ನ್ಯಾಯಾಂಗ ಕಾರ್ಯಾಂಗಕ್ಕೆ ಶರಣು?

Update: 2017-10-05 18:38 GMT

ನ್ಯಾಯಮೂರ್ತಿ ಜಯಂತ್ ಪಟೇಲರ ರಾಜೀನಾಮೆ ನ್ಯಾಯಾಂಗದ ಪಾಲಿಗೆ ಸಂಘರ್ಷದ ಒಂದು ಕ್ಷಣವಾಗಿದೆ.

ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಜಯಂತ್ ಪಟೇಲರ ರಾಜೀನಾಮೆ ಭಾರತದಲ್ಲಿ ಸಂಘರ್ಷದ ಒಂದು ಕ್ಷಣವಾಗಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ದ್ವಿತೀಯ ಅತೀ ಹಿರಿಯ ನ್ಯಾಯಮೂರ್ತಿಯಾಗಿದ್ದ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ನ್ಯಾಯಾಧೀಶರ ಶ್ರೇಣಿಯಲ್ಲಿ ತೃತೀಯ ಅತಿ ಹಿರಿಯ ನ್ಯಾಯಮೂರ್ತಿಯಾಗಿ ವರ್ಗಾವಣೆ ಮಾಡಲಾಯಿತು. ಇದನ್ನು ಪ್ರತಿಭಟಿಸಿ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿದರು. ಕರ್ನಾಟಕದಲ್ಲಿ ಈಗ ಮುಖ್ಯ ನ್ಯಾಯಮೂರ್ತಿಯಾಗಿರುವ ಸುಬ್ರೊ ಕಮಲ್ ಮುಖರ್ಜಿ ಅಕ್ಟೋಬರ್ 9ರಂದು ನಿವೃತ್ತರಾಗಲಿದ್ದು, ಕರ್ನಾಟಕದಲ್ಲೇ ಇರುತ್ತಿದ್ದಲ್ಲಿ ಸಹಜವಾಗಿಯೇ ಪಟೇಲ್ ಹೈಕೋರ್ಟ್‌ನ ಪ್ರಭಾರ ಮುಖ್ಯ ನ್ಯಾಯಮೂರ್ತಿಯಾಗುತ್ತಿದ್ದರು.

ಗುಜರಾತ್ ಹೈಕೋರ್ಟ್‌ನ ಪ್ರಭಾರ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ, ನ್ಯಾಯಮೂರ್ತಿ ಪಟೇಲ್‌ರವರು ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣವನ್ನು ಸಿಬಿಐ ವಿಚಾರಣೆ ನಡೆಸುವಂತೆ ನಿರ್ದೇಶ ನೀಡಿದ್ದಕ್ಕೆ ಈಗ ಅವರು ಬೆಲೆ ತೆರುವಂತೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದು ಬರುವ ವಿಷಯ. ಆದ್ದರಿಂದಲೇ ಕರ್ನಾಟಕ ಮತ್ತು ಗುಜರಾತ್ ಬಾರ್ ಅಸೋಸಿಯೇಶನ್ ಎರಡೂ ಕೂಡಾ ಕೋರ್ಟ್ ಕಲಾಪಗಳನ್ನು ಒಂದು ದಿನದ ಮಟ್ಟಿಗೆ ನಿಷೇಧಿಸುವುದಾಗಿ ಘೋಷಿಸಿವೆ. ಇಶ್ರತ್ ಜಹಾನ್ ಪ್ರಕರಣದಲ್ಲಿ ಸಿಬಿಐ ವಿಚಾರಣೆಯು ಗುಜರಾತಿನ ಹಲವು ಮಂದಿ ಪೊಲೀಸ್ ಅಧಿಕಾರಿಗಳ ಬಂಧನಕ್ಕೆ ಮತ್ತು ಇಶ್ರತ್ ಜಹಾನ್‌ಳ ಬರ್ಬರ ಹತ್ಯೆಗಾಗಿ ಚಾರ್ಜ್‌ಶೀಟ್ ಸಲ್ಲಿಕೆಗೆ ಮತ್ತು ಆ ಮೂಲಕ, ಅಂದಿನ ಗುಜರಾತ್ ಮುಖ್ಯ ಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಮುಜುಗರಕ್ಕೆ ಕಾರಣವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

