ಮ್ಯೂಚ್ಯುವಲ್ ಫಂಡ್ ಬ್ಯಾಂಕ್ ಠೇವಣಿಗಿಂತ ಹೆಚ್ಚಿನ ತೆರಿಗೆ ಲಾಭ ನೀಡುತ್ತದೆ ಗೊತ್ತೇ?

Update: 2017-10-02 11:56 GMT

ಹೆಚ್ಚಿನ ಜನರು ತಮ್ಮ ಹೂಡಿಕೆಗಳಿಗಾಗಿ ಈಗಲೂ ಬ್ಯಾಂಕಿನಲ್ಲಿ ನಿರಖು ಠೇವಣಿ ಯನ್ನಿರಿಸುವ ಹಳೆಯ ಸಂಪ್ರದಾಯವನ್ನೇ ಅನುಸರಿಸತ್ತಾರೆ. ಆದರೆ ಇಂತಹ ಠೇವಣಿಗಳ ಮೇಲಿನ ಬಡ್ಡಿಗೆ ಆದಾಯ ತೆರಿಗೆ ಪಾವತಿಸುವಾಗ ಮಾತ್ರ ತುಂಬ ಬೇಸರ ಮಾಡಿಕೊಳ್ಳುತ್ತಾರೆ. ವಾಸ್ತವದಲ್ಲಿ ಮ್ಯೂಚ್ಯುವಲ್ ಫಂಡ್‌ಗಳು ಬ್ಯಾಂಕ್ ಠೇವಣಿಗಳಿಗಿಂತ ಹೆಚ್ಚಿನ ಬಡ್ಡಿಯನ್ನು ಒದಗಿಸುತ್ತವೆ ಮತ್ತು ಹೆಚ್ಚಿನ ತೆರಿಗೆ ಲಾಭಗಳನ್ನೂ ನೀಡುತ್ತವೆ.

ಕಳೆದ ಮೂರು ವರ್ಷಗಳಲ್ಲಿ ನಿರಖು ಠೇವಣಿಗಳ ಮೇಲಿನ ಬಡ್ಡಿದರ ಸುಮಾರು ಶೇ.2.5ರಷ್ಟು ಇಳಿದಿದೆ, ಆದರೆ ಇದೇ ವೇಳೆ ಮ್ಯೂಚ್ಯುವಲ್ ಫಂಡ್‌ಗಳು ಕಡಿಮೆಯೆಂದರೂ ವಾರ್ಷಿಕ ಶೇ.10ರಿಂದ 15ರಷ್ಟು ಬಡ್ಡಿಯನ್ನು ನೀಡಿವೆ.

ಬ್ಯಾಂಕುಗಳಲ್ಲಿ ನಿರಖು ಠೇವಣಿಯನ್ನು ಇಟ್ಟಿರುವವರು ಅದನ್ನು ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕ ಎನ್ನುತ್ತಾರೆ ಹಣಕಾಸು ತಜ್ಞರು. ಕಡಿಮೆ ಅಪಾಯದ ಸಾಧ್ಯತೆಗಳಿರುವ ಮ್ಯೂಚ್ಯುವಲ್ ಫಂಡ್‌ಗಳು ಇಂತಹ ಠೇವಣಿದಾರರಿಗೆ ಸೂಕ್ತವಾಗಿವೆ.

  ಮೂರು ವರ್ಷಗಳಿಗೂ ಮುನ್ನ ಹೂಡಿಕೆಯನ್ನು ಸಂಪೂರ್ಣವಾಗಿ ಹಿಂದೆಗೆದು ಕೊಂಡರೆ ಬ್ಯಾಂಕ್ ಠೇವಣಿ ಮತ್ತು ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಆದಾಯ ತೆರಿಗೆ ಲೆಕ್ಕಾಚಾರ ಒಂದೇ ರೀತಿಯಾಗಿದೆ. ಆದರೆ ನಿಮ್ಮ ಲಾಭವನ್ನು ಹಿಂದೆಗೆದುಕೊಳ್ಳುವುದು ನಿಮ್ಮ ಗುರಿಯಾಗಿದ್ದರೆ ಮ್ಯೂಚ್ಯುವಲ್ ಫಂಡ್‌ಗಳಲ್ಲಿ ಪಾವತಿಸಬೇಕಾದ ತೆರಿಗೆಯ ಪ್ರಮಾಣವು ಬ್ಯಾಂಕ್ ಠೇವಣಿಗಿಂತ ತುಂಬ ಕಡಿಮೆಯಾಗಿರುತ್ತದೆ. ಇದಕ್ಕೆ ಕಾರಣವು ಸರಳವಾಗಿದೆ.

