ನಂಬಿದ ಸಿದ್ಧಾಂತಕ್ಕಾಗಿ ಬದುಕು ಸವೆಸಿದ ಜೆ.ಪಿ.

Update: 2017-10-10 18:35 GMT

ಇತ್ತೀಚಿನ ದಿನಗಳಲ್ಲಿ ಅಧಿಕಾರವನ್ನು ಎಲ್ಲಾ ಕಾಲದಲ್ಲಿಯೂ ತನ್ನದಾಗಿಸಿಕೊಳ್ಳಬೇಕೆಂಬ ಹಂಬಲದಿಂದ ತಂತ್ರಗಾರಿಕೆಯನ್ನು ರೂಪಿಸುತ್ತಲೇ ವರ್ಷದ 365 ದಿನ, ದಿನದ 24 ಗಂಟೆಯೂ ರಾಜಕಾರಣದಲ್ಲಿಯೇ ಮುಳುಗಿರುವ ಜನರು ನಮ್ಮ ಮುಂದೆ ದಿನನಿತ್ಯ ಕಾಣುತ್ತಿದ್ದಾರೆ. ಸಣ್ಣ ಪುಟ್ಟ ಹೋರಾಟಗಳನ್ನು ಮಾಡಿ ಅದರಲ್ಲಿಯೂ ಸ್ವಾರ್ಥವನ್ನು ತುಂಬಿಸಿಕೊಂಡು ಮಹಾನ್ ಸಾಧನೆ ಮಾಡಿದವರ ರೀತಿಯಲ್ಲಿ ತಮ್ಮನ್ನು ತಾವೇ ವೈಭವೀಕರಿಸಿಕೊಳ್ಳುವ ನಮ್ಮ ನಾಯಕರುಗಳ ನಡುವೆ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ಬದುಕು, ಹೋರಾಟ ಮತ್ತು ವ್ಯಕ್ತಿತ್ವವನ್ನು ಗಮನಿಸಿದಾಗ ಇತ್ತೀಚಿನ ರಾಜಕೀಯ ವ್ಯವಸ್ಥೆಯ ಬಗ್ಗೆ ನಾಚಿಕೆಯನ್ನುಂಟು ಮಾಡುತ್ತಿದೆ. ತಾನು ಅಧಿಕಾರಕ್ಕೆ ಬರಬೇಕು, ತನ್ನ ನಂತರ ತನ್ನ ಕುಟುಂಬದವರು ಅಧಿಕಾರಕ್ಕೆ ಬರಬೇಕು, ಅಧಿಕಾರಕ್ಕೆ ಬಂದ ನಂತರ ಭೋಗದ ಬದುಕನ್ನು ಎಲ್ಲಾ ಕಾಲದಲ್ಲಿಯೂ ಅನುಭವಿಸುತ್ತಾ ತೋರಿಕೆಯ ನಿಸ್ವಾರ್ಥ ಮುಖವಾಡವನ್ನು ಧರಿಸಿರುವವರನ್ನೇ ಕಾಣುತ್ತಿದ್ದೇವೆ. ಆದರೆ ಅತೀ ಸಣ್ಣ ವಯಸ್ಸಿನಲ್ಲಿಯೇ ದೇಶಸೇವೆಗೆ ತಮ್ಮನ್ನು ತೊಡಗಿಸಿಕೊಂಡು ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿ ಹಲವಾರು ಬಾರಿ ಸೆರೆಮನೆ ವಾಸವನ್ನು ಅನುಭವಿಸಿ, ದೇಶಸೇವೆಯ ಕಾರಣಕ್ಕೆ ತಮ್ಮ ಸಾಂಸಾರಿಕ ಬದುಕನ್ನು ತ್ಯಾಗ ಮಾಡಿದಂತಹ ತ್ಯಾಗ ಪುರುಷ ಜೆಪಿಯವರು. ತಮ್ಮ ಬದುಕಿನ ಉದ್ದಕ್ಕೂ ವಿಶ್ರಾಂತಿ ಇಲ್ಲದೆ ಹೋರಾಟವನ್ನು ಮಾಡಿ ಯಾವುದೇ ರೀತಿಯ ಸಣ್ಣ ಅಧಿಕಾರವನ್ನು ಬಯಸದೆ ನಿಸ್ವಾರ್ಥದಿಂದ ಬದುಕಿದವರು. ಜೆ.ಪಿ ಮನಸ್ಸು ಮಾಡಿದ್ದರೆ ಈ ದೇಶದ ಅತ್ಯುನ್ನತವಾದಂತಹ ಅನೇಕ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳಬಹುದಿತ್ತು, ಸುಖದ ಜೀವನ ನಡೆಸಬಹುದಿತ್ತು. ಜೆ.ಪಿ ತಮ್ಮ ಬದುಕಿನಲ್ಲಿ ರಾಜೀ ಮಾಡಿಕೊಂಡಿದ್ದರೆ ಸೆರೆಮನೆ ವಾಸದಿಂದ ದೂರವಿರಬಹುದಿತ್ತು. ಆದರೆ ತಾವು ನಂಬಿದ ಸಿದ್ಧಾಂತ ಮತ್ತು ವಿಚಾರಗಳಿಗಾಗಿ ಜೆ.ಪಿ ತಮ್ಮ ಬದುಕನ್ನು ಸವೆಸಿದರು.

