ರಾಮಮನೋಹರ ಲೋಹಿಯಾ - ಭಾರತ ಕಂಡ ಶ್ರೇಷ್ಠ ಚಿಂತಕ

Update: 2017-10-12 05:41 GMT

ಭಾಗ-1

ಸಮಾಜವಾದಿ ಚಳವಳಿಯ ರೂವಾರಿ ಡಾ. ರಾಮ ಮನೋಹರ ಲೋಹಿಯಾ ನಿಧನರಾಗಿ ಇಂದಿಗೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಈ ಮಹಾನ್ ಚೇತನಕ್ಕೊಂದು ಅಕ್ಷರ ನಮನ. 

ಐವತ್ತು ವರ್ಷಗಳ ನಂತರವೂ ರಾಮಮನೋಹರ ಲೋಹಿಯಾ ಭಾರತದ ಅಸ್ಮಿತೆಯಲ್ಲಿ ಇನ್ನೂ ಜೀವಂತವಾಗಿದ್ದಾರೆ. ಅದಕ್ಕೆ ಬಹುಮುಖ್ಯ ಕಾರಣ, ಅವರ ಬದುಕು ಮತ್ತು ಚಿಂತನೆಗಳು. ಯಾವುದೇ ಸಿದ್ಧಾಂತಗಳನ್ನು ಹೊರರಾಷ್ಟ್ರಗಳಿಂದ ಆಮದು ಮಾಡಿಕೊಳ್ಳದೆ ಭಾರತದ ನೆಲದ ಮೇಲಿನ ಅಪ್ಪಟ ಭಾರತೀಯ ಸಮಾಜವಾದವನ್ನು ರೂಪಿಸಿದ ಏಕೈಕ ಮೇಧಾವಿ ಲೋಹಿಯಾ.

ಬಂಡವಾಳ ಶಾಹಿ -ಕಮ್ಯುನಿಸ್ಟ್ ಇಬ್ಬರಿಂದಲೂ ದೂರ

ಭಾರತದ ಬುದ್ಧಿಜೀವಿಗಳು ಹೊರ ದೇಶದ ಒಂದಲ್ಲ ಒಂದು ಸಿದ್ಧಾಂತ ವನ್ನು ಭಾರತದ ನೆಲದ ಮೇಲೆ ನಾಟಿ ಮಾಡಿಸಿ ಆ ಪರಕೀಯ ಸಿದ್ಧಾಂತ ಗಳಲ್ಲಿ ಭಾರತದ ಅಭ್ಯುದಯ ಬಯಸಿದ್ದರು. ದೊಡ್ಡ ಕೈಗಾರಿಕೆಗಳು, ದೊಡ್ಡ ಅಣೆಕಟ್ಟುಗಳ ಮೂಲಕ ಮಾತ್ರ ಭಾರತದ ಅಭಿವೃದ್ಧಿ ಸಾಧ್ಯ ಎಂದು ನಂಬಿದ್ದ ಕಾಲದಲ್ಲಿ ಭಾರತಕ್ಕೆ ಸರಿ ಹೊಂದುವ ಏಕೈಕ ಸಿದ್ಧಾಂತ ಸಮಾಜವಾದ ಎಂಬುದನ್ನು ಸಾದರಪಡಿಸಿದವರು ಲೋಹಿಯಾ.

 ಬಂಡವಾಳಶಾಹಿಯ ಆಷಾಢಭೂತಿ ನೀತಿ-ಸಂಹಿತೆಗಳನ್ನು ಎತ್ತಿ ತೋರಿಸಿದ ಲೋಹಿಯಾ ಅಷ್ಟೇ ಪ್ರಖರವಾಗಿ ಮಾರ್ಕ್ಸ್ ಸಿದ್ಧಾಂತದ ನಿರುಪಯುಕ್ತತೆಯನ್ನು ಎಳೆ-ಎಳೆಯಾಗಿ ಬಿಡಿಸಿ ಇವೆರಡು ಭಾರತಕ್ಕೆ ಸರಿ ಹೊಂದುವ ರಾಜನೀತಿಗಳಲ್ಲ ಎಂಬುದನ್ನು ಸಾಕ್ಷಾತ್ಕರಿಸಿದರು. ಎರಡೂ ಸಿದ್ಧಾಂತಗಳ ಭೂಮಿಕೆ ಒಂದೇ ಎತ್ತಿ ತೋರಿಸಿದ ಲೋಹಿಯಾ ಮುಂದುವರಿದ ಸನ್ನಿವೇಶದಲ್ಲಿ ದೊಡ್ಡ ಕಾರ್ಖಾನೆಗಳ ಅಸಾಧ್ಯತೆಯನ್ನು ವಿವರಿಸಿದರು.