‘ಬಾರ್ ಆ್ಯಂಡ್ ಬೆಂಚ್’ಗೆ ನೀಡಿದ ಒಂದು ಸಂದರ್ಶನ ದಲ್ಲಿ ನ್ಯಾಯಮೂರ್ತಿ ಪಟೇಲ್‌ರವರು ತನ್ನನ್ನು ನ್ಯಾಯಾಂಗ ಕರ್ತವ್ಯದಿಂದ ಬಿಡುಗಡೆ ಮಾಡಬೇಕೆಂದು ಕೋರಿ ತಾನು ರಾಜೀನಾಮೆ ನೀಡುವುದಾಗಿ ಮತ್ತು ತಾನು ಬೇರೇನನ್ನೂ ಹೇಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಅವರ ರಾಜೀನಾಮೆಗೆ ಕಾರಣಗಳ ಬಗ್ಗೆ ಅವರು ವಹಿಸಿರುವ ವೌನವೇ ನಿಜ ಸಂಗತಿಯನ್ನು ಸ್ಪಷ್ಟವಾಗಿ ಹೇಳುತ್ತಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಯ ನಿರಾಕರಣೆಗೆ ಭಯಾನಕವಾಗಿ ಸಮಾನ ನ್ಯಾಯಮೂರ್ತಿ ಯೊಬ್ಬರು ತಾವು ಅನ್ಯಾಯವೆಂದು ತಿಳಿದ ಒಂದು ಕ್ರಮಕ್ಕಾಗಿ, ಒಂದು ಕಾರಣಕ್ಕಾಗಿ ರಾಜೀನಾಮೆ ನೀಡುವುದು ನ್ಯಾಯಾಂಗದಲ್ಲಿ ಸಂಘರ್ಷದ ಆರಂಭದ ಹಂತದ ಒಂದು ಸೂಚನೆ. ಯಾಕೆಂದರೆ ಇಂತಹ ಪ್ರತಿಭಟನೆ ವ್ಯಕ್ತಿಯೊಬ್ಬನಿಗೆ ಆದ ಅನ್ಯಾಯವನ್ನಷ್ಟೇ ಹೇಳುವುದಲ್ಲ, ಬದಲಾಗಿ ನ್ಯಾಯಾಂಗದ ಸ್ವಾತಂತ್ರವನ್ನು ಎತ್ತಿ ಹಿಡಿಯುವ ಜವಾಬ್ದಾರಿಯನ್ನು ಯಾರಿಗೆ ನೀಡಲಾಗಿದೆಯೋ, ಅವರ ವಿರುದ್ಧ ಪ್ರತೀಕಾರದ ಕ್ರಮವಾಗಿ ಕಾರ್ಯಾಂಗವು ಅವರನ್ನು ಒಂದು ದಾಳವಾಗಿ ಬಳಸಿಕೊಳ್ಳುತ್ತಿರುವುದನ್ನು ಸೂಚಿಸುತ್ತದೆ.

1973 ಮತ್ತು 1997ರಲ್ಲಿ ಇಂದಿರಾಗಾಂಧಿಯವರು ಭಾರತದ ಮುಖ್ಯ ನ್ಯಾಯಮೂರ್ತಿಯವರನ್ನು ದಮನಿಸಿದ ಕುಖ್ಯಾತ ಘಟನೆಗಳ ನಂತರದ ವರ್ಷಗಳಲ್ಲಿ ಕಾರ್ಯಾಂಗ ಮತ್ತು ನ್ಯಾಯಾಂಗದ ಸಂಬಂಧಗಳಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆಗೆ 1990ರ ದಶಕದಲ್ಲಿ ಕೊಲಿಜಿಯಂ ವ್ಯವಸ್ಥೆಯ ಶೋಧನೆಯ ಅಂತಹ ಒಂದು ಸಂಘರ್ಷಯುತ ಬದಲಾವಣೆ.

