ಕಾಶ್ಮೀರ: ಐವರು ಉಗ್ರರ ಹತ್ಯೆ
ಶ್ರೀನಗರ,ಅ.2: ಜಮ್ಮು-ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಸೋಮವಾರ ಎರಡು ನುಸುಳುವಿಕೆ ಯತ್ನಗಳನ್ನು ವಿಫಲಗೊಳಿಸಿರುವ ಸೇನೆಯು ಐವರು ಉಗ್ರರನ್ನು ಕೊಂದಿದೆ.
ಬಾರಾಮುಲ್ಲಾ ಜಿಲ್ಲೆಯ ರಾಮಪುರ ಮತ್ತು ಕುಪ್ವಾರಾ ಜಿಲ್ಲೆಯ ತಂಗಧಾರ್ ವಿಭಾಗ ಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಿಂದ ಈ ನುಸುಳುವಿಕೆ ಪ್ರಯತ್ನಗಳು ನಡೆದಿದ್ದವು.
ರಾಮಪುರದಲ್ಲಿ ಇಬ್ಬರು ಉಗ್ರರು ಯೋಧರ ಗುಂಡುಗಳಿಗೆ ಬಲಿಯಾಗಿದ್ದು, ಅವರ ಬಳಿಯಿಂದ ಎರಡು ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದರು.
ಇದಕ್ಕೂ ಮುನ್ನ ತಂಗಧಾರ್ ವಿಭಾಗದಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ಉಗ್ರರು ಮತ್ತು ಯೋಧರ ನಡುವಿನ ಗುಂಡಿನ ಕಾಳಗದಲ್ಲಿ ಮೂವರು ಉಗ್ರರು ಕೊಲ್ಲಲ್ಪಟ್ಟಿದ್ದಾರೆ. ಘಟನಾ ಸ್ಥಳದಿಂದ ಮೂರು ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ
ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ತಡರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಸೇನೆಯ ಅಧಿಕಾರಿಯೋರ್ವರು ತಿಳಿಸಿದರು.