ನೀವು ಉಪ್ಪನ್ನು ಯಾವಾಗ ಹೆಚ್ಚು ಸೇವಿಸಬೇಕು?

Update: 2017-10-06 09:50 GMT

ಕೆಲವು ವೈದ್ಯಕೀಯ ಸ್ಥಿತಿಗಳು ನೀವು ಹೆಚ್ಚು ಉಪ್ಪು ಸೇವಿಸುವುದನ್ನು ಅಗತ್ಯವಾಗಿಸುತ್ತವೆ ಎನ್ನುವುದು ನಿಮಗೆ ಗೊತ್ತೇ?

ಆರೋಗ್ಯ ತಜ್ಞರ ಶಿಫಾರಸಿನಂತೆ ನಾವು ಪ್ರತಿದಿನ ನಮ್ಮ ಆಹಾರದಲ್ಲಿ 2300 ಮಿ.ಗ್ರಾಂ.ಉಪ್ಪು ಸೇವಿಸಬೇಕು. ಕೆಲವರು ಸಾಕಷ್ಟು ಪ್ರಮಾಣದಲ್ಲಿ ಸೋಡಿಯಂ ಸೇವಿಸುತ್ತಾರೆ,ಕೆಲವರು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾರೆ.

ನಾವು ಸೇವಿಸುವ ಉಪ್ಪಿನ ಪ್ರಮಾಣದ ಬಗ್ಗೆ ಎಚ್ಚರಿಕೆ ಅಗತ್ಯವಾಗಿದೆ. ಆದರೆ ಕೆಲವು ಸಂದರ್ಭಗಳು ಅಥವಾ ಆರೋಗ್ಯ ಸ್ಥಿತಿಗಳು ಹೆಚ್ಚು ಉಪ್ಪು ಸೇವಿಸುವುದನ್ನು ಅಗತ್ಯವಾ ಗಿಸುತ್ತವೆ. ಆದರೆ ಉಪ್ಪು ಸೇವನೆಯ ಪ್ರಮಾಣದಲ್ಲಿ ಬದಲಾವಣೆಗೆ ಮುನ್ನ ಕಡ್ಡಾಯವಾಗಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಯಾವ ಸಂದರ್ಭಗಳಲ್ಲಿ ಹೆಚ್ಚು ಉಪ್ಪಿನ ಸೇವನೆ ಅಗತ್ಯವಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ, ಓದಿಕೊಳ್ಳಿ.

ನಿರಂತರವಾಗಿ ತೀವ್ರ ದೈಹಿಕ ವ್ಯಾಯಾಮದಲ್ಲಿ ತೊಡಗುವ ಅಥ್ಲೀಟ್‌ಗಳಿಗೆ ಹೆಚ್ಚಿನ ಸೋಡಿಯಂ ಸೇವನೆ ಅಗತ್ಯವಾಗುತ್ತದೆ. ಇಲ್ಲದಿದ್ದರೆ ರಕ್ತದಲ್ಲಿ ಸೋಡಿಯಂ ಮಟ್ಟ ಇಳಿಯುತ್ತದೆ. ಇದು ತಲೆತಿರುಗುವಿಕೆ ಮತ್ತು ನಿಶ್ಶಕ್ತಿಗೆ ಕಾರಣವಾಗುತ್ತದೆ.

ಅತಿಯಾದ ಸೆಕೆಯಿಂದಾಗಿ, ಉರಿಬಿಸಿಲಿನಲ್ಲಿ ಓಡಾಟದಿಂದಾಗಿ ಅತಿಯಾಗಿ ಬೆವರು ಹರಿಯುತ್ತದೆ. ಇದರ ಪರಿಣಾಮವಾಗಿ ರಕ್ತದಲ್ಲಿ ಸೋಡಿಯಂ ಮಟ್ಟ ಇಳಿಯುತ್ತದೆ.

ಶರೀರದಲ್ಲಿ ಉಪ್ಪಿನ ಪ್ರಮಾಣ ಕುಸಿಯುವಂತೆ ಮಾಡುವ ನೆಫ್ರೊಪತಿ ಒಂದು ವಿಧದ ಮೂತ್ರಪಿಂಡ ರೋಗವಾಗಿದ್ದು, ಇದರಿಂದ ನಮ್ಮ ಶರೀರವು ಸೋಡಿಯಂ ಪ್ರಮಾಣವನ್ನು ಕಾಯ್ದುಕೊಳ್ಳುವುದು ಕಠಿಣವಾಗುತ್ತದೆ. ಈ ಕಾಯಿಲೆಗೆ ತುತ್ತಾಗಿರುವ ವ್ಯಕ್ತಿಗಳ ಮೂತ್ರದ ಮೂಲಕ ಹೆಚ್ಚಿನ ಸೋಡಿಯಂ ನಷ್ಟವಾಗುತ್ತದೆ. ಹೀಗಾಗಿ ಅವರು ಉಪ್ಪನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮೂಲಕ ತಮ್ಮ ರಕ್ತದಲ್ಲಿಯ ಸೋಡಿಯಂ ಮಟ್ಟವನ್ನು ಹೆಚ್ಚಿಸಿ ಕೊಳ್ಳುವುದು ಅತ್ಯಗತ್ಯವಾಗುತ್ತದೆ.

 ನಮ್ಮ ಶರೀರವು ವಿಸರ್ಜಿಸುವ ಮೂತ್ರದ ಪ್ರಮಾಣ ಕಡಿಮೆಯಾದರೆ ಅದು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಕ್ಕಾಗಿ ವೈದ್ಯರು ಮೂತ್ರವರ್ಧಕ ಔಷಧಿ ಗಳನ್ನು ಶಿಫಾರಸು ಮಾಡುತ್ತಾರೆ. ಈ ಮೂತ್ರವರ್ಧಕ ಔಷಧಿಗಳು ನಮ್ಮ ಶರೀರದಲ್ಲಿ ಖನಿಜಾಂಶಗಳ ಅಸಮತೋಲವನ್ನುಂಟು ಮಾಡುತ್ತವೆ ಮತ್ತು ಮೂತ್ರ ವಿಸರ್ಜನೆಯ ಪ್ರಮಾಣವನ್ನು ಹೆಚ್ಚಿಸುತ್ತವೆ. ಹೀಗಾಗಿ ಇಂತಹ ಸ್ಥಿತಿಯಲ್ಲಿ ನಮ್ಮ ಶರೀರವು ಕಳೆದು ಕೊಳ್ಳುವ ಸೋಡಿಯಂ ಪ್ರಮಾಣ ತುಂಬ ಹೆಚ್ಚಾಗುತ್ತದೆ. ಇದು ಉಪ್ಪನ್ನು ಹೆಚ್ಚು ಸೇವಿಸಲು ಪ್ರಮುಖ ಕಾರಣವಾಗಿದೆ.

80 ವರ್ಷಕ್ಕಿಂತ ಹೆಚ್ಚು ವಯಸ್ಸಾದ ವ್ಯಕ್ತಿಗಳು ಉಪ್ಪಿನ ಸೇವನೆಯನ್ನು ಹೆಚ್ಚಿಸುವುದರಿಂದ ಅವರ ಮಿದುಳಿನ ಚುರುಕುತನಕ್ಕೆ ಹೆಚ್ಚಿನ ಉತ್ತೇಜನ ದೊರೆಯುತ್ತದೆ. ಕಡಿಮೆ ಉಪ್ಪನ್ನು ಸೇವಿಸುವ ಈ ವಯೋಮಾನದವರಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುವವರಲ್ಲಿ ಮಿದುಳಿನ ಚಟುವಟಿಕೆಗಳು ಹೆಚ್ಚಿರುವುದು ಅಧ್ಯಯನಗಳಿಂದ ಕಂಡು ಬಂದಿದೆ.

ವಂಶವಾಹಿಯ ಮೂಲಕ ಬರುವ ಬಾರ್ಟರ್ ಸಿಂಡ್ರೋಮ್ ನಾವು ಸೇವಿಸುವ ಉಪ್ಪನ್ನು ಸಂಸ್ಕರಿಸುವ ಮೂತ್ರಪಿಂಡಗಳ ಸಾಮರ್ಥ್ಯವನ್ನು ತಗ್ಗಿಸುತ್ತದೆ. ವಾಂತಿ ಮತ್ತು ಅತಿಯಾದ ಬಾಯಾರಿಕೆ ಈ ಸಿಂಡ್ರೋಮ್‌ನ ಲಕ್ಷಣಗಳಲ್ಲಿ ಸೇರಿವೆ. ಈ ಸಿಂಡ್ರೋಮ್ ಕಾಣಿಸಿಕೊಂಡರೆ ವೈದ್ಯರು ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುವಂತೆ ಸಲಹೆ ನೀಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News