ಭಾರೀ ದುರಂತಗಳಿಗೆ ದಿನಗಣನೆ ಆರಂಭವಾಗಿದೆ!

Update: 2017-10-07 18:41 GMT

ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವ ನಿಟ್ಟಿನಲ್ಲಿ ನಾವು ತುರ್ತು ಕ್ರಮಗಳನ್ನು ತೆಗೆದುಕೊಳ್ಳದೆ ಇದ್ದಲ್ಲಿ ಹಿಮ ಬಂಡೆಗಳ, ಹಿಮ ಬೆಟ್ಟಗಳ ಕರಗುವಿಕೆಯೊಂದಿಗೆ ಸಂಭವಿಸಲಿರುವ ಭಾರೀ ದುರಂತಗಳಿಗೆ ಭವಿಷ್ಯದ ಜನಾಂಗಗಳು ಸಾಕ್ಷಿಯಾಗಬೇಕಾದೀತು.

ಹಿಮಾಲಯವೂ ಸೇರಿದಂತೆ, ಏಶ್ಯಾದ ಎತ್ತರದ ಪರ್ವತಗಳಲ್ಲಿ (ಹೈವೌಂಟಂನ್ಸ್ ಆಫ್ ಏಶ್ಯಾ-ಎಚ್‌ಎಮ್‌ಎ) ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮ ಬೆಟ್ಟಗಳು (ಗ್ಲೇಸಿಯರ್ಸ್‌) ಕರಗುತ್ತಿವೆ. ಭಾರೀ ಅಪಾಯದಲ್ಲಿವೆ. ಹವಾಮಾನ ವಿಜ್ಞಾನಿಗಳು ಈಗಾಗಲೇ ಇದನ್ನು ದೃಢಪಡಿಸಿದ್ದಾರೆ. ಆದರೆ ಹಿಮದ ಎಷ್ಟು ಪ್ರದೇಶ ನಷ್ಟವಾಗಲಿದೆ ಎಂಬುದು ಇಷ್ಟರವರೆಗೆ ಖಚಿತವಾಗಿ ತಿಳಿಯಲಾಗಿಲ್ಲ. ಈ ಶತಮಾನದ ಅಂತ್ಯದ ವೇಳೆಗೆ ಶೇ. 28-43ರಷ್ಟು ಹಿಮದ ರಾಶಿ ನಾಶವಾಗುತ್ತದೆ ಮತ್ತು ಜಾಗತಿಕ ತಾಪಮಾನವು 1.5 ಡಿಗ್ರಿ ಸೆಂಟಿಗ್ರೇಡ್‌ನ ಮಟ್ಟಕ್ಕೆ ಸೀಮಿತಗೊಳ್ಳಬಹುದೆಂದು ಹೊಸ ಸಂಶೋಧನೆಯು ಅಂದಾಜಿಸಿದೆ.

ಉಟ್‌ರೆಕ್ಟ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಒಂದು ತಂಡ ಮತ್ತು ಫ್ಯೂಚರ್ ವಾಟರ್ ಎಂಬ ಒಂದು ಸಂಶೋಧನಾ ಸಂಸ್ಥೆ ಹಾಗೂ ನೇಪಾಲದ ಇಂಟರ್‌ನ್ಯಾಶನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ವೌಂಟನ್ ಡೆವಲಪ್‌ಮೆಂಟ್, 1.5 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಜಾಗತಿಕ ಉಷ್ಣಾಂಶವು ಎಚ್‌ಎಂಎಗಳಲ್ಲಿ 2 ಡಿಗ್ರಿ ಸೆಂಟಿಗ್ರೇಡ್‌ನಷ್ಟು ತಾಪಮಾನ ಏರಿಕೆಗೆ ಕಾರಣವಾಗಲಿದೆ ಎಂದು ವರದಿ ಮಾಡಿವೆ.

ಈ ಅಂದಾಜುಗಳು ವಿವರವಾದ ಕಂಪ್ಯೂಟರ್ ಮಾಡೆಲಿಂಗನ್ನು ಮತ್ತು ವಿಶ್ವಸಂಸ್ಥೆಯ ಇಂಟರ್ ಗವರ್ನಮೆಂಟಲ್ ಪ್ಯಾನಲ್ ಆನ್ ಕ್ಲೈಮೇಟ್ ಚೇಂಜ್ (ಐಸಿಐಎಂಒಡಿ) ವರದಿ ಮಾಡಿರುವ ಭವಿಷ್ಯದ ನಾಲ್ಕು ಸಂಭಾವ್ಯ ಸ್ಥಿತಿಯನ್ನು ಆಧರಿಸಿವೆ. ಆರ್‌ಸಿಪಿ 2.6, ಆರ್‌ಸಿಪಿ 4.5, ಆರ್‌ಸಿಪಿ 6 ಮತ್ತು ಆರ್‌ಸಿಪಿ 8 ಎಂಬ ಆ ನಾಲ್ಕು ಸಂಭಾವ್ಯ ಸ್ಥಿತಿಗಳು ಭವಿಷ್ಯದಲ್ಲಿ ಎಷ್ಟು ಪ್ರಮಾಣದ ಹಸಿರು ಮನೆ ಅನಿಲಗಳು ವಾತಾವರಣವನ್ನು ಸೇರಿಕೊಳ್ಳುತ್ತವೆ ಎಂಬುದನ್ನು ಆಧರಿಸಿವೆ. (ಆರ್‌ಸಿಪಿ ಎಂದರೆ ರೆಪ್ರಸೆಂಟೇಟಿವ್ ಕಾನ್ಸಂಟ್ರೇಶನ್ ಪಾತ್‌ವೇ).

