ಗಾಂಧಿಯನ್ನು ಕೊಂದವರಿಂದಲೇ ಕೊಲೆಗಾರರ ಹುಡುಕಾಟ!

Update: 2017-10-06 18:59 GMT

ಶಿವನ ತ್ರಿಶೂಲಕ್ಕೆ ಸಿಲುಕಿಕೊಂಡ ಬ್ರಹ್ಮಕಪಾಲದಂತೆ ಆರೆಸೆಸ್‌ನ ಮುಖಕ್ಕೆ ಗಾಂಧೀಜಿಯ ರಕ್ತ ಮೆತ್ತಿಕೊಂಡಿದೆ. ಇದನ್ನು ತೊಳೆಯುವುದಕ್ಕಾಗಿ ಅದು ಹಲವು ದಶಕಗಳಿಂದ ಒದ್ದಾಡುತ್ತಲೇ ಬರುತ್ತಿದೆ. ಆದರೆ ಸಾಧ್ಯವಾಗುತ್ತಿಲ್ಲ. ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಂಡಾಗಲೆಲ್ಲ, ಗಾಂಧೀಜಿಯ ಹೇ ರಾಮ್ ಎನ್ನುವ ಕೊನೆಯ ಚೀತ್ಕಾರ ಅವರನ್ನು ಅಣಕಿಸುತ್ತದೆ. ಗಾಂಧೀಜಿಯಿಂದಾಗಿ ಈ ದೇಶ ಇಬ್ಬರು ರಾಮರನ್ನು ಹೊಂದಿದೆ. ಒಂದು, ಗೋಡ್ಸೆಯ ರಾಮ. ಮಗದೊಂದು ಗಾಂಧೀಜಿಯ ರಾಮ. ಗಾಂಧೀಜಿಯವರು ಎಂದೂ ತನ್ನ ರಾಮನನ್ನು ಗುಡಿಯಲ್ಲಿ ಹುಡುಕಿದವರಲ್ಲ. ತನ್ನ ರಾಮನಿಗಾಗಿ ಮಂದಿರ ಕಟ್ಟುವ ಕನಸು ಕಂಡವರೂ ಅಲ್ಲ. ಸತ್ಯ ಸಂಧತೆಯೇ ಅವರ ರಾಮ ಆಗಿದ್ದನು. ಪ್ರತೀ ದಿನ ತನ್ನ ಆಶ್ರಮದಲ್ಲಿ ರಾಮಭಜನೆಯನ್ನು ಮಾಡುತ್ತಿದ್ದವರು ಗಾಂಧಿ. ರಾಮನ ಪ್ರಾರ್ಥನೆಗೆಂದು ಸಾಗುತ್ತಿದ್ದ ಹೊತ್ತಿನಲ್ಲೇ ಗಾಂಧಿಯನ್ನು ಹಿಂದೂ ಮಹಾಸಭಾದ ಉಗ್ರ ನಾಥೂರಾಂ ಗೋಡ್ಸೆ ಕೊಂದು ಹಾಕಿದ. ಇಂದು ದೇಶದ ಮುಖ್ಯವಾಹಿನಿಯಲ್ಲಿ ಗುರುತಿಸಲ್ಪಡುತ್ತಿರುವ ಆರೆಸ್ಸೆಸ್‌ಗೆ ಈ ಕಳಂಕದಿಂದ ಪಾರಾಗುವುದು ಅತ್ಯಗತ್ಯವಾಗಿದೆ.

ಒಬ್ಬ ಪರಮ ರಾಮಭಕ್ತನನ್ನು ಕೊಂದು ಹಾಕಿದ ಸಂಘಪರಿವಾರ, ಇದೀಗ ಅದೇ ರಾಮನಿಗೆ ದೇವಸ್ಥಾನ ಕಟ್ಟುವ ಮಾತನ್ನಾಡುತ್ತಿದೆ ಜನರು ವ್ಯಂಗ್ಯವಾಡುವಂತಹ ಸ್ಥಿತಿ ಈಗ ಇದೆ. ಈ ದೇಶದಲ್ಲಿ ಗಾಂಧೀಜಿ ಹಿಂದೂ ಸ್ವರಾಜ್‌ನ ಕನಸು ಕಂಡರು. ಆರೆಸ್ಸೆಸ್ ಹಿಂದುತ್ವದ ಕನಸು ಕಾಣುತ್ತಿದೆ. ನಾಥೂರಾಮ್ ಗೋಡ್ಸೆ ಆರೆಸ್ಸೆಸ್‌ಗೆ ಸೇರಿದವನೇ ಅಲ್ಲ ಎಂದು ಅದು ವಾದಿಸುತ್ತಿದೆ. ಆದರೆ, ಹಿಂದೂ ಮಹಾಸಭಾ, ಆರೆಸ್ಸೆಸ್ ಮೊದಲಾದ ಸಂಘಟನೆಗಳಿಗಿರುವ ಒಳ ಸಂಬಂಧಗಳನ್ನು ಮುಚ್ಚಿಡುವುದಕ್ಕೆ ಅವರಿಗೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿಯೇ, ಈಗ ಸಂಘಪರಿವಾರ ಒಂದು ಹೊಸ ತಂತ್ರವನ್ನು ಹೂಡಿದೆ. ಮಹಾತ್ಮ್ಮಾ ಗಾಂಧೀಜಿಯನ್ನು ಕೊಂದಿರುವುದು ಗೋಡ್ಸೆಯ ಗುಂಡುಗಳಲ್ಲ, ಬೇರೆಯೇ ಗುಂಡು ಎನ್ನುವ ಕತೆಯೊಂದನ್ನು ಕಟ್ಟಿ, ನ್ಯಾಯಾಲಯದ ಮೆಟ್ಟಿಲೇರಿದೆ. ಮಹಾತ್ಮಾ ಗಾಂಧೀಜಿಗೆ ಗೋಡ್ಸೆ ಹಾರಿಸಿದ್ದು ಮೂರು ಗುಂಡು ಮಾತ್ರ. ನಾಲ್ಕನೆಯ ಗುಂಡು ಬೇರೆ ಕಡೆಯಿಂದ ತೂರಿ ಬಂದಿದೆ ಎಂಬಂತಹ ಒಂದು ವಾದವನ್ನು ಹಿಡಿದುಕೊಂಡು ಅಭಿನವ ಭಾರತದ ಟ್ರಸ್ಟಿ ಹಾಗೂ ಸಂಶೋಧಕ, ಮುಂಬೈ ಮೂಲದ ಡಾ. ಪಂಕಜ್ ಫಡ್ನಿಸ್ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದರೆ, ಅದನ್ನು ವಜಾಗೊಳಿಸಿ ಆತನಿಗೆ ದಂಡ ವಿಧಿಸಬೇಕಾದ ನ್ಯಾಯಾಲಯವೇ ಪ್ರಕರಣವನ್ನು ಸ್ವೀಕರಿಸಿದೆ. ಸಂಕ್ಷಿಪ್ತ ವಿಚಾರಣೆ ಬಳಿಕ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹಾಗೂ ಎಲ್. ನಾಗೇಶ್ವರ ರಾವ್ ಅವರನ್ನೊಳಗೊಂಡ ಪೀಠ ಈ ವಿಷಯದಲ್ಲಿ ನ್ಯಾಯಾಲಯಕ್ಕೆ ನೆರವು ನೀಡಲು ಆ್ಯಮಿಕಸ್ ಕ್ಯೂರಿಯಾಗಿ ಹಿರಿಯ ನ್ಯಾಯವಾದಿ ಹಾಗೂ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮ್ರೇಂದ್ರ ಶರಣ್ ಅವರನ್ನು ನಿಯೋಜಿಸಿದೆ.

ತೀರಾ ಹಳತಾಗಿರುವ ಮತ್ತು ಸ್ವತಃ ಗೋಡ್ಸೆಯೇ ತಾನು ಯಾಕೆ ಗಾಂಧಿಯನ್ನು ಕೊಂದೆ ಎಂದು ಒಪ್ಪಿಕೊಂಡು ಗಲ್ಲಿಗೇರಿರುವ ಈ ಪ್ರಕರಣವನ್ನು ಮುಂದುವರಿಸುವುದಕ್ಕೆ ಸಾಧ್ಯವಿಲ್ಲದಿದ್ದರೂ, ವಿಚಾರಣೆಯ ಪ್ರಹಸನವೊಂದಕ್ಕೆ ಮಾತ್ರ ಒಪ್ಪಿಕೊಂಡಿದೆ. ಇದೊಂದು ತಂತ್ರ. ಈ ಮೂಲಕ ಗಾಂಧಿ ಹತ್ಯೆಯ ಬಗ್ಗೆ ಒಂದು ಗೊಂದಲವನ್ನು ಸೃಷ್ಟಿಸುವುದು. ಈ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಸ್ವೀಕರಿಸುವುದಿಲ್ಲ ಮತ್ತು ವಿಚಾರಣೆಯ ನಾಟಕ ಮಾಡಿ ಮುಗಿಸಿ ಬಿಡುತ್ತದೆ ಎನ್ನುವುದು ಸಂಘಪರಿವಾರಕ್ಕೆ ಚೆನ್ನಾಗಿ ಗೊತ್ತು. ಆದರೆ ಅಷ್ಟರಲ್ಲಿ, ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿರುತ್ತದೆ. ಈ ಮಾಧ್ಯಮಗಳ ವರದಿಗಳನ್ನೇ ಇಟ್ಟುಕೊಂಡು, ಗಾಂಧಿ ಹತ್ಯೆಯ ಕುರಿತು ತಮ್ಮ ತರ್ಕವನ್ನು ಹರಿಯಬಿಡುವುದು ಅನುಕೂಲವಾಗುತ್ತದೆ. ಸಂಘಪರಿವಾರ ನಾಯಕರ ನಿಜವಾದ ತಂತ್ರ ಇದು. ಗಾಂಧಿ ಹತ್ಯೆ ನಡೆದಿರುವುದು ಸಾರ್ವಜನಿಕ ಸ್ಥಳದಲ್ಲಿ. ನೂರಾರು ಜನರ ಸಮ್ಮುಖದಲ್ಲಿ.

ಯಾವುದೋ ಗೋಡೆಯ ಮಧ್ಯೆ ಅಡ್ಡ ನಿಂತು ಗೋಡ್ಸೆ ಗುಂಡು ಹೊಡೆದಿರುವುದಲ್ಲ. ಗಾಂಧಿಯ ಮುಂದೆ ಬಂದು ಅವರಿಗೆ ನಮಿಸಿದ ನಾಟಕವಾಡಿ ಆ ನಿಶ್ಶಸ್ತ್ರಧಾರಿ, ಮುದಿ ಜೀವಕ್ಕೆ ಆತ ಗುಂಡುಗಳನ್ನು ಎಸೆದ. ಹೀಗಿರುವಾಗ, ಇನ್ನೊಂದು ಗುಂಡು ಎಲ್ಲಿಂದಲೋ ಬಂದು ಗಾಂಧಿಯ ಎದೆಯನ್ನು ಬಂದು ತೂರಿತು ಎಂದು ಹೇಳುವುದು ಹಾಸ್ಯಾಸ್ಪದವೇ ಸರಿ. ಇಷ್ಟಕ್ಕೂ ಗೋಡ್ಸೆ ಸಂಗಡಿಗರು ಹಲವು ಬಾರಿ ಗಾಂಧಿಯನ್ನು ಕೊಂದು ಹಾಕಲು ಪ್ರಯತ್ನಿಸಿದ್ದರು. ಆಶ್ರಮದಲ್ಲಿ ಬಾಂಬನ್ನೂ ಸ್ಫೋಟಿಸಿದ್ದರು. ಸ್ವತಂತ್ರ ಭಾರತದ ಪ್ರಪ್ರಥಮ ಭಯೋತ್ಪಾದನಾ ಪ್ರಕರಣ ಇದು. ಗೋಡ್ಸೆ ಗಾಂಧಿಗೆ ಗುಂಡಿಡುವ ಹೊತ್ತಿಗೇ ಹೊರಗಿನಿಂದ ಇನ್ನೊಂದು ಗುಂಡು ಗಾಂಧಿಯನ್ನು ಕೊಂದಿತು ಎಂದಿದ್ದರೆ, ಬಹುಶಃ ಶಿಷ್ಯನ ಗುಂಡಿನಿಂದ ಗಾಂಧಿ ಸಾಯದಿದ್ದರೆ ಎಂದು ಮರೆಯಲ್ಲಿ ನಿಂತು ಸಾವರ್ಕರ್ ಅವರೇ ಗುಂಡು ಹಾರಿಸಿರಬೇಕು ಎಂದು ನಾವು ಶಂಕಿಸಿದರೆ ಅದರಲ್ಲಿ ಅತಿ ಏನಿದೆ? ಹೇಗೂ ಅವರು ಗಾಂಧಿ ಹತ್ಯೆಯಲ್ಲಿ ಏಳನೆ ಆರೋಪಿಯಾಗಿ ವಿಚಾರಣೆಗೆ ಒಳಗಾಗಿದ್ದವರು.

ಅಂದು ಗೋಡ್ಸೆ ಗಾಂಧಿಯನ್ನು ಕೊಲ್ಲುತ್ತಾನೆ ಎಂದು ಗೊತ್ತಿದ್ದವರೇ ಮರೆಯಲ್ಲಿ ನಿಂತು ಗುಂಡು ಹಾರಿಸಿರಬಹುದು. ಆದುದರಿಂದ ಸಾವರ್ಕರ್ ಅವರು ಸ್ಥಾಪಿಸಿದ್ದ ಅಭಿನವ ಭಾರತ ಸಂಸ್ಥೆಯ ಅಳಿದುಳಿದ ಪದಾಧಿಕಾರಿಗಳನ್ನು ವಿಚಾರಣೆ ನಡೆಸಿದರೆ ಇನ್ನಷ್ಟು ವಿವರಗಳು ದೊರಕಬಹುದೇನೋ? ಆದುದರಿಂದ ಈ ವಿಷಯದಲ್ಲಿ ನ್ಯಾಯಾಲಯಕ್ಕೆ ನೆರವು ನೀಡಲು ಆ್ಯಮಿಕಸ್ ಕ್ಯೂರಿಯಾಗಿ ಹಿರಿಯ ನ್ಯಾಯವಾದಿ ಹಾಗೂ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮ್ರೇಂದ್ರ ಶರಣ್ ಅವರನ್ನು ನಿಯೋಜಿಸಿರುವುದು ಒಂದು ಪ್ರಹಸನ ಎಂದೇ ನಾವು ಭಾವಿಸಬೇಕು. ಗಾಂಧಿಯನ್ನು ಆ ಬಳಿಕವೂ ಹಲವು ಬಾರಿ ಕೊಂದು ಹಾಕಲಾಯಿತು. ಗಾಂಧಿ ಹುಟ್ಟಿದ ನಾಡಿನಲ್ಲಿ ಗುಜರಾತ್ ಹತ್ಯಾಕಾಂಡ ನಡೆದಿರುವುದು, ಇನ್ನೊಂದು ಗಾಂಧಿ ಹತ್ಯೆಗೆ ಸಮ. ನಮ್ಮ ನ್ಯಾಯಾಲಯ ಗಾಂಧಿಯ ಕುರಿತಂತೆ ನಿಜವಾದ ಕಾಳಜಿಯನ್ನು ಹೊಂದಿದೆ ಎಂದಾದರೆ ಗುಜರಾತ್ ಹತ್ಯಾಕಾಂಡದ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲಿ.

ಇಂದು ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ವೈಭವೀಕರಿಸುವ ಕೆಲಸ ನಡೆಯುತ್ತಿದೆ. ಗೋಡ್ಸೆಗೆ ದೇವಸ್ಥಾನ ನಿರ್ಮಿಸುವ ಮಟ್ಟಕ್ಕೆ ಉಗ್ರವಾದಿಗಳು ಮುಂದಾಗಿದ್ದಾರೆ. ಅಂತಹ ಉಗ್ರವಾದಿಗಳನ್ನು ಗುರುತಿಸಿ ಅವರಿಗೆ ಕಠಿಣವಾದ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ನ್ಯಾಯಾಲಯದ ಹೊಣೆಗಾರಿಕೆಯಾಗಿದೆ. ಪನ್ಸಾರೆ, ದಾಭೋಲ್ಕರ್, ಕಲಬುರ್ಗಿ, ಗೌರಿಯಂತಹ ವಿಚಾರವಾದಿಗಳ ಕಗ್ಗೊಲೆಯಲ್ಲಿ ಗೋಡ್ಸೆ ಸಿದ್ಧಾಂತದ ವಾಸನೆ ದಟ್ಟವಾಗಿ ಬಡಿಯುತ್ತಿದೆ. ಇಂದು ನ್ಯಾಯಾಲಯ ಈ ಹತ್ಯೆಗಳ ಬಗ್ಗೆ ಮುತುವರ್ಜಿ ವಹಿಸಬೇಕಾಗಿದೆ. ಸರಕಾರಕ್ಕೆ ಎಚ್ಚರಿಕೆಯನ್ನು ನೀಡಬೇಕಾಗಿದೆ. ಗಾಂಧಿಯನ್ನು ಕೊಂದ ಭಯೋತ್ಪಾದಕರು ಇಂದು ಸಂಘಟಿತರಾಗಿದ್ದಾರೆ. ಭಾರತ ದೇಶದೊಳಗೆ ನಡೆದ ಹಲವು ಉಗ್ರವಾದಿ ಚಟುವಟಿಕೆಗಳಲ್ಲಿ ಅವರು ಗುರುತಿಸಲ್ಪಡುತ್ತಿದ್ದಾರೆ.

ಅಂತಹ ಸಂಘಟನೆಗಳನ್ನು ಗುರುತಿಸಿ ಅವುಗಳನ್ನು ನಿಷೇಧಿಸಬೇಕಾದುದು ನ್ಯಾಯಾಲಯದ ಕರ್ತವ್ಯ. ಗಾಂಧೀಜಿಯ ತತ್ವಗಳು ಪದೇ ಪದೇ ಹತ್ಯೆಯಾಗುತ್ತಿರುವುದನ್ನು ತಡೆಯುವುದು ಸದ್ಯಕ್ಕೆ ನ್ಯಾಯಾಲಯದ ಮುಂದಿರುವ ಪ್ರಮುಖ ವಿಷಯವಾಗಿದೆ. ಬದಲಿಗೆ, ಗಾಂಧೀಜಿಯನ್ನು ಕೊಂದವರು ಯಾರು ಎಂದು ‘ಕೊಲೆಗಾರನ ಜೊತೆಗೆ ಸಂಬಂಧ ಹೊಂದಿರುವ’ ಸಂಘಟನೆಯೇ ಸಲ್ಲಿಸಿದ ಅರ್ಜಿಯನ್ನು ವಿಚಾರಿಸುತ್ತಾ ಸಮಯ ಕಳೆಯುವುದಲ್ಲ. ಇದು ಗಾಂಧಿ ಹತ್ಯೆಯ ಕುರಿತಂತೆ ದೇಶವನ್ನು ದಾರಿತಪ್ಪಿಸುವುದಕ್ಕೆ ಕಾರಣವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News