ಅರ್ನಬ್ ಗೋಸ್ವಾಮಿ: ಮಾಡಿದ್ದುಣ್ಣೋ ಮಹಾರಾಯ

Update: 2017-10-02 18:40 GMT

ಅರ್ನಬ್ ಮಾಡಿದ ಹಾಗೆ ನೈತಿಕ ಕುದುರೆಯ ಮೇಲೇರಿ ಸವಾರಿಮಾಡಿ, ಕೊನೆಗೆ ಒಬ್ಬ ಅಪ್ಪಟ ಸುಳ್ಳುಗಾರನೆಂದು ಸಾಬೀತಾಗುವುದರಿಂದ ಏನೂ ಉಪಯೋಗವಿಲ್ಲ, ಏನೂ ಲಾಭವಿಲ್ಲ. ರಕ್ತಪಿಪಾಸಿ ಸಹೋದ್ಯೋಗಿಗಳು ತುಂಬ ಕ್ರೂರವಾದ ಆಟಗಳನ್ನು ಆಡುತ್ತಾರೆ. ಅರ್ನಬ್ ಮಾಡಿದ ಇಂತಹ ಆಟದಿಂದಾಗಿಯೇ ಆತನ ಅಧಃಪತನ, ಸರ್ವನಾಶ ಅದೆಷ್ಟು ಬೇಗ ಆಗಿ ಹೋಯಿತು ನೋಡಿ!

ರಾಷ್ಟ್ರವು ಅರ್ನಬ್ ಗೋಸ್ವಾಮಿಯನ್ನು ನೋಡಿ ಅಯ್ಯೋ ಪಾಪ ಎನ್ನುವ ಒಂದು ದಿನ ಬಂದೀತೆಂದು ಯಾವತ್ತೂ ತಿಳಿದಿರಲಿಲ್ಲ! ಆದರೆ 2002ರಲ್ಲಿ ನಡೆದ ಗುಜರಾತ್ ಕೋಮುಗಲಭೆಗಳ ಬಗ್ಗೆ ಒಂದು ನಾಟಕೀಯ ಕಥಾನಕವನ್ನು ತಿರುಚಿದನೆಂದು ತನ್ನ ಓರ್ವ ಮಾಜಿ ಸಹೋದ್ಯೋಗಿ ಯನ್ನು ಜರೆದು ರಾಜದೀಪ್ ಸರ್ದೇಸಾಯಿ ಟ್ವೀಟ್ ಮಾಡುವುದರೊಂದಿಗೆ ಬಣ್ಣ ಬಯಲಾಗಿದೆ: ಪ್ರೈಮ್‌ಟೈಂನ ಸ್ವಘೋಷಿತ ಚಕ್ರವರ್ತಿ ಅರ್ನಬ್ ಮೈಮೇಲೆ ಬಟ್ಟೆಗಳಿಲ್ಲ ಎಂಬುದು ಈಗ ಅಧಿಕೃತವಾಗಿ ಬಿಟ್ಟಿದೆ. ನನ್ನ ದೇಶಬಂಧುಗಳೇ ಅದೆಂತಹ ಪತನ. ಇವತ್ತೂ ಅರ್ನಬ್‌ನ ಗತಿ ಏನಾಗಿದೆ ನೋಡಿ ಸರ್ದೇಸಾಯಿ ಮತ್ತು ಇತರರು ಅವನನ್ನು ಒಬ್ಬ ಮಹಾ ಸುಳ್ಳುಗಾರ ಎಂದು ಕರೆದದ್ದೇತಡ, ಅಣೆಕಟ್ಟು ಒಡೆಯಿತು... ನಮ್ಮ ಮಾಧ್ಯಮದ ಇತಿಹಾಸದಲ್ಲೇ ಮೊದಲಬಾರಿಗೆ ಅವರ ಸಹೋದ್ಯೋಗಿಗಳಲ್ಲಿ ಒಬ್ಬನನ್ನು ಕಾಲಡಿಗೆ ಹಾಕಿ ತುಳಿದು ಆತನ ಕೀರ್ತಿಯನ್ನು ಮಣ್ಣುಪಾಲು ಮಾಡಿ ಆತನ ಪ್ರತಿಷ್ಠೆಯನ್ನು ಮೂರಾಬಟ್ಟೆ ಮಾಡಲಾಯಿತು. ಈ ಸುತ್ತಿನಲ್ಲಿ ನಾಯಿ ಖಂಡಿತವಾಗಿಯೂ ಮತ್ತು ಭಾರೀ ಸ್ಫೂರ್ತಿಯಿಂದ ಇನ್ನೊಂದು ನಾಯಿಯನ್ನು ತಿಂದಿತು.

