ಮಧುಮೇಹಿಗಳು ತಿನ್ನಲೇಬೇಕಾದ ಐದು ತರಕಾರಿಗಳು

Update: 2017-10-08 10:41 GMT

 ಮಧುಮೇಹದಿಂದ ಬಳಲುತ್ತಿರುವವರು ಯಾವ ತರಕಾರಿಗಳನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂದು ನಿರ್ಧರಿಸುವಾಗ ಗೊಂದಲದಲ್ಲಿ ಸಿಲುಕುವುದೇ ಹೆಚ್ಚು. ಮಧುಮೇಹಿಗಳು ಸೂಕ್ತವಾದ ಆಹಾರವನ್ನು ಆಯ್ಕೆ ಮಾಡಿಕೊಳ್ಳಲು ರಕ್ತದಲ್ಲಿಯ ಸಕ್ಕರೆಯ ಮಟ್ಟದ ಮೇಲೆ ಕಾರ್ಬೊಹೈಡ್ರೇಟ್‌ಗಳ ಪ್ರಭಾವವನ್ನು ಅಳೆಯುವ ಗ್ಲೈಸೆಮಿಕ್ ಸೂಚಿ(ಜಿಐ)ಪ್ರಮುಖವಾಗುತ್ತದೆ. ಇದನ್ನು ಅಧಿಕ, ಮಧ್ಯಮ ಮತ್ತು ಕಡಿಮೆ ಜಿಐ ಮಟ್ಟಗಳೆಂದು ವರ್ಗೀಕರಿಸಲಾಗಿದೆ. ಕಡಿಮೆ ಜಿಐ ಹೊಂದಿರುವ ತರಕಾರಿಗಳು ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳಲು ನೆರವಾದರೆ, ಅಧಿಕ ಜಿಐ ತರಕಾರಿಗಳು ಅದನ್ನು ಅತಿಯಾಗಿ ಹೆಚ್ಚಿಸುತ್ತವೆ.

ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳಲು ಅತ್ಯುತ್ತಮವಾದ ತರಕಾರಿಗಳ ಮಾಹಿತಿ ಇಲ್ಲಿದೆ.

ಕೋಸುಗಡ್ಡೆ

ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಕೋಸುಗಡ್ಡೆಯು ಅತ್ಯಂತ ಪರಿಣಾಮ ಕಾರಿ ಎಂದು ಪರಿಗಣಿಸಲಾಗಿದೆ. ಕೋಸುಗಡ್ಡೆಯು ಸಲ್ಫೋರಾಫೇನ್ ಎಂಬ ಸಂಯುಕ್ತ ವನ್ನು ಒಳಗೊಂಡಿದ್ದು, ಇದು ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಮತ್ತು ಮಧುಮೇಹದಿಂದಾಗಿ ಹೃದಯಕ್ಕೆ ಹಾನಿಯನ್ನು ತಡೆಯುವ ಉರಿಯೂತವನ್ನು ನಿಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡುತ್ತದೆ.

ಕ್ಯಾರಟ್

ಕ್ಯಾರಟ್ ಅಥವಾ ಗಜ್ಜರಿಯು ಕೇವಲ ಮಧುಮೇಹಿಗಳು ಮಾತ್ರವಲ್ಲ, ಎಲ್ಲರ ಊಟದಲ್ಲಿಯೂ ಇರಬೇಕಾದ ಉತ್ಕೃಷ್ಟ ತರಕಾರಿಯಾಗಿದೆ. ಅದು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುವ ಜೊತೆಗೆ ಶರೀರದ ರೋಗ ನಿರೋಧಕ ಶಕ್ತಿಯನ್ನೂ ಉತ್ತೇಜಿಸುತ್ತದೆ. ಒಂದು ಕಪ್ ಕ್ಯಾರೆಟ್ ಖಾದ್ಯವು ಸುಮಾರು ಐದು ಗ್ರಾಂ ಕಾರ್ಬೊಹೈಡ್ರೇಟ್‌ನ್ನು ಒಳಗೊಂಡಿರುತ್ತದೆ. ವಂಶವಾಹಿ ಮೂಲಕ ಮಧುಮೇಹಕ್ಕೆ ಗುರಿಯಾಗುವ ಸಾಧ್ಯತೆಯನ್ನು ಹೊಂದಿರುವ ಜನರಲ್ಲಿ ಟೈಪ್ 2 ಡಯಾಬಿಟೀಸ್‌ನ್ನು ತಡೆಯಲು ಕ್ಯಾರಟ್ ನೆರವಾಗು ತ್ತದೆ ಎನ್ನುವುದನ್ನು ಸ್ಟಾನ್‌ಫೋರ್ಡ್ ವಿವಿಯ ಸ್ಕೂಲ್ ಆಫ್ ಮೆಡಿಸಿನ್ ಕೈಗೊಂಡಿದ್ದ ಅಧ್ಯಯನವು ಸಿದ್ಧಪಡಿಸಿದೆ.

