ಎಟಿಎಂಗಳಲ್ಲಿ ನಿಮ್ಮ ಹಣ ಸುರಕ್ಷಿತವೇ?

Update: 2017-10-07 10:52 GMT

ಕಳೆದ ವರ್ಷ ಎಚ್‌ಡಿಎಫ್‌ಸಿ, ಎಸ್‌ಬಿಐ ಮತ್ತು ಐಸಿಐಸಿಐನಂತಹ ಬ್ಯಾಂಕುಗಳು ದೇಶದಲ್ಲಿಯೇ ಬೃಹತ್ ಹಣಕಾಸು ದತ್ತಾಂಶ ಉಲ್ಲಂಘನೆಗೆ ಗುರಿಯಾಗಿದ್ದವು. ಆಗ ಸುಮಾರು 32 ಲಕ್ಷ ಡೆಬಿಟ್ ಕಾರ್ಡ್‌ಗಳನ್ನು ಹ್ಯಾಕ್ ಮಾಡಲಾಗಿತ್ತು. ಕೆಲವು ಬ್ಯಾಂಕುಗಳು ತಮ್ಮ ಎಟಿಎಂ ವಹಿವಾಟು ಸಂಸ್ಕರಣೆಯನ್ನು ಹಿತಾಚಿ ಪೇಮೆಂಟ್ ಸಿಸ್ಟಮ್‌ಗೆ ಹೊರಗುತ್ತಿಗೆ ನೀಡಿದ್ದು, ಸೈಬರ್ ಕ್ರಿಮಿನಲ್‌ಗಳು ಅದಕ್ಕೇ ಲಗ್ಗೆ ಹಾಕಿದ್ದರು ಎನ್ನುವುದು ವಾರಗಳ ಬಳಿಕ ಬೆಳಕಿಗೆ ಬಂದಿತ್ತು.

ಹ್ಯಾಕರ್‌ಗಳು ‘ಡಮ್ಮಿ ಕೋಡ್ ಬುಕ್’ಸೃಷ್ಟಿಸಲು 0000ದಿಂದ ಆರಂಭಗೊಂಡು 9999ರವರೆಗಿನ ಎಲ್ಲ ಸಂಭಾವ್ಯ ನಾಲ್ಕು ಅಂಕಿಗಳ ಸಂಖ್ಯೆಗಳನ್ನು ತಮ್ಮ ಹಿಡಿತದಲ್ಲಿ ತೆಗೆದುಕೊಳ್ಳುತ್ತಾರೆ ಮತ್ತು ಗ್ರಾಹಕರು ಎಟಿಎಂ ಮೂಲಕ ಹಣ ಹಿಂದೆಗೆದುಕೊಳ್ಳಲು ಡೆಬಿಟ್ ಕಾರ್ಡ್ ಬಳಸಿದಾಗ ಈ ಕೋಡ್ ನೆರವಿನಿಂದ ಅವರ ಪಿನ್ ಸಂಖ್ಯೆಯನ್ನು ಕದಿಯುತ್ತಾರೆ.

ಇಂದು ವಿಶ್ವಾದ್ಯಂತ ಸೈಬರ್ ಕಳ್ಳರ ದಾಳಿಗೆ ಎಟಿಎಂಗಳು ಪ್ರಶಸ್ತ ಗುರಿಗಳಾಗಿವೆ. ಟೆಲ್ಲರ್ ಮಷಿನ್ ಹಣವನ್ನು ಕಕ್ಕುವಂತೆ ಮಾಡಲು ಯುಎಸ್‌ಬಿ ಸ್ಟಿಕ್‌ಗಳ ಮೂಲಕ ಮಾಲ್‌ವೇರ್‌ಗಳನ್ನು ಸೇರಿಸುವ ಹಲವಾರು ಪ್ರಕರಣಗಳು ವರದಿಯಾಗಿವೆ ಎನ್ನುತ್ತಾರೆ ಆ್ಯಂಟಿ ವೈರಸ್ ಸಾಫ್ಟ್‌ವೇರಗಳ ನಿರ್ಮಾಣ ಸಂಸ್ಥೆ ಕಾಸ್ಪರ್‌ಸ್ಕಿ ಲ್ಯಾಬ್ಸ್‌ನ ಮುಖ್ಯ ಸುರಕ್ಷಾ ತಜ್ಞ ಅಲೆಕ್ಸ್ ಗೊಸ್ಟೊವ್.