ರಷ್ಯಾ, ಅಮೆರಿಕದ ಜನಸಾಂದ್ರತೆ ಚದರ ಮೈಲಿಗೆ 50 ಇದ್ದರೆ ಭಾರತದ ಜನಸಾಂದ್ರತೆ ಅದಕ್ಕಿಂತ ಹತ್ತು-ಹದಿನೈದು ಪಟ್ಟು ಜಾಸ್ತಿ ಇದೆ ಎಂಬುದನ್ನು ಒತ್ತಿ ಹೇಳುತ್ತ, ಅಷ್ಟಾಗಿಯೂ ದೊಡ್ಡ ಕಾರ್ಖಾನೆ ಪ್ರಾರಂಭಿ ಸಲು ಯಥೇಚ್ಛವಾಗಿ ಬಂಡವಾಳ ಹೂಡಲು ಪ್ರತೀ ತಲೆಗೆ ಲಭ್ಯವಿದ್ದ ಉಪಕರಣಗಳು ಭಾರತೀಯನಿಗೆ ಲಭ್ಯವಿರುವ ಉಪಕರಣಗಳ ವೌಲ್ಯ ಕ್ಕಿಂತ ಐವತ್ತು ಪಟ್ಟು ಜಾಸ್ತಿ ಇರುವುದನ್ನು ಅಂಕಿ-ಅಂಶಗಳ ಮೂಲಕ ಮನವರಿಕೆ ಮಾಡಿಕೊಟ್ಟರು.

ಮುಕ್ತ ಮಾರುಕಟ್ಟೆ ನೀತಿ ಮತ್ತು ಯಥಾಸ್ಥಿತಿ ಮೂಲಕ ಜನತಂತ್ರದ ಕನಸು ಕಾಣುವ ಬಂಡವಾಳ ಶಾಹಿಗಳಿಗೆ ಅದೊಂದು ಹಗಲುಕನಸು ಎಂದು ತೋರಿಸಿದರು. ಅಷ್ಟೇ ಅಲ್ಲ ಪ್ರಪಂಚದ ಎಲ್ಲ ಯುದ್ಧಗಳಿಗೂ ಬಂಡವಾಳಶಾಹಿ ವ್ಯವಸ್ಥೆಯೇ ಕಾರಣ. ಮೂರನೆ ಎರಡು ಭಾಗ ಇರುವ ತೃತೀಯ ಜಗತ್ತನ್ನು ದಾರಿದ್ರದ ದವಡೆಗೆ ನೂಕಲ್ಪಟ್ಟಿದ್ದ ವ್ಯವಸ್ಥೆಯನ್ನು ಊಳಿಗಮಾನ್ಯ ಪದ್ಧತಿ ಎಂದು ವಿಶ್ಲೇಷಿಸಿದರು.

ಇದಕ್ಕೆ ವಿರುದ್ಧವೆಂದು ಹೇಳಿಕೊಳ್ಳುವ ಮಾರ್ಕ್ಸ್ ಸಿದ್ಧಾಂತವೂ ಪರಿಣಾಮದಲ್ಲಿ ಅಷ್ಟೇ ಭೀಕರವಾಗಿರುವುದಲ್ಲದೆ ಸ್ವಾತಂತ್ರಹರಣಕ್ಕೂ ಅಡಿಪಾಯ ಹಾಕುತ್ತದೆ ಎಂದೂ ಪ್ರತಿಪಾದಿಸಿದರು. ಮಾರ್ಕ್ಸ್ ಸಿದ್ಧಾಂತವನ್ನು ಆಮೂಲಾಗ್ರ ವಿಮರ್ಶಿಸಿದ ಲೋಹಿಯಾ, ಆ ಸಿದ್ಧಾಂತ ದ ಎರಡು ಪೊಳ್ಳು ಭರವಸೆಗಳನ್ನು ಅನಾವರಣ ಮಾಡಿದರು.

ಮೊದಲನೆಯದಾಗಿ ಮಾರ್ಕ್ಸ್ ಪ್ರತಿಪಾದಿಸಿದ ಆರ್ಥಿಕ ವ್ಯವಸ್ಥೆ ಆಯಾ ರಾಷ್ಟ್ರಗಳ ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿ ತೃತೀಯ ಜಗತ್ತನ್ನು ಲೂಟಿ ಮಾಡಿ ಬಂಡವಾಳ ತಂದು ಹೂಡಿಕೆಯ ಬಗ್ಗೆ ಗಮನಿಸ ದಿರುವಂತಹ ವೈಶಿಷ್ಟತೆ ಮತ್ತು ಭಾರತೀಯ ಸಮಾಜದಲ್ಲಿ ಇರುವ ಜಾತಿ ವ್ಯವಸ್ಥೆ ಯನ್ನು ಪರಿಗಣಿಸದೆ ಬರೀ ವರ್ಗ ಸಂಘರ್ಷದ ಕನಸು ಕಾಣುತ್ತಿರುವುದರ ಬಗ್ಗೆ ತೀಕ್ಷ್ಣವಾಗಿ ಟೀಕಿಸಿದರು. ಹೀಗಾಗಿ ಮಾರ್ಕ್ಸ್‌ವಾದ ಮತ್ತು ಬಂಡವಾಳಶಾಹಿ ವ್ಯವಸ್ಥೆ ಎರಡೂ ಭಾರತಕ್ಕೆ ಅಪ್ರಸ್ತುತ ಎಂದು ಹೇಳಿದರು.