ಬ್ಯಾಂಕ್ ಠೇವಣಿಯ ಮೇಲಿನ ಬಡ್ಡಿಯು ನಿಮ್ಮ ಆದಾಯವಾಗಿದ್ದರೆ, ಮ್ಯೂಚ್ಯುವಲ್ ಫಂಡ್‌ನಲ್ಲಿ ದೊರೆಯುವ ಬಡ್ಡಿಯು ಬಂಡವಾಳ ಗಳಿಕೆಯಾಗಿರುತ್ತದೆ. ಠೇವಣಿಯ ಮೇಲಿನ ಬಡ್ಡಿಯನ್ನು ಪಡೆಯುವಾಗ ಬಡ್ಡಿಯ ಇಡೀ ಮೊತ್ತವನ್ನು ಆದಾಯವೆಂದು ಪರಿಗಣಿಸಲಾಗುತ್ತದೆ. ಆದರೆ ನೀವು ನಿಮ್ಮ ಮ್ಯೂಚ್ಯುವಲ್ ಫಂಡ್ ನಿಂದ ಹಣವನ್ನು ಹಿಂದೆಗೆದುಕೊಂಡಾಗ ಅದು ನೀವು ಹೂಡಿಕೆ ಮಾಡಿರುವ ತೆರಿಗೆ ಮುಕ್ತವಾದ ಅಸಲು ಬಂಡವಾಳದ ಭಾಗವಾಗಿರುತ್ತದೆ.

ಇದಕ್ಕೊಂದು ಉದಾಹರಣೆ ಇಲ್ಲಿದೆ. ನೀವು ಮ್ಯೂಚ್ಯುವಲ್ ಫಂಡ್‌ನಲ್ಲಿ 10 ಲ.ರೂ.ಹೂಡಿಕೆ ಮಾಡಿದ್ದೀರಿ ಎಂದಿಟ್ಟುಕೊಳ್ಳೋಣ. ಮ್ಯೂಚ್ಯುವಲ್ ಫಂಡ್ ಹೌಸ್ ಹಣವನ್ನು ಶೇರು ಮಾರುಕಟ್ಟೆಗಳಲ್ಲಿ ಮತ್ತು ಇತರ ಹಣಕಾಸು ಸಾಧನಗಳಲ್ಲಿ ತೊಡಗಿ ಸುತ್ತದೆ. ಒಂದು ವರ್ಷದ ಬಳಿಕ ನಿಮ್ಮ ಹೂಡಿಕೆ ವೌಲ್ಯ 10.80 ಲ.ರೂ.ಗಳಾಗಿವೆ ಎಂದು ಭಾವಿಸೋಣ. ಈಗ ನೀವು ನಿಮ್ಮ ಲಾಭವಾದ 80,000 ರೂ.ಗಳನ್ನು ಹಿಂದೆಗೆದುಕೊಳ್ಳಲು ಬಯಸಿದ್ದೀರೆನ್ನಿ. ನೀವು ಹೊಂದಿರುವ ಹೂಡಿಕೆಯಲ್ಲಿ ಶೇ.7.4 ಗಳಿಕೆಯಾಗಿದೆ ಮತ್ತು ಉಳಿದ ಶೇ.92.6 ನೀವು ಹೂಡಿಕೆ ಮಾಡಿದ ಅಸಲು ಮೊತ್ತ ವಾಗಿದೆ ಎನ್ನುವುದು ಗಮನದಲ್ಲಿರಲಿ. ಇಲ್ಲಿ ಮುಖ್ಯವಾಗಿರುವುದು ಏನೆಂದರೆ ನೀವು ಯಾವುದೇ ಮೊತ್ತವನ್ನು ಹಿಂದೆಗೆದುಕೊಳ್ಳಲು ಬಯಸಿರಲಿ, ಅದು ಇದೇ ಅನುಪಾತದಲ್ಲಿ ನಿಮ್ಮ ಗಳಿಕೆಯನ್ನು ಮತ್ತು ಹೂಡಿಕೆಯನ್ನು ಒಳಗೊಂಡಿದೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ನೀವು ವಾಪಸ್ ಪಡೆಯಲು ಬಯಸಿರುವ 80,000 ರೂ.ಗಳಲ್ಲಿ ಕೇವಲ 5,926 ರೂ.ಗಳು ಮಾತ್ರ ನಿಮ್ಮ ಗಳಿಕೆಯೆಂದು ಪರಿಗಣಿಸಲ್ಪಡುತ್ತದೆ, ಆದ್ದರಿಂದ ಅದು ನಿಮ್ಮ ತೆರಿಗೆಗೆ ಅರ್ಹ ಆದಾಯಕ್ಕೆ ಸೇರುತ್ತದೆ. ಬ್ಯಾಂಕ್ ಠೇವಣಿಯ ಮೇಲೆ ನೀವು 80,000 ರೂ.ಬಡ್ಡಿಯನ್ನು ಗಳಿಸಿದ್ದರೆ ಅತ್ಯಂತ ಹೆಚ್ಚಿನ ಸ್ತರದಲ್ಲಿ ನೀವು 24,720 ರೂ.ಗಳನ್ನು ಆದಾಯ ತೆರಿಗೆಯನ್ನಾಗಿ ಪಾವತಿಸಬೇಕಾಗುತ್ತದೆ. ಆದರೆ ಇಷ್ಟೇ ಮೊತ್ತವನ್ನು ನೀವು ಮ್ಯೂಚ್ಯುವಲ್ ಫಂಡ್‌ನಿಂದ ಹಿಂದೆಗೆದುಕೊಂಡಾಗ ಪಾವತಿಸಬೇಕಾದ ತೆರಿಗೆ 1,832 ರೂ.ಮಾತ್ರ! ಇದು ಭಾರೀ ವ್ಯತ್ಯಾಸವಲ್ಲವೇ?