ಅಲ್ಪಸಂಖ್ಯೆಯ ಬಹುಮತಗಳ ಸರಕಾರಗಳು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ತನಕ ಈ ಬದಲಾವಣೆಯು ಕಲ್ಪನೆಗಿಂತ ಹೆಚ್ಚು ವಾಸ್ತವ ಎಂದು ಅನ್ನಿಸುತ್ತಿತ್ತು. ಆದರೆ 2014ರಲ್ಲಿ ಏಕಪಕ್ಷದ ಬಹುಮತವುಳ್ಳ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆಯಲ್ಲಿ ಕಾರ್ಯಾಂಗ ಮತ್ತು ನ್ಯಾಯಾಂಗದ ಮಧ್ಯೆ ಯಾವುದು ಹೆಚ್ಚು ಪ್ರಧಾನವೆಂಬ ಬಗ್ಗೆ ಈಗ ಯಾವ ಅನುಮಾನವೂ ಉಳಿದಿಲ್ಲ. 2015ರಲ್ಲಿ ‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ’ವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಇದು ನ್ಯಾಯಾಂಗದ ಸ್ವಾತಂತ್ರದ ರಕ್ಷಣೆಗಾಗಿ ಅದು ತೆಗೆದುಕೊಂಡ ಕ್ರಮವಾಗಿತ್ತು. ಆದರೆ ಇದು ಕೇವಲ ಒಂದು ಅಣಕು, ವ್ಯಂಗ್ಯ ಎಂದು ಈಗ ತನ್ನ ರಾಜೀನಾಮೆಯ ಮೂಲಕ, ಪ್ರಾಯಶಃ ಪಟೇಲ್ ಹೇಳುತ್ತಿದ್ದಾರೆ.

ಕೊಲಿಜಿಯಂ ಶಿಫಾರಸು ಮಾಡಿದ್ದಾಗಲೂ, 2014ರ ಜೂನ್‌ನಲ್ಲಿ, ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂರವರು ಸುಪ್ರೀಂ ಕೋರ್ಟ್‌ನ ಓರ್ವ ನ್ಯಾಯಮೂರ್ತಿ ಯಾಗಿ ನೇಮಕವಾಗದೆ ಇದ್ದದ್ದು ಈ ಸಂಘರ್ಷದ ಆರಂಭದ ಹಂತ ಎನ್ನಬಹುದು.

ನ್ಯಾಯಮೂರ್ತಿ ರಾಜೀವ್ ಶಕ್‌ಧರ್‌ರವರನ್ನು ದಿಲ್ಲಿ ಹೈಕೋರ್ಟ್ ನಿಂದ ಮದ್ರಾಸ್ ಹೈಕೋರ್ಟ್‌ಗೂ, ನ್ಯಾಯಮೂರ್ತಿ ಅಭಯ್ ದೆವ್ ತಿಪ್ಸೆಯವರನ್ನು ಬಾಂಬೆ ಹೈಕೋರ್ಟ್ ನಿಂದ ಅಲಹಾಬಾದ್ ಹೈಕೋರ್ಟ್‌ಗೂ ವರ್ಗಾವಣೆ ಮಾಡಿದಾಗ ಆಚರಣೆಯಲ್ಲಿ, ಕೊಲಿಜಿಯಂ ಕಾರ್ಯಾಂಗಕ್ಕೆ ತಲೆಬಾಗದೆ ಅನ್ಯ ಮಾರ್ಗವಿಲ್ಲವೆಂಬುದು ಸ್ಪಷ್ಟವಾಯಿತು. ಸುಪ್ರೀಂ ಕೋರ್ಟ್ ನ ನಿರ್ಧಾರಕ್ಕೆ ಬೆಲೆಯಿಲ್ಲವೆಂಬುದು ಸಾಬೀತಾಯಿತು.

ಮೇಲೆ ಉಲ್ಲೇಖಿಸಲಾದ ಮೂರೂ ಪ್ರಕರಣಗಳಲ್ಲಿ ನ್ಯಾಯಮೂರ್ತಿಗಳು, ಕೇಂದ್ರದಲ್ಲಿ ಈಗ ಅಧಿಕಾರದಲ್ಲಿರುವವರ ಹಿತಾಸಕ್ತಿಗಳಿಗೆ ಪೂರಕವಲ್ಲದ ತೀರ್ಪುಗಳನ್ನು ನೀಡಿದ್ದಕ್ಕಾಗಿ, ಬೆಲೆ ತೆರಬೇಕಾಯಿತೆಂಬುದು ಆಕಸ್ಮಿಕವೇನೂ ಅಲ್ಲ.

