ಬ್ಯಾಂಕುಗಳ ಹಬ್ಬದ ಸಾಲದ ಕೊಡುಗೆಯನ್ನು ಪಡೆಯಲು ಆತುರ ಬೇಡ

Update: 2017-10-09 10:57 GMT

 ಹಬ್ಬಗಳ ಋತುವಿನಲ್ಲಿ ಜನರಿಗೆ ಸಾಲ ನೀಡಲು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ವಿವಿಧ ಕೊಡುಗೆಗಳನ್ನು ಮುಂದಿಟ್ಟುಕೊಂಡು ಅಖಾಡಾಕ್ಕೆ ಇಳಿದಿವೆ, ಆದರೆ ಅವುಗಳ ಮಾತುಗಳನ್ನು ನಂಬಿಕೊಂಡು ಸಾರಾಸಗಟು ವಿಚಾರ ಮಾಡದೇ ಸಾಲವನ್ನು ಖಂಡಿತವಾಗಿಯೂ ಪಡೆದುಕೊಳ್ಳಬೇಡಿ. ಸಾಲದ ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ. ನಿಮಗೆ ಗೊತ್ತಾಗದಿದ್ದರೆ ಪ್ರಶ್ನಿಸಲು ದಾಕ್ಷಿಣ್ಯ ಮಾಡಿಕೊಳ್ಳಬೇಡಿ. ಸಾಲದ ದಾಖಲೆಗಳಿಗೆ ತರಾತುರಿಯಲ್ಲಿ ಸಹಿ ಹಾಕುವ ಮುನ್ನ ನಿಮ್ಮದೇ ಆದ ಲೆಕ್ಕಾಚಾರವನ್ನು ಮಾಡಿ.

  ಪ್ರಮುಖ ಆಫರ್‌ಗಳು ಮತ್ತು ಪ್ರತಿಯೊಂದರಲ್ಲಿಯೂ ನೀವು ಏನನ್ನು ಪರಿಶೀಲಿಸ ಬೇಕು ಎಂಬ ಬಗ್ಗೆ ಮಾಹಿತಿಗಳು ಇಲ್ಲಿವೆ.

►ಶೂನ್ಯ ಅಥವಾ ತಗ್ಗಿಸಿದ ಸಂಸ್ಕರಣ ಶುಲ್ಕ 

ಕೆಲವು ಬ್ಯಾಂಕುಗಳು ಪ್ರಾಸೆಸಿಂಗ್ ಫೀ ಅಥವಾ ಸಂಸ್ಕರಣ ಶುಲ್ಕವನ್ನು ಮನ್ನಾ ಮಾಡುವ ಅಥವಾ ಸಾಲಗಳ ಮೇಲೆ ರಿಯಾಯಿತಿಯ ಕೊಡುಗೆಯನ್ನು ಮುಂದಿಟ್ಟಿವೆ. ಉದಾಹರಣೆಗೆ ಎಸ್‌ಬಿಐ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ(ಬಿಒಎಂ) 2017, ಡಿಸೆಂಬರ್ 31ರವರೆಗೆ ತಮ್ಮ ಗೃಹ ಮತ್ತು ಕಾರು ಖರೀದಿ ಸಾಲಗಳ ಮೇಲೆ ಸಂಸ್ಕರಣ ಶುಲ್ಕವನ್ನು ಮನ್ನಾ ಮಾಡಿರುವುದಾಗಿ ಘೋಷಿಸಿವೆ. ಈ ಶುಲ್ಕವು ಸಾಮಾನ್ಯವಾಗಿ ಸಾಲದ ಮೊತ್ತದ ಶೇಕಡಾವಾರು ಅಥವಾ ನಿರ್ದಿಷ್ಟ ಮೊತ್ತವಾಗಿರುತ್ತದೆ. ಹೀಗಾಗಿ ಈ ಆಫರ್‌ನಲ್ಲಿ ನೀವು ಸಂಸ್ಕರಣ ಶುಲ್ಕವನ್ನು ಸಂಪೂರ್ಣವಾಗಿ ಉಳಿಸಬಹುದು.

