ಪ್ರತೀ ಬಾರಿ ನನಗಾಗುತ್ತಿರುವ ಅವಮಾನದ ಬಗ್ಗೆ ಬಿಜೆಪಿ ಮುಖಂಡರು ಕುರುಡಾಗಿದ್ದಾರೆ: ಶತ್ರುಘ್ನ ಸಿನ್ಹ

Update: 2017-10-12 15:52 GMT

ಹೊಸದಿಲ್ಲಿ, ಅ.12: ಪಾಟ್ನಾ ವಿಶ್ವವಿದ್ಯಾನಿಲಯದ ಶತಮಾನೋತ್ಸವ ಸಮಾರಂಭದ ಆಹ್ವಾನಿತರ ಪಟ್ಟಿಯಲ್ಲಿ ತನ್ನ ಹೆಸರಿಲ್ಲದ ಬಗ್ಗೆ ಪಾಟ್ನಾ ಲೋಕಸಭಾ ಕ್ಷೇತ್ರದ ಸಂಸದ, ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹ ವಿಷಾದ ವ್ಯಕ್ತಪಡಿಸಿದ್ದಾರೆ.

  ಇದು ಸಾಕಷ್ಟಾಯಿತು. ಇನ್ನು ಸಹಿಸಲಾಗದು ಎಂದು ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಸಿನ್ಹ ಹೇಳಿದರು. ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ ನೀಡದಂತೆ ನನಗೆ ಸೂಚಿಸುವ ಬಿಜೆಪಿಯ ಹಿರಿಯ ಮುಖಂಡರು, ಪ್ರತೀ ಬಾರಿಯೂ ನನಗಾಗುತ್ತಿರುವ ಅವಮಾನದ ಬಗ್ಗೆ ಕುರುಡಾಗಿದ್ದಾರೆ ಎಂದು ಪ್ರಧಾನಿ ಮೋದಿಯ ಕಟು ಟೀಕಾಕಾರನಾಗಿರುವ ಶತ್ರುಘ್ನ ಸಿನ್ಹ ದೂರಿದರು.

ಶನಿವಾರ ನಡೆಯಲಿರುವ ಶತಮಾನೋತ್ಸವ ಸಮಾರಂಭಕ್ಕೆ ಪ್ರಧಾನಿ ಮೋದಿ ಆಗಮವನ್ನು ಸ್ವಾಗತಿಸಿದ ಸಿನ್ಹ, ಆದರೆ ಈ ಕಾರ್ಯಕ್ರಮ ಅಪೂರ್ಣವಾಗಿದೆ ಎಂದರು. ಪೂರ್ವದ ಆಕ್ಸ್‌ಫರ್ಡ್ ಎಂದು ಈ ಹಿಂದೆ ಪ್ರಸಿದ್ಧವಾಗಿದ್ದ ಪಾಟ್ನಾ ವಿವಿಯ ಕಳೆದುಹೋದ ಗೌರವವನ್ನು ಮರಳಿ ಪ್ರತಿಷ್ಠಾಪಿಸುವಂತೆ ಪ್ರಧಾನಿಯನ್ನು ಕೋರಿದರು.

 ಪಾಟ್ನಾ ವಿವಿ ತನ್ನ ಸಂಸದೀಯ ಕ್ಷೇತ್ರದ ವ್ಯಾಪ್ತಿಯಲ್ಲಿದೆ, ಅಲ್ಲದೆ ಈ ವಿವಿಯ ವ್ಯಾಪ್ತಿಗೆ ಒಳಪಡುವ ವಿಜ್ಞಾನ ಕಾಲೇಜಿನಲ್ಲಿ ತಾನು ಪದವಿ ಪಡೆದಿದ್ದೇನೆ. ಹಾಗಿದ್ದೂ ತನ್ನನ್ನು ಆಹ್ವಾನಿಸಿಲ್ಲ. ಈ ಬಗ್ಗೆ ವಿವಿಯ ಉಪಕುಲಪತಿಯನ್ನು ಸಂಪರ್ಕಿಸಿದಾಗ ಅವರು, ಆಹ್ವಾನಿತರ ಪಟ್ಟಿಯನ್ನು ಪ್ರಧಾನಮಂತ್ರಿಯ ಕಚೇರಿ ಅಂತಿಮಗೊಳಿಸಿದೆ ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿ ಜೊತೆ ತಾನು ಭಿನ್ನಾಭಿಪ್ರಾಯ ಹೊಂದಿರುವುದೇ ಇದಕ್ಕೆಲ್ಲಾ ಕಾರಣ ಎಂದು ಸಿನ್ಹ ಹೇಳಿದರು.

ಮೋದಿಯ ಜೊತೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಆಹ್ವಾನ ನೀಡಲಾಗಿದೆ. ಆದರೆ ಲಾಲೂಪ್ರಸಾದ್ ಯಾದವ್ ಅಥವಾ ಹಿರಿಯ ಬಿಜೆಪಿ ಮುಖಂಡ ಯಶವಂತ್ ಸಿನ್ಹರನ್ನೂ ಕಡೆಗಣಿಸಲಾಗಿದೆ ಎಂದು ಶತ್ರುಘ್ನ ಸಿನ್ಹ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News