1902ರ ಅ.11ರಂದು ಜನಿಸಿದ ಜೆ.ಪಿ ಅವರು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗಿ ಅಲ್ಲಿ ಕೂಲಿ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಭಾರತಕ್ಕೆ ಮರಳುವ ಸಂದರ್ಭದಲ್ಲಿ ಇವರ ಧರ್ಮಪತ್ನಿ ಪ್ರಭಾವತಿ ಅವರು ಮಹಾತ್ಮಾ ಗಾಂಧೀಜಿಯವರಿಂದ ಸನ್ಯಾಸದ ದೀಕ್ಷೆಯನ್ನು ಸ್ವೀಕರಿಸಿರುತ್ತಾರೆ. ಜೆ.ಪಿ. ಅವರು ಈ ವಿಚಾರದಲ್ಲಿ ಯಾವುದೇ ತಕರಾರು ತೆಗೆಯದೆ ಬದುಕಿನ ಉದ್ದಕ್ಕೂ ಅದೇ ರೀತಿಯಲ್ಲಿ ಬದುಕಿದರು. 1930ರಲ್ಲಿ ನಡೆದ ಹೋರಾಟ, 1934ರಲ್ಲಿ ನಡೆದಂತಹ ಚಳವಳಿ, 1940ರಲ್ಲಿ ಸೆರೆಮನೆ ವಾಸ, ವಿಶೇಷವಾಗಿ 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭೂಗತರಾಗಿದ್ದು, ಗಾಂಧೀಜಿಯವರ ಚಳವಳಿಯನ್ನು ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಮಾಡುತ್ತಾ ಅಂತಿಮವಾಗಿ ಬ್ರಿಟಿಷರ ಕೈಗೆ ಸಿಲುಕಿ ಸೆರೆಮನೆಯಲ್ಲಿ ಜೆಪಿಯವರು ಅನುಭವಿಸಿದ ಶಿಕ್ಷೆಯ ಪ್ರಮಾಣ ಘೋರವಾದದ್ದು. ದೇಶ ಸ್ವಾತಂತ್ರವಾದ ನಂತರ ಕಾರ್ಮಿಕರ ಹಿತಕ್ಕಾಗಿ ಹೋರಾಟವನ್ನು ಮಾಡಿದ್ದು ಹಾಗೂ ವಿಶೇಷವಾಗಿ ಅಂತಾರಾಷ್ಟ್ರೀಯ ಮಟ್ಟದ ಅನೇಕ ಸಮಸ್ಯೆಗಳಿಗೆ ಇವರು ಸ್ಪಂದಿಸಿದ್ದು ಸ್ಮರಿಸಲೇಬೇಕಾಗುತ್ತದೆ.