ಎಟಿಎಂ ಕಂಪ್ಯೂಟರ್ ಜಾಲವು ಹ್ಯಾಕರ್‌ಗಳ ದಾಳಿಗೆ ಗುರಿಯಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಗ್ರಾಹಕರಿಗೆ ಸಾಧ್ಯವಿಲ್ಲ, ಆದರೆ ತಾವು ಬಳಸುವ ಎಟಿಎಂ ನಲ್ಲಿ ಹ್ಯಾಕರ್‌ಗಳ ಕೈಚಳಕ ನಡೆದಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಮಾರ್ಗಗಳಿವೆ. ಮಾಲ್‌ವೇರ್ ದಾಳಿಗಳ ಹೊರತಾಗಿ ಎಟಿಎಂಗಳನ್ನು ಹ್ಯಾಕ್ ಮಾಡಲು ನಕಲಿ ಕಾರ್ಡ್ ರೀಡರ್‌ಗಳ ಬಳಕೆ, ರಹಸ್ಯ ಕ್ಯಾಮೆರಾಗಳು, ಎಟಿಎಂ ಸ್ಕಿಮಿಂಗ್ ಇತ್ಯಾದಿ ವಂಚನಾ ವಿಧಾನಗಳೂ ಇವೆ.

ರಹಸ್ಯ ಕ್ಯಾಮೆರಾಗಳು

ರಹಸ್ಯ ಕ್ಯಾಮೆರಾಗಳನ್ನು ಬಳಸಿ ಗ್ರಾಹಕರ ಪಿನ್ ಸಂಖ್ಯೆಯನ್ನು ದಾಖಲಿಸಿ ಕೊಳ್ಳುವುದು ಈ ರಹಸ್ಯ ಸಂಖ್ಯೆಯನ್ನು ಕದಿಯುವ ಅತ್ಯಂತ ಸಾಮಾನ್ಯ ವಿಧಾನವಾಗಿದೆ. ಈ ಸ್ಪೈ ಕ್ಯಾಮೆರಾಗಳನ್ನು ಅಡಗಿಸಿಡಲು ಹೆಚ್ಚಿನ ಸ್ಥಳ ಬೇಕಿಲ್ಲ ಮತ್ತು ಅವುಗಳನ್ನು ಕೀ ಬೋರ್ಡ್ ಬಳಿಯೇ ಸುಲಭವಾಗಿ ಬಚ್ಚಿಡಬಹುದಾಗಿದೆ. ಹೀಗಾಗಿ ಎಟಿಎಂನಿಂದ ಹಣ ತೆಗೆಯುವ ಮುನ್ನ ಯಂತ್ರದ ಸುತ್ತ ಒಮ್ಮೆ ಕಣ್ಣಾಡಿಸಿ ಶಂಕಾಸ್ಪದವಾದ ಏನಾದರೂ ಪತ್ತೆಯಾಗುತ್ತದೆಯೇ ನೋಡಿ. ಒಂದು ಕೈಯಿಂದ ಕೀ ಪ್ಯಾಡ್ ಮರೆ ಮಾಡಿಕೊಂಡು ಇನ್ನೊಂದು ಕೈಯಿಂದ ಪಿನ್ ಸಂಖ್ಯೆಯನ್ನು ಒತ್ತುವುದು ಉತ್ತಮ ಅಭ್ಯಾಸವಾಗಿದೆ.

