ಅನಂತ ಮೂರ್ತಿ ಕಣ್ಣಲ್ಲಿ ಕಾರಂತರು

Update: 2017-10-10 18:40 GMT

ಭಾಗ-2 

ಐತಾಳರ ಎರಡನೆ ಸಂಬಂಧದ ಮಾವ ಹೇಳುವುದೂ ಅದೇ: ‘‘ಇನ್ನೇನು ಈಗಿನ ದಿನಗಳಲ್ಲಿ ಇಂಗ್ಲಿಷ್ ನಾಲ್ಕು ಅಕ್ಷರವಾದರೂ ಬರುವವರಿಗೆ ಭರಾಮು, ಈ ಅಷ್ಟೋತ್ತರ, ಅಧ್ಯಯನ ಕಲಿತವರಿಗೆ ಬರಲಾರದು’’(149). ಐತಾಳರಿಗೂ ಲಚ್ಚ ತನ್ನಂತೆ ವೈದಿಕನಾಗುವುದು ಬೇಡ. ಲೌಕಿಕನಾಗಬೇಕು ಎಂಬ ಹಂಬಲದಲ್ಲೇ ಬದಲಾಗುತ್ತಿರುವ ಕಾಲದ ಪ್ರಭಾವವಿದೆ. ಲೌಕಿಕ ಶೀನಮಯ್ಯ ಮಯ್ಯರಾದದ್ದನ್ನು ಬಹಳ ನೋಡಿದ್ದಾನೆ. ಊರಿನ ಗುರಿಕಾರರಿಂದ ಮದುವೆ ಮನೆಯಲ್ಲಿ ಅವಮಾನಿತನಾದ ಐತಾಳ ಅಂತು ಊರಿನ ಗುರಿಕಾರರ ಕೈಯಲ್ಲಿ ಇದೊಂದು ಶ್ರಾದ್ದದ ಬ್ರಾಹ್ಮಣ ಅನಿಸಿಕೊಳ್ಳದಿದ್ದರೆ ಸಾಕು’’ ಎಂದು ಆಸೆ ಪಡುತ್ತಾನೆ.(153) ನಿಷ್ಠುರ ದುಡಿಮೆಯಿಂದ ನಿವೃತ್ತನಾಗುವ ಅಪೇಕ್ಷೆ ಲಚ್ಚನನ್ನು ಹಿಂಡಗಲಿದ ಪುಂಡನನ್ನಾಗಿ ಮಾಡುತ್ತದೆ. ಸ್ವತಃ ಕಾರಂತರೇ ಲೇಖಕರಾದದ್ದೂ ಹಳ್ಳಿಯ ವಿರಾಮವಿಲ್ಲದ ದುಡಿಮೆಯ ಬದುಕಿನ ಅನಿವಾರ್ಯತೆಗಳಿಂದ ಮುಕ್ತರಾದದ್ದರಿಂದಲೂ ಇರಬಹುದು ಎಂಬುದನ್ನು ನೆನೆದಾಗ ಈ ದಿಕ್ಕಿನಲ್ಲಿ ಲೇಖಕರು ತೋರಿಸುವ ದ್ವಂದ್ವಗಳು ಅರ್ಥಪೂರ್ಣವಾಗುತ್ತವೆ. ಕನ್ನಡದ ಯಾವ ಲೇಖಕ, ತನ್ನ ವೈಚಾರಿಕತೆಯಲ್ಲಿ ಬದಲಾವಣೆ ಮತ್ತು ಪ್ರಗತಿಯ ಬೆಂಬಲಿಗನಾಗಿದ್ದರೂ ಸಹ, ತನ್ನ ಕಲಾ ಕೃತಿಯಲ್ಲಿ ಬದಲಾವಣೆ ಬಗ್ಗೆ ನಿಸ್ಸಂದಿಗ್ಧ ಧೋರಣೆ ತಾಳಿದ್ದಾನೆ?

***

ತನ್ನ ಸಹಜ ವೈಯಕ್ತಿಕ ಮೂರ್ತ ಅಸ್ತಿತ್ವವನ್ನು ಉಳಿಸಿಕೊಂಡೇ ತತ್ತ್ವವನ್ನೂ ಹುಟ್ಟುಹಾಕಬಲ್ಲ ಪಾತ್ರ ರಚನೆಗಿಂತ ಹೆಚ್ಚಾಗಿ ಕಾರಂತರ ಒಲವಿರುವುದು ಇನ್ನೂ ಮೊಳಕೆಯಂತಿರುವ ಪ್ರಜ್ಞೆಯನ್ನು ಪಡೆದ ಪಾತ್ರಗಳ ರಚನೆಯಲ್ಲಿ ಐತಾಳ, ಸರಸೋತಿ, ಪಾರೋತಿ ಇಂಥವರು. ಈ ಪ್ರಜ್ಞೆ ಬದುಕಿನ ಪ್ರಯಾಸದಲ್ಲಿ ನೆನೆದು ಬೆಂದು ಹುಟ್ಟಿದ್ದು. ಬೇಸಾಯದಿಂದ ನಿಯಂತ್ರಿತವಾದ ಸಂಸ್ಕೃತಿಯಲ್ಲಿ(ಅಂದರೆ ಅತ್ಯಂತ ಕಟ್ಟುನಿಟ್ಟಾದ ಇಕ್ಕಟ್ಟಿನಲ್ಲಿ) ಏನೇನು ಎಷ್ಟೆಷ್ಟು ಅರಳೀತು ಎಂದು ನೋಡುವುದು ಬದುಕಿನಲ್ಲಿ ಯಾವುದಕ್ಕೆಷ್ಟು ಬೆಲೆ, ಸಫಲತೆಯೆಂದರೇನು ಎಂಬ ಪ್ರಶ್ನೆಗಳಿಗೆ ನಿಕಷಪ್ರಾಯವಾಗುತ್ತದೆ.