ನಕಲಿ ಎನ್‌ಕೌಂಟರ್ ಪ್ರಕರಣವೊಂದರಲ್ಲಿ ಕೌಸರ್-ಬಿ ಮತ್ತು ಸೊಹ್ರಾಬುದ್ದೀನ್ ಶೇಕ್ ನಾಪತ್ತೆಯಾದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಲು ಗೋಪಾಲ ಸುಬ್ರಮಣಿಯಂ ಕಾರಣರಾಗಿದ್ದರು. ಅವರ ನಿರ್ಧಾರವನ್ನು ಅಂದಿನ ಗುಜರಾತಿನ ಮೋದಿ ಸರಕಾರ ವಿರೋಧಿಸಿತ್ತು.

ಅದೇ ರೀತಿಯಾಗಿ ದಿಲ್ಲಿ ಹೈಕೋರ್ಟ್‌ನ ಓರ್ವ ನ್ಯಾಯಾಧೀಶರಾಗಿ ರಾಜೀವ್ ಶಕ್‌ಧರ್ 2015ರಲ್ಲಿ ಕೇಂದ್ರ ತನಿಖಾ ಸಂಸ್ಥೆಯು ಗ್ರೀನ್ ಪೀಸ್ ಕಾರ್ಯಕರ್ತೆ ಪ್ರಿಯಾ ಪಿಳೈ ವಿರುದ್ಧ ಹೊರಡಿಸಿದ್ದ ಲುಕ್ ಔಟ್ ನೋಟಿಸನ್ನು ಅನೂರ್ಜಿತಗೊಳಿಸುವ ಮೂಲಕ ಮೋದಿ ಸರಕಾರಕ್ಕೆ ಮುಜುಗರ ಉಂಟು ಮಾಡಿದ್ದರು. ಹಾಗೆಯೇ, 2006ರಲ್ಲಿ ಮುಂಬೈ ಸೆಷನ್ಸ್ ನ್ಯಾಯಾಲಯದ ಓರ್ವ ನ್ಯಾಯಾಧೀಶರಾಗಿ, ನ್ಯಾಯಮೂರ್ತಿ ತಿಪ್ಸೆಯವರು 2002ರಲ್ಲಿ ಗುಜರಾತಿನಲ್ಲಿ ನರಮೇಧ ನಡೆದಾಗ, ಬೆಸ್ಟ್ ಬೇಕರಿ ದೊಂಬಿ ಪ್ರಕರಣದಲ್ಲಿ ಆಪಾದಿತರಾದ 21 ಮಂದಿಯಲ್ಲಿ 9 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು.

ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ನಾವು ಈಗ ಪ್ರಾಯಶಃ ಕೊಲಿಜಿಯಂಗೆ ಕೇಳಬೇಕಾದ ಪ್ರಶ್ನೆ: ನ್ಯಾಯಮೂರ್ತಿ ಜಯಂತ್ ಪಟೇಲ್‌ರವರಿಗೆ ಕರ್ನಾಟಕದ ಮುಖ್ಯ ನ್ಯಾಯಾಧೀಶರಾಗಿ ಅಥವಾ ಸುಪ್ರೀಂ ಕೋರ್ಟ್‌ನ ಓರ್ವ ನ್ಯಾಯಾಧೀಶರಾಗಿ ಪದೋನ್ನತಿ ನೀಡಲು ವಿಫಲ ವಾಗುವ ಮೂಲಕ, ಕೊಲಿಜಿಯಂನ ಸದಸ್ಯರು ಕೂಡ ಅವರ ಪೂರ್ವಿಕರು ಎಡಿಎಂ ಜಬಲ್ಪುರ ಪ್ರಕರಣದಲ್ಲಿ ವರ್ತಿಸಿದಂತೆಯೇ ವರ್ತಿಸಿದಂತಾಗಲಿಲ್ಲವೇ?

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News