ಪಾಲಕ್

ಪಾಲಕ್ ಅತ್ಯಂತ ಬೇಡಿಕೆಯ ಸೊಪ್ಪಿನ ರೂಪದ ತರಕಾರಿಯಾಗಿದೆ. ಈ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ಹಲವಾರು ಕಾಯಿಲೆಗಳನ್ನು ದೂರವಿಡಬಹುದು ಮತ್ತು ನಮ್ಮ ಶರೀರವನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳಬಹುದು. ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿದೆ. ವಿಟಾಮಿನ್ ಕೆ, ಮ್ಯಾಗ್ನೇಶಿಯಂ, ಫೊಲೇಟ್, ರಂಜಕ, ಪೊಟ್ಯಾಷಿಯಂ ಮತ್ತು ಸತುವು ಗಳ ಸಮೃದ್ಧ ಆಗರವಾಗಿದ್ದು, ಈ ಎಲ್ಲ ಅಗತ್ಯ ಪೋಷಕಾಂಷಗಳೊಂದಿಗೆ ಪಾಲಕ್ ಮಧುಮೇಹಿಗಳ ಪಾಲಿಗೆ ವರದಾನವಾಗಿದೆ.

ಕೊಲಾರ್ಡ್ ಗ್ರೀನ್ಸ್

ಕೊಲಾರ್ಡ್ ಗ್ರೀನ್ಸ್ ಅಥವಾ ಕ್ಯಾಬೇಜ್,ಹಸಿರು ಸೊಪ್ಪುಗಳು ವಿಟಾಮಿನ್ ಸಿ ಅನ್ನು ಹೇರಳವಾಗಿ ಹೊಂದಿವೆ. ಇವು ಶರೀರದಲ್ಲಿಯ ಕೊಲೆಸ್ಟ್ರಾಲ್‌ನ್ನು ಕಡಿಮೆಗೊಳಿಸುವ ಜೊತೆಗೆ ಉರಿಯೂತವನ್ನು ತಗ್ಗಿಸುತ್ತವೆ. ಇವು ಒತ್ತಡವನ್ನು ಎದುರಿಸುವಲ್ಲಿ ಶರೀರಕ್ಕೆ ನೆರವಾಗುವ ಆಲ್ಪಾ ಲಿಪೊಲಿಕ್ ಆ್ಯಸಿಡ್ ಎಂಬ ಪೋಷಕಾಂಷವನ್ನೂ ಒಳಗೊಂಡಿದ್ದು, ಇದು ರಕ್ತದಲ್ಲಿಯ ಹೆಚ್ಚುವರಿ ಸಕ್ಕರೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹ ನರರೋಗದಿಂದಾಗಿ ಹಾನಿಯಾಗಿರುವ ನರಗಳಿಗೆ ಶಕ್ತಿಯನ್ನು ನೀಡುತ್ತದೆ.

ಕೆಂಪು ಈರುಳ್ಳಿ

ಕೆಂಪು ಈರುಳ್ಳಿಯು ಆ್ಯಂಟಿ ಆಕ್ಸಿಡಂಟ್‌ಗಳು ಅಥವಾ ಉತ್ಕರ್ಷಣ ನಿರೋಧಕಗಳನ್ನು ಹೇರಳವಾಗಿ ಹೊಂದಿದೆ. ನಾರು, ಪೊಟ್ಯಾಷಿಯಂ ಮತ್ತು ಫೊಲೇಟ್‌ಗಳ ಉತ್ತಮ ಮೂಲವಾಗಿದ್ದು, ಇವು ವಿವಿಧ ಹೃದಯ ಕಾಯಿಲೆಗಳನ್ನು ಶಮನಗೊಳಿಸುವ ಜೊತೆಗೆ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News