ಅಗ್ರ-5ನೆ ಸ್ಥಾನಕ್ಕೆ ಮರಳಿದ ರೋಹಿತ್ ಶರ್ಮ

Update: 2017-10-02 18:22 GMT

ದುಬೈ, ಅ.2: ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮ ಸೋಮವಾರ ಇಲ್ಲಿ ಬಿಡುಗಡೆಯಾಗಿರುವ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರ-5ನೆ ಸ್ಥಾನಕ್ಕೆ ವಾಪಸಾಗಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ರವಿವಾರ ನಾಗ್ಪುರದಲ್ಲಿ ಕೊನೆಗೊಂಡ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಅಗ್ರ ಸ್ಕೋರರ್ ಎನಿಸಿಕೊಂಡಿರುವ ರೋಹಿತ್ ನಾಲ್ಕು ಸ್ಥಾನ ಭಡ್ತಿ ಪಡೆದು ಐದನೆ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ರೋಹಿತ್ ಸರಣಿಯಲ್ಲಿ ಒಟ್ಟು 296 ರನ್ ಗಳಿಸಿದ್ದು. ಇದರಲ್ಲಿ ನಾಗ್ಪುರ ಏಕದಿನದಲ್ಲಿ ಗಳಿಸಿರುವ 125 ರನ್ ಕೂಡ ಸೇರಿದೆ. ಆಸೀಸ್ ವಿರುದ್ಧ ಏಕದಿನ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿರುವ ಭಾರತ ಟೀಮ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದೆ.

ರೋಹಿತ್ ಪ್ರಸ್ತುತ 790 ರೇಟಿಂಗ್ ಪಾಯಿಂಟ್ ಪಡೆದಿದ್ದು, 2016ರಲ್ಲಿ ಜೀವನಶ್ರೇಷ್ಠ 3ನೆ ರ್ಯಾಂಕಿಗೆ ಲಗ್ಗೆ ಇಟ್ಟಿದ್ದರು. ರೋಹಿತ್‌ರ ಸಹ ಆಟಗಾರ ಅಜಿಂಕ್ಯ ರಹಾನೆ 4 ಸ್ಥಾನ ಭಡ್ತಿ ಪಡೆದು 24ನೆ ಸ್ಥಾನ ತಲುಪಿದ್ದಾರೆ. ಆಸ್ಟ್ರೇಲಿಯದ ಆರಂಭಿಕ ಜೋಡಿಗಳಾದ ಆ್ಯರೊನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಕೂಡ ರ‍್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News