‘ನೇಚರ್’ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಅವರ ವರದಿಯ ಪ್ರಕಾರ 1.5 ಡಿಗ್ರಿ ಸೆಂಟಿಗ್ರೇಡ್‌ನ ಗುರಿ ತುಂಬ ಮಹತ್ವಾಕಾಂಕ್ಷೆಯದ್ದಾಗಿದೆ.

ವರದಿಯ ಪ್ರಕಾರ ಈಗಿರುವ ಗ್ಲೇಸಿಯರ್ಸ್‌ನ (ಹಿಮದ) ಬಹುದೊಡ್ಡ ಪಾಲು ಅದೃಶ್ಯವಾಗುವ ಸಾಧ್ಯತೆಯಿದೆ. ಪಾತ್‌ವೇಯನ್ನಾಧರಿಸಿ, ನಷ್ಟವಾಗಲಿರುವ ಒಟ್ಟು ಹಿಮದ ಪ್ರಮಾಣ ಶೇ.42ರಿಂದ ಶೇ.69ರಷ್ಟು ಇರಬಹುದು. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಹಿಮ ಬೆಟ್ಟಗಳು ಕರಗಿದಾಗ ಪ್ರಾದೇಶಿಕ ಜಲ ಆಡಳಿತ ಮತ್ತು ಬೆಟ್ಟ ಸಮುದಾಯಗಳ ಮೇಲೆ ಗಂಭೀರ ಸ್ವರೂಪದ ಪರಿಣಾಮಗಳಾಗಬಹುದು.

ಏಷ್ಯಾದ ಎತ್ತರದ ಪರ್ವತಗಳಲ್ಲಿರುವ ಹಿಮ ಗಡ್ಡೆಗಳು ಮಿಲಿಯಗಟ್ಟಲೆ ಜನರ ನೀರಿನ ಆವಶ್ಯಕತೆಗಳನ್ನು ಪೂರೈಸುತ್ತವೆ. ಆದರೆ, ಹವಾಮಾನ ಬದಲಾವಣೆಯಿಂದಾಗಿ ಹಿಮ ಪ್ರದೇಶಗಳು ಸಂಕುಚನಗೊಳ್ಳುತ್ತಿವೆ. ಸಮಸ್ಯೆಯ ಮೂಲ ಸ್ವರೂಪ ಇದು:

ಎಚ್‌ಎಂಎಯ ಹಿಮಾಚ್ಛಾದಿತ ಪ್ರದೇಶಗಳು ಜಾಗತಿಕ ಸರಾಸರಿಗಿಂತ ತುಂಬ ಹೆಚ್ಚಿನ ದರದಲ್ಲಿ ಸತತವಾಗಿ ಬಿಸಿಯಾಗುತ್ತಿವೆ. ಅಂದರೆ, ವಿಶ್ವದ ಇತರ ಭಾಗಗಳಲ್ಲಿ ಆಗುತ್ತಿರುವ ತಾಪಮಾನ ಏರಿಕೆಗಿಂತ ಹೆಚ್ಚು ವೇಗವಾಗಿ ಬಿಸಿಯಾಗುತ್ತಿವೆ.

ಹಿಮ ಬೆಟ್ಟಗಳ ರಾಶಿಯ ಸಮತೋಲನದ ಉಪಗ್ರಹ ಆಧಾರಿತ ವೀಕ್ಷಣೆಗಳನ್ನು ಬಳಸಿ (ಹಿಮ ಬಂಡೆಗಳ ನಿರ್ಮಾಣ ಮತ್ತು ಅವುಗಳು ಕರಗುವ ಪ್ರಮಾಣದ ನಡುವಿನ ವ್ಯತ್ಯಾಸವನ್ನು ಆಧರಿಸಿ) ವಿಜ್ಞಾನಿಗಳು ಭವಿಷ್ಯದ ಸ್ಥಿತಿಗಳನ್ನು ಅಂದಾಜಿಸಿದ್ದಾರೆ. ಅವರು ಹವಾಮಾನ ಮಾದರಿಗಳಲ್ಲಿ ಮತ್ತು ಮಾದರಿಗಳ ಸ್ವರೂಪಗಳಲ್ಲಿರುವ ಅನಿಶ್ಚಿತತೆಯನ್ನು ಕೂಡ ವಿಶ್ಲೇಷಿಸಿದ್ದಾರೆ.