ಇದು ಮಾತ್ರ ಅಲ್ಲ, ಮ್ಯೂಚ್ಯುವಲ್ ಫಂಡ್ ಹೂಡಿಕೆದಾರನಿಗೆ ಗೊತ್ತಿರುವ ಮತ್ತು ಬ್ಯಾಂಕ್ ಠೆವಣಿದಾರನಿಗೆ ತಿಳಿದಿರದ ಇತರ ಲಾಭಗಳೂ ಇವೆ. ಉದಾಹರಣೆಗೆ ಮೂಲದಲ್ಲಿಯೇ ತೆರಿಗೆ ಕಡಿತ(ಟಿಡಿಎಸ್) ಮತ್ತು ವಾರ್ಷಿಕ ತೆರಿಗೆ. ಬ್ಯಾಂಕ್‌ಗಳ ಸಂಚಿತ ನಿರಖು ಠೇವಣಿಗಳಲ್ಲಿ ನೀವು ಪ್ರತಿ ವರ್ಷ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಈ ತೆರಿಗೆ ಹಣವು ಭವಿಷ್ಯದಲ್ಲಿ ನಿಮಗಾಗಿ ದುಡಿಯುವುದಿಲ್ಲ.

ನಿಮ್ಮ ಸಂಚಿತ ನಿರಖು ಠೇವಣಿಗೆ ಸಮಾನವಾದ ಮ್ಯೂಚ್ಯುವಲ್ ಫಂಡ್ ಹೂಡಿಕೆಯಲ್ಲಿ ಬಂಡವಾಳ ಗಳಿಕೆಯನ್ನು ಆದಾಯವೆಂದು ಪರಿಗಣಿಸಲಾಗುವುದಿಲ್ಲ, ಹೀಗಾಗಿ ನಿಮಗೆ ವಾರ್ಷಿಕ ತೆರಿಗೆಯ ಬಾಧ್ಯತೆಯಿಲ್ಲ. ಹೀಗಾಗಿ ಹಣವು ನಿಮ್ಮ ಹೂಡಿಕೆ ಅಸ್ತಿತ್ವದಲ್ಲಿರುವವರೆಗೂ ಬೆಳೆಯುತ್ತಲೇ ಇರುತ್ತದೆ ಮತ್ತು ನೀವು ಉನ್ನತ ತೆರಿಗೆ ಸ್ತರದಲ್ಲಿದ್ದೀರಿ ಎಂದು ಭಾವಿಸಿದರೆ ಅದು ಮೂರು ವರ್ಷಗಳ ಬಳಿಕ ಬ್ಯಾಂಕ್ ಠೇವಣಿಗಿಂತ ಹೆಚ್ಚು ಕಡಿಮೆ ಒಂದೂವರೆ ಪಟ್ಟು ಆಗಿರುತ್ತದೆ. ಆರಂಭಿಕ ಹೂಡಿಕೆಯನ್ನು ಒಂದು ಲಕ್ಷ ರೂ. ಎಂದಿಟ್ಟುಕೊಂಡರೆ ಮೂರು ವರ್ಷಗಳ ಬಳಿಕ ಸಂಚಿತ ಬ್ಯಾಂಕ್ ಠೇವಣಿಯಲ್ಲಿ ಅದು ಸುಮಾರು 1.26 ಲ.ರೂ.ಗಳಾದರೆ ಮ್ಯೂಚ್ಯುವಲ್ ಫಂಡ್‌ನಲ್ಲಿ ಅದು 1.4ಲ.ರೂ.ಗೆ ಬೆಳೆದಿರುತ್ತದೆ. ಹೇಗೆ ನೋಡಿದರೂ ಬ್ಯಾಂಕ್ ಬಡ್ಡಿ ದರಗಳು ಕಡಿಮೆಯಾಗುತ್ತಲೇ ಇರುವ ಈ ದಿನಗಳಲ್ಲಿ ಮ್ಯೂಚ್ಯುವಲ್ ಫಂಡ್‌ಗಳು ಹೆಚ್ಚು ಲಾಭದಾಯಕ ಎನ್ನವುದರಲ್ಲಿ ಯಾವುದೇ ಅನುಮಾನಗಳಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News