ಗೌರಿ ಹತ್ಯೆ ಪ್ರಕರಣ: ತನಿಖೆ ಕಾಟಾಚಾರವಾಗದಿರಲಿ

Update: 2017-10-08 18:55 GMT

ಈ ದೇಶದಲ್ಲಿ ಭಯೋತ್ಪಾದಕರು, ಉಗ್ರವಾದಿಗಳು ನಡೆಸುವ ಕೃತ್ಯಗಳನ್ನು ಪೊಲೀಸರು ಕ್ಷಣ ಮಾತ್ರದಲ್ಲಿ ಇತ್ಯರ್ಥ ಪಡಿಸುವುದರಲ್ಲಿ ನಿಸ್ಸೀಮರು. ಒಂದು ಸ್ಫೋಟ ಎಲ್ಲಿಯಾದರೂ ನಡೆಯಿತು ಎಂದಾದರೆ, ಯಾವುದೋ ಮುಸ್ಲಿಮ್ ಹೆಸರಿನ ಉಗ್ರವಾದಿ ಸಂಘಟನೆಯ ಕೈವಾಡವನ್ನು ಘೋಷಿಸಿ ಬಿಟ್ಟರೆ ಪೊಲೀಸರ ಅರ್ಧ ಕೆಲಸ ಮುಗಿದು ಬಿಟ್ಟಂತೆ. ಜನರಿಗೂ ಅಪರಾಧಿಗಳು ಯಾರು ಎನ್ನುವುದು ಗೊತ್ತಾದ ಸಂತೃಪ್ತಿ. ಬಳಿಕ, ಆಕ್ರೋಶಗೊಂಡ ಜನರನ್ನು ಸಂತೈಸುವುದಕ್ಕಾಗಿಯೇ ಕೆಲವು ಶಂಕಿತ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರೆ ಪೊಲೀಸರ ತನಿಖೆ ಸಂಪೂರ್ಣವಾದಂತೆ.

ಇಲ್ಲಿ ಅವರಿಗೆ ಪ್ರಕರಣವನ್ನು ಮುಗಿಸಿ ಸರಕಾರದ ಮತ್ತು ಜನರ ಒತ್ತಡದಿಂದ ಬಚಾವಾಗುವುದಷ್ಟೇ ಮುಖ್ಯ. ಈ ಕಾರಣದಿಂದಲೇ ಕೆಲವೊಮ್ಮೆ ಪೊಲೀಸರು ಅಮಾಯಕರ ಮೇಲೆ ಪ್ರಕರಣಗಳನ್ನು ದಾಖಲಿಸಿ ಬಿಡುತ್ತಾರೆ. ಅವರೋ, ಒಂದು ಹತ್ತು ವರ್ಷ ಜೈಲಲ್ಲಿ ಕೊಳೆತು ಬಳಿಕ ನಿರಪರಾಧಿಗಳಾಗಿ ಹೊರ ಬರುತ್ತಾರೆ. ಹೊರ ಬಂದರೂ ಅವರ ಹಣೆಯ ಮೇಲೆ ಅಂಟಿಸಿರುವ ಭಯೋತ್ಪಾದಕನೆನ್ನುವ ಹೆಸರು ಅಳಿಸಿ ಹೋಗುವುದಿಲ್ಲ. ಆ ಕಳಂಕವನ್ನು ಹೊತ್ತುಕೊಂಡೇ ಅವರು ತಮ್ಮ ಮುಂದಿನ ಬದುಕನ್ನು ಸವೆಸಬೇಕಾಗುತ್ತದೆ. ಕೆಲವೊಮ್ಮೆ, ಪೊಲೀಸರ ಇಂತಹ ಅರೆಬರೆ ತನಿಖೆಗಳೇ ಅಮಾಯಕರನ್ನು ಉಗ್ರಗಾಮಿ ಕೃತ್ಯಗಳಿಗೆ ಪ್ರೇರೇಪಿಸುವುದಿದೆ.