ಆಚಾರ್ಯ ವಿನೋಬಾ ಬಾವೆ ಅವರು, ನಡೆಸಿದಂತಹ ಭೂದಾನ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಿಹಾರದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಎಕರೆ ಭೂಮಿಯನ್ನು ಭೂ ಮಾಲಕರಿಂದ ಪಡೆದು ಭೂಮಿರಹಿತರಿಗೆ ಕೊಡಿಸಿದಂತಹ ಸರ್ವೋದಯದ ಕೆಲಸ ಅದ್ಭುತವಾದದ್ದು. ಚಂಬಲ್ ಕಣಿವೆಯಲ್ಲಿ ಡಕಾಯಿತರ ಮನಪರಿವರ್ತನೆ ಮಾಡಿ ಸುಮಾರು 500 ಜನ ಡಕಾಯಿತರನ್ನು ಸರಕಾರಕ್ಕೆ ಶರಣಾಗುವಂತೆ ಮಾಡಿ ಅವರಿಗೆ ಹೊಸ ಬದುಕನ್ನು ಕಟ್ಟಿಕೊಟ್ಟು ಮಧ್ಯಪ್ರದೇಶ ಮತ್ತು ಬಿಹಾರದ ಭಾಗಗಳಲ್ಲಿ ಇದ್ದಂತಹ ಡಕಾಯಿತರ ಸಮಸ್ಯೆಯನ್ನು ಪರಿಹರಿಸಿಕೊಟ್ಟಂತಹ ಕೀರ್ತಿ ಇವರಿಗೆ ಸಲ್ಲುತ್ತದೆ. ಅದಕ್ಕಾಗಿ ಅವರನ್ನು ಚಂಬಲ್‌ಗೆ ಬೆಳಕು ಕೊಟ್ಟ ವ್ಯಕ್ತಿ ಎಂದು ಚರಿತ್ರೆಯಲ್ಲಿ ದಾಖಲಿಸಲಾಗಿದೆ. ಜೆ.ಪಿ. ಅವರು 1972ರಿಂದ 1975ರ ತನಕ ದೇಶದಲ್ಲಿ ವಂಶ ಪಾರಂಪರ್ಯ ಆಡಳಿತದ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ನಡೆಸಿದಂತಹ ವಿದ್ಯಾರ್ಥಿ ಯುವಜನರ ಹೋರಾಟವನ್ನು ಎರಡನೆ ಸ್ವಾತಂತ್ರ ಸಂಗ್ರಾಮವೆಂದೇ ಕರೆಯಲಾಗುತ್ತದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನು ಅನುಭವಿಸಿ ತಮ್ಮ ಆರೋಗ್ಯದ ಮೇಲೆ ಅದರಿಂದಾದಂತಹ ಕೆಟ್ಟ ಪರಿಣಾಮವನ್ನೂ ಲೆಕ್ಕಿಸದೆ ಹೋರಾಟ ಮಾಡಿದಂತಹ ಮಹಾನ್ ವ್ಯಕ್ತಿತ್ವ ಜೆ.ಪಿ. ಅವರದು.

ಅವರು ಸಮಾಜದಲ್ಲಿನ ಅಸಮಾನತೆಯ ವಿರುದ್ಧ ಹೋರಾಟ ನಡೆಸಿದ್ದಾರೆ. ಅಧಿಕಾರ ವಿಕೇಂದ್ರೀಕರಣ ಇವರ ಮತ್ತೊಂದು ಕನಸಾಗಿತ್ತು. ದೇಶದಲ್ಲಿ ಕೇವಲ ಸರಕಾರಗಳು ಬದಲಾದರೆ ಸಾಲದು ಸರಕಾರವನ್ನು ನಡೆಸುವ ಜನರ ಮನಸ್ಸುಗಳು ಬದಲಾಗಬೇಕು ಎಂದು ಸದಾ ಕಾಲ ಪ್ರತಿಪಾದಿಸುತ್ತಿದ್ದರು. ಶಿಕ್ಷಣ ಕ್ಷೇತ್ರದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ತಮ್ಮದೇ ಆದ ಮಾರ್ಗೋಪಾಯಗಳನ್ನು ಸರಕಾರಗಳಿಗೆ ಸೂಚಿಸಿದ್ದಾರೆ. ಹಲವಾರು ದಶಕಗಳ ಕಾಲ ನಿರಂತರವಾಗಿ ದೇಶಸೇವೆಯನ್ನು ಮಾಡಿದ ಈ ಹೋರಾಟಗಾರ ಪ್ರತಿಯಾಗಿ ಏನನ್ನೂ ಪಡೆಯಲಿಲ್ಲ. ಆ ನಿಟ್ಟಿನಲ್ಲಿ ಕ್ಷಣಮಾತ್ರವೂ ಯೋಚಿಸಲಿಲ್ಲ. ಹೀಗಾಗಿ ತ್ಯಾಗದ ವಿಚಾರದಲ್ಲಿ ಇವರಿಗೆ ಸರಿಸಮಾನವಾದ ವ್ಯಕ್ತಿ ಮತ್ತೊಬ್ಬರಿಲ್ಲ. ಕಮ್ಯುನಿಸ್ಟ್ ಸಿದ್ಧಾಂತಗಳಿಗೆ ಪ್ರಭಾವಿತರಾಗಿ ನಂತರ ಸಮಾಜವಾದದಲ್ಲಿ ನಂಬಿಕೆಯನ್ನಿಟ್ಟು ಅಂತಿಮವಾಗಿ ಗಾಂಧೀವಾದವೇ ಸರಿಯಾದ ಮಾರ್ಗವೆಂದು ಗಾಂಧೀಜಿಯವರ ಪ್ರೀತಿಯ ಅನುಯಾಯಿಯಾಗಿ ಅವರ ಎಲ್ಲ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