ಅವರು ಹೇಳುವಂತೆ, ಎಚ್‌ಎಂಎಗಳು ವೇಗವಾಗಿ ಬಿಸಿಯಾಗುವುದಷ್ಟೇ ಅಲ್ಲ, ಜಾಗತಿಕ ತಾಪಮಾನದ ಏರಿಕೆಯನ್ನು 1.5 ಡಿಗ್ರಿ ಸೆಂಟಿಗ್ರೇಡ್‌ನಷ್ಟಕ್ಕೆ ಸೀಮಿತಗೊಳಿಸಿದಾಗಲೂ, ಈಗ ಇರುವ ಹಿಮದ ಒಟ್ಟು ಪ್ರಮಾಣದ ಶೇ.36ರಷ್ಟು ಹಿಮವು 2100ರ ವೇಳೆಗೆ ಕಣ್ಮರೆಯಾಗಲಿದೆ. ಇದು ಉಟ್‌ರೆಕ್ಟ್ ವಿಶ್ವವಿದ್ಯಾನಿಲಯದ ವಾಲ್ಟರ್ ಇಮ್ಮರ್‌ಜೀಲ್‌ರವರ ಅಭಿಪ್ರಾಯವಾಗಿದೆ.

ಆದರೆ, ವಾಸ್ತವಿಕವಾಗಿ ಶೇ.49ರಿಂದ ಶೇ.64ರಷ್ಟು ಹಿಮ (ಐಸ್) ನಷ್ಟವಾಗಬಹುದು.

‘‘1.5 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಹೆಚ್ಚು ಬಿಸಿಯಾಗುವ ಪ್ರಪಂಚದಲ್ಲಿ ಹಿಮ ಪ್ರವಾಹಗಳು ಹೇಗೆ ‘ವಿಕಾಸ’ಗೊಳ್ಳುತ್ತವೆಂದು ಅರ್ಥ ಮಾಡಿಕೊಳ್ಳುವುದು ಮುಖ್ಯ’’ ಎನ್ನುತ್ತಾರೆ ಇಮ್ಮರ್‌ಜೀಲ್. ‘‘ಆದರೆ, ಏಷ್ಯಾದ ಪರ್ವತಗಳಿಂದ ಸಿಗುವ ನೀರನ್ನು ಅವಲಂಬಿಸಿರುವ ಮಿಲಿಯಗಟ್ಟಲೆ ಜನರಿಗೆ, ಜಲಚಕ್ರದ ಇತರ ಭಾಗಗಳು ಕೂಡ ಮುಖ್ಯ. ಹಿಮ ಕರಗುವುದರಲ್ಲಾಗುವ ಬದಲಾವಣೆ ಮತ್ತು ಮಳೆಗಾಲದ ಚಲನಶೀಲತೆ (ಡೈನಾಮಿಕ್ಸ್) ಇವು ಜಲಚಕ್ರದ ಇತರ ಭಾಗಗಳು. ಜಲಚಕ್ರದ ಈ ಭಾಗಗಳ ಮೇಲೆ ನಾವು ನಮ್ಮ ಅಧ್ಯಯನವನ್ನು ಕೇಂದ್ರೀಕರಿಸಲಿದ್ದೇವೆ’’ ಎಂದು ಇಮ್ಮರ್‌ಜೀಲ್ ಹೇಳಿದ್ದಾರೆ. ವಿಶೇಷವಾಗಿ, ಅವರು ತೀವ್ರವಾದ ಘಟನೆಗಳನ್ನು ಅಧ್ಯಯನ ಮಾಡಲಿದ್ದಾರೆ. ಹಿಮ ಪ್ರವಾಹ ಕರಗುವಾಗ ಅದರ ಮೇಲೆ ಬೆಟ್ಟದ ಸವೆತದಿಂದಾಗಿ ಶೇಖರವಾಗುವ ತ್ಯಾಜ್ಯದ ಪರಿಣಾಮ ಏನು ಎಂದು ಅವರು ಅಧ್ಯಯನ ನಡೆಸುವವರಿದ್ದಾರೆ. ಎಚ್‌ಎಂಎಗಳಲ್ಲಿ 95,537 ಹಿಮ ಪ್ರವಾಹ/ಹಿಮ ಬಂಡೆಗಳು ಇವೆ. ಇವುಗಳ ಒಟ್ಟು ಹಿಮ ವಿಸ್ತಾರ (ಗ್ಲೇಶಿಯರ್ ಏರಿಯಾ) 97,605 ಚದರ ಕಿಲೊ ಮೀಟರ್. ಇದರ ಅನೇಕ ಭಾಗಗಳು ಸವೆತದಿಂದಾಗಿ ಉಂಟಾದ ತ್ಯಾಜ್ಯದ ದಪ್ಪನೆಯ ಒಂದು ಪದರದಿಂದ ಮುಚ್ಚಲ್ಪಟ್ಟಿವೆ. ಇದು ಗ್ಲೇಶಿಯರ್‌ನ ಹವಾಮಾನ ಸೂಕ್ಷ್ಮತೆಯ ಮೇಲೆ ಪ್ರಭಾವ ಬೀರುತ್ತದೆ. ತ್ಯಾಜ್ಯದ ಒಂದು ತೆಳ್ಳನೆಯ ಪದರವು ಹಿಮ ಕರಗುವ ವೇಗವನ್ನು ಹೆಚ್ಚಿಸುತ್ತದೆ. ಎಚ್‌ಎಂಎಯಲ್ಲಿರುವ ಹಿಮ ಬಂಡೆ ಪ್ರದೇಶದ ಶೇ.11ರಷ್ಟು ಭಾಗವು ತ್ಯಾಜ್ಯದಿಂದ ಆವೃತವಾಗಿದೆ. ಹೀಗೆ ಆವೃತವಾಗಿರುವ ಅತ್ಯಂತ ವಿಸ್ತಾರವಾದ (ಶೇ.19) ಪ್ರದೇಶವು ಹಿಂದೂಕುಷ್ ಭೂಭಾಗದಲ್ಲಿದೆ.

ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ ಕಾರಾಕೋರಂ ಮತ್ತು ಹಿಮಾಲಯ (ಕೆಎಚ್)ದಲ್ಲಿರುವ ಹಿಮ ಪ್ರದೇಶದ ಸಮತೋಲನದಲ್ಲಿ ಏರುಪೇರಾಗಿದೆ. ಅಲ್ಲಿ ಪ್ರತೀ ವರ್ಷ 5.6 ಮತ್ತು 7.6 ಬಿಲಿಯನ್‌ನಷ್ಟು ಹಿಮದ ರಾಶಿ ನಷ್ಟವಾಗುತ್ತಿದೆ. ಜಾಗತಿಕ ಅನಿಲ ತಾಪಮಾನ ಏರಿಕೆಯಿಂದಾಗಿ 2080ರ ದಶಕದ ವೇಳೆಗೆ ಪ್ರತೀ ವರ್ಷ 33-37 ಗಿಗಾ ಟನ್‌ನಷ್ಟು ಹಿಮ ಬಂಡೆ ನಾಶವಾಗಬಹುದು. ಶೇ.10ರಿಂದ ಶೇ.27ರಷ್ಟು ಗ್ಲೇಶಿಯರ್‌ಗಳು ಈ ಶತಮಾನದ ಕೊನೆಯ ವೇಳೆಗೆ ‘ಕ್ರಮೇಣವಾಗಿ ನಾಪತ್ತೆ’ಯಾಗಬಹುದು.

ಐಐಎಸ್‌ಸಿಯ ಖ್ಯಾತ ವಿಜ್ಞಾನಿ ಅನಿಲ್ ಕುಲಕರ್ಣಿಯವರು ಹೇಳುವ ಪ್ರಕಾರ, ಹೊಸ ಅಧ್ಯಯನಗಳು ಕೂಡ ಹಿಮ ಬಂಡೆಗಳ ನಷ್ಟದ ಪ್ರಮಾಣವನ್ನು ದೃಢಪಡಿಸಿವೆ.

ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವ ನಿಟ್ಟಿನಲ್ಲಿ ನಾವು ತುರ್ತು ಕ್ರಮಗಳನ್ನು ತೆಗೆದುಕೊಳ್ಳದೆ ಇದ್ದಲ್ಲಿ ಹಿಮ ಬಂಡೆಗಳ, ಹಿಮ ಬೆಟ್ಟಗಳ ಕರಗುವಿಕೆಯೊಂದಿಗೆ ಸಂಭವಿಸಲಿರುವ ಭಾರೀ ದುರಂತಗಳಿಗೆ ಭವಿಷ್ಯದ ಜನಾಂಗಗಳು ಸಾಕ್ಷಿಯಾಗಬೇಕಾದೀತು.

ಕೃಪೆ: thewire.in

Writer - ಟಿ.ವಿ. ಪದ್ಮ

contributor

Editor - ಟಿ.ವಿ. ಪದ್ಮ

contributor

Similar News

ಜಗದಗಲ
ಜಗ ದಗಲ