ರಾಮಮನೋಹರ ಲೋಹಿಯಾ - ಭಾರತ ಕಂಡ ಶ್ರೇಷ್ಠ ಚಿಂತಕ

Update: 2017-10-13 05:05 GMT

ಭಾಗ-2

ಸಮಾಜವಾದಿ ಚಳವಳಿಯ ರೂವಾರಿ ಡಾ. ರಾಮ ಮನೋಹರ ಲೋಹಿಯಾ ನಿಧನರಾಗಿೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಈ ಮಹಾನ್ ಚೇತನಕ್ಕೊಂದು ಅಕ್ಷರ ನಮನ. ಪ್ರೊ.ರವಿವರ್ಮ ಕುಮಾರ್

ಅಂಬೇಡ್ಕರ್ ಮತ್ತು ಲೋಹಿಯಾ ಅಪ್ರತಿಮ ಸಂಸದೀಯ ಪಟು

ವಯಸ್ಕರ ಮತದಾನ ಅಂದಿನ ಕಾಂಗ್ರೆಸ್ ಪಕ್ಷದ ಸ್ವಾತಂತ್ರ ಚಳವಳಿಯ ಒಂದು ಘೋಷಣೆ. ಸ್ವಾತಂತ್ರ ಪೂರ್ವದಲ್ಲಿ ಈ ಬಗ್ಗೆ ಪದೇ ಪದೇ ಠರಾವುಗಳನ್ನು ಪಾಸ್ ಮಾಡಿ ಅಂದಿನ ಬ್ರಿಟಿಷ್ ಸರಕಾರವನ್ನು ವಯಸ್ಕರ ಸಾರ್ವತ್ರಿಕ ಮತದಾನಕ್ಕೆ ತೀವ್ರ ಒತ್ತಾಯ ತರಲಾಗಿತ್ತು.