 ಇದರರ್ಥ ನೀವು ಎಸ್‌ಬಿಐನಿಂದ 30 ಲಕ್ಷ ರೂ.ಗಳ ಗೃಹಸಾಲವನ್ನು ಪಡೆದು ಕೊಂಡರೆ ಸಂಸ್ಕರಣ ಶುಲ್ಕದ ರೂಪದಲ್ಲಿ 10,620 ರೂ.(ಜಿಎಸ್‌ಟಿ ಸೇರಿ)ಗಳನ್ನು ಉಳಿಸಬಹುದಾಗಿದೆ. ಇದು ನಿಮಗೆ ಆಕರ್ಷಕವೆನ್ನಿಸಬಹುದು, ಆದರೆ ಕಾನೂನು ಮತ್ತು ತಾಂತ್ರಿಕ ಶುಲ್ಕದಂತಹ ಇತರ ಶುಲ್ಕಗಳನ್ನು ಮರೆಯಬೇಡಿ. ಇವು 12,000 ರೂ.ವರೆಗೂ ಆಗಬಹುದು ಮತ್ತು ಈ ಮೊತ್ತ ಸಾಲದ ಒಟ್ಟು ವೆಚ್ಚದಲ್ಲಿ ಸೇೀರಿಕೊಳ್ಳುತ್ತದೆ ಎನ್ನುತ್ತಾರೆ ಮೈಲೋನ್‌ಕೇರ್ ಡಾಟ್ ಕಾಮ್‌ನ ಸ್ಥಾಪಕ ಗೌರವ ಗುಪ್ತಾ. ಹೀಗಾಗಿ ಎಲ್ಲ ಶುಲ್ಕಗಳನ್ನು ಲೆಕ್ಕ ಹಾಕಿ ಅತ್ಯಂತ ಕಡಿಮೆ ಒಟ್ಟಾರೆ ವೆಚ್ಚ ತಗುಲುವ ಸಾಲವನ್ನು ಆಯ್ಕೆ ಮಾಡಿಕೊಳ್ಳಿ. ಸಂಸ್ಕರಣ ಶುಲ್ಕವೊಂದೇ ನಿರ್ಣಾಯಕ ಅಂಶವಾಗಬಾರದು.

ಇಎಂಐ ಮನ್ನಾ ಇಎಂಐ ಅಥವಾ ಸಮಾನ ಮಾಸಿಕ ಕಂತುಗಳ ಮನ್ನಾ ಕೊಡುಗೆಯು ನೀವು ಸಾಲದ ಮರುಪಾವತಿಗಾಗಿ ಕಟ್ಟುವ ಇಎಂಐಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಉದಾಹರ ಣೆಗೆ ಎಕ್ಸಿಸ್ ಬ್ಯಾಂಕ್ 20 ವರ್ಷಗಳ ಸಾಲದ ಅವಧಿಯಲ್ಲಿ 4, 8ಮತ್ತು 12ನೇ ವರ್ಷಗಳ ಅಂತ್ಯದಲ್ಲಿ ತಲಾ ನಾಲ್ಕು ಇಎಂಐಗಳಂತೆ ಒಟ್ಟು 12 ಇಎಂಐಗಳನ್ನು ಮನ್ನಾ ಮಾಡುವ ಆಫರ್‌ನ್ನು ಮುಂದಿಟ್ಟಿದೆ. ಲಭ್ಯ ಸಾಲದ ಗರಿಷ್ಠ ಮೊತ್ತ 30 ಲ. ರೂ.ಗಳಾಗಿದ್ದು, ನೀವು ಇಎಂಐ ಮನ್ನಾದ ಮೂಲಕ ಗರಿಷ್ಠ 3.09 ಲ.ರೂ.ಗಳನ್ನು ಉಳಿಸಬಹುದಾಗಿದೆ.

