃಷ್ಟಿಸಿದ್ದ.

``ನಿಜವಾದ ರಾವಣ ವೇದಿಕೆಯಲ್ಲಿ ಕುಳಿತಿದ್ದಾನೆ. ಎಲ್ಲಾ ವಿಚಾರಗಳನ್ನೂ ರಾಜಕೀಕರಣಗೊಳಿಸುತ್ತಿದ್ದಾನೆ. ಹೀಗಿರುವಾಗ ಶ್ರೀರಾಮ ನಿರಾಸೆಯಿಂದ ಹಿಂದಿರುಗಬೇಕು,'' ಎಂದು ರಾಮನ ಪಾತ್ರಧಾರಿ ಮನೋಜ್ ಕುಮಾರ ಮಾಲಿ ಹೇಳಿದ್ದಾನೆ.

ಇತರ ಎಲ್ಲಾ ರಾಮಲೀಲಾ ಸಮಿತಿಗಳಿಗೆ ಹೋಲಿಸಿದಾಗ ಸುರೇಶ್ ಅಧ್ಯಕ್ಷರಾಗಿರುವ ಸಮಿತಿಗೆ ಹೆಚ್ಚು ಅನುದಾನ ದೊರೆಯುತ್ತದೆ ಎಂದೂ ಆತ ಆರೋಪಿಸಿದನಲ್ಲದೆ ಇತರ ದೇವ ದೇವತೆಗಳ ಪಾತ್ರಧಾರಿಗಳೂ ಸೇರಿದಂತೆ ತನ್ನ ಗುಂಪಿನ ನೂರು ಮಂದಿಯ ಜತೆ ಅಲ್ಲಿಂದ ಆಯೋಜಕರ ವಿರುದ್ಧ ಘೋಷಣೆ ಕೂಗುತ್ತಾ ಹೊರ ನಡೆದಿದ್ದ.

ನಂತರ  ಆಯೋಜಕರು ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಮಗುವೊಂದಕ್ಕೆ ರಾಮನ ವೇಷ ತೊಡಿಸಿದರು. ರಾವಣನ ಪ್ರತಿಕೃತಿಗೆ ಆ ಮಗುವಿನ ಮೂಲಕ ಬಾಣ ಹೊಡೆದು  ಅದನ್ನು ದಹಿಸಲಾಯಿತು.

ಸುರೇಶ್ ಸಾಗರವಂಶಿ ಮಾತ್ರ ತಮ್ಮ ವಿರುದ್ಧದ ಆರೋಪ ನಿರಾಕರಿಸಿದ್ದಾರೆ. ರಾಮಲೀಲಾ ಆಯೋಜಿಸುವ ಸಮಿತಿಗಳಲ್ಲಿಯೇ ತಮ್ಮ ಸಮಿತಿಯು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುತ್ತದೆ. ಕಾರ್ಯಕ್ರಮದ ಒಟ್ಟು ವೆಚ್ಚ ಸುಮಾರು ರೂ. 8 ಲಕ್ಷ ಆಗಿದ್ದು ಮುಂದಿನ ವರ್ಷ ಸ್ಥಳೀಯಾಡಳಿತದಿಂದ ಯಾವುದೇ ಅನುದಾನ ಪಡೆಯುವುದಿಲ್ಲವೆಂದೂ ಅವರು ಹೇಳಿಕೊಂಡಿದ್ದಾರೆ.

 ಇತರ ಸಮಿತಿಗಳಿಗೆ ರೂ. 11,000 ಅನುದಾನ ನೀಡಲಾಗುತ್ತಿದ್ದರೆ, ಸಾಗರವಂಶಿಯ ಸಮಿತಿಗೆ ರೂ. 31,000 ನೀಡಲಾಗುತ್ತಿತ್ತೆಂದು ಕಾರ್ಯಕ್ರಮ ಬಹಿಷ್ಕರಿಸಿದ್ದ ರಾಮನ ಪಾತ್ರಧಾರಿ ಆರೋಪಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News