ಇತ್ತೀಚೆಗೆ ದೇಶದಲ್ಲಿ ಕೇಸರಿ ಭಯೋತ್ಪಾದನೆಗಳೂ ಸುದ್ದಿಯಲ್ಲಿವೆ. ಸನಾತನ ಸಂಸ್ಥೆಯ ಹೆಸರುಗಳು ಪದೇ ಪದೇ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಹೇಮಂತ್ ಕರ್ಕರೆ ತಂಡ ನಡೆಸಿದ ತನಿಖೆಗಳಿಂದಾಗಿ ಭಯೋತ್ಪಾದನೆಯ ಇನ್ನೊಂದು ಮುಖ ಹೊರ ಬಿತ್ತು. ಆವರೆಗೆ ದೇಶಪ್ರೇಮ, ಸಂಸ್ಕೃತಿ ಎಂಬ ಮುಖವಾಡದ ಮರೆಯಲ್ಲಿ ಬದುಕುತ್ತಿದ್ದವರ ಬಂಡವಾಳ ಹೊರಬಿತ್ತು. ಇದೇ ಸಂದರ್ಭದಲ್ಲಿ ಮಕ್ಕಾಮಸೀದಿ, ಅಜ್ಮೀರ್ ಸ್ಫೋಟ, ಮಾಲೆಗಾಂವ್ ಸ್ಫೋಟದಲ್ಲಿ ಪೊಲೀಸರ ಬೇಜವಾಬ್ದಾರಿ ತನಿಖೆಯಿಂದ ಅಮಾಯಕ ಮುಸ್ಲಿಮರು ಹೇಗೆ ಜೈಲು ಸೇರಿದರು ಎನ್ನುವುದೂ ಬಹಿರಂಗವಾಯಿತು.

ನಡೆದ ಸ್ಫೋಟಗಳನ್ನೆಲ್ಲ ಅಮಾಯಕ ಮುಸ್ಲಿಮರ ತಲೆಗೆ ಕಟ್ಟುತ್ತಾ ಬಂದಿದ್ದ ಪೊಲೀಸರೆಲ್ಲ ಆವಕ್ಕಾಗುವಂತೆ, ಪ್ರಜ್ಞಾ ಸಿಂಗ್, ಪುರೋಹಿತ್‌ರಂತಹ ವಿಭಿನ್ನ ಹೆಸರುಗಳು ಮಾಧ್ಯಮಗಳಲ್ಲಿ ಮಿಂಚತೊಡಗಿದವು. ಒಂದಂತೂ ಸತ್ಯ, ಪೂರ್ವಾಗ್ರಹ ಪೀಡಿತವಾದ ತನಿಖೆಗಳು ಉಗ್ರರಿಗೆ ಪರೋಕ್ಷವಾಗಿ ನೆರವಾಗಿವೆ. ಈ ದೇಶದಲ್ಲಿ ಉಗ್ರವಾದ ಇನ್ನಷ್ಟು ಹೆಚ್ಚುವುದಕ್ಕೆ ಮುಖ್ಯ ಕಾರಣ, ಇಂತಹ ನಿರ್ಜೀವ ತನಿಖೆಗಳೇ ಆಗಿವೆ. ಜನರನ್ನು ಸಂತೃಪ್ತಿ ಪಡಿಸುವುದಷ್ಟೇ ತನಿಖೆ ನಡೆಸುವವರ ಉದ್ದೇಶವಾದರೆ, ಅಪರಾಧಿಗಳು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ.
  
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನೇ ಗಮನಿಸೋಣ. ತನಿಖೆ ಆರಂಭದಲ್ಲಿ ಬೇರೆ ಬೇರೆ ನೆಲೆಯಲ್ಲಿ ನಡೆಯಿತು. ಗೌರಿಯನ್ನು ಯಾರು ಕೊಂದರು ಎನ್ನುವುದು ಗೊತ್ತಿಲ್ಲದೇ ಇದ್ದರೂ, ಯಾಕೆ ಕೊಂದರು ಎನ್ನುವುದು ದೇಶಕ್ಕೇ ಗೊತ್ತಿದೆ. ಗೌರಿಯ ಅಸ್ತಿತ್ವ ಯಾರಲ್ಲಿ ನಡುಕ ತಂದಿತ್ತು, ಅವರ ಸಾವಿನಿಂದ ಸಂಭ್ರಮ ಪಟ್ಟವರು ಯಾರು? ಗೌರಿಯ ಹತ್ಯೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಖಂಡಿಸದೇ ಇರುವುದರ ಹಿಂದೆ ಯಾವ ಶಕ್ತಿಯಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ತೀರಾ ಕಷ್ಟವೇನಲ್ಲ.