ಆದರೆ ಈ ಮನ್ನಾದ ಲಾಭ ಪಡೆಯಲು ಷರತ್ತುಗಳಿವೆ. ಮೊದಲನೆಯದು ನೀವು ನಾಲ್ಕು ವರ್ಷಗಳ ಮುನ್ನ ಸಾಲವನ್ನು ಮರುಪಾವತಿಸುವಂತಿಲ್ಲ. ಎರಡನೆಯದು ಸಾಲದ ಕನಿಷ್ಠ ಅವಧಿಯು 20 ವರ್ಷಗಳಾಗಿರುವುದರಿಂದ ಮನ್ನಾ ಕೊಡುಗೆಯ ಸಂಪೂರ್ಣ ಲಾಭವನ್ನು ಪಡೆಯಲು ನೀವು ಆ ಅವಧಿಪೂರ್ಣ ಸಾಲಕ್ಕೆ ಅಂಟಿಕೊಂಡಿರಬೇಕಾಗುತ್ತದೆ. ಸಂಸ್ಕರಣ ಶುಲ್ಕವು ಕೂಡ ಅಧಿಕವಾಗಿದ್ದು, 10,000 ರೂ.ಗಳಿಂದ ಆರಂಭಗೊಳ್ಳುತ್ತದೆ ಮತ್ತು ನಿಮ್ಮ ಹಿಂದಿನ ಸಾಲದ ದಾಖಲೆಗಳು ಶುದ್ಧವಾಗಿರಬೇಕು, ಅಂದರೆ ನೀವು ಆ ಸಾಲಗಳನ್ನು ಕಾಲಕ್ಕೆ ಸರಿಯಾಗಿ ಮರುಪಾವತಿಸಿರಬೇಕು. 90 ದಿನಗಳಿಗೂ ಅಧಿಕ ಕಾಲ ಅಥವಾ 30 ದಿನಗಳ ಕಾಲ ಮೂರು ಬಾರಿಗಿಂತ ಹೆಚ್ಚು ನೀವು ಸಾಲದ ಕಂತುಗಳನ್ನು ಬಾಕಿಯಿರಿಸಿಕೊಂಡಿದ್ದರೆ ನಿಮಗೆ ಎಕ್ಸಿಸ್ ಬ್ಯಾಂಕ್‌ನಲ್ಲಿ ಸಾಲ ಸಿಗುವುದಿಲ್ಲ. ಅಲ್ಲದೆ ಬ್ಯಾಂಕಿನ ಇಎಂಐ ಮನ್ನಾ ಕೊಡುಗೆ ಫ್ಲೋಟಿಂಗ್ ಇಂಟರೆಸ್ಟ್ ರೇಟ್ ಅಥವಾ ಚರ ಬಡ್ಡಿ ಆಧಾರದ ಮೇಲೆ ಮಾತ್ರ ಲಭ್ಯವಿದೆ.

  ಇಎಂಐ ಮನ್ನಾ ಕೊಡುಗೆ(ಎಕ್ಸಿಸ್ ಬ್ಯಾಂಕ್) 

ಸಾಲದ ಮೊತ್ತ                      30 ಲ.ರೂ.

ಬಡ್ಡಿದರ                             ಶೇ.8.35

ಮರುಪಾವತಿ ಅವಧಿ              20 ವರ್ಷಗಳು

ಪ್ರತಿ ಲ.ರೂ.ಗೆ ಇಎಂಐ          858.35 ರೂ.

ಮಾಸಿಕ ಕಂತು                    25,750.50 ರೂ.

ಕೊಡುಗೆ                           12 ಇಎಂಐಗಳ ಮನ್ನಾ

ಒಟ್ಟು ಉಳಿತಾಯ                3,09,006 ರೂ.

 ►ಕ್ಯಾಷ್‌ಬ್ಯಾಕ್ ಆಫರ್

  ‘‘ನೀವು ಪಾವತಿಸುವ ಪ್ರತಿ ಇಎಂಐ ಮೇಲೆ ಶೇ.1 ಕ್ಯಾಷ್‌ಬ್ಯಾಕ್ ಪಡೆಯಿರಿ’’ ಈ ಆಫರ್ ಆಕರ್ಷಕವಾಗಿ ಕಂಡು ಬರುತ್ತಿದೆಯೇ?ಐಸಿಐಸಿಐ ಬ್ಯಾಂಕ್ ಮುಂದಿಟ್ಟಿ ರುವ ಆಫರ್‌ನಲ್ಲಿ 36 ಇಎಂಐಗಳನ್ನು ಪಾವತಿಸಿದ ಬಳಿಕ ನಿಮಗೆ ನಿಮ್ಮ ಮೊದಲ ಕ್ಯಾಷ್‌ಬ್ಯಾಕ್ ದೊರೆಯುತ್ತದೆ ಮತ್ತು ನಂತರ ಪ್ರತಿ 12 ಇಎಂಐಗಳ ಪಾವತಿಯ ಬಳಿಕ ಕ್ಯಾಷ್‌ಬ್ಯಾಕ್ ದೊರೆಯುತ್ತಿರುತ್ತದೆ. ಸಾಲದ ಕನಿಷ್ಠ ಅವಧಿ 15 ವರ್ಷ ಮತ್ತು ಗರಿಷ್ಠ ಅವಧಿ 30 ವರ್ಷಗಳಾಗಿವೆ. ನೀವು ನಿಮ್ಮ ಕ್ಯಾಷ್‌ಬ್ಯಾಕ್‌ನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಜಮಾ ಪಡೆಯಬಹುದು ಅಥವಾ ಅದನ್ನು ಬಾಕಿಯಿರುವ ಅಸಲಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಇದರಲ್ಲಿ ಎರಡನೆಯ ಆಯ್ಕೆ ಒಳ್ಳೆಯದು, ಅದು ನಿಮ್ಮ ಬಾಕಿ ಅಸಲು ಮತ್ತು ಬಡ್ಡಿಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದ ನೀವು ಬೇಗನೆ ನಿಮ್ಮ ಸಾಲವನ್ನು ತೀರಿಸಬಹುದು ಮತ್ತು ಹಣವನ್ನು ಉಳಿಸಬಹುದು. ಆದರೆ ಈ ಲಾಭವನ್ನು ಪಡೆದುಕೊಳ್ಳಲು ನೀವು ಕನಿಷ್ಠ 15 ವರ್ಷಗಳವರೆಗೆ ಸಾಲಕ್ಕೆ ಅಂಟಿಕೊಂಡಿರಬೇಕಾಗುತ್ತದೆ.