ನಿರುಪಯೋಗವಾದಕ್ಕೆ ಎಡೆಯೇ ಇಲ್ಲದ, ಸಂಯಮ ಮತ್ತು ಮಿತ ವ್ಯಯದ ಜೀವದ ಕ್ರಮ ಅನಿವಾರ್ಯ ಎನಿಸುವ ಬೇಸಾಯ ಮೂಲ ಸಂಸ್ಕೃತಿಯಲ್ಲಿ ಸೌಂದರ್ಯಕ್ಕೆ ಜಾಗವಿಲ್ಲವೆಂದಲ್ಲ. ಆದರೆ ಈ ಸೌಂದರ್ಯ ನಿರುದ್ದಿಶ್ಯವಲ್ಲ. ನಿರುದ್ದಿಶ್ಯವಾದಕ್ಕೆ ಎಡೆಯೇ ಇಲ್ಲದಲ್ಲಿ ಮೆಟಾಫಿಸಿಕ್ಸ್ ಇಲ್ಲ. ಕೇವಲ ಪ್ರೇಮದ ಅಥವಾ ಪ್ರಕೃತಿಯ ಉಪಾಸಕರಿರುವುದಿಲ್ಲ. ಇಂಥಲ್ಲಿ ಈವಿಲ್ ಕೂಡ ಸೃಷ್ಟಿಯಲ್ಲೇ ಅಂತರ್ಗತವಾಗಿರುವ ಒಂದು ತತ್ತ್ವವೆಂದು ಅನಿಸುವುದಿಲ್ಲ. ಯಾವುದಕ್ಕೂ ಪುರುಸೊತ್ತು ಇಲ್ಲವೆಂದು ಬದುಕುವ ಈ ಜನ ಸಾವು ನೋವು ಯಾತನೆಗಳನ್ನು ವಿರೋಧಿಸಿ ಹಣೆ ಚಚ್ಚಿಕೊಳ್ಳುವುದಿಲ್ಲ. ಬಂದದ್ದನ್ನು ಒಪ್ಪಿಕೊಂಡು ಬಿಡುತ್ತಾರೆ. ಸರಸೋತಿ ಹೆಣ್ಣಿನ ಪಾಡಿನ ಬಗ್ಗೆ ಹೇಳುವುದು ಕೇಳಿ ‘‘ನೀನು ಏನೇ ಹೇಳು ಮಗು ಈ ಹೆಣ್ಣಿನ ಜನ್ಮ ಎಂಬುವುದು ಹಿಂದೆ ಯಾವ ಯಾವುದೋ ಪಾಪ ಮಾಡಿ ಬಂದದ್ದು. ಇದು ನರಕ ಅನುಭವಿಸಲಿಕ್ಕೇ ಬಂದ ಜನ್ಮ; ಸುಖಕಲ್ಲ’’ (243, 244) ಸಾವಿನ ಬಗ್ಗೆ ಅವಳು ಹೇಳುವುದು ಕೇಳಿ ‘‘ಅವನದ್ದೇ ಏನೋ ಒಂದು ಲೆಕ್ಕವಿರಬೇಕು. ನಮಗೆ ಅದೆಲ್ಲ ತಿಳಿಯುತ್ತದೆಯೇ?(247)’’ ಈ ಮಾತುಗಳು ತತ್ತ್ವವಾಗಿ ಸತ್ಯವೇ ಎಂಬ ಪ್ರಶ್ನೆ ಹುಟ್ಟುವಂತೆ ಬರೆಯುವುದೇ ಇಲ್ಲ. ಹೀಗೋ ಇಂತಹ ಜನ ತಮ್ಮ ಜೀವನ ಕ್ರಮದಿಂದಾಗಿ ಹೀಗೆ ಭಾವಿಸಿದರು ಎಂದು ಮಾತ್ರ ಹೇಳುತ್ತಾರೆ.

ಕಾರಂತರು ಹೀಗೆ ತಮ್ಮ ಪಾತ್ರಗಳಿಗೆ ಬದ್ಧರಾಗಿ ಬರೆಯುತ್ತಾರೆಂಬುದು ಈ ಪಾತ್ರಗಳು ತಾವು ಕಂಡುಂಡ ಜೀವನಕ್ಕೆ ಬದ್ಧವಾಗಿದ್ದು, ಪಡೆದಷ್ಟನ್ನೇ ಚಿಂತಿಸುತ್ತಾರೆಂಬುದು ಕಾರಂತರ ಬರವಣಿಗೆಯ ದೊಡ್ಡ ಗುಣವೆಂದು ಕಾಣದ ವಿಮರ್ಶಕನೇ ಇಲ್ಲ. ಸ್ವಯಂಪೂರ್ಣವೆನ್ನಿಸುವ ಈ ಪ್ರಪಂಚಕ್ಕೆ ತಲೆಬಾಗಿ ಕಾರಂತರ ಪಾತ್ರಗಳು ಬದುಕುತ್ತಿರಬಹುದು. ಆದರೂ ಪಾರೋತಿಯದು ಯಾಕೆ ಬರಡು ಜೀವನವಾಗಬೇಕು? ಸರಸೋತಿ ಯಾಕೆ ವಿಧವೆಯಾಗಿ ಬದುಕಬೇಕು? ನಾಗವೇಣಿಗೆ ಬೇರೊಂದು ಬದುಕೇ ಸಾಧ್ಯವಿಲ್ಲವೇ? ಐತಾಳಗೇಕೆ ಮನೆಗೆ ಹೆಂಚು ಹೊದೆಸುವ ಹುಚ್ಚು ಮರು ಮದುವೆಯ ಆಸೆ. ಮಯ್ಯನನ್ನು ಮೀರಿಸಬೇಕೆಂಬ ಛಲ. ಮಗನನ್ನು ವಕೀಲನನ್ನಾಗಿ ಮಾಡಿಸಬೇಕೆಂಬ ಹಂಬಲಗಳು ಹುಟ್ಟಬೇಕು? ಅವನ ಆಸೆಯ ಹಿಂದಿರುವ ಆಮಿಷಗಳು ಲಚ್ಚನ ಪೇಟೆ ಜೀವನದಲ್ಲಿ ವ್ಯಕ್ತವಾಗುವುದು ಸಹಜವಲ್ಲವೇ? ಲಚ್ಚನನ್ನು ಕಾರಂತರು ಕೇವಲ ಸ್ವಾರ್ಥಿಯೆಂದೂ ಪರೋಪಕಾರಿಯಲ್ಲೆಂದೂ ಕಂಡರು ಸಹ. ಅವನನ್ನು ಕಾಡುವ ಆಮಿಷ ಜೀವನಕ್ಕೆ ಮೂಲಭೂತವಾದ ಎಲ್ಲರಲ್ಲೂ ಅಡಗಿರಬಹುದಾದ ಅಂಶವಲ್ಲವೇ?

ಈ ಪ್ರಶ್ನೆಗಳು ಕಾದಂಬರಿಯಲ್ಲಿ ಇಣುಕುತ್ತವೆ. ಅಂದರೆ ಕಾರಂತರ ಆಶಯವನ್ನೂ ಮೀರಿ ಇಣುಕುತ್ತವೆ. ಉಸಿರಾಡುವ ಎಲ್ಲ ಕೃತಿಗಳಲ್ಲಿರಬೇಕಾದ ಗುಣವಿದು. ಬಂದಿರುವ ಬದುಕನ್ನು ಜೀವಿಸದ ಹೊರತು ಬೇರೆ ದಿಕ್ಕಿಲ್ಲವೆಂಬ ಪಾತ್ರಗಳು ಅದೃಷ್ಟವನ್ನು ಕೆಣಕದೇ ಇರಬಹುದು. ಕೆಣಕಬಲ್ಲವರು ಚೋಮನಂಥವರು. ಹಿಂದೆ ನಾನು ಹೇಳಿದಂತೆ ತತ್ತ್ವ ಹುಟ್ಟು ಹಾಕಬಲ್ಲ ವಿಶೇಷ ಅಸ್ತಿತ್ವವವುಳ್ಳವರು. ವೈದಿಕ ವೃತ್ತಿ ಮತ್ತು ಬೇಸಾಯದ ಸಂಸ್ಕೃತಿಯ ಬಿರುಕಿನಲ್ಲಿ ಕಣ್ಣೊಡೆದ ಲಚ್ಚ ಇಂಥವನಾಗಿದ್ದರೆ? ಹಿರಿಯರ ಆಶಯದ ಫಲವೂ ಅವನಾದ್ದರಿಂದ ಅವನು ಬರೀ ಒಬ್ಬ ಕೆಡುಕನಾಗದೇ ಇರಬಹುದಿತ್ತು; ಅವನ ಸವಾಲು ಮೆಟಾಫಿಸಿಕಲ್ ಆಯಾಮ ಪಡೆಯಬಹುದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