1972ರಿಂದ 1975ರ ಅವಧಿಯಲ್ಲಿ ದೇಶದಲ್ಲಿ ನಡೆದಂತಹ ಅನೇಕ ಜನಪರ ಹೋರಾಟಗಳಲ್ಲಿ ಅದರಲ್ಲೂ ವಿಶೇಷವಾಗಿ ಜೆಪಿ ಅವರು ಪ್ರಸ್ತಾಪಿಸಿದ ವಿಚಾರಗಳಿಗೆ ಪೂರಕವಾಗಿ ಹೋರಾಟ ಮಾಡಿದ ದೇಶದ ಅಂದಿನ ಯುವನಾಯಕರು ಇಂದು ದೊಡ್ಡ ದೊಡ್ಡ ನಾಯಕರಾಗಿದ್ದಾರೆ. ವ್ಯತ್ಯಾಸವೇನು ಎಂದರೆ ಅವರು ಅಂದು ಜೆಪಿ ಅವರ ಜೊತೆಯಲ್ಲಿದ್ದು ಪ್ರತಿಪಾದಿಸುತ್ತಿದ್ದ ಎಲ್ಲ ವಿಚಾರಗಳಿಗೆ ತದ್ವಿರುದ್ಧವಾಗಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಅಧಿಕಾರಕ್ಕಾಗಿ ನಾಚಿಕೆ ಇಲ್ಲದೆ ರಾಜಿಯಾಗುತ್ತಿದ್ದಾರೆ. ಚುನಾವಣೆಯ ಗೆಲುವುಗಾಗಿ ಭ್ರಷ್ಟಾಚಾರವನ್ನು ಮಾಡುತ್ತಿದ್ದಾರೆ. ಸ್ವಾರ್ಥಕ್ಕಾಗಿ ತಮ್ಮ ಕುಟುಂಬದವರನ್ನು ಅಧಿಕಾರ ಸ್ಥಾನದಲ್ಲಿ ಕೂಡಿಸುತ್ತಿದ್ದಾರೆ. ಸರಳತೆಯ ಪದವನ್ನು ಮರೆತು ಭವ್ಯ ಬಂಗಲೆಗಳಲ್ಲಿ, ದುಬಾರಿ ಕಾರುಗಳಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ.

ದೇಶದಲ್ಲಿ ಏನೂ ಸಾಧನೆ ಮಾಡದ ಹಲವಾರು ಜನರಿಗೆ ಹಲವಾರು ರೀತಿಯ ಸ್ಮಾರಕಗಳು, ಭವನಗಳು ನಿರ್ಮಾಣವಾಗುತ್ತಿವೆ. ಆದರೆ ಗಾಂಧೀಜಿಯ ನಂತರ ಅಷ್ಟೇ ಎತ್ತರಕ್ಕೆ ನಿಲ್ಲಬಲ್ಲ ನಿಸ್ವಾರ್ಥ ಹೋರಾಟಗಾರ ತ್ಯಾಗಜೀವಿ ಜೆ.ಪಿ. ಅವರ ವ್ಯಕ್ತಿತ್ವಕ್ಕೆ ಯಾವ ರಾಜ್ಯವಾಗಲೀ ಅಥವಾ ಯಾವುದೇ ಕೇಂದ್ರ ಸರಕಾರವಾಗಲೀ ಕೊಡಬೇಕಾದಷ್ಟು ಗೌರವವನ್ನು ನೀಡದಿರುವುದು ಖೇದನೀಯ.

Writer - ಕೆ. ಎಸ್. ನಾಗರಾಜ್

contributor

Editor - ಕೆ. ಎಸ್. ನಾಗರಾಜ್

contributor

Similar News