×
Ad

ಅದೊಂದು ಹಾರರ್ ಶೋ ಆಗಿತ್ತು...

Update: 2017-10-02 22:07 IST

ಲಾಸ್‌ವೆಗಾಸ್,ಅ.2: ‘‘ ಅದೊಂದು ಹಾರರ್ ಶೋ ಆಗಿತ್ತು. ಸುತ್ತಲೂ ನಿಂತಿದ್ದ ಜನರು, ಒಮ್ಮಿಂದೊಮ್ಮೆಗೆ ನೆಲಕ್ಕೆ ಉರುಳಿದರು...’’. ರವಿವಾರ ರಾತ್ರಿ ಅಮೆರಿಕದ ಲಾಸ್‌ವೆಗಾಸ್ ನಗರದಲ್ಲಿ ನಡೆದ ಸಂಗೀತ ಗೋಷ್ಠಿಯಲ್ಲಿ ಬಂಧೂಕುಧಾರಿಯೊಬ್ಬ ಮನಬಂದಂತೆ ಗುಂಡುಹಾರಿಸಿ, 50ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡ ಘಟನೆಯನ್ನು ಕಣ್ಣಾರೆಕಂಡ ಇವೆಟ್ಟಾ ಸಲ್ದಾನಾ, ಅದೊಂದು ಭಯಾನಕ ಕ್ಷಣಗಳಾಗಿದ್ದವೆಂದು ಹೇಳಿದ್ದಾರೆ.

 ಶುಕ್ರವಾರ ಆರಂಭಗೊಂಡಿದ್ದ ಈ ಜಾನಪದ ಸಂಗೀತಗೋಷ್ಠಿಯ ಕೊನೆಯ ದಿನ ವಾದ ರವಿವಾರ 30 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಸಮುದ್ರದ ತೀರದಲ್ಲಿರುವ ಮಂಡಲಾಯ್ ಬೇ ಸಮೀಪವೇ ಈ ಸಂಗೀತ ಗೋಷ್ಠಿ ನಡೆಯುತ್ತಿತ್ತು. ಕಾರ್ಯಕ್ರಮದ ಕೊನೆಯ ಗಾಯಕರಲ್ಲೊಬ್ಬರಾದ ಜೇಸನ್ ಆ್ಯಡ್ಲಿಯನ್ ಅವರ ಸಂಗೀತ ಗೋಷ್ಠಿ ನಡೆಯುತ್ತಿದ್ದಾಗ ಹಂತಕನು ಗುಂಡು ಹಾರಾಟ ಆರಂಭಿಸಿದ್ದನೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

 ಟ್ವಿಟರ್ ಮತ್ತಿತರ ಜಾಲತಾಣಗಳಲ್ಲಿ ಘಟನೆಯ ಕುರಿತಾದ ವೀಡಿಯೊಗಳು ಪ್ರಸಾರವಾಗುತ್ತಿದ್ದು, ಅದರಲ್ಲಿ ಗುಂಡೆಸೆತಗಳ ಸದ್ದಿನ ನಡುವೆ ಜನರು ಜೋರಾಗಿ ಕಿರುಚುತ್ತಾ ದಿಕ್ಕುಪಾಲಾಗಿ ಓಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಸುಮಾರು 5 ನಿಮಿಷಗಳಿಗೂ ಅಧಿಕ ಸಮಯದವರೆಗೆ ಗುಂಡು ಹಾರಾಟ ನಡೆದಿದ್ದಾಗಿ, ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಗುಂಡೆಸೆತದಲ್ಲಿ ಗಾಯಗೊಂಡವರಲ್ಲಿ ಕೆಲವರನ್ನು ಲಾಸ್‌ವೆಗಾಸ್‌ನ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಕ್ತಾರೆಯೊಬ್ಬರು ಹೇಳಿದ್ದಾರೆ. ಗುಂಡೆಸೆತದಲ್ಲಿ ಬೇಕ್ಸ್‌ಫೀಲ್ಡ್ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಕೂಡಾ ಸಾವನ್ನಪ್ಪಿದ್ದಾರೆಂದು ಅಧಿಕೃತ ಮೂಲಗಳು ಹೇಳಿವೆ.

  ಶೂಟೌಟ್ ಘಟನೆಯ ಬಳಿಕ ಲಾಸ್‌ವೆಗಾಸ್‌ನ ಮ್ಯಾಕ್‌ಕರಾನ್‌ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬರುತ್ತಿದ್ದ ಹಲವಾರು ವಿಮಾನಗಳ ಪಥವನ್ನು ಬೇರೆಡೆಗೆ ತಿರುಗಿಸಲಾಗಿತ್ತು. ಕೆಲವು ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಸೋಮವಾರ ಮುಂಜಾನೆಯ ವೇಳೆಗೆ ಕೆಲವು ವಿಮಾನಗಳು ಹಾರಾಟವನ್ನು ಪುನಾರಾಂಭಿಸಿರುವುದಾಗಿ ತಿಳಿದುಬಂದಿದೆ.

‘‘ರೂಟ್ 91 ಹಾರ್ವೆಸ್ಟ್ ಫೆಸ್ಟಿವಲ್’ ಎಂಬ ಹೆಸರಿನ ಈ ಜಾನಪದ ಸಂಗೀತಗೋಷ್ಠಿಯನ್ನು ಮ್ಯಾಂಡಲಾಯ್ ಬೇ ಸಮೀಪದ 15 ಎಕರೆ ಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಯೋಜಿಸಿಕೊಂಡು ಬರಲಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News