ನಕಲಿ ಕೀಬೋರ್ಡ್‌ಗಳು

ಪಿನ್ ಸಂಖ್ಯೆಯನ್ನು ಕದಿಯಲು ವಂಚಕರು ನಕಿಲಿ ಕೀ ಬೋರ್ಡ್‌ಗಳನ್ನೂ ಬಳಸು ತ್ತಾರೆ. ವಂಚಕರು ಇವುಗಳನ್ನು ಅಸಲಿ ಕೀಬೋರ್ಡ್‌ನ ಮೇಲಿರಿಸಿ ಪಿನ್ ಕದಿಯುತ್ತಾರೆ. ನಕಲಿ ಕೀ ಬೋರ್ಡ್‌ಗಳು ಸ್ಪಂಜಿನಂತಿದ್ದು, ಸಡಿಲಾಗಿರುತ್ತವೆ. ಈ ವಂಚನೆಯನ್ನು ಪಿನ್ ಪ್ಯಾಡ್ ಓವರ್‌ಲೇ ಎಂದು ಕರೆಯಲಾಗುತ್ತಿದ್ದು, ಇದು ಕ್ರಿಮಿನಲ್‌ಗಳು ಪಿನ್ ಕದಿಯಲು ಹಿಂದಿನಿಂದಲೂ ಬಳಸುತ್ತಿರುವ ವಂಚನಾ ವಿಧಾನವಾಗಿದೆ.

ಅಸಹಜ ಕಾರ್ಡ್ ಸ್ಲಾಟ್‌ಗಳು

ಗ್ರಾಹಕರ ಅಗತ್ಯ ಮಾಹಿತಿಗಳನ್ನು ಕದಿಯಲು ಎಟಿಎಂ ಯಂತ್ರದಲ್ಲಿನ ಕಾರ್ಡ್‌ನ್ನು ತೂರಿಸುವ ಕಿಂಡಿ ಅಥವಾ ಕಾರ್ಡ್ ಸ್ಲಾಟ್‌ನಲ್ಲಿ ಹೆಚ್ಚುವರಿ ಕಾರ್ಡ್ ರೀಡರ್‌ಗಳನ್ನು ಇಡಬಹುದಾಗಿದೆ. ಇಂತಹ ಹೆಚ್ಚಿನ ಸಂದರ್ಭಗಳಲ್ಲಿ ಕಾರ್ಡ್ ಸ್ಲಾಟ್ ಕೊಂಚ ದಪ್ಪಗೆ, ಕೊಂಚ ಭಿನ್ನವಾಗಿ ಕಾಣುತ್ತದೆ ಮತ್ತು ಯಂತ್ರದಿಂದ ಮಾಮೂಲಿಗಿಂತ ಮುಂದಕ್ಕೆ ಚಾಚಿರುತ್ತದೆ.