 ಸತ್ಯ ಹೊರಗೆ ಬಿದ್ದು ಗಂಟೆಗಳೊಳಗಾಗಿ ಹುಟ್ಟಿಕೊಂಡ ಜೋಕ್ಸ್‌ಗಳನ್ನು ನೋಡಿದರೆ ಒಂದಂಶವಂತೂ ಸ್ಪಷ್ಟ. ಅರ್ನಬ್ ಮಾಡಿದ ಹಾಗೆ ನೈತಿಕ ಕುದುರೆಯ ಮೇಲೇರಿ ಸವಾರಿಮಾಡಿ, ಕೊನೆಗೆ ಒಬ್ಬ ಅಪ್ಪಟ ಸುಳ್ಳುಗಾರನೆಂದು ಸಾಬೀತಾಗುವುದರಿಂದ ಏನೂ ಉಪಯೋಗವಿಲ್ಲ, ಏನೂ ಲಾಭವಿಲ್ಲ. ರಕ್ತಪಿಪಾಸಿ ಸಹೋದ್ಯೋಗಿಗಳು ತುಂಬ ಕ್ರೂರವಾದ ಆಟಗಳನ್ನು ಆಡುತ್ತಾರೆ. ಅರ್ನಬ್ ಮಾಡಿದ ಇಂತಹ ಆಟದಿಂದಾಗಿಯೇ ಆತನ ಅಧಃಪತನ, ಸರ್ವನಾಶ ಅದೆಷ್ಟು ಬೇಗ ಆಗಿ ಹೋಯಿತು ನೋಡಿ! ದಿಢೀರನೆ ಈ ಜಂಭಗಾರ ಶೂನ್ಯವಾಗಿದ್ದಾನೆ. ಆತನ ಟಿವಿ ಶೋಗಳಲ್ಲಿ ಒಂದು ಕಾಲದಲ್ಲಿ ಆತ ಯಾರ್ಯಾರನ್ನು ಅವಮಾನಿಸಿದ್ದನೋ ಅವರೆಲ್ಲ ಈಗ ಒಂದೇ ಸ್ವರದಲ್ಲಿ ಕೂಗುತ್ತಿದ್ದಾರೆ: ‘‘ಅವನಿಗೆ ಹಾಗೇಯೇ ಆಗಬೇಕು!’’ ಒಬ್ಬ ಹಳೆಯ ಶತ್ರುವಿನ ಬಗ್ಗೆ ಹೀಗೆಲ್ಲ ಹೇಳುವುದು ಬಾಲಿಶ ಎಂದು ತೋರಬಹುದು. ಆದರೆ ಕತೆ ತುಂಬ ದೊಡ್ಡದಿದೆ. ಅರ್ನಬ್‌ನ ಭಾರೀ ದೊಡ್ಡ ಶತ್ರು ಅರ್ನಬ್‌ನೇ ಅಂತ ಈಗ ಗೊತ್ತಾಗಿದೆ. ಕಳೆದ ವರ್ಷ ಕಠ್ಮಂಡುವಿನಲ್ಲಿ ಒಬ್ಬ ಶ್ರೀಮಂತ ಕುಳ ಅರ್ನಬ್‌ನನ್ನು ನಂಬಿ ಒಂದು ಹೊಸ ಟಿವಿ ಚಾನೆಲ್‌ಗೆ ಹಣ ಹೂಡುವಾಗ ಆಡಿದ ಮಾತು ನೆನಪಾಗುತ್ತದೆ. ಯಾವ ಆಧಾರದಲ್ಲಿ ಅರ್ನಬ್‌ನನ್ನು ನಂಬಿ ಆ ಹೊಸ ಚಾನೆಲ್ ಯಶಸ್ವಿಯಾಗುತ್ತದೆಂದು ನಂಬಿದ್ದೀರಿ ಎಂದು ಕೇಳಿದಾಗ ಬಂದ ಉತ್ತರ, ‘‘ಏಷ್ಯಾದಲ್ಲಿ ಅವನಷ್ಟು ದೊಡ್ಡ ಮೀಡಿಯಾ ಸ್ಟಾರ್ ಇನ್ನೊಬ್ಬನಿಲ್ಲ. ಅವನ ಬ್ರಾಂಡ್ ವ್ಯಾಲ್ಯೂವನ್ನು ಮೀರಿಸುವವರೇ ಇಲ್ಲ’’

