ಎಚ್ಚರಿಕೆ,ಸಿಕ್ಕಾಪಟ್ಟೆ ಸಿಹಿತಿಂಡಿಗಳನ್ನು ತಿಂದರೆ ಹೃದ್ರೋಗದ ಅಪಾಯ ಹೆಚ್ಚು

Update: 2017-10-07 10:33 GMT

ಕೋಲಾ,ಪೆಪ್ಸಿಯಂತಹ ಸಿಹಿಯನ್ನೊಳಗೊಂಡಿರುವ ಪಾನೀಯಗಳನ್ನು ಪದೇಪದೇ ಸೇವಿಸುವವರು ಮತ್ತು ಸಿಕ್ಕಾಪಟ್ಟೆ ಸಿಹಿತಿಂಡಿಗಳನ್ನು ತಿನ್ನುವವರಿಗೆ ಕೆಟ್ಟಸುದ್ದಿಯೊಂದು ಇಲ್ಲಿದೆ. ಈ ಅಭ್ಯಾಸ ಆರೋಗ್ಯವಂತರಲ್ಲಿಯೂ ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು ಎಂದು ಇತ್ತೀಚಿನ ಅಧ್ಯಯನವೊಂದು ಎಚ್ಚರಿಕೆ ನೀಡಿದೆ.

ಬ್ರಿಟನ್ನಿನ ಸರ್ರೆ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಅಧ್ಯಯನಕ್ಕೊಳಪಡಿಸಿದ್ದ ಆರೋಗ್ಯವಂತ ವ್ಯಕ್ತಿಗಳ ಗುಂಪೊಂದು ಅತಿಯಾಗಿ ಸಿಹಿತಿಂಡಿಗಳನ್ನು ಸೇವಿಸಿದ ಬಳಿಕ ಅವರ ರಕ್ತದಲ್ಲಿ ಕೊಬ್ಬಿನ ಮಟ್ಟ ಮತ್ತು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆ ಹೆಚ್ಚಾಗಿದ್ದುದು ಬೆಳಕಿಗೆ ಬಂದಿತ್ತು.

ಅಧ್ಯಯನದ ವರದಿಯು ಕ್ಲಿನಿಕಲ್ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಯಕೃತ್ತಿನಲ್ಲಿ ಕೊಬ್ಬಿನ ಪ್ರಮಾಣ ಅಧಿಕವಾಗಿರುವ ಅಥವಾ ಕಡಿಮೆಯಿರುವ ವ್ಯಕ್ತಿಗಳ ಎರಡು ಗುಂಪುಗಳನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಯಕೃತ್ತಿನಲ್ಲಿಯ ಕೊಬ್ಬು ಅವರ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಕ್ಕರೆಯ ಪರಿಣಾಮದ ಮೇಲೆ ಪ್ರಭಾವ ಬೀರುತ್ತದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಅವರು ಅಧಿಕ ಅಥವಾ ಕಡಿಮೆ ಸಕ್ಕರೆಯನ್ನು ಹೊಂದಿರುವ ಖಾದ್ಯಗಳನ್ನು ಸೇವಿಸುವಂತೆ ಮಾಡಲಾಗಿತ್ತು. ಒಂದು ಗುಂಪಿನವರು ಕಡಿಮೆ ಸಿಹಿ ಹೊಂದಿದ್ದ ಖಾದ್ಯಗಳ ಮೂಲಕ ಪ್ರತಿ ದಿನ 140 ಕ್ಯಾಲೊರಿಗಳಿಗೂ ಕಡಿಮೆ ಸಕ್ಕರೆಯನ್ನು ಸೇವಿಸಿದ್ದರು. ಇದು ಹೆಚ್ಚುಕಡಿಮೆ ತಜ್ಞರು ಶಿಫಾರಸು ಮಾಡುವ ಸಿಹಿಸೇವನೆಯ ಮಿತಿಯಷ್ಟೇ ಇತ್ತು. ಇನ್ನೊಂದು ಗುಂಪಿಗೆ ನೀಡಲಾಗಿದ್ದ ಖಾದ್ಯಗಳಲ್ಲಿ 650 ಕ್ಯಾಲೊರಿಗಳಿಗೆ ಸಮನಾದ ಸಕ್ಕರೆಯಿತ್ತು.

