ಪ್ರಧಾನಿ ಮಾತನಾಡಿದರು!

Update: 2017-10-05 18:55 GMT

ಕೊನೆಗೂ....ಕೊನೆಗೂ...ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಮಾತು ಬಿಟ್ಟು ಇನ್ನೇನೂ ಮಾಡದ ಪ್ರಧಾನಿ ಮೋದಿ ‘ಮಾತನಾಡಿದ್ದಾರೆ’ ಎನ್ನುವುದನ್ನು ಜನರು ಒಂದು ವ್ಯಂಗ್ಯವಾಗಿ ಸ್ವೀಕರಿಸುವ ಸಾಧ್ಯತೆಗಳೇ ಹೆಚ್ಚು. ಮೋದಿ ಹರಿಕತೆ ದಾಸರಾಗಿ ಧಾರಾಳವಾಗಿ ಮಾತನಾಡುತ್ತಲೇ ಇದ್ದಾರೆ. ಅಂಗೈಯಲ್ಲಿ ಅರಮನೆ ತೋರಿಸಿ ಜನರನ್ನು ವಂಚಿಸುತ್ತಲೇ ಇದ್ದಾರೆ. ಆದರೆ ನೋಟು ನಿಷೇಧದ ಬಳಿಕ ದೇಶದಲ್ಲಾದ ಆರ್ಥಿಕ ಕುಸಿತದ ಬಗ್ಗೆ, ಬೆಲೆಯೇರಿಕೆಗಳ ಬಗ್ಗೆ, ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ಕೋಮು ಹಿಂಸೆಗಳ ಬಗ್ಗೆ ಪ್ರಧಾನಿ ಸ್ಥಾನದಲ್ಲಿ ನಿಂತು ಮೋದಿ ಗಾಢ ವೌನವನ್ನು ತಳೆದಿದ್ದರು. ಜನರ ಎಲ್ಲ ಪ್ರಶ್ನೆಗಳಿಗೂ ಹೆಗಲು ಜಾರಿಸುತ್ತಾ ಬಂದಿದ್ದರು.

ದೇಶದ ಆರ್ಥಿಕ ಬಿಕ್ಕಟ್ಟಿನ ಕುರಿತಂತೆ ದೇಶದೊಳಗೆ ಹಾಹಾಕಾರ ಎದ್ದಿದೆ. ನೋಟು ನಿಷೇಧದಿಂದ ಕಪ್ಪು ಹಣ ಬೆಳಕಿಗೆ ಬರುತ್ತದೆ, ದೇಶ ಉದ್ಧಾರವಾಗುತ್ತದೆ ಎಂದೆಲ್ಲ ಹೇಳಿದವರೇ, ನಿಷೇಧದ ಬಳಿಕ ಆಗಿರುವ ಪರಿಣಾಮಗಳನ್ನು ದೇಶಕ್ಕೆ ವಿವರಿಸುವ ಬಾಧ್ಯತೆ ಹೊಂದಿರುತ್ತಾರೆ. ಆದರೆ ಮೋದಿ ಜನರ ಪ್ರಶ್ನೆಗಳಿಗೆ ಕಿವುಡಾಗಿ ಕುಳಿತರು. ಇದೀಗ ಸ್ವತಃ ಬಿಜೆಪಿಯೊಳಗಿನ ನಾಯಕರೇ ನರೇಂದ್ರ ಮೋದಿಯ ಆಡಳಿತ ನೀತಿಯ ವಿರುದ್ಧ ಮಾತನಾಡಲು ತೊಡಗಿದ ಬಳಿಕ ಅವರು ಅನಿವಾರ್ಯವಾಗಿ ಬಾಯಿ ತೆರೆದಿದ್ದಾರೆ. ಅಂದರೆ ಪ್ರಧಾನಿ ಸ್ಥಾನದಿಂದ ಮೋದಿ ಆಡಬೇಕಾದುದನ್ನು ಮೊದಲ ಬಾರಿ ಆಡಿದ್ದಾರೆ.