 ►ಮಾರ್ಕ್ ಅಪ್ ಓವರ್ ಎಂಸಿಎಲ್‌ಆರ್ ಇಲ್ಲ

 ಕೆಲವು ಬ್ಯಾಂಕ್‌ಗಳು ಮಾರ್ಕ್ ಅಪ್ ಅಥವಾ ಸ್ಪ್ರೆಡ್ ಓವರ್ ಎಂಸಿಎಲ್‌ಆರ್ (ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್) ಅನ್ನು ವಿಧಿಸುವುದಿಲ್ಲ. ಇದು ರಿಯಾಯಿತಿಯಂತೆ ಕಂಡು ಬರಬಹುದು, ಆದರೆ ಎಂಸಿಎಲ್‌ಆರ್ ದರವನ್ನು ಮೊದಲು ಪರೀಕ್ಷಿಸಿಕೊಳ್ಳಿ. ಉದಾಹರಣೆಗೆ ಯೆಸ್ ಬ್ಯಾಂಕ್‌ನ ಎಂಸಿಎಲ್‌ಆರ್ ಶೇ.8.5ರಷ್ಟಿದ್ದು, ಇದು ಮಾರುಕಟ್ಟೆಯಲ್ಲಿನ ಶೇ.8.35-8.40ಕ್ಕೆ ಹೋಲಿಸಿದರೆ ಅಧಿಕವಾಗಿದೆ. ಹೀಗಾಗಿ 15 ಅಂಶಗಳ ಮಾರ್ಕ್-ಅಪ್ ಆಫರ್‌ನಲ್ಲಿ ಒಳಗೊಂಡಿ ರುತ್ತದೆ.

 ►ಶೂನ್ಯ ಬಡ್ಡಿದರ

ಶೂನ್ಯ ಬಡ್ಡಿದರದ ಕೊಡುಗೆಯು ಇತರ ಯಾವುದೇ ಶುಲ್ಕಗಳಿಲ್ಲದಿದ್ದರೆ ಪ್ರಾಮಾಣಿಕ ವಾಗಿರುತ್ತದೆ. ನೀವು 5,000 ರೂ.ಗಳ ಡೌನ್ ಪೇಮೆಂಟ್ ಮತ್ತು 500 ರೂ.ಸಂಸ್ಕರಣ ಶುಲ್ಕವನ್ನು ಪಾವತಿಸಿ ಆರು ತಿಂಗಳ ಇಎಂಐ ಆಧಾರದಲ್ಲಿ 20,000 ರೂ.ವೌಲ್ಯದ ಫೋನ್ ಖರೀದಿಸಿದರೆ ಅಂತಿಮವಾಗಿ ನೀವು ಶೇ.12.5 ಬಡ್ಡಿ ಪಾವತಿಸುತ್ತೀರಿ. ಶೇ.0 ಬಡ್ಡಿಯನ್ನಲ್ಲ.ಹೀಗಾಗಿ ಜಾಹೀರಾತಿನಲ್ಲಿರುವ ಬಡ್ಡಿದರದ ಬದಲಾಗಿ ಪರಿಣಾಮಕಾರಿ ಬಡ್ಡಿದರದತ್ತ ಗಮನ ನೀಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News