ನಿಮ್ಮ ನಾಮವಿಡಿದ ಅನಾಮಿಕ

Update: 2017-10-02 18:46 GMT

ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಣವನು.
‘ಸಂಬೋಳಿ ಸಂಬೋಳಿ’ ಎನುತ್ತ ಇಂಬಿನಲ್ಲಿ ಇದೇನೆ.
ಕೂಡಲಸಂಗಮದೇವಾ
ನಿಮ್ಮ ನಾಮವಿಡಿದ ಅನಾಮಿಕ ನಾನು.
                                                   -ಬಸವಣ್ಣ

‘ಲಿಂಗವಿದ್ದಲ್ಲಿ ಹೊಲೆಯುಂಟೆ?’ ಎಂದು ಪ್ರಶ್ನಿಸುವ ಬಸವಣ್ಣನವರು ಈ ವಚನದಲ್ಲಿ ಅಸ್ಪಶ್ಯರಿಗಾಗಿ ಪ್ರತಿಭಟನೆಯ ಧ್ವನಿ ಎತ್ತಿದ್ದಾರೆ. ಇಲ್ಲಿ ಸತ್ಯಾಗ್ರಹದ ಭಾವವಿದೆ. ಕೆಳಜಾತೀಕರಣದ ಪ್ರಕ್ರಿಯೆ ಇದೆ, ಜೊತೆಗೆ ಮೇಲ್ಜಾತಿ ಮತ್ತು ಮೇಲ್ವರ್ಗದವರಲ್ಲಿನ ಸ್ವಾರ್ಥ ಜನರ ಕೃತ್ರಿಮ ಭಕ್ತಿಯ ಬಗ್ಗೆ ಸಾತ್ವಿಕ ವ್ಯಂಗ್ಯವೂ ಇದೆ. ಬಸವಣ್ಣನವರು ಶಿವಾಲಯದ ಹೊರಗೆ ನಿಂತು, ಶಿವಾಲಯದ ಒಳಗೆ ಇರುವವರ ಮತ್ತು ತಮ್ಮ ಮಧ್ಯದ ವ್ಯತ್ಯಾಸವನ್ನು ಶಿವನಿಗೆ ತಿಳಿಸುತ್ತಿದ್ದಾರೆ.

‘ಆನು ದೇವಾ ಹೊರಗಣವನು’ ಎಂದರೆ ದಲಿತರಿಗೆ ಪ್ರವೇಶ ನಿರಾಕರಿಸುವ ಶಿವಾಲಯದಿಂದ ಹೊರಗೆ ಇದ್ದೇನೆ ಎಂಬುದು ಒಂದು ಅರ್ಥ. ನಾನು ಮಾನಸಿಕವಾಗಿ ಕೆಳಜಾತೀಕರಣಕ್ಕೆ ಒಳಗಾಗುವುದರ ಮೂಲಕ ದಲಿತನಾದ ಕಾರಣ ಉಳ್ಳವರ ಶಿವಾಲಯದಿಂದ ಹೊರಗಿದ್ದೇನೆ ಎಂದು ಇನ್ನೊಂದು ಅರ್ಥ. ಹೀಗೆ ಇಡೀ ವಚನ ಶ್ಲೇಷಾರ್ಥಗಳಿಂದ ಕೂಡಿದೆ. ದೇವಾ ನಿನ್ನ ಪೂಜೆ ಮಾಡುತ್ತ ನಿನ್ನ ಜೊತೆ ಸಲುಗೆಯಿಂದ ಇರುವ ‘ಮಹಿಮ’ರನ್ನು ನಾನು ಗಮನಿಸುತ್ತಿದ್ದೇನೆ. ಇವರೆಲ್ಲ ‘ಸಲಿಗೆಯಿಂದ’ ಅಂದರೆ ವಿಶ್ವದ ಎಲ್ಲವನ್ನೂ ಒಳಗೊಂಡ ನಿನ್ನ ಅಗಮ್ಯ, ಅಗೋಚರ ಮತ್ತು ಅಪ್ರತಿಮವಾದ ವಿರಾಟ್ ಸ್ವರೂಪವನ್ನು ಅರಿಯದೆ ಇರುವಂಥವರಾಗಿದ್ದಾರೆ. ನಾನು ದೂರದಲ್ಲಿ ಇದ್ದು ಇವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಹೀಗೆ ಹೇಳುವಾಗ ಬಸವಣ್ಣನವರು ‘ಸಂಬೋಳಿ’ ಎಂಬ ಶಬ್ದ ಪ್ರಯೋಗ ಮಾಡಿದ್ದಾರೆ. ಸಂಬೋಳಿ ಎಂದರೆ ಎಚ್ಚರ. ಅದರ ಇನ್ನೊಂದು ಅರ್ಥ ಅಸ್ಪಶ್ಯತೆಯ ಆಚರಣೆಯನ್ನು ಸೂಚಿಸುತ್ತದೆ. ಹಿಂದಿನ ಕಾಲದಲ್ಲಿ ದಲಿತರು ತಮ್ಮ ಕೇರಿಯಿಂದ ಊರಲ್ಲಿ ಬರುವಾಗ ತಮ್ಮ ಹೆಜ್ಜೆಗುರುತು ಅಳಿಸಿಹಾಕುವ ರೀತಿಯಲ್ಲಿ ಬೆನ್ನಿಗೆ ಪೊರಕೆ ಕಟ್ಟಿಕೊಳ್ಳುತ್ತಿದ್ದರು. ಉಗುಳುವುದಕ್ಕಾಗಿ ಕೊರಳಿಗೆ ಗಡಿಗೆ ಕಟ್ಟಿಕೊಳ್ಳುತ್ತಿದ್ದರು. ತಾವು ಊರೊಳಗೆ ಬರುವುದನ್ನು ಸಾರುವುದಕ್ಕಾಗಿ ‘ಸಂಬೋಳಿ’ ಎಂದು ಹೇಳುತ್ತಿದ್ದರು. ಮಟಮಟ ಮಧ್ಯಾಹ್ನದಲ್ಲಿ ಮಾತ್ರ ಅವರಿಗೆ ಊರೊಳಗೆ ಬರಲು ಅವಕಾಶವಿತ್ತು. ಏಕೆಂದರೆ ಆಗ ಅವರ ನೆರಳು ಉದ್ದಕ್ಕೆ ಹರಡದೆ ಅವರ ಬಳಿಯೇ ಇರುವ ಸಮಯವದು. ಹೀಗೆ ಅವರ ನೆರಳು ಕೂಡ ಬೀಳದ ಹಾಗೆ ಸವರ್ಣೀಯರು ಎಚ್ಚರಿಕೆ ವಹಿಸುತ್ತಿದ್ದರು. ಅಂತೆಯೆ ಬಸವಣ್ಣನವರು ದಲಿತರ ನೋವಿನ ಪಾಲುದಾರರಾದರು.

‘ನಿಮ್ಮ ನಾಮವಿಡಿದ ಅನಾಮಿಕ ನಾನು’ ಎಂದು ಹೇಳುವುದರ ಮೂಲಕ ಬಸವಣ್ಣನವರು ಈ ವಚನವನ್ನು ಪೂರ್ಣಗೊಳಿಸುತ್ತಾರೆ. ಇಲ್ಲಿನ ಅನಾಮಿಕ ಪದ ಅಸ್ಪಶ್ಯ ಎಂಬ ಒಂದು ಅರ್ಥ ನೀಡಿದರೆ, ಇನ್ನೊಂದು ಅರ್ಥ, ಸರ್ವಶಕ್ತನಾದ ದೇವನೊಬ್ಬನೇ ಅಗಮ್ಯ, ಅಗೋಚರ, ಅಪ್ರತಿಮ ‘ನಾಮಾಂಕಿತನು’ ಎಂಬುದು. ನಾವು ಅನಾಮಿಕರಾದಾಗ, ಅಂದರೆ ಜಾತಿ ಮುಂತಾದ ಅಹಂಕಾರಗಳಿಂದ ಮುಕ್ತರಾದಾಗ ದೇವರ ಅರಿವಾಗುವುದು ಹೊರತಾಗಿ ಕೇವಲ ಪೂಜೆ ಮಾಡುವುದರಿಂದ ಅಲ್ಲ ಎಂಬ ಸತ್ಯವನ್ನು ಅವರು ಇಲ್ಲಿ ಸೂಚಿಸಿದ್ದಾರೆ.

ವೈದಿಕ ವ್ಯವಸ್ಥೆಯಲ್ಲಿ ಶಿವಾಲಯ ಮುಂತಾದ ದೇವಾಲಯಗಳು ಇಡೀ ಸಮಾಜದ ಕೇಂದ್ರಗಳಾಗಿದ್ದವು. ಶ್ರೀಮಂತರು ಇಲ್ಲಿ ವಜ್ರ, ವೈಡೂರ್ಯ, ಮುತ್ತು, ರತ್ನ ಮತ್ತು ಭಾರೀ ಮೊತ್ತದ ಹಣವನ್ನು ಇಡುತ್ತಿದ್ದರು. ದೇವಾಲಯಗಳಲ್ಲಿ ಕಳ್ಳತನವಾಗುವುದಿಲ್ಲ ಎಂಬುದೇ ಇದಕ್ಕೆ ಕಾರಣ. ಹೀಗೆ ತಮ್ಮ ನಗ ನಾಣ್ಯ ಇಡುವುದಕ್ಕಾಗಿ ಅವರು ದೇವಾಲಯಕ್ಕೆ ಸೇವಾಶುಲ್ಕವನ್ನೂ ಕೊಡಬೇಕಾಗುತ್ತಿತ್ತು. ವ್ಯಾಪಾರಿಗಳಿಗೆ ದೇವಾಲಯದಿಂದ ಸಾಲ ಕೊಟ್ಟು ಬಡ್ಡಿ ವಸೂಲಿ ಮಾಡಲಾಗುತ್ತಿತ್ತು. ದೊಡ್ಡ ದೇವಾಲಯಗಳು ಲೈಂಗಿಕ ಶಿಲ್ಪದಿಂದ ಭಕ್ತರನ್ನು ಆಕರ್ಷಿಸುತ್ತಿದ್ದವು. ನೂರಾರು ಮಂದಿ ದೇವದಾಸಿಯರನ್ನು ಹೊಂದಿದ್ದವು. ಅವರು ನೃತ್ಯವನ್ನು ಪ್ರದರ್ಶಿಸುವುದಷ್ಟೇ ಅಲ್ಲದೆ ಶ್ರೀಮಂತರು ಮತ್ತು ಪೂಜಾರಿಗಳ ದೇವದಾಸಿಯರೂ ಆಗಬೇಕಿತ್ತು. ಬಸವಣ್ಣನವರು ಹೇಳುವಂತೆ ಇಂಥ ಸೌಲಭ್ಯಗಳನ್ನು ಪಡೆಯುವವರೆಲ್ಲ ದೇವರ ಜೊತೆ ಸಲಿಗೆಯಿಂದ ಇರುವ ಮಹಿಮರಾಗಿದ್ದರು.

ಇವರು ಮಹಿಮರು ಎಂದು ಬಸವಣ್ಣನವರು ವ್ಯಂಗವಾಡಿದ್ದರಲ್ಲಿ ಸತ್ಯ ಅಡಗಿದೆ. ಕೆಲ ದುರ್ಬಲ ರಾಜರು ಕೂಡ ಇಂಥ ಪ್ರಭಾವಿ ದೇವಾಲಯಗಳ ಜನರ ಮತ್ತು ಶ್ರೀಮಂತರ ಅವ್ಯವಹಾರವನ್ನು ನೋಡಿಯೂ ನೋಡದಂತೆ ಇರುತ್ತಿದ್ದರು. ದೇವಾಲಯಗಳು ಇಂಥ ಮಹಿಮರಿಗೆ ಬ್ಯಾಂಕುಗಳಾಗಿ, ವ್ಯವಹಾರ ಕೇಂದ್ರಗಳಾಗಿ, ಭಾರೀ ಹೋಟೆಲ್‌ಗಳಾಗಿ, ನಾಟ್ಯಮಂದಿರಗಳಾಗಿ, ದೇವದಾಸಿಯರಿಂದ ಸೇವೆ ಪಡೆಯುವ ತಾಣಗಳಾಗಿ ಪರಿಣಮಿಸಿದ್ದವು!

ಹನ್ನೊಂದನೆ ಶತಮಾನದ ಕಾಶ್ಮೀರದ ದೊರೆ ಹರ್ಷನ ಆಸ್ಥಾನ ಕವಿ ಕಲ್ಹಣನ ‘ರಾಜತರಂಗಿಣಿ’ ಎಂಬ ಗ್ರಂಥದಲ್ಲಿ, ದೇವಾಲಯಗಳು ಸಂಪದ್ಭರಿತವಾಗಿದ್ದರ ಬಗ್ಗೆ ತಿಳಿಸಲಾಗಿದೆ. ರಾಜಭಂಡಾರ ಖಾಲಿಯಾದಾಗ ದೇವಾಲಯಗಳ ಮೇಲೆ ದಾಳಿ ಮಾಡಲು ದೊರೆ ಹರ್ಷ ಮೂರ್ತಿ ಮೂಲೋತ್ಪಾಟನ ಸಚಿವ ಹುದ್ದೆಯನ್ನೇ ಸೃಷ್ಟಿಸಿದ್ದ!

ದೇವಾಲಯದಲ್ಲಿನ ಸಂಪತ್ತನ್ನು ರಾಜಭಂಡಾರಕ್ಕೆ ಸಾಗಿಸುವ ಮೊದಲು ಆ ದೇವಸ್ಥಾನದ ಬಗ್ಗೆ ಪ್ರಜೆಗಳಿಗೆ ಇರುವ ಭಾವನಾತ್ಮಕ ಸಂಬಂಧವನ್ನು ತೊಡೆದು ಹಾಕ ಬೇಕಿತ್ತು. ಆದ್ದರಿಂದಲೇ ಮೂರ್ತಿ ವೂಲೋತ್ಪಾಟನ ಸಚಿವನ ಸೈನ್ಯಪಡೆ ಮೊದಲು ಮೂರ್ತಿಗೆ ಕೈ ಹಚ್ಚುತ್ತಿತ್ತು. ದೇವಾಲಯದ ಮುಖ್ಯಮೂರ್ತಿಯನ್ನು ಕಿತ್ತು ಬೀದಿಗೆ ತಂದು ಎಸೆಯಲಾಗುತ್ತಿತ್ತು. ಜನ ನೋಡುತ್ತ, ನೋಡುತ್ತ ಆ ಮೂರ್ತಿಯ ಬಗ್ಗೆ ಇದ್ದ ಭಾವನಾತ್ಮಕ ಸಂಬಂಧವನ್ನು ಕಳೆದುಕೊಳ್ಳುತ್ತಿದ್ದರು. ಹೀಗೆ ಆ ದೇವಸ್ಥಾನದ ಮಹಿಮೆಯನ್ನು ಅಳಿಸಿ ಹಾಕುವ ಕ್ರಿಯೆಗಳು ಮುಗಿದ ನಂತರ, ಸೈನಿಕರು ಅಲ್ಲಿನ ಸಂಪತ್ತನ್ನೆಲ್ಲ ತಂದು ರಾಜಭಂಡಾರಕ್ಕೆ ಸೇರಿಸುತ್ತಿದ್ದರು.

ಇಂಥ ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶವಿರಲಿಲ್ಲ. ಅವರೇನಿದ್ದರೂ ದೇವಸ್ಥಾನದ ಹೊರಗೆ ಬಿಟ್ಟಿಕೂಲಿಗಳಾಗಿ ದುಡಿಯಬೇಕಿತ್ತು. ಅಂತೆಯ ಬಸವಣ್ಣನವರು ದೇವಾಲಯದ ಒಳಗೆ ಹೋಗುವುದಿಲ್ಲ. ಹೊರಗೆ ದಲಿತರ ಜೊತೆ ನಿಂತು, ದೇವಾಲಯದ ಒಳಗೆ ಸಲಿಗೆವಂತರಾಗಿರುವ ಮಹಿಮರ ವಿರುದ್ಧ, ದೇವರಿಗೆ ಸತ್ಯಾಗ್ರಹದ ರೂಪದಲ್ಲಿ ತಿಳಿಸುತ್ತಿ ದ್ದಾರೆ. ‘ನಾನು ಅಸ್ಪಶ್ಯ’ ಎಂದು ಸಾರುತ್ತಿದ್ದಾರೆ. ಹೀಗೆ ಬಸವಣ್ಣನವರು ಸತ್ಯಾಗ್ರಹದ ಜನಕರು ಕೂಡ ಆಗಿದ್ದಾರೆ.

ಇಂಥ ಐಹಿಕ ಕಾರಣಗಳಿಂದ ಹಾಗೂ ದೇಹದೊಳಗೇ ಇರುವ ಜೀವಾತ್ಮ ಮತ್ತು ಪರಮಾತ್ಮರ ನೇರ ಸಂಬಂಧದ ತಾತ್ತ್ವಿಕ ಕಾರಣಗಳಿಂದ ಬಸವಣ್ಣನವರು ದೇವಾಲಯ ಗಳನ್ನು ಮತ್ತು ಮೂರ್ತಿಪೂಜೆಯನ್ನು ನಿರಾಕರಿಸಿದರು. ‘ಸ್ಥಾವರ ಪ್ರತಿಷ್ಠೆ ನಾಯಕ ನರಕ’ ಎಂದು ಎಚ್ಚರಿಸಿದರು. ಶೋಷಣೆಯ ಕೇಂದ್ರಗಳಾದ ದೇವಾಲಯದ ಮೂರ್ತಿಗಳ ಬದಲಿಗೆ ನಮ್ಮೆಳಗಿನ ಪರಮಾತ್ಮನ ಕುರುಹಾದ ಇಷ್ಟಲಿಂಗವನ್ನು ಕೊಟ್ಟರು. ಈ ಇಷ್ಟಲಿಂಗವು ಅರಿವಿನ ಕುರುಹಾಗಿ 12ನೆ ಶತಮಾನದ ಜನಸಮುದಾಯವನ್ನು ವೈಚಾರಿಕ ನೆಲೆಗೆ ತಂದು ನಿಲ್ಲಿಸಿತು. ಗುಡಿಗುಂಡಾರಗಳಿಲ್ಲದ ಮತ್ತು ದೇಹವನ್ನೇ ಜೀವಂತ ದೇವಾಲಯವಾಗಿಸಿದ ವಿಶ್ವದ ಒಂದೇ ಒಂದು ಧರ್ಮವೆಂದರೆ ಬಸವಧರ್ಮ.

***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