ಜನರ ಪ್ರಶ್ನೆಗಳಿಗೆ ಅವರು ನೀಡಿರುವ ಸಮರ್ಥನೆ ಬಾಲಿಶವಿರಬಹುದು. ಆದರೂ, ಪ್ರಧಾನಿಯಾಗಿ ಇಷ್ಟಾದರೂ ಮಾತನಾಡಿದರಲ್ಲ ಎಂದು ತೃಪ್ತಿ ಪಟ್ಟುಕೊಳ್ಳಬೇಕಾದ ಸ್ಥಿತಿ ನಮ್ಮದಾಗಿದೆ. ದೇಶದ ಜಿಡಿಪಿ ಮೂರು ವರ್ಷಗಳಷ್ಟು ಹಿಂದಕ್ಕೆ ಹೋಗಿದ್ದು ಮಾಧ್ಯಮಗಳಲ್ಲಿ ಪ್ರಕಟವಾಗಿ ತಿಂಗಳಾಗಿದೆ. ದೇಶದ ಒಟ್ಟು ಅರ್ಥವ್ಯವಸ್ಥೆ ಹಿಂದಕ್ಕೆ ಚಲಿಸುತ್ತಿರುವುದು ಮಾಧ್ಯಮಗಳಲ್ಲಿ ಇದೀಗ ತೀವ್ರಚರ್ಚೆಗೆ ಒಳಗಾಗುತ್ತಿವೆ. ಇದೀಗ ಮೋದಿ ಅದನ್ನು ಸಮರ್ಥಿಸಿಕೊಂಡಿದ್ದಾರೆ. ಹೇಗೆಂದರೆ ‘‘ಹಿಂದೆ ಯುಪಿಎ ಆಡಳಿತದಲ್ಲೂ ಜಿಡಿಪಿ ಕುಸಿದಿತ್ತು’’ ಎಂದು ಹೇಳುವ ಮೂಲಕ. ಹಿಂದೆ ಯುಪಿಎ ಕಾಲದಲ್ಲಿ ಜಿಡಿಪಿ ಕುಸಿದಿರುವುದು, ಇಂದು ಮೋದಿಯ ಕಾಲದಲ್ಲಿ ಜಿಡಿಪಿ ಕುಸಿತಕ್ಕೆ ಹೇಗೆ ಸಮರ್ಥನೆಯಾಗುತ್ತದೆ? ಯುಪಿಎ ಕಾಲದಲ್ಲಿ ಅತೀ ಹೆಚ್ಚು ಜನಪರ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಲಾಗಿತ್ತು.

ಆಹಾರದ ಹಕ್ಕು, ಉದ್ಯೋಗದ ಹಕ್ಕು ಮೊದಲಾದ ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿರುವುದು ಯುಪಿಎ ಸರಕಾರ. ತಾನು ಯುಪಿಎ ಸರಕಾರಕ್ಕಿಂತ ಭಿನ್ನ ಎಂದು ಹೇಳಿಕೊಂಡು ಮೋದಿ ನೇತೃತ್ವದ ಸರಕಾರ ಅಧಿಕಾರ ಹಿಡಿಯಿತು. ‘ದೇಶಕ್ಕೆ ಒಳ್ಳೆಯ ದಿನ’ ಬಂದಿದೆ ಎಂದು ಘೋಷಣೆ ಮಾಡಿತ್ತು. ಇದೀಗ ದೇಶ ಹಿಂದಕ್ಕೆ ಚಲಿಸಿದೆ, ಆರ್ಥಿಕತೆಯಲ್ಲಿ ಹಿನ್ನಡೆಯಾಗಿದೆ ಎಂದು ಹೇಳಿದರೆ, ‘ಹಿಂದೆ ಯುಪಿಎ ಸರಕಾರದ ಅವಧಿಯಲ್ಲೂ ಇದು ಆಗಿತ್ತು’ ಎಂದು ಸಮರ್ಥಿಸಿಕೊಳ್ಳುವುದರಲ್ಲಿ ಏನು ಅರ್ಥವಿದೆ? ಹಾಗಾದರೆ, ಹಿಂದೆ ಯುಪಿಎ ಸರಕಾರ ಯಾವುದರಲ್ಲೆಲ್ಲ ವೈಫಲ್ಯ ಕಂಡಿತ್ತೋ ಅದನ್ನೆಲ್ಲ ಪುನರಾವರ್ತಿಸುವುದಕ್ಕಾಗಿ ಮೋದಿ ಸರಕಾರವನ್ನು ಜನರು ಬಹುಮತದಿಂದ ಆರಿಸಿದ್ದಾರೆಯೇ? ಭಾರತ ಈ ಪ್ರಮಾಣದಲ್ಲಿ ಆರ್ಥಿಕವಾಗಿ ಹಿಂಜರಿಕೆ ಅನುಭವಿಸುವಂತಹ ಸ್ಥಿತಿಯಲ್ಲಿ ಇರಲಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಈ ಹಿಂಜರಿಕೆ ಮೋದಿಯ ಆರ್ಥಿಕ ನೀತಿಯ ವೈಫಲ್ಯದಿಂದಾಗಿರುವುದು. ಬಂಡವಾಳವನ್ನು ಆಕರ್ಷಿಸುವ ಹೆಸರಿನಲ್ಲಿ ಎಲ್ಲವನ್ನೂ ವಿದೇಶಿ ಕಂಪೆನಿಗಳಿಗೆ ಬಿಕರಿಗಿಟ್ಟ ನರೇಂದ್ರ ಮೋದಿಯವರು, ಆ ಬಳಿಕ ಸ್ವದೇಶಿ ಉದ್ದಿಮೆಗಳನ್ನು ಸರ್ವನಾಶ ಮಾಡಲು ಪಣ ತೆಗೆದುಕೊಂಡವರಂತೆ ‘ನೋಟು ನಿಷೇಧ’ ಜಾರಿ ಮಾಡಿದರು. ಇದರಿಂದ ಲಾಭವಾದುದು ಏನು ? ಈ ದೇಶದಲ್ಲಿರುವ ಅಕ್ರಮ ಹಣವೆಲ್ಲ ಸಾಚಾ ಹಣ ಎಂಬ ಮಾನ್ಯತೆಯನ್ನು ತನ್ನದಾಗಿಸಿಕೊಂಡಿತು.

