“ಸಿಪಿಇಸಿಯನ್ನು ಭಾರತೀಯ ದೃಷ್ಟಿಕೋನದಿಂದ ನೋಡಬೇಡಿ”

Update: 2017-10-12 16:14 GMT

ವಾಶಿಂಗ್ಟನ್, ಅ. 12: ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ)ನ್ನು ಭಾರತೀಯ ದೃಷ್ಟಿಕೋನದಿಂದ ನೋಡಬೇಡಿ, ದಕ್ಷಿಣ ಏಶ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ತರುವ ಆರ್ಥಿಕ ಯೋಜನೆಯೆಂಬಂತೆ ನೋಡಿ ಎಂದು ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ಅಹ್ಸಾನ್ ಇಕ್ಬಾಲ್ ಅಮೆರಿಕವನ್ನು ಒತ್ತಾಯಿಸಿದ್ದಾರೆ.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್, ಈ ಯೋಜನೆಗೆ ಸಂಬಂಧಿಸಿ ಭಾರತದ ನಿಲುವನ್ನು ಬೆಂಬಲಿಸಿದ ದಿನಗಳ ಬಳಿಕ ಪಾಕಿಸ್ತಾನ ಈ ಪ್ರತಿಕ್ರಿಯೆ ನೀಡಿದೆ. ಈ ಯೋಜನೆಯು ವಿವಾದಾಸ್ಪದ ಪ್ರದೇಶದಲ್ಲಿ ಹಾದು ಹೋಗುತ್ತದೆ ಹಾಗೂ ಈ ಅಂಶವನ್ನು ಅಮೆರಿಕ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಮ್ಯಾಟಿಸ್ ಹೇಳಿದ್ದರು.

ಪಾಕಿಸ್ತಾನದೊಂದಿಗೆ ಅದು ಹೊಂದಿರುವ ಅರ್ಹತೆಯ ಆಧಾರದಲ್ಲಿ ವ್ಯವಹರಿಸಿ ಹಾಗೂ ವಲಯದಲ್ಲಿರುವ ಇತರ ದೇಶಗಳು ಮತ್ತು ವಿವಾದಗಳ ಜೊತೆಗೆ ಅದನ್ನು ತಳುಕುಹಾಕುವುದು ಬೇಡ ಎಂದು ಇಕ್ಬಾಲ್ ಬುಧವಾರ ಅಮೆರಿಕವನ್ನು ಒತ್ತಾಯಿಸಿದರು ಎಂದು ‘ಡಾನ್’ ನ್ಯೂಸ್ ವರದಿ ಮಾಡಿದೆ.

‘‘ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಯಾರದೇ ವಿರುದ್ಧ ಪಿತೂರಿಯಲ್ಲ. ಅದು ಭದ್ರತಾ ಯೋಜನೆಯಲ್ಲ. ಅದು ಆರ್ಥಿಕ ಅಭಿವೃದ್ಧಿಯ ಯೋಜನೆ’’ ಎಂದು ಇಲ್ಲಿನ ಜಾನ್ಸ್ ಹಾಪ್‌ಕಿನ್ಸ್ ಸ್ಕೂಲ್ ಆಫ್ ಅಡ್ವಾನ್ಸ್‌ಡ್ ಇಂಟರ್‌ನ್ಯಾಶನಲ್ ಸ್ಟಡೀಸ್‌ನಲ್ಲಿ ಅಹ್ಸಾನ್ ಇಕ್ಬಾಲ್ ನುಡಿದರು.

‘ಹಟಮಾರಿ’ ಭಾರತದೊಂದಿಗೆ ಪಾಕ್‌ಗೆ ಶಾಂತಿ ಬೇಕು: ಪಾಕ್ ಸೇನಾ ಮುಖ್ಯಸ್ಥ

ಪಾಕಿಸ್ತಾನವು ತನ್ನ ‘ಹಟಮಾರಿ’ ನೆರೆ ದೇಶ ಭಾರತದೊಂದಿಗೆ ಶಾಂತಿಯುತ ಸಂಬಂಧ ಹೊಂದಲು ‘ಪ್ರಾಮಾಣಿಕ ಇಚ್ಛೆ’ಯನ್ನು ವ್ಯಕ್ತಪಡಿಸಿದೆ, ಆದರೆ ಇದಕ್ಕೆ ಎರಡೂ ಪಕ್ಷಗಳ ಸಹಕಾರ ಬೇಕು ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವ ಬುಧವಾರ ಹೇಳಿದ್ದಾರೆ.

 ಇಲ್ಲಿ ವಿಚಾರಸಂಕಿರಣವೊಂದರಲ್ಲಿ ಮಾತನಾಡಿದ ಜ. ಬಾಜ್ವ, ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಮುಂದುವರಿಸಲು ಹಾಗೂ ದೋಷಗಳು ಬೆದರಿಕೆಯಾಗಿ ಮಾರ್ಪಡುವ ಮುನ್ನ ಅವುಗಳನ್ನು ನಿವಾರಿಸಲು ಪಾಕಿಸ್ತಾನ ಸಮಗ್ರ ಪ್ರಯತ್ನವೊಂದಕ್ಕೆ ಕೈಹಾಕಬೇಕಾದ ಅಗತ್ಯವಿದೆ ಎಂದರು.

‘‘ಬಾಹ್ಯ ಸಂಗತಿಗಳ ಬಗ್ಗೆ ಹೇಳುವುದಾದರೆ, ಅವು ವಿಪ್ಲವಕಾರಿಯಾಗಿಯೇ ಮುಂದುವರಿದಿವೆ. ನಮ್ಮ ಪೂರ್ವದಲ್ಲಿ ಹಟಮಾರಿ ಭಾರತ ಮತ್ತು ಪಶ್ಚಿಮದಲ್ಲಿ ಅಸ್ಥಿರ ಅಫ್ಘಾನಿಸ್ತಾನ. ಐತಿಹಾಸಿಕ ಕಾರಣಗಳು ಮತ್ತು ನೇತ್ಯಾತ್ಮಕ ಸ್ಪರ್ಧೆಗಳಿಂದಾಗಿ ಈ ವಲಯ ಬಂಧಿಯಾಗಿಯೇ ಉಳಿದಿದೆ’’ ಎಂದು ಪಾಕ್ ಸೇನಾ ಮುಖ್ಯಸ್ಥ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News