 ಭಾರತಕ್ಕೆ ಸಮಾಜವಾದ ಒಂದೇ ಪರಿಹಾರ

ಭಾರತಕ್ಕೆ ಸೂಕ್ತ ಆರ್ಥಿಕ ವ್ಯವಸ್ಥೆ ಮಾರ್ಕ್ಸ್‌ವಾದವೋ ಅಥವಾ ಬಂಡ ವಾಳಶಾಹಿಯೋ? ಈ ಪ್ರಶ್ನೆಗೆ ಅತ್ಯಂತ ಸಮರ್ಥ ಉತ್ತರ ಕೊಟ್ಟ ಲೋಹಿಯಾ, ಎರಡೂ ಅಪ್ರಸ್ತುತ. ಭಾರತ ಎರಡರಿಂದಲೂ ಸಮಾನ ದೂರವಿರಬೇಕು ಎಂದು ವ್ಯಾಖ್ಯಾನ ಮಾಡಿದರು.

ಬೃಹತ್ ಕೈಗಾರಿಕೆಗಳಿಗೆ ಬದಲು ವಿದ್ಯುತ್ ಚಾಲಿತ ಪುಟ್ಟಯಂತ್ರಗಳ ಮೂಲಭೂತ ಸ್ವಾತಂತ್ರದ ದಮನಕ್ಕೆ ಬದಲಾಗಿ ನಿರಂಕುಶ ಸ್ವಾತಂತ್ರ ಪ್ರತಿಪಾದಿಸುವ ಬಂಡವಾಳಶಾಹಿಗೆ ವಿರುದ್ಧವಾಗಿ ಮತ್ತೊಂದು ಕುಟುಂಬ ವನ್ನು ಶೋಷಣೆ ಮಾಡಲು ಅವಕಾಶವಿಲ್ಲದಂತಹ ಸ್ವಾತಂತ್ರವಾದರೂ ಸೀಮಿತವಾದ ಆರ್ಥಿಕ ವ್ಯವಸ್ಥೆಯನ್ನು ಎತ್ತಿ ಹಿಡಿದರು. ಮಿಶ್ರ ಆರ್ಥಿಕ ವ್ಯವಸ್ಥೆ ಮತ್ತು ಮುಕ್ತ ಮಾರುಕಟ್ಟೆ ಎರಡನ್ನೂ ತಿರಸ್ಕರಿಸಿ ಆಸ್ತಿಯ ಸಾಮಾ ಜೀಕರಣ, ಆ ಮೂಲಕ ರಾಷ್ಟ್ರದ ಅಭ್ಯುದಯಕ್ಕೆ ಒತ್ತುಕೊಟ್ಟರು.

ಕಾರ್ಲ್‌ಮಾರ್ಕ್ಸ್ ಮತ್ತು ಹೆನ್ರಿ ಫೋರ್ಡ್ ಇಬ್ಬರೂ ಅಪ್ರಸ್ತುತ ಎಂದು ಲೋಹಿಯಾ ಭಾರತದ ವಸ್ತುಸ್ಥಿತಿಗೆ ಹೊಂದುವ ಅಭೂತಪೂರ್ವ ವಾದಂತಹ ಸಮಾಜವಾದವನ್ನು ಅನಾವರಣ ಗೊಳಿಸಿದರು. ಈ ಸಿದ್ಧಾಂತ ವನ್ನು ಇದೊಂದು ವಿಚಾರ ಯಜ್ಞ ಎಂದು ಕರೆದ ಜಯಪ್ರಕಾಶ್ ನಾರಾ ಯಣ್ ಭಾರತದ ಇತಿಹಾಸದಲ್ಲೇ ಇಂತಹ ರಾಜಕೀಯ ಸಿದ್ಧಾಂತ ಮೊತ್ತ ಮೊದಲಬಾರಿಗೆ ಬಂದಿದೆ ಎಂದು ಮುಕ್ತಕಂಠದಿಂದ ಹೊಗಳಿದರು.

ಭಾರತದ ಬಹುದೊಡ್ಡ ಆತಂಕ ಎಂದರೆ ಇಂತಹ ಅಮೂಲ್ಯವಾದ ಸಮಾಜವಾದಿ ಸಿದ್ಧಾಂತ ಯಾವುದೇ ಗಂಭೀರ ಚರ್ಚೆಗೆ ಒಳಗಾ ಗದೆ ಎಪ್ಪತ್ತು ವರ್ಷಗಳ ನಂತರವೂ ಪ್ರಯೋಗವಾಗದೆ ಗ್ರಂಥಾಲ ಯಕ್ಕೆ ಸೀಮಿತವಾಗಿರುವುದು. ಈ ನಾಡಿನ ಯುವ ಪೀಳಿಗೆಯ ಮುಂದೆ ಇರುವ ಬಹುದೊಡ್ಡ ಸವಾಲೇನೆಂದರೆ ಲೋಹಿಯಾರವರ ಸಮಾಜವಾದಿ ಸಿದ್ಧಾಂತದ ಬಗ್ಗೆ ಗಂಭೀರವಾಗಿ ಸಾರ್ವಜನಿಕ ಚರ್ಚೆ ನಡೆಸಿ ಕೂಡಲೇ ಪ್ರಯೋಗ ಮಾಡುವುದಾಗಿದೆ.

ಇಂದು ರಾಷ್ಟ್ರದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಅಸಮಾನತೆ ಮತ್ತು ಅರಾಜಕತೆಗೆ ಲೋಹಿಯಾರ ಸಮಾಜವಾದ ಸರಿಯಾದಂತಹ ಉತ್ತರ ಎಂಬುದನ್ನು ತರುಣ- ತರುಣಿಯರು ಮನಗಾಣಬೇಕಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಸರ್ವರಿಗೂ ಸಮಬಾಳು ಸಿದ್ಧಿಸುವಂತಹ ಮತ್ತು ಯುವಜನತೆಯ ಏಕೈಕ ಆಶಾಕಿರಣ ಲೋಹಿಯಾ ಸಮಾಜವಾದ ಎಂಬುದನ್ನು ಅರಿಯಬೇಕಾಗಿದೆ.

ಭಾರತದ ವಿದೇಶಾಂಗ ನೀತಿಯ ಕರ್ತೃ

ಆಗಿನ್ನು ಲೋಹಿಯಾರಿಗೆ ಇಪ್ಪತ್ತೆರಡು ಇಪ್ಪತ್ತ್ಮೂರು ವರ್ಷ. ಜರ್ಮನಿಯಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದು ಭಾರತಕ್ಕೆ ಹಿಂದಿರುಗಿದ್ದರು. ಹರಳು ಹುರಿದಂತೆ ಮಾತನಾಡುವ ನಿರಂಕುಶ ಮತಿ ಬೌದ್ಧಿಕತೆ, ಎಲ್ಲಕ್ಕಿಂತ ಹೆಚ್ಚಾಗಿ ಸ್ವಂತಿಕೆಯಿಂದ ಕೂಡಿದ ಪ್ರಖರ ಚಿಂತನೆಯಿಂದ ರಾಷ್ಟ್ರನಾಯಕರೆಲ್ಲರ ಗಮನ ಸೆಳೆದ ಲೋಹಿಯಾ ಕಾಂಗ್ರೆಸ್ ಪಕ್ಷದ ವಿದೇಶಾಂಗ ನೀತಿ ರೂಪಿಸುವ ಗುರುತರ ಜವಾಬ್ದಾರಿಗೆ ನೇಮಿಸಲ್ಪಟ್ಟವರು. ಅಂದು ಕಾಂಗ್ರೆಸ್ ಪಕ್ಷಕ್ಕೆ ಲೋಹಿಯಾ ಕೊಟ್ಟ ಕೊಡುಗೆ ಅಲಿಪ್ತ ನೀತಿಯು ತೃತೀಯ ಜಗತ್ತಿನ ಕೇಂದ್ರ ವಿದೇಶಾಂಗ ನೀತಿ ಹಿಂದೆಂದಿಗಿಂತಲೂ ಇಂದೂ ಹೆಚ್ಚು ಪ್ರಶಸ್ತವಾಗಿದೆ. ಈ ವಿದೇಶಾಂಗ ನೀತಿಯನ್ನು ಪರಿ ಪಾಲಿಸಿಕೊಂಡು ಬರದೆ ಇತ್ತೀಚಿನ ದಿನಗಳಲ್ಲಿ ಅಲಿಪ್ತ ನೀತಿಯನ್ನು ಗಂಭೀರವಾದಂತಹ ಒತ್ತಡಗಳಿಗೆ ಸಿಲುಕಿಸಿ ಭಾರತ ತನ್ನ ಅಭ್ಯುದಯಕ್ಕೆ ಮಾರಕ ಆಗುವಂತಹ ರೀತಿಯಲ್ಲಿ ವಾಲುತ್ತಿರುವುದು, ಲೋಹಿಯಾರ ಸಿದ್ಧಾಂತವನ್ನು ಪುನರ್ ಮನನ ಮಾಡಿಕೊಳ್ಳಲು ಸೂಕ್ತವಾದ ಸಮಯ.

ಉಗ್ರ ಅಹಿಂಸಾವಾದಿ

ಗಾಂಧಿವಾದಿಗಳೆಲ್ಲರ ಬಾಯಲ್ಲೂ ಅಹಿಂಸೆಯ ಮಾತೇ ಇದ್ದರೂ, ಆಡಳಿತ ದಲ್ಲಿ ಮತ್ತು ರಾಷ್ಟ್ರದಲ್ಲಿ ಎಲ್ಲೆಲ್ಲೂ ಇಂದು ಹಿಂಸೆ ತಾಂಡವವಾಡುತ್ತಿದೆ. ಆಡಳಿತ ಯಂತ್ರ ದಿಂದಲೇ ಎನ್‌ಕೌಂಟರ್‌ಗಳ ಮೂಲಕ ನಿರಂತರ ಮಾರಣಹೋಮ ನಡೆದಿದೆ. ಅದರಲ್ಲೂ ಮೂಲ ಭೂತ ವಾದದ ಹೆಸರಿನಲ್ಲಿ, ಗೋರಕ್ಷಣೆಯ ಸೋಗಿನಲ್ಲಿ, ಮರ್ಯಾದಾ ಹತ್ಯೆ ನೆಪದಲ್ಲಿ ಬೀದಿ-ಬೀದಿಗಳಲ್ಲಿ ಕಾನೂನು ಕೈಗೆತ್ತಿ ಕೊಂಡು ವಿಚಾರಣೆ, ತೀರ್ಪು ಮತ್ತು ತೀರ್ಪಿನ ಅನುಷ್ಠಾನ ಎಲ್ಲವೂ ನಡೆದು ರಕ್ತದ ಕೋಡಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಲೋಹಿಯಾ ರ ಗಾಂಧಿವಾದದ ಬಗ್ಗೆ ಅದರಲ್ಲೂ ಅಹಿಂಸಾವಾದದ ಬಗ್ಗೆ ಇದ್ದಂತಹಬದ್ಧತೆಯ ಒಂದು ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು.

1955ರಲ್ಲಿ ಲೋಹಿಯಾರ ಸೋಷಿಯಲಿಸ್ಟ್ ಪಕ್ಷದಿಂದ ಮುಖ್ಯ ಮಂತ್ರಿಯಾದ ಪಟ್ಟಂತಾನಂ ಪಿಳ್ಳೈ ಅಧಿಕಾರದಲ್ಲಿದ್ದರು. ಆ ಸರಕಾರದ ಪೊಲೀಸರು ನಿರಾಯುಧ ಸತ್ಯಾಗ್ರಹಿಗಳ ಮೇಲೆ ಗೋಲಿಬಾರ್ ನಡೆಸಿ ದ್ದರ ಪರಿಣಾಮ ಅಪಾರ ಸಾವು-ನೋವು ಸಂಭವಿಸಿತು. ಸಂಯುಕ್ತ ಸಮಾ ಜವಾದಿ ಪಕ್ಷದ ಮುಂಚೂಣಿಯಲ್ಲಿದ್ದ ಲೋಹಿಯಾ ಈ ಘಟನೆಯನ್ನು ತೀವ್ರವಾಗಿ ಖಂಡಿಸಿ, ಮುಖ್ಯಮಂತ್ರಿ ರಾಜೀನಾಮೆಗೆ ಪಟ್ಟು ಹಿಡಿದು ತಾನು ನಂಬಿದ್ದ ಸಿದ್ಧಾಂತಗಳಿಗೆ ಬದ್ಧತೆಯನ್ನು ಪ್ರದರ್ಶಿಸಿದರು.

ಜಾತಿವಿನಾಶ

‘ಚಲನಹೀನ ವರ್ಗವೇ ಜಾತಿ, ಚಲನಶೀಲ ಜಾತಿಯೇ ವರ್ಗ’ ಎಂದು ಪ್ರತಿಪಾದಿಸಿದ ಲೋಹಿಯಾ ಈ ದೇಶದಲ್ಲಿ ಜಾತೀಯತೆಯ ಹೆಸರಿನಲ್ಲಿ ನಡೆದಿರುವ ಶೋಷಣೆಯನ್ನು ತೀವ್ರವಾಗಿ ಖಂಡಿಸಿದರು.

ಅಂಬೇಡ್ಕರ್ ಮತ್ತು ಲೋಹಿಯಾ

ಅಂಬೇಡ್ಕರ್ ಅವರ ಚಿಂತನೆ ಮತ್ತು ಸಾಧನೆಗಳನ್ನು ಹತ್ತಿರದಿಂದ ಗಮನಿಸಿದ್ದ ಲೋಹಿಯಾ ಅವರೊಡನೆ ಸೇರಿ ಪಕ್ಷ ಕಟ್ಟುವ ಕನಸನ್ನು ಕಂಡಿದ್ದರು. ಇಬ್ಬರ ನಡುವೆ ಪತ್ರ ವ್ಯವಹಾರವೂ ನಡೆದಿತ್ತು.

1957ರ ಸಾರ್ವತ್ರಿಕ ಚುನಾವಣೆ ವೇಳೆಗೆ ಅಂಬೇಡ್ಕರ್ ಎಸ್ಪಿ ಫೆಡರೇಷನ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ದೃಷ್ಟಿಯಿಂದ 1956ರ ಅಕ್ಟೋಬರ್ 2ರಂದು ಅವರಿಬ್ಬರ ಭೇಟಿ ನಿಗದಿಯಾಗಿತ್ತು. ಕಾರ ಣಾಂತರದಿಂದ ಮುಂದೂಡಲ್ಪಟ್ಟ ಅವರ ಭೇಟಿ ಮತ್ತೆಂದೂ ನಡೆಯಲೇಇಲ್ಲ. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಎರಡೂ ಪಕ್ಷಗಳು ಒಟ್ಟಿಗೆ ಕೆಲಸ ಮಾಡಲು ಸಾಧ್ಯ. ಅದರಲ್ಲೂ ಸೈದ್ಧಾಂತಿಕವಾಗಿ ಇಬ್ಬರೂ ಒಂದೇ ದಾರಿಯಲ್ಲಿ ಸಾಗುವುದು ಸಾಧ್ಯ ಎಂದು ಲೋಹಿಯಾ ಭರ ವಸೆ ಇಟ್ಟುಕೊಂಡಿದ್ದರು. ಅವರ ಅಕಾಲಿಕ ಸಾವು ಇಂಥ ದೊಂದು ಚರಿತ್ರಾರ್ಹ ಬೆಳವಣಿಗೆಗೆ ಇತಿಶ್ರೀ ಹಾಡಿತು.

‘ಡಾ.ಅಂಬೇಡ್ಕರ್‌ರನ್ನು ನೋಡಿದಾಗ ಜಾತಿ ವಿನಾ ಶದ ಬಗ್ಗೆ ಭರವಸೆ ಮೂಡುತ್ತಿತ್ತು. ಅವರು ಯಾವ ಸವರ್ಣೀಯ ಮೇಧಾವಿಗೂ ಕಮ್ಮಿ ಇಲ್ಲ. ಕೇವಲ ಹರಿಜನರ ನಾಯಕನಾಗಿ ಮಾತ್ರ ವಲ್ಲ, ಇಡೀ ಭಾರತದ ನಾಯಕನಾಗಿ ಡಾ. ಅಂಬೇಡ್ಕರ್‌ರನ್ನು ನೋಡುವ ನನ್ನ ಆಸೆ ಅವರ ಸಾವಿನಿಂದ ಕೊನೆಗೊಂಡಿ ದೆ’ ಎಂದು ಅಂಬೇಡ್ಕರ್ ನಿಧನಾ ನಂತರ ಶ್ರದ್ಧಾಂಜಲಿ ಸಲ್ಲಿಸಿದರು. ಈ ಇಬ್ಬರು ದಿಗ್ಗಜರ ಸಮಾಗಮವಾಗದೇ ಹೋದದ್ದು ಈ ದೇಶದ ಬಹುದೊಡ್ಡ ರಾಜ ಕೀಯ ದುರಂತ. ಅದರಲ್ಲೂ ವಿಶೇಷವಾಗಿ ಸಂವಿ ಧಾನ ಸಭೆಯಲ್ಲಿ ಲೋಹಿಯಾರ ಒಡ ನಾಟ ಮತ್ತು ಬೆಂಬಲ ಅಂಬೇಡ್ಕರ್‌ಗೆ ಸಿಗದೇ ಹೋದದ್ದು ಈ ದೇಶಕ್ಕಾದ ತುಂಬಲಾರದ ನಷ್ಟ. ಸಮಾನತೆ ಸಾಧಿಸಲು ತಡೆಗೋಡೆಯಾಗಿರುವ ಜಾತಿಯನ್ನು ತೊಡೆದು ಹಾಕದೆ ರಾಷ್ಟ್ರಕ್ಕೆ ಉಳಿಗಾಲವಿಲ್ಲ. ಜಾತಿ ಜಾತಿಗಳ ನಡುವೆ ಇರುವ ಅಸ ಮಾನತೆಯ ಕಂದಕವನ್ನು ಮುಚ್ಚಬೇಕು ಮತ್ತು ಜಾತೀಯತೆಯ ಆಚರಣೆ ಯನ್ನು ನಿಷೇಧಿಸಬೇಕು ಎಂದು ಉಗ್ರವಾಗಿ ಪ್ರತಿಪಾದಿಸಿದವರಲ್ಲಿ ಲೋಹಿಯಾ ಮೊದಲಿಗರು. ಮೇಲ್ಜಾತಿಗಳ ಶೋಷಣಾಯುಕ್ತ ಕಾರ್ಯಕ್ರಮಗಳನ್ನು ಎಳೆ-ಎಳೆಯಾಗಿ ಬಿಡಿಸಿದ ಲೋಹಿಯಾ ಜಾತಿ ವಿನಾಶವಾಗದೆ ಸಮಾನತೆ ಅಸಾಧ್ಯ ಎಂದು ಘೋಷಿಸಿದರು.

ಅಲ್ಲದೆ, ಜಾತಿಸೂಚಕ ‘ಉಪನಾಮ’ಗಳಲ್ಲಿ ಹೆಸರುಗಳನ್ನು ಇಟ್ಟು ಕೊಳ್ಳುವುದನ್ನು ಕೈಬಿಡಬೇಕು ಎಂದು ರಾಷ್ಟ್ರದಲ್ಲಿ ಕಾಯಾ, ವಾಚಾ, ಮನಸಾ ಜಾತೀಯತೆ ಕೊನೆಗಾಣಿಸಬೇಕು ಎಂದು ಕಾರ್ಯಕ್ರಮ ರೂಪಿಸಿ ದರು. ಆ ರೀತಿ ರೂಪಿಸಿದ ಅತ್ಯಂತ ಫಲಕಾರಿಯಾದ ಕಾರ್ಯಕ್ರಮ ಎಂದರೆ ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹಗಳು.

ಭಾರತದಲ್ಲಿಂದು ಲಕ್ಷೋಪಲಕ್ಷ ಅಂತರ್ಜಾತಿ ವಿವಾಹಗಳು ಸಮ ರೋಪಾದಿಯಲ್ಲಿ ನಡೆದಿರುವುದಕ್ಕೆ ಲೋಹಿಯಾ ಬೆಂಬಲವೇ ಮೂಲ ಕಾರಣ. ಕರ್ನಾಟಕದಲ್ಲಿಯೂ ಲೋಹಿಯಾರ ಆದರ್ಶವನ್ನು ಪಾಲಿಸಿ ಅಂತರ್ಜಾತಿ, ಅಂತರ್ಧರ್ಮೀಯ ವಿವಾಹವಾದ ಬಹುದೊಡ್ಡ ಸಮಾಜವಾದಿ ಪಡೆಯೇ ಇದೆ. ಕೇವಲ ಅಂತರ್ಜಾತೀಯ ವಿವಾಹ ಗಳನ್ನು ಪ್ರೋತ್ಸಾಹಿಸುವುದಷ್ಟೇ ಅಲ್ಲ, ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲ ಗೆಜೆಟೆಡ್ ಸರಕಾರಿ ಹುದ್ದೆಗಳನ್ನು ಅಂತರ್ಜಾತಿ ವಿವಾಹಿತರಿಗೆ ಕನಿಷ್ಠ ಅರ್ಹತೆ ಎಂದು ಘೋಷಿಸಬೇಕೆಂದು ಒತ್ತಾಯಿಸಿದ್ದರು.

ಸಾಮಾಜಿಕ ನ್ಯಾಯದ ರೂವಾರಿ

ಜಾತಿಭೇದ ಮತ್ತು ಲಿಂಗ ತಾರತಮ್ಯದ ವಿರುದ್ಧ ರಣಕಹಳೆ ಮೊಳಗಿಸಿದ್ದ ಲೋಹಿಯಾ ಪರಿಹಾರೋಪಾಯವನ್ನು ಸಹ ಕಂಡು ಹಿಡಿದರು. ಉತ್ತರ ಭಾರತದಲ್ಲಿ ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ಮೊದಲಿಗರೆಂದರೆ ಲೋಹಿಯಾ. ಹಿಂದುಳಿದ ಜಾತಿಗಳಿಗೆ ಮತ್ತು ಮಹಿಳೆಯರಿಗೆ ರಾಜಕೀಯ ಮತ್ತು ಸರಕಾರಿ ಕ್ಷೇತ್ರಗಳ ಕನಿಷ್ಠ ಪ್ರತಿಶತಃ 60ರಷ್ಟು ಹುದ್ದೆಗಳನ್ನು ಮೀಸಲಿಡಬೇಕು ಎಂದು ಬರೆದರು ಲೋಹಿಯಾ. ಅದರಲ್ಲಿಯೂ ವಿಶೇಷವಾಗಿ ಭಾರತದ ಯಾವುದೇ ರಾಜಕೀಯ ಪಕ್ಷ ಮೀಸಲಾತಿ ಪರ ಇಲ್ಲದೆ ಇದ್ದ ಸಮಯದಲ್ಲಿ ಲೋಹಿಯಾ ಸಮಾಜವಾದಿ ಪಕ್ಷ ಮೀಸಲಾತಿಯನ್ನು ಘೋಷವಾಕ್ಯ ಮಾಡಿಕೊಂಡಿದ್ದು ಅಲ್ಲದೆ ಅಧಿಕಾರಕ್ಕೆ ಬಂದಾಗಲೆಲ್ಲ ಮೀಸಲಾತಿಯನ್ನು ಜಾರಿಗೊಳಿಸಿ ನುಡಿದಂತೆ ನಡೆದ ಏಕೈಕ ಪಕ್ಷ.

ಈ ಅತ್ಯಮೂಲ್ಯ ಕೊಡುಗೆಯ ಮೂಲಕ ದಲಿತ ಮತ್ತು ಹಿಂದುಳಿದ ಜಾತಿಗಳು ಲೋಹಿಯಾ ಸಮಾಜವಾದಕ್ಕೆ ಸಹಜ ಆಕರ್ಷ ಣೆಯಾಗಬೇಕಿತ್ತು. ಹಾಗಾಗದೆ ಸಾಮಾಜಿಕನ್ಯಾಯ ವ್ಯಾಪಕವಾಗಿ ಜಾರಿಗೊಂಡಿದ್ದರೂ ಸಹ ಸಮಾಜವಾದಿ ಸಿದ್ಧಾಂತ ಮತ್ತು ಪಕ್ಷ ದುರ್ಬಲಗೊಂಡಿದ್ದು ಸಮಾನತೆಯ ಬಹುದೊಡ್ಡ ವಿಪರ್ಯಾಸ.