ಇತ್ತ, ಗ್ರಾಮೀಣ ಉದ್ದಿಮೆ ಸಂಪೂರ್ಣ ನೆಲಕಚ್ಚಿತು. ಕೃಷಿ ಮಾರುಕಟ್ಟೆ ಕುಸಿಯಿತು. ‘‘ನನಗೆ ಐವತ್ತು ದಿನಗಳ ಅವಕಾಶ ಕೊಡಿ. ಬಳಿಕ ಬೇಕಾದರೆ ನನ್ನನ್ನು ಕೊಂದು ಹಾಕಿ’’ ಎಂದು ಪ್ರಧಾನಿಯಾಗಿ ಆಡಬಾರದ ಮಾತನ್ನು ಆಡಿದವರು ನರೇಂದ್ರ ಮೋದಿ. ಐವತ್ತು ದಿನವಲ್ಲ, ಇಂದೋ ನಾಳೆ ನೋಟು ನಿಷೇಧ ನಿರ್ಧಾರಕ್ಕೆ ಒಂದು ವರ್ಷವಾಗುತ್ತದೆ. ದೇಶಕ್ಕಂತೂ ಒಳಿತಾಗಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕಪ್ಪುಹಣ ಬರಲೇ ಇಲ್ಲ. ಇದು ನರೇಂದ್ರ ಮೋದಿ ಸರಕಾರಕ್ಕಾಗಿರುವ ಭಾರೀ ಮುಖಭಂಗ. ನೋಟು ನಿಷೇಧಕ್ಕಾಗಿ ಜನರು ಮಾಡಿದ ತ್ಯಾಗ, ಬಲಿದಾನಗಳು ವ್ಯರ್ಥವಾಯಿತು. ಬಹುಶಃ ನರೇಂದ್ರ ಮೋದಿಯವರ ಸ್ಥಾನದಲ್ಲಿ ಬೇರಾವ ವ್ಯಕ್ತಿ ಇದ್ದಿದ್ದರೂ, ತನ್ನ ಸರಕಾರಕ್ಕಾದ ಮುಖಭಂಗಕ್ಕೆ ಹೇಸಿ ರಾಜೀನಾಮೆಯನ್ನು ನೀಡುತ್ತಿದ್ದರು.

ವಿಪರ್ಯಾಸವೆಂದರೆ ದೇಶಕ್ಕಾದ ಗಾಯ ನರೇಂದ್ರ ಮೋದಿಯ ಅರಿವಿಗೆ ಇನ್ನೂ ಬಂದಿಲ್ಲ. ತಾನು ಮಾಡಿದ ನಾಶವೇನು ಎಂದು ಮನವರಿಕೆಯಾದರಷ್ಟೇ ಅದನ್ನು ತಿದ್ದಿಕೊಳ್ಳಬಹುದು. ಬಿಜೆಪಿಯ ನಾಯಕರು ನರೇಂದ್ರ ಮೋದಿಯ ಆರ್ಥಿಕ ನೀತಿಯನ್ನು ಕಠೋರವಾಗಿ ಟೀಕಿಸುತ್ತಿರುವಾಗ, ನರೇಂದ್ರ ಮೋದಿಯವರು ‘ಶಲ್ಯ ನೀತಿ’ ಎಂದು ಅದನ್ನು ವ್ಯಾಖ್ಯಾನಿಸುತ್ತಿದ್ದಾರೆ. ಮಹಾಭಾರತ ಯುದ್ಧದ ಸಂದರ್ಭದಲ್ಲಿ ಕರ್ಣ ರಥ ಚಲಾಯಿಸುತ್ತಿದ್ದಾಗ, ಸಾರಥಿಯಾಗಿರುವ ಶಲ್ಯನು ಕರ್ಣನಿಗೆ ಅಸಹಕಾರ ನೀಡುತ್ತಿದ್ದನಂತೆ. ತನ್ನನ್ನು ತಾನು ಕರ್ಣನಿಗೆ ಹೋಲಿಸಿ, ಉಳಿದ ಬಿಜೆಪಿ ನಾಯಕರನ್ನು ಶಲ್ಯನಿಗೆ ಹೋಲಿಸಿದ್ದಾರೆ ನರೇಂದ್ರ ಮೋದಿ. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಯಶವಂತ ಸಿನ್ಹಾ ‘ದೇಶದ ಅರ್ಥವ್ಯವಸ್ಥೆಯ ಮಾನಹರಣ ವಾಗುತ್ತಿರುವಾಗ ಸುಮ್ಮನಿರಲು ಸಾಧ್ಯವಿಲ್ಲ’’ ಎಂದು ಹೇಳಿ ತಮ್ಮನ್ನು ತಾವು ಕೃಷ್ಣನಿಗೆ ಹೋಲಿಸಿದ್ದಾರೆ.

ಮಹಾಭಾರತ ಕತೆಯಲ್ಲಿ ತುಂಬಿದ ಸಭೆಯಲ್ಲಿ ದ್ರೌಪದಿಯ ಮಾನಹರಣ ಮಾಡಿದ ದುರ್ಯೋಧನನಿಗೆ ಮೋದಿಯನ್ನು ಹೋಲಿಸಿದ್ದಾರೆ. ಹೀಗೆ ಬಿಜೆಪಿಯೊಳಗೇ ಒಂದು ವಿರೋಧ ಪಕ್ಷ ಹುಟ್ಟಬೇಕಾದರೆ, ದೇಶದ ಸ್ಥಿತಿ ಅದೆಷ್ಟು ಚಿಂತಾಜನಕವಾಗಿರಬೇಕು ಎನ್ನುವುದನ್ನು ನಾವು ಯೋಚಿಸಬೇಕು. ದೇಶ ಎಕ್ಕುಟ್ಟಿ ಹೋದ ಮೇಲೂ ತನ್ನನ್ನು ಟೀಕಿಸಬಾರದು ಎಂದು ನರೇಂದ್ರ ಮೋದಿಯವರು ಭಾವಿಸಿದರೆ, ಅವರು ದೇಶಕ್ಕಿಂತಲೂ ದೊಡ್ಡವರು ಎಂದಾಯಿತಲ್ಲವೇ?

ಒಟ್ಟಿನಲ್ಲಿ ಆರ್ಥಿಕ ಅಭಿವೃದ್ಧಿ ಕುಸಿತಗೊಂಡಿರುವುದನ್ನು ನರೇಂದ್ರ ಮೋದಿ ಒಪ್ಪಿಕೊಂಡಿದ್ದಾರೆ. ಇಷ್ಟಕ್ಕಾಗಿ ಅವರನ್ನು ಅಭಿನಂದಿಸಬೇಕು. ಸರಿಪಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಅದು ಯಾವ ಸ್ವರೂಪದಲ್ಲಿದೆ ಎನ್ನುವುದನ್ನು ಸ್ಪಷ್ಟಪಡಿಸಲು ವಿಫಲರಾಗಿದ್ದಾರೆ. ‘ಬುಲೆಟ್ ಟ್ರೇನ್’ ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಬರುತ್ತದೆ ಎಂದು ಮೋದಿ ನಂಬಿದ್ದಾರೆಯೇ? ತಮ್ಮಷ್ಟಕ್ಕೆ ದನ ಸಾಕಿ ಬದುಕುತ್ತಿರುವ ಲಕ್ಷಾಂತರ ರೈತರು ಈ ದೇಶದಲ್ಲಿದ್ದಾರೆ. ಅವರು ತಮ್ಮ ದನಗಳನ್ನು ಮಾರಾಟ ಮಾಡದಂತೆ ನಿಯಂತ್ರಣ ಹೇರಿ ಅವರ ಬದುಕನ್ನೂ ಸರ್ವನಾಶ ಮಾಡಿದರು. ಹೊಸ ಉದ್ಯೋಗ ಸೃಷ್ಟಿಸುವುದಿರಲಿ, ಇರುವ ಉದ್ಯೋಗಳನ್ನೆಲ್ಲ ನಾಶ ಮಾಡಿದರು. ಜಿಎಸ್‌ಟಿಯಿಂದ ಎಲ್ಲ ಬೆಲೆಗಳು ಏರಿಕೆಯಾಗಿವೆಯೇ ಹೊರತು, ಇಳಿಕೆಯಾಗಿಲ್ಲ. ಪೆಟ್ರೋಲ್ ಬೆಲೆಯೇರಿಕೆಯನ್ನು ಕೇಂದ್ರದ ಸಚಿವರೊಬ್ಬರು ಬಹಿರಂಗವಾಗಿ ಸಮರ್ಥಿಸುತ್ತಾರೆೆ.

ಇಂತಹ ಮನಸ್ಥಿತಿಯನ್ನು ಹೊಂದಿರುವ ಸರಕಾರ ಆರ್ಥಿಕ ವ್ಯವಸ್ಥೆ ಸರಿಯಾಗುತ್ತದೆ ಎಂದು ನೀಡುವ ಭರವಸೆಯನ್ನು ನಂಬುವುದಾದರೂ ಹೇಗೆ? ಕನಿಷ್ಠ ಪೆಟ್ರೋಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಬೇಕು. ಹಾಗೆಯೇ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿರುವ ಹೈನೋದ್ಯಮಕ್ಕೆ ಬಹುದೊಡ್ಡ ಅಡ್ಡಿಯಾಗಿರುವ ಗೋರಕ್ಷಕರೆಂಬ ಕ್ರಿಮಿನಲ್‌ಗಳಿಗೆ ಸರಿಯಾದ ಪಾಠ ಕಲಿಸಿ, ಗೋಮಾರಾಟಕ್ಕೆ ಮುಕ್ತ ವಾತಾವರಣ ಕಲ್ಪಿಸಬೇಕು. ಜಿಎಸ್‌ಟಿಯ ಗೊಂದಲಗಳನ್ನು ನಿವಾರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಪೊರೇಟ್ ಶಕ್ತಿಗಳ ಬಾಲಂಗೋಚಿಯಾಗಿರುವ ಮೋದಿ, ಅವರ ಹಿಡಿತದಿಂದ ಹೊರಬಂದು, ತನ್ನ ಪಕ್ಷದ ಹಿರಿಯರು, ವಿರೋಧಪಕ್ಷಗಳ ನಾಯಕರೂ ಸೇರಿದಂತೆ ಎಲ್ಲ ಗಣ್ಯರ ಸಲಹೆ ಸೂಚನೆಗಳನ್ನು ಪಡೆದು ದೇಶವನ್ನು ಮುನ್ನಡೆಸಬೇಕು. ಬಣ್ಣದ ಮಾತುಗಳಿಂದ ದೇಶದ ಜನರನ್ನು ಬಹಳ ಕಾಲ ಸುಮ್ಮನಿರಿಸಲು ಸಾಧ್ಯವಿಲ್ಲ ಎನ್ನುವುದನ್ನು ಮೋದಿ ಇನ್ನಾದರೂ ಅರ್ಥಮಾಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News