ಆರಂಭದಲ್ಲಿ ನಕ್ಸಲರ ಕೈವಾಡವಿದೆ ಎಂದು ಕೆಲವರು ಕೂಗೆಬ್ಬಿಸಿದರು. ತನಿಖೆ ಎಲ್ಲ ಮಗ್ಗುಲಲ್ಲೂ ನಡೆಯುವುದು ಅಗತ್ಯವಾಗಿರುವುದರಿಂದ ಆ ಕೂಗನ್ನು ನಾವು ಗಂಭೀರವಾಗಿಯೇ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಯಾವ ದಿಕ್ಕಿನಲ್ಲಿ ನೋಡಿದರೂ ಗೌರಿಯನ್ನು ನಕ್ಸಲರು ಹತ್ಯೆ ಮಾಡಬೇಕಾದ ಕಾರಣಗಳು ಈವರೆಗೆ ಸಿಕ್ಕಿಲ್ಲ. ನಕ್ಸಲರನ್ನು ಮುಖ್ಯವಾಹಿನಿಗೆ ತಂದುದು ಹತ್ಯೆಗೆ ಕಾರಣವಾಯಿತು ಎನ್ನುವುದೇ ಒಂದು ದೊಡ್ಡ ಸುಳ್ಳು. ಯಾಕೆಂದರೆ, ಗೌರಿ ನಕ್ಸಲರಲ್ಲಿ ಭಿನ್ನಮತ ಹುಟ್ಟಿಸಿ, ಅವರನ್ನು ಒಡೆದು ಮುಖ್ಯವಾಹಿನಿಗೆ ತರಲಿಲ್ಲ. ಬದಲಿಗೆ ಅದಾಗಲೇ ಭಾಗಶಃ ಮುಖ್ಯವಾಹಿನಿಗೆ ಕಾಲಿಟ್ಟ ಕೆಲವು ನಕ್ಸಲರ ಮೇಲಿನ ಪ್ರಕರಣಗಳನ್ನು ವಜಾಗೊಳಿಸಲು ಸರಕಾರದೊಂದಿಗೆ ಮಾತುಕತೆಯ ಮಧ್ಯಸ್ಥಿಕೆಯನ್ನಷ್ಟೇ ಅವರು ನಡೆಸಿದ್ದರು. ಆದುದರಿಂದ, ನಕ್ಸಲರಿಗೂ ಗೌರಿಗೂ ನೇರ ಸಂಬಂಧ ಇಲ್ಲವೇ ಇಲ್ಲ.

ಇಷ್ಟಕ್ಕೂ, ನಾಗರಿಕ ಸಮಾಜದೊಳಗೆ ನುಗ್ಗಿ ಜನಪರ ಹೋರಾಟಗಾರರನ್ನು ಕೊಂದು ಹಾಕಿದ ಒಂದು ಉದಾಹರಣೆಯೂ ದೇಶದಲ್ಲಿ ಇಲ್ಲ. ಯಾವ ದಿಕ್ಕಿನಲ್ಲಿ ನೋಡಿದರೂ, ಗೌರಿಯ ಹತ್ಯೆಯಲ್ಲಿ ಸಂಘಪರಿವಾರದ ಪಾತ್ರ ಎದ್ದು ಕಾಣುತ್ತದೆ. ಹಾಗೆಂದು ತನಿಖಾಧಿಕಾರಿಗಳು ಈಗಾಗಲೇ ಕುಖ್ಯಾತಿ ಪಡೆದಿರುವ ಒಂದು ಕೇಸರಿ ಸಂಘಟನೆಯ ಹೆಸರನ್ನು ಘೋಷಿಸಿ ಅವರ ತಲೆಗೆ ಗೌರಿಯ ಹತ್ಯೆಯನ್ನು ಕಟ್ಟಿದರೆ ನ್ಯಾಯ ದೊರಕಿದಂತಾಗುವುದಿಲ್ಲ. ಈ ಹತ್ಯೆಯಲ್ಲಿ ನೇರವಾಗಿ ಭಾಗವಹಿಸಿದ ಒಂದಿಬ್ಬರನ್ನಾದರೂ ಪತ್ತೆ ಹಚ್ಚುವಲ್ಲಿ ಪೊಲೀಸ್ ಅಧಿಕಾರಿಗಳು ವಿಫಲವಾದರೆ, ಇಡೀ ತನಿಖೆ ಒಂದು ಅಣಕ ಮಾತ್ರ ಎಂದು ನಾವು ನಿರ್ಧರಿಸಬೇಕಾಗುತ್ತದೆ. ಪನ್ಸಾರೆ, ದಾಭೋಲ್ಕರ್, ಕಲಬುರ್ಗಿ ಹತ್ಯೆಯನ್ನು ಹೋಲುತ್ತದೆ ಎನ್ನುವ ಕಾರಣಕ್ಕಾಗಿ ಒಂದು ಸಂಸ್ಥೆಯ ಕುರಿತಂತೆ ತನಿಖಾಧಿಕಾರಿಗಳು ತಮ್ಮ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ವಿಚಾರವಾದಿಗಳ ಹತ್ಯೆ ನಡೆದಾಗಲೂ ಇದೇ ಅನುಮಾನವನ್ನು ಪ್ರಕಟಿಸಿ, ಒಂದು ಸಂಸ್ಥೆಯ ಹೆಸರನ್ನು ಮಾಧ್ಯಮಗಳಲ್ಲಿ ತೇಲಿ ಬಿಡಲಾಗಿತ್ತು. ಆದರೆ ಈವರೆಗೂ ಆ ಸಂಸ್ಥೆಯನ್ನು ನಿಷೇಧಿಸುವ ಕೆಲಸ ನಡೆದಿಲ್ಲ. ಇದೀಗ ಗೌರಿಯ ಹತ್ಯೆಯ ಸಂದರ್ಭದಲ್ಲಿ ಮತ್ತೆ ಅದೇ ಸಂಸ್ಥೆಯ ಹೆಸರು ಕೇಳಿ ಬರುತ್ತಿದೆ. ವಿಪರ್ಯಾಸವೆಂದರೆ, ಸಂಸ್ಥೆಗೆ ಸಂಬಂಧಿಸಿದವರು ಎನ್ನಲಾದ ಕೆಲವರ ಹೆಸರುಗಳೂ ಹೊರಬೀಳುತ್ತಿವೆ.

ಆದರೆ ಹೊರಬಿದ್ದ ಹೆಸರುಗಳನ್ನು ಹೊಂದಿದವರು ವರ್ಷಗಳ ಹಿಂದೆಯೇ ನಾಪತ್ತೆಯಾದವರು. ಅಂದರೆ ಸರಕಾರಕ್ಕೆ ತನಿಖೆಯನ್ನು ಆದಷ್ಟು ಬೇಗ ಮುಗಿಸಿ ನಾಡಿನ ಜನರನ್ನು ತೃಪ್ತಿಪಡಿಸಬೇಕಾದ ಹೊಣೆಗಾರಿಕೆಯಿದೆ. ಅದಕ್ಕಾಗಿ ಈ ಒಳದಾರಿಯನ್ನು ಬಳಸಿಕೊಂಡು ವಿಚಾರಣೆಯನ್ನು ಮುಗಿಸಿ ಬಿಡುವ ಆಲೋಚನೆಯನ್ನು ಹೊಂದಿದೆಯೇ? ಒಂದು ಸಂಸ್ಥೆ ಹತ್ಯೆಯಲ್ಲಿ ಭಾಗಿಯಾಗಿದೆ ಎಂದ ಮೇಲೆ ತಕ್ಷಣ ಅದನ್ನು ನಿಷೇಧ ಮಾಡಲು ಸರಕಾರಕ್ಕೆ ಶಿಫಾರಸು ಮಾಡಬೇಕು. ದಾಭೋಲ್ಕರ್, ಪನ್ಸಾರೆ ಪ್ರಕರಣದಲ್ಲಿ ಈಗಾಗಲೇ ಆ ಸಂಸ್ಥೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರಾದರೂ, ಅದನ್ನು ನಿಷೇಧಿಸುವ ಯಾವ ಪ್ರಯತ್ನವೂ ನಡೆದಿಲ್ಲ. ಪ್ರಕರಣವನ್ನು ವರ್ಷಗಳ ಹಿಂದೆಯೇ ನಾಪತ್ತೆಯಾಗಿರುವ ಶಂಕಿತ ಉಗ್ರರ ತಲೆಗೆ ಕಟ್ಟುವುದರಿಂದ ಗೌರಿ ಹತ್ಯೆಯ ತನಿಖೆ ಪೂರ್ಣವಾಗುವುದಿಲ್ಲ. ಸಂಚು ರೂಪಿಸಿದ ನಿರ್ದಿಷ್ಟ ಸಂಸ್ಥೆಯನ್ನು ನಿಷೇಧಿಸಿ, ಸಂಚು ರೂಪಿಸಿದ ಮತ್ತು ಅದನ್ನು ಜಾರಿಗೆ ತಂದ ವ್ಯಕ್ತಿಗಳು ಜೈಲು ಪಾಲಾದಾಗಲಷ್ಟೇ ಜನರಿಗೆ ನ್ಯಾಯ ಸಿಕ್ಕಂತಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News