ಮಾತೃಭಾಷೆಯಲ್ಲಿ ಶಿಕ್ಷಣ

ಗುರಿ ಮತ್ತು ಮಾರ್ಗದ ಬಗ್ಗೆ ಅತ್ಯಂತ ವೈಚಾರಿಕ ಸ್ಪಷ್ಟತೆಯ ಸಿದ್ಧಾಂತವನ್ನು ರೂಪಿಸಿದ ಲೋಹಿಯಾ ಪ್ರಬಲವಾಗಿ ನಂಬಿದ ಬಹುಮುಖ್ಯ ಸಿದ್ಧಾಂತವೆಂದರೆ ಸಮಾನತೆಯ ಸಮಾಜವನ್ನು ಕಟ್ಟಲು ಸಮಾನ ಶಿಕ್ಷಣ ಅತ್ಯಗತ್ಯ. ಪ್ರಾಥಮಿಕ ಶಾಲೆಯಲ್ಲಿ ಸಮಾನತೆಯನ್ನು ಸಾಧಿಸದಿದ್ದರೆ ಸಮಾಜದಲ್ಲಿ ಸಮಾನತೆ ಅಸಾಧ್ಯ.

ಪ್ರಾಥಮಿಕ ಶಾಲೆಯಲ್ಲಿ ಸಮಾನತೆ ಸಾಧಿಸಬೇಕಾದರೆ ಒಂದೇ ಗುಣಮಟ್ಟದ ಸಮಾನ ಶಿಕ್ಷಣ ಕೊಡಬೇಕು. ಒಂದೇ ಗುಣಮಟ್ಟದ ಸಮಾನ ಶಿಕ್ಷಣ ಕೊಡಬೇಕೆಂದರೆ ಇಂಗ್ಲಿಷ್‌ನಂತಹ ಪರಭಾಷೆಗಳ ಶಿಕ್ಷಣ ಮಾಧ್ಯಮದಿಂದ ಅಸಾಧ್ಯ. ಬದಲಾಗಿ ಶಿಕ್ಷಣ ಮಾತೃಭಾಷೆಯಲ್ಲಿದ್ದರೆ ಸಮಾನ ಶಿಕ್ಷಣ ಸಾಧ್ಯ ಎಂದು ಪ್ರತಿಪಾದಿಸಿದ್ದರು.

ಲೋಹಿಯಾ ಉಗ್ರವಾದಂತಹ ಅಂಗ್ರೇಜಿ ಹಠಾವೋ ಚಳವಳಿಯನ್ನು ರಾಷ್ಟ್ರದ ಉದ್ದಗಲಕ್ಕೂ ನಡೆಸಿ ಮಾತೃಭಾಷೆ ಪರವಾಗಿ ನಿಂತರು. ಲೋಹಿಯಾ ಇಂಗ್ಲಿಷ್ ವಿರೋಧಿ ನಿಲುವು ಅವರ ವಿರುದ್ಧ ದಕ್ಷಿಣ ಭಾರತದಲ್ಲಿ ಅಪನಂಬಿಕೆಗೆ ಕಾರಣವಾಗಿದ್ದಾಗಲೂ ಅವರ ಮಾತೃಭಾಷಾ ಶಿಕ್ಷಣ ಮಾಧ್ಯಮದ ಒಲವು ಸಮಾನತೆಗೆ ಬದ್ಧರಾಗಿರುವುದನ್ನು ಮನವರಿಕೆ ಮಾಡಿಕೊಟ್ಟಿತು.

ಹೀಗಾಗಿ ದಕ್ಷಿಣ ಭಾರತೀಯರ ಮೇಲೆ ಹಿಂದಿ ಹೇರುವ ಅಪಪ್ರಚಾರ ಫಲಕೊಡಲಿಲ್ಲ. ಆದರೆ ಇತ್ತೀಚೆಗೆ ನಡೆದಿರುವ ಕೆಲ ವಿದ್ಯಮಾನಗಳಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಮಾತೃಭಾಷೆ ಶಿಕ್ಷಣ ನೀತಿಗೆ ಮಾರಕವಾಗಿದ್ದು, ಸಮಾನತೆಯ ಸಮಾಜ ಕಟ್ಟುವ ಕನಸು ಮರೀಚಿಕೆಯಾಗಿದೆ. ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ಮಾಡಿ ಲೋಹಿಯಾ ಬಲವಾಗಿ ಪ್ರತಿಪಾದಿಸಿದ್ದ ಮಾತೃಭಾಷೆಯಲ್ಲಿ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದು ಈ ರಾಷ್ಟ್ರದ ಮುಂದೆ ಇರುವ ಬಹುದೊಡ್ಡ ಸವಾಲಾಗಿದೆ.

ಮುಂದುವರಿಯುವುದು

Writer - ಪ್ರೊ.ರವಿವರ್ಮ ಕುಮಾರ್

contributor

Editor - ಪ್ರೊ.ರವಿವರ್ಮ ಕುಮಾರ್

contributor

Similar News

ಜಗದಗಲ
ಜಗ ದಗಲ