ಲೂಸ್ ಕಾರ್ಡ್ ಸ್ಲಾಟ್ ಅಥವಾ ಲೆಬನೀಸ್ ಲೂಪ್

 ಕೆಲವೊಮ್ಮ ನಾವು ಡೆಬಿಟ್ ಕಾರ್ಡ್‌ನ್ನು ಎಟಿಎಂ ಯಂತ್ರದಲ್ಲಿ ತೂರಿಸಿದಾಗ ಅದು ಸಿಕ್ಕಿ ಹಾಕಿಕೊಳ್ಳುತ್ತದೆ ಮತ್ತು ಯಂತ್ರದ ದೋಷದಿಂದ ಹೀಗಾಗಿದೆ ಎಂದು ನಾವು ಭಾವಿಸುತ್ತೇವೆ. ಲೂಸ್ ಕಾರ್ಡ್ ಸ್ಲಾಟ್ ಎಟಿಎಂ ಯಂತ್ರದಲ್ಲಿ ಲೆಬನೀಸ್ ಲೂಪ್ ಇರುವುದರ ಸಂಕೇತವಾಗಿರಬಹುದು. ಇಲ್ಲಿ ಸಣ್ಣ ಪ್ಲಾಸ್ಟಿಕ್ ಅಥವಾ ಲೋಹದ ಪಟ್ಟಿಗಳು ಕಾರ್ಡ್ ಸ್ಲಾಟ್‌ನಲ್ಲಿ ಅಡಚಣೆಯನ್ನು ಸೃಷ್ಟಿಸುತ್ತವೆ ಮತ್ತು ಯಂತ್ರದಲ್ಲಿ ತೂರಿಸಲಾದ ಯಾವುದೇ ಕಾರ್ಡ್ ಅದರಲ್ಲಿಯೇ ಸಿಕ್ಕಿಕೊಳ್ಳುತ್ತದೆ. ಹೀಗಾದಾಗ ಕಾರ್ಡ್‌ನ್ನು ಓದಲು ಯಂತ್ರಕ್ಕೆ ಸಾಧ್ಯವಾಗುವುದಿಲ್ಲವಾದ್ದರಿಂದ ಅದು ನಿರಂತರವಾಗಿ ಪಿನ್ ಸಂಖ್ಯೆಯನ್ನು ಕೇಳುತ್ತಿರುತ್ತದೆ. ಗ್ರಾಹಕರು ಅಸಹಾಯಕರಾಗಿ ಕಾರ್ಡ್‌ನ್ನು ಅಲ್ಲಿಯೇ ಬಿಟ್ಟು ಎಟಿಎಂ ಕೌಂಟರ್‌ನಿಂದ ಹೊರಗೆ ತೆರಳಿದಾಗ ವಂಚಕರು ಇಂತಹ ಕಾರ್ಡ್‌ಗಳನ್ನು ತೆಗೆದು ಕೊಂಡು, ಅದರ ಪಿನ್ ಗೊತ್ತಿರುವುದರಿಂದ ಯಂತ್ರದಿಂದ ಹಣವನ್ನು ತೆಗೆಯುತ್ತಾರೆ.

ನಕಲಿ ಹೊರಮೈ

ವಂಚಕರು ಕೆಲವೊಮ್ಮೆ ಗ್ರಾಹಕರ ಮಾಹಿತಿಗಳನ್ನು ಕದಿಯಲು ನಿಜವಾದ ಎಟಿಎಂ ಯಂತ್ರದ ಮೇಲೆ ನಕಲಿ ಹೊರಮೈ ಅಳವಡಿಸಿರುತ್ತಾರೆ. ಗ್ರಾಹಕರು ಕಾರ್ಡ್ ಸ್ಲಾಟ್‌ನಲ್ಲಿ ತಮ್ಮ ಕಾರ್ಡ್‌ಗಳನ್ನು ತೂರಿಸಿದಾಗ ವಂಚಕರು ಅಳವಡಿಸಿರುವ ಕಾರ್ಡ್ ರೀಡರ್ ಅದರಲ್ಲಿಯ ಎಲ್ಲ ಮಾಹಿತಿಗಳನ್ನು ಕದಿಯುತ್ತದೆ. ಗ್ರಾಹಕ ತನ್ನ ಪಿನ್ ಒತ್ತಿದಾಗ ಅದೂ ವಂಚಕನ ಪಾಲಾಗುತ್ತದೆ. ಇಂತಹ ನಕಲಿ ಹೊರಮೈಯನ್ನು ಗುರುತಿಸುವುದು ಕಠಿಣ, ಆದರೆ ಅದು ನೀವು ನೋಡುವ ಮಾಮೂಲಿ ಎಟಿಎಂನಂತೆ ಕಂಡು ಬರುವುದಿಲ್ಲ ಮತ್ತು ಸಾಮಾನ್ಯಕ್ಕಿಂತ ಹೆಚ್ಚು ದೊಡ್ಡದಾಗಿ ಕಾಣುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News