ವಯಸ್ಕರ ಮತದಾನಕ್ಕೆ ಅವಕಾಶ ಮಾಡಿಕೊಡದೆ 1946ರಲ್ಲಿ ಸಂವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಪ್ರತಿಶತಃ 26ರಷ್ಟು ಅರ್ಹ ವಯಸ್ಕರು ಮಾತ್ರ ಮತ ಚಲಾಯಿಸುವ ವ್ಯವಸ್ಥೆಯಲ್ಲಿ ಚುನಾವಣೆ ಘೋಷಿಸಿದರು. ಎಲ್ಲ ಪಕ್ಷಗಳಿಗೂ ಸಮ್ಮತಿಯಾದರೂ ಸಮಾಜವಾದಿ ನಾಯಕರಿಗೆ ಒಪ್ಪಿಗೆಯಾಗಲಿಲ್ಲ. ಅದನ್ನು ತೀವ್ರವಾಗಿ ಪ್ರತಿಭಟಿಸಿದ ಸಮಾಜವಾದಿ ನಾಯಕರಾದ ಜಯಪ್ರಕಾಶ್ ನಾರಾಯಣ್ ಮತ್ತು ಲೋಹಿಯಾ ಮತ್ತಿತರರು ಚುನಾವಣೆಯನ್ನು ಬಹಿಷ್ಕರಿಸಿದರು.
ಇವರ ಪ್ರತಿಭಟನೆ ಯಾರ ಕಿವಿಯ ಮೇಲೂ ಬಿದ್ದಂತೆ ಕಾಣಲಿಲ್ಲ. ಸಂಕುಚಿತ ಮತದಾನದ ಮೂಲಕ ಸಂವಿಧಾನ ರಚನೆ ಸಭೆ ಆಗಿಯೇ ಹೋಯಿತು. ನಡುದಾರಿಯಲ್ಲಿ ಸಮಾಜವಾದಿ ನಾಯಕರನ್ನು ಸಂವಿಧಾನ ಸಭೆಯಿಂದ ಹೊರಗಿಟ್ಟಿದ್ದರಿಂದ ಆಗುವ ಅನಾಹುತದ ಗಂಭೀರತೆ ಅರಿವಾಗಿ ಜಯಪ್ರಕಾಶ್ ನಾರಾಯಣ್, ಲೋಹಿಯಾರವರನ್ನು ಸಂವಿಧಾನ ರಚನೆ ಸಭೆಗೆ ಸೇರಿಸಬೇಕು ಎಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದರು. ಅದಕ್ಕೆ ಒಪ್ಪಿಗೆ ದೊರೆಯದೆ ಲೋಹಿಯಾ ಸಂವಿಧಾನ ಸಭೆಗೆ ಹೋಗಲಿಲ್ಲ.
ಆ ವೇಳೆಗಾಗಲೇ ಸಮಾಜವಾದಿ ಮುಖಂಡರನ್ನು ಸಂವಿಧಾನ ರಚನೆ ಸಭೆಯಿಂದ ಹೊರಗಿಟ್ಟು ಠರಾವು ಮಾಡಿದ್ದರಿಂದ ಭಾರತದ ಸಂವಿಧಾನದಲ್ಲಿ ಅಡಕವಾಗಬೇಕಿದ್ದ ಸ್ಪಷ್ಟ, ನೇರ, ದಿಟ್ಟ, ಸಮಾನತೆಯ ಕಾರ್ಯಕ್ರಮಗಳು, ಕೂಡಬಹುದಾದ ಪರಿಚ್ಛೇದಗಳು ಸಂವಿಧಾನಕ್ಕೆ ಸೇರ್ಪಡೆಯಾಗದೆ ಹೋದವು.
ವ್ಯಕ್ತಿಗತ ಹಕ್ಕುಗಳಾದ ಮೂಲಭೂತ ಹಕ್ಕುಗಳು, ಪ್ರಾಮುಖ್ಯತೆಯನ್ನು ಪಡೆದು ಸಾಮೂಹಿಕ ಹಕ್ಕುಗಳಾದ ಸಮಾನತೆ, ಸೋದರತೆ, ಶೋಷಣೆ ಮುಕ್ತ, ಹಸಿವು ಮುಕ್ತ, ಸಮಾಜ, ನಿರುದ್ಯೋಗ ಮುಕ್ತ ಸಮಾಜ ಕನಸಾಗಿಯೇ ಉಳಿದು ಕೇವಲ ಜಾರಿ ಮಾಡಲಾಗದ ನಿರ್ದೇಶನ ತತ್ವಗಳಷ್ಟೇ ಅಡಕಗೊಂಡವು.
ಸ್ವಾತಂತ್ರ ಪೂರ್ವದಲ್ಲಿ ಇದ್ದ ಅಸಮಾನತೆಯನ್ನು, ಸಂವಿಧಾನ ಜಾರಿಯಾದ ಮೇಲೂ ಯಥಾಸ್ಥಿತಿ ಕಾಪಾಡುವ ಮೂಲಕ ಉಳ್ಳವರು ಇನ್ನೂ ಹೆಚ್ಚಿನ ಶ್ರೀಮಂತರಾಗಿ ಬಡವರು ಇನ್ನೂ ಹೆಚ್ಚಿನ ಬಡವರಾಗುತ್ತಿರುವ ದುರಂತ ಇಂದೂ ನಮ್ಮ ಮುಂದಿದೆ. ಪ್ರಪಂಚದಲ್ಲೇ ಗುರುತಿಸಬಹುದಾದ ದೊಡ್ಡ ದೊಡ್ಡ ಶ್ರೀಮಂತರನ್ನು ಸೃಷ್ಟಿಸಿದ ಭಾರತ ಒಂದು ಹೊತ್ತಿನ ಊಟವೂ ಇಲ್ಲದೆ ಮಲಗುವ ಪ್ರಪಂಚದಲ್ಲೇ ಅತ್ಯಂತ ದೊಡ್ಡದಾದ ನಿರಕ್ಷರಕುಕ್ಷಿಗಳ ಪಡೆಯನ್ನೇ ಇಂದು ಹೊಂದಿದೆೆ. ಅದಕ್ಕೆ ಬಹುಮುಖ್ಯ ಕಾರಣ ಲೋಹಿಯರಂತಹ ದಾರ್ಶನಿಕರು ಸಂವಿಧಾನ ರಚನೆ ಸಭೆಯಿಂದ ಹೊರಗೆ ಉಳಿದಿದ್ದು.
ಸ್ವಾತಂತ್ರ ಬಂದ ಮೇಲೂ ಲೋಹಿಯಾರವರು ಸಂಸತ್ ