ನೋಟು ರದ್ದತಿ ಅವಧಿಯಲ್ಲಿ ಹೆಚ್ಚುವರಿ ಕಾರ್ಯ ನಿರ್ವಹಿಸಿದ ಬ್ಯಾಂಕ್ ಸಿಬ್ಬಂದಿಗಳಿಗೆ ಇನ್ನೂ ದೊರಕದ ಸಂಭಾವನೆ

Update: 2017-10-04 17:43 GMT

ಹೊಸದಿಲ್ಲಿ, ಅ.4: ನೋಟು ರದ್ದತಿ ಅವಧಿಯಲ್ಲಿ ಹೆಚ್ಚುವರಿ ಅವಧಿ ಹಾಗೂ ರಜಾದಿನದಲ್ಲೂ ಕಾರ್ಯ ನಿರ್ವಹಿಸಿದ ಬ್ಯಾಂಕ್ ಸಿಬ್ಬಂದಿಗೆ ಇನ್ನೂ ಸಂಭಾವನೆ ಪಾವತಿಯಾಗಿಲ್ಲ ಎಂದು ದೂರಿರುವ ಸರಕಾರಿ ಅಧೀನದ ಬ್ಯಾಂಕ್ ಉದ್ಯೋಗಿಗಳ ಸಂಘಟನೆ, ಶೀಘ್ರ ಪಾವತಿಯಾಗದಿದ್ದರೆ ಮುಷ್ಕರ ಹೂಡುವುದಾಗಿ ಹಾಗೂ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ.

 ಕಳೆದ ವರ್ಷದ ನವೆಂಬರ್ 8ರಂದು ಅಧಿಕ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದ ಕೇಂದ್ರ ಸರಕಾರದ ನಿರ್ಧಾರದಿಂದಾಗಿ ಚಲಾವಣೆಯಲ್ಲಿದ್ದ ಶೇ.86ರಷ್ಟು ಕರೆನ್ಸಿ ನೋಟುಗಳನ್ನು ಹಿಂಪಡೆಯಲಾಗಿತ್ತು. ತಮ್ಮಲ್ಲಿರುವ ಕರೆನ್ಸಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನತೆ ಬ್ಯಾಂಕ್ ಹಾಗೂ ಎಟಿಎಂ ಎದುರು ಮಾರುದ್ದದ ಸರತಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆ ಇತ್ತು ಹಾಗೂ ಬ್ಯಾಂಕ್ ವ್ಯವಹಾರವನ್ನು ನಿರ್ವಹಿಸಲು ಬ್ಯಾಂಕ್ ಸಿಬ್ಬಂದಿ ಅವಧಿ ಮೀರಿ ಹಾಗೂ ರಜಾದಿನದಲ್ಲೂ ಕಾರ್ಯ ನಿರ್ವಹಿಸಬೇಕಾಯಿತು. ಕೆಲ ಸಂದರ್ಭದಲ್ಲಿ ನಿರಂತರ 14 ಗಂಟೆ ಕಾರ್ಯನಿರ್ವಹಿಸುವ ಪರಿಸ್ಥಿತಿ ಇತ್ತು ಹಾಗೂ ಎಲ್ಲಾ ಸಿಬ್ಬಂದಿ ರಜೆಯನ್ನು ರದ್ದುಗೊಳಿಸಲಾಗಿತ್ತು.

 ಆದರೆ ಹೀಗೆ ಹೆಚ್ಚುವರಿ ಕಾರ್ಯ ನಿರ್ವಹಿಸಿದ ಬಹುತೇಕ ಸಿಬ್ಬಂದಿಗೆ ಇನ್ನೂ ಸಂಭಾವನೆ ದೊರಕಿಲ್ಲ. ಸುಮಾರು 8 ಲಕ್ಷ ಸಿಬ್ಬಂದಿ ಸರಕಾರಿ ಅಧೀನದ ಬ್ಯಾಂಕ್‌ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಉದ್ಯೋಗದ ಶ್ರೇಣಿ ಆಧರಿಸಿ ಹೆಚ್ಚುವರಿ ಕೆಲಸದ ಸಂಭಾವನೆ ನೀಡಲಾಗುತ್ತಿದ್ದು ಸರಾಸರಿ ಗಂಟೆಗೆ 100ರಿಂದ 300 ರೂ.ವರೆಗೆ ಸಂಭಾವನೆ ನೀಡಬೇಕು. ಈ ಲೆಕ್ಕದಲ್ಲಿ ಹಲವಾರು ಕೋಟಿ ರೂ. ಸಂಭಾವನೆ ನೀಡಬೇಕಿದೆ.

ನಮ್ಮ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದಿದ್ದೇವೆ. ಸರಕಾರ ಕ್ರಮ ಕೈಗೊಳ್ಳದಿದ್ದರೆ ಮುಷ್ಕರ ಹೂಡುವ ಹಾಗೂ ನ್ಯಾಯಾಲಯದ ಮೆಟ್ಟಿಲೇರುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅಖಿಲಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ(ಎಐಬಿಇಎ)ಯ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಚಾಲಮ್ ತಿಳಿಸಿದ್ದಾರೆ. ಸಮಸ್ಯೆಯ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿಯವರ ಗಮನಕ್ಕೂ ತರಲಾಗಿದೆ. ಕಾರ್ಮಿಕ ಸಚಿವರ ಗಮನಕ್ಕೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದೀಗ ಅನುತ್ಪಾದಕ ಆಸ್ತಿ(ಎನ್‌ಪಿಎ) ಪ್ರಕರಣ, ಬ್ಯಾಂಕ್ ಖಾತೆಗಳ ಪರಿಶೀಲನೆ ಇತ್ಯಾದಿ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತಿದೆ. ಸರಕಾರಿ ಬ್ಯಾಂಕ್‌ಗಳಲ್ಲಿ ಯಾವಾಗಲೂ ಮಾನವ ಸಂಪನ್ಮೂಲ(ಸಿಬ್ಬಂದಿ)ಕ್ಕೆ ಸಂಬಂಧಿಸಿದ ಪ್ರಕರಣಕ್ಕೆ ಕಡೆಯ ಆದ್ಯತೆ ನೀಡಲಾಗುತ್ತದೆ ಎಂದು ಮುಂಬೈ ಮೂಲದ ಸಾರ್ವಜನಿಕ ಕ್ಷೇತ್ರದ ಬ್ಯಾಂಕೊಂದರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಎಲ್ಲಾ ಸಿಬ್ಬಂದಿಗೂ ನವೀನ ಪರಿಕಲ್ಪನೆಯ ಯೋಜನೆಯಡಿ ಪರಿಹಾರ ಧನ ನೀಡಲು ಚಿಂತನೆ ನಡೆಸಿರುವುದಾಗಿ ವಿತ್ತ ಸಚಿವಾಲಯದ ಆರ್ಥಿಕ ಸೇವಾ ವಿಭಾಗ ಈ ಹಿಂದೆ ನೀಡಿದ್ದ ಹೇಳಿಕೆಯಲ್ಲಿ ತಿಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News