ಬಾಂಗ್ಲಾದ ಬೃಹತ್ ನಿರಾಶ್ರಿತ ಶಿಬಿರ ಅಪಾಯಕಾರಿ: ವಿಶ್ವಸಂಸ್ಥೆ
Update: 2017-10-07 22:52 IST
ಕಾಕ್ಸ್‌ಬಝಾರ್ (ಬಾಂಗ್ಲಾದೇಶ), ಅ. 7: 8 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರಿಗಾಗಿ ಜಗತ್ತಿನ ಅತಿ ದೊಡ್ಡ ನಿರಾಶ್ರಿತ ಶಿಬಿರವೊಂದನ್ನು ನಿರ್ಮಿಸುವ ಬಾಂಗ್ಲಾದೇಶದ ಯೋಜನೆ ಅಪಾಯಕಾರಿಯಾಗಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ. ಜನ ದಟ್ಟಣೆಯಿಂದಾಗಿ ಅಪಾಯಕಾರಿ ಕಾಯಿಲೆಗಳು ವೇಗವಾಗಿ ಹರಡುವ ಸಾಧ್ಯತೆ ಹೆಚ್ಚು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆಗಸ್ಟ್ ಬಳಿಕ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಸೇನಾ ಕಾರ್ಯಾಚರಣೆಗೆ ಬೆದರಿ 5 ಲಕ್ಷಕ್ಕಿಂತಲೂ ಅಧಿಕ ರೊಹಿಂಗ್ಯಾ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಇದು ಅಲ್ಲಿ ಈಗಾಗಲೇ ಇರುವ ನಿರಾಶ್ರಿತರಿಗಾಗಿ ಸ್ಥಾಪಿಸಲಾದ ಶಿಬಿರಗಳ ಮೇಲೆ ಭಾರೀ ಒತ್ತಡವನ್ನು ಸೃಷ್ಟಿಸಿದೆ.
ಹೊಸ ಶಿಬಿರಗಳನ್ನು ನಿರ್ಮಿಸಲು ದೇಶವು ಬೇರೆ ಸ್ಥಳಗಳನ್ನು ಹುಡುಕಬೇಕು ಎಂದು ಢಾಕಾದಲ್ಲಿ ವಿಶ್ವಸಂಸ್ಥೆಯ ಸ್ಥಾನಿಕ ಸಂಯೋಜಕ ರಾಬರ್ಟ್ ವಾಟ್ಕಿನ್ಸ್ ಅಭಿಪ್ರಾಯಪಟ್ಟಿದ್ದಾರೆ.