ಪ್ರಿ-ಕ್ವಾರ್ಟರ್ ಫೈನಲ್ ನತ್ತ ಇಂಗ್ಲೆಂಡ್ ಚಿತ್ತ

Update: 2017-10-10 18:34 GMT

ಕೋಲ್ಕತಾ, ಅ.10: ಚಿಲಿ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಆತ್ಮವಿಶ್ವಾಸ ಗಳಿಸಿರುವ ಇಂಗ್ಲೆಂಡ್ ತಂಡ ಬುಧವಾರ ನಡೆಯಲಿರುವ ಫಿಫಾ ವಿಶ್ವಕಪ್‌ನ ‘ಎಫ್’ ಗುಂಪಿನ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಮೆಕ್ಸಿಕೊ ತಂಡವನ್ನು ಮಣಿಸುವ ಮೂಲಕ ನಾಕೌಟ್ ಹಂತಕ್ಕೇರುವತ್ತ ಚಿತ್ತವಿರಿಸಿದೆ.

‘ಯಂಗ್ ಲಯನ್ಸ್’ ಎಂದೇ ಖ್ಯಾತಿ ಪಡೆದಿರುವ ಇಂಗ್ಲೆಂಡ್ ರವಿವಾರ ನಡೆದಿದ್ದ ಪಂದ್ಯದಲ್ಲಿ ಜಾಡನ್ ಸ್ಯಾಂಕೊ ಬಾರಿಸಿದ್ದ ಅವಳಿ ಗೋಲಿನ ನೆರವಿನಿಂದ ಚಿಲಿ ತಂಡವನ್ನು 4-0 ಅಂತರದಿಂದ ಮಣಿಸಿತ್ತು.

 ಮ್ಯಾಂಚೆಸ್ಟರ್ ಯುನೈಟೆಡ್‌ನ ಅಂಡರ್-18 ತಂಡದ ನಾಯಕ ಏಂಜೆಲ್ ಗೋಮ್ಸ್ 81ನೆ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಭರ್ಜರಿ ಗೆಲುವಿಗೆ ನೆರವಾಗಿದ್ದರು. 2005 ಹಾಗೂ 2011ರ ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸಿರುವ ಮೆಕ್ಸಿಕೊ ಏಷ್ಯನ್ ಅಂಡರ್-16 ಚಾಂಪಿಯನ್ ಇರಾಕ್ ವಿರುದ್ಧ 1-1 ರಿಂದ ಡ್ರಾ ಸಾಧಿಸಿ ಮಿಶ್ರಫಲ ಪಡೆದಿತ್ತು.

 ಚಿಲಿ-ಇರಾಕ್ ಹಣಾಹಣಿ: ಮೆಕ್ಸಿಕೊ ವಿರುದ್ಧ ಡ್ರಾ ಸಾಧಿಸಿರುವ ಇರಾಕ್ ತಂಡ ವಿಶ್ವಕಪ್‌ನ ‘ಎಫ್’ ಗುಂಪಿನ ತನ್ನ 2ನೆ ಪಂದ್ಯದಲ್ಲಿ ಚಿಲಿ ತಂಡವನ್ನು ಎದುರಿಸಲಿದೆ. ಅಂಡರ್-17 ವಿಶ್ವಕಪ್‌ನಲ್ಲಿ ಮೊದಲ ಬಾರಿ ಅಂಕ ಗಳಿಸಿರುವ ಇರಾಕ್ ತಂಡ ಚಿಲಿ ವಿರುದ್ಧ ಪ್ರಾಬಲ್ಯ ಸಾಧಿಸುವ ವಿಶ್ವಾಸದಲ್ಲಿದೆ. ಚಿಲಿ ತಂಡ ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 0-4 ರಿಂದ ಸೋತಿತ್ತು.

ಮೆಕ್ಸಿಕೊ ವಿರುದ್ಧ 16ನೆ ನಿಮಿಷದಲ್ಲಿ ಗೋಲು ಬಾರಿಸಿದ್ದ ಇರಾಕ್‌ನ ಮುಹಮ್ಮದ್ ದಾವೂದ್ 1-0 ಮುನ್ನಡೆ ಒದಗಿಸಿಕೊಟ್ಟಿದ್ದರು. ಆದರೆ, 61ನೆ ನಿಮಿಷದಲ್ಲಿ ಗೋಲು ಬಾರಿಸಿದ್ದ ರೊಬರ್ಟೊ ಡಿ ಲಾ ರೊಸಾ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು.

ಕ್ಯಾಲೆಡೊನಿಯ-ಹೊಂಡುರಾಸ್‌ಗೆ ಅಂಕ ಗಳಿಸುವ ಅವಕಾಶ: ಗುವಾಹಟಿಯಲ್ಲಿ ಬುಧವಾರ ವಿಶ್ವಕಪ್‌ನ ‘ಇ’ ಗುಂಪಿನ ಪಂದ್ಯವನ್ನಾಡಲಿರುವ ಫುಟ್ಬಾಲ್ ಶಿಶುಗಳಾದ ನ್ಯೂ ಕ್ಯಾಲೆಡೊನಿಯಾ ಹಾಗೂ ಹೊಂಡುರಾಸ್‌ಗೆ ಅಂಕಗಳಿಸುವ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News