ಹೀಗೆ ಹೇಳಿದ್ದ ಆ ದೊಡ್ಡಬಾಯಿಯ ಮನುಷ್ಯನನ್ನು ಈಗ ಸಂಧಿಸಿ ನೀನು ಅವನ ಮೇಲೆ ಕಟ್ಟಿದ ಬೆಟ್‌ನ ಗತಿ ಏನಾಯಿತು ಅಂತ ಕೇಳಬೇಕು ಅನ್ನಿಸುತ್ತದೆ. ಆ ಮನುಷ್ಯ ಒಂದು ವಿಷಯವನ್ನು ಮರೆತ್ತಿದ್ದು ಸತ್ಯ. ತಾನು ಯಾವ ಸತ್ಯದ ಪರ ಎಂದು ಅರ್ನಬ್ ಹೇಳುತ್ತಿದ್ದನೋ ಅದೇ ಸತ್ಯವನ್ನು ಆತ ಮರೆತ್ತಿದ್ದ...

ತನ್ನ ದರ್ಪದ ಸುಳ್ಳು ಬಯಲಾಗುತ್ತದೆ; ಅದು ಈ ತರಹ ಬಹಿರಂಗವಾಗುತ್ತದೆ ಎಂದು ಅರ್ನಬ್ ಯಾವತ್ತೂ ಕಲ್ಪಿಸಿಕೊಂಡಿರಲಾರ. ಅವನ ದರ್ಪದ ಮಾತುಗಳು, ಅವನ ಠೀವಿ, ಅವನ ಅಹಂಕಾರದ ಅಬ್ಬರಿಸುವಿಕೆ -ಎಲ್ಲ ಈಗ ರಾತ್ರಿಬೆಳಗಾಗುವುದರೊಳಗಾಗಿ ಒಂದು ಕರುಣಾಜನಕ ಜೋಕ್ ಆಗಿಬಿಟ್ಟಿದೆ. ಅವನಂತಹ ಬುಲ್ಲಿಗಳು, ದರ್ಪದಿಂದ ಜನರ ಬಾಯಿಮುಚ್ಚಿಸುವ ಆಸಾಮಿಗಳು ಜಾರಿಬೀಳುವುದೇ ಹೀಗೆ. ತಮ್ಮ ಹೊಗಳು ಭಟರಿಂದ ಸುತ್ತುವರಿಯಲ್ಪಟ್ಟು ಇಂತಹ ಅಸಾಮಿಗಳು, ತಮ್ಮನ್ನು ಮುಟ್ಟುವವರೇ ಇಲ್ಲ ಎಂದು ನಂಬುವ ಅರ್ನಬ್‌ನಂತಹ ಆಸಾಮಿಗಳು, ಅವರನ್ನು ಪ್ರಶ್ನಿಸುವವರ ಬಾಯಿ ಮುಚ್ಚಿಸಲು ತಮ್ಮ ಅಧಿಕಾರ, ತಮ್ಮ ಬಲ ಸಾಕು ಎಂದು ನಂಬಿರುತ್ತಾರೆ.

 ಅರ್ನಬ್‌ನ ಅಹಿತಕರವಾದ, ಆಕ್ಷೇಪಾರ್ಹವಾದ ಕಾರ್ಯವಿಧಾನದಿಂದ, ಆತ ತನ್ನ ಅಭಿಮಾನಿಗಳ ಮೇಲೆ ಹಿಡಿತ ಸಾಧಿಸಿದ್ದ. ಆತನ ಜನಪ್ರಿಯತೆಗೆ ಕಾರಣ ಏನೆಂದು ಕೇಳಿದರೆ ಉತ್ತರ ತುಂಬ ಸರಳ ಇದೆ. ಅವನ ಚುನಾವಣಾ ಕ್ಷೇತ್ರದಲ್ಲಿ ಯಾರ್ಯಾರಿದ್ದರೋ, ಅವರ ಅಭಿಮಾನಿಗಳು ಹೊಗಳುಭಟರು ಯಾರ್ಯಾರಿದ್ದಾರೋ ಅವರು ಕೂಡ ಅಷ್ಟೇ ಅಹಿತಕಾರಿಗಳು, ಆಕ್ಷೇಪಾರ್ಹರು. ಅವರು ಖಾಸಗಿಯಾಗಿ, ಗುಟ್ಟಾಗಿ ಏನು ಯೋಚಿಸುತ್ತಿದ್ದರೋ, ಅದನ್ನೇ ಆತ ಟಿವಿಯಲ್ಲಿ ಹೇಳುತ್ತಿದ್ದ. ಆತನ ಅಭಿಪ್ರಾಯಗಳನ್ನು ಒಪ್ಪದವರ ಮೇಲೆ ಆತನಿಗಿದ್ದ ದ್ವೇಷ ಮತ್ತು ತಿರಸ್ಕಾರವನ್ನು ಆತ ಭಾರೀ ಹೆಮ್ಮೆಯಿಂದ ಪ್ರತೀ ರಾತ್ರಿ ತನ್ನ ಚಾನೆಲ್‌ನಲ್ಲಿ ಪ್ರದರ್ಶಿಸುತ್ತಿದ್ದ, ಕಾರಿಕೊಳ್ಳುತ್ತಿದ್ದ. ತಮ್ಮನ್ನು ಆತನ ಅಭಿಮಾನಿಗಳೆಂದು ಕರೆದುಕೊಳ್ಳುತ್ತಿದ್ದವರು ಈ ದ್ವೇಷ, ತಿರಸ್ಕಾರವನ್ನು ಪ್ರತಿಧ್ವನಿಸುತ್ತಿದ್ದರು. ಇವರು ‘‘ಲಿಬ್‌ಟರ್ಡ್ಸ್’’ಗಳ ಮೇಲೆ ವಿಷಕಾರುತ್ತಿದ್ದರು, ತಮ್ಮನ್ನು ಬಿಟ್ಟು ಉಳಿದವರನ್ನು ‘‘ಪ್ರೆಸ್ಸಿಟ್ಯೂಡ್ಸ್’’(ಮಾಧ್ಯಮ ವೇಶ್ಯೆಯರು’’)ಎಂದು ಕರೆಯುತ್ತಿದ್ದರು. ಅರ್ನಬ್ ದಿಢೀರನೆ ರಾಜಕೀಯವಾಗಿ ‘ಅಬೌಟ್-ಟರ್ನ್’ ಮಾಡಿದಾಗ ಯಾರಿಗೂ ಆಶ್ಚರ್ಯವಾಗಲಿಲ್ಲ. ಆತನ ಪೂರ್ವಾಪರಗಳನ್ನು ತಿಳಿದವರಿಗೆ, ಆತ ತನ್ನ ನಿಜವಾದ ಅವತಾರವನ್ನು ತೋರಿಸಲು ಯಾಕಾಗಿ ಇಷ್ಟು ಸಮಯ ತೆಗೆದುಕೊಂಡ ಎಂದು ಆಶ್ಚರ್ಯವೇ ಆಯಿತು.

ಇರಲಿ, ಅರ್ನಬ್‌ನ ಪತನದಲ್ಲಿ ಎಲ್ಲ ಮಾಧ್ಯಮವಾಲಾಗಳಿಗೆ ಒಂದು ಪಾಠ ಇದೆ. ಅರ್ನಬ್ ತುಂಬಾ ತುಂಬಾ ಜನರನ್ನು ಎದುರು ಹಾಕಿಕೊಂಡಿದ್ದ ಮತ್ತು ಅಸಂಖ್ಯ ಜೀವಗಳನ್ನು ನಾಶಮಾಡಲು ಪ್ರಯತ್ನಿಸಿದ್ದ. ಇದಕ್ಕೆ ಕೆಟ್ಟಕರ್ಮವನ್ನು ಆಕರ್ಷಿಸುವುದು ಎನ್ನುತ್ತಾರೆ, ಮಾಡಿದ್ದುಣ್ಣೋ ಮಹಾರಾಯ ಎನ್ನುತ್ತಾರೆ. ಪತ್ರಕರ್ತರು ಸಾಮಾನ್ಯವಾಗಿ ತಾವು ಮಾಡಿದ ತಪ್ಪುಗಳಿಂದ ಬಚಾವಾಗಿ ಬಿಡುತ್ತಾರೆ. ಆದರೆ ಈ ಅಭದ್ರವಾದ, ಸ್ಪರ್ಧಾತ್ಮಕವಾದ, ದಾಳಿಕೋರ ಸಮುದಾಯದ ಒಳಗೆ ಕೂಡ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗೆ, ತಾತ್ವಿಕ ವಾದಗಳಿಗೆ ಯಾವಾಗಲೂ ಅವಕಾಶ ಇದೆ. ಒಂದು ವಿಷಯದಲ್ಲಿ ಮಾತ್ರ ಇಲ್ಲಿ ಸಹನೆ ಇಲ್ಲ, ಒಂದು ವಿಷಯಕ್ಕೆ ಮಾತ್ರ ಇಲ್ಲಿ ಅವಕಾಶ ಇಲ್ಲ. ಸುಳ್ಳು ಹೇಳುವುದಕ್ಕೆ ಮತ್ತು ಇನ್ನೊಬ್ಬನ ವರದಿಯನ್ನು ಕದ್ದು ನನ್ನದು ಎಂದು ಹೇಳುವುದಕ್ಕೆ, ಇದನ್ನು ಕಳ್ಳತನ ಎಂದು ಕರೆಯುತ್ತಾರೆ. ಕಳ್ಳರು ತಮ್ಮನ್ನು ತಾವು ಸಂತರು ಮತ್ತು ರಕ್ಷಕರು ಎಂದು ಕರೆದುಕೊಳ್ಳಬಾರದು, ತಾನು ರಾಷ್ಟ್ರದ ಪರವಾಗಿ ಮಾತನಾಡುವವ ಎಂದು ಹೇಳಿಕೊಳ್ಳುತ್ತಿದ್ದ ಮನುಷ್ಯನ ಬಗ್ಗೆ ಈ ದೇಶಕ್ಕೆ ಜಿಗುಪ್ಸೆ ಬಂದಿದೆ.

ಕೃಪೆ: asianage.com

Writer - ಶೋಭಾ ಡೇ

contributor

Editor - ಶೋಭಾ ಡೇ

contributor

Similar News

ಜಗದಗಲ
ಜಗ ದಗಲ