12 ವಾರಗಳ ಬಳಿಕ ಅಧಿಕ ಸಿಹಿಯನ್ನು ಸೇವಿಸಿದವರ ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆ ಅಧಿಕವಾಗಿದ್ದು ಪತ್ತೆಯಾಗಿತ್ತು. ಇಂತಹ ಸ್ಥಿತಿಗೆ ವೈದ್ಯಕೀಯವಾಗಿ ನಾನ್ ಅಲ್ಕೋಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ(ಎನ್‌ಎಎಫ್‌ಎಲ್‌ಡಿ) ಎಂದು ಕರೆಯಲಾಗುತ್ತದೆ. ಈ ಕಾಯಿಲೆಯಿಂದಾಗಿ ಫ್ಯಾಟ್ ಮೆಟಾಬಾಲಿಸಂ ಅಥವಾ ಕೊಬ್ಬಿನ ಚಯಾಪಚಯ ಕ್ರಿಯೆಯಲ್ಲಿ ಉಂಟಾಗುವ ಬದಲಾವಣೆಗಳು ಹೃದ್ರೋಗ, ಹೃದಯಾಘಾತ ಮತ್ತು ಮಿದುಳಿನ ಆಘಾತದ ಅಪಾಯವನ್ನು ಹೆಚ್ಚಿಸುತ್ತವೆ. ಫ್ಯಾಟ್ ಮೆಟಾಬಾಲಿಸಂ ಒಂದು ಜೈವಿಕ ರಾಸಾಯನಿಕ ಕ್ರಿಯೆಯಾಗಿದ್ದು, ಇದರಲ್ಲಿ ಕೊಬ್ಬು ರಕ್ತಕ್ಕೆ ರವಾನೆಯಾಗಿ ಅಲ್ಲಿ ವಿಭಜಿಸಲ್ಪಡುತ್ತದೆ ಮತ್ತು ಇದನ್ನು ನಮ್ಮ ಶರೀರದಲ್ಲಿಯ ಜೀವಕೋಶಗಳು ಬಳಸಿಕೊಳ್ಳುತ್ತವೆ.

ಯಕೃತ್ತಿನಲ್ಲಿ ಕಡಿಮೆ ಪ್ರಮಾಣದಲ್ಲಿ ಕೊಬ್ಬು ಇದ್ದ ಆರೋಗ್ಯವಂತ ವ್ಯಕ್ತಿಗಳು ಅಧಿಕ ಸಿಹಿಯನ್ನು ಸೇವಿಸಿದಾಗ ಕೊಬ್ಬಿನ ಶೇಖರಣೆ ಪ್ರಮಾಣ ಹೆಚ್ಚಾಗಿತ್ತು ಹಾಗೂ ಅವರ ಫ್ಯಾಟ್ ಮೆಟಾಬಾಲಿಸಂ ಮತ್ತು ಎನ್‌ಎಎಫ್‌ಎಲ್‌ಡಿ ಇದ್ದ ವ್ಯಕ್ತಿಗಳ ಫ್ಯಾಟ್ ಮೆಟಾಬಾಲಿಸಂ ನಡುವೆ ಯಾವುದೇ ವ್ಯತ್ಯಾಸವಿರಲಿಲ್ಲ.

 ಅತಿಯಾಗಿ ಸಿಹಿತಿಂಡಿಗಳನ್ನು ಸೇವಿಸುವುದರಿಂದ ಹೃದ್ರೋಗದ ಅಪಾಯ ಹೆಚ್ಚಲು ಕಾರಣವಾಗುವ ರೀತಿಯಲ್ಲಿ ಫ್ಯಾಟ್ ಮೆಟಾಬಾಲಿಸಂ ಪ್ರಕ್ರಿಯೆಯಲ್ಲಿ ಬದಲಾವಣೆ ಗಳಾಗುತ್ತವೆ ಎನ್ನುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆ ಎಂದು ಸರ್ರೆ ವಿವಿಯ ಪ್ರೊ.ಬ್ರೂಸ್ ಗ್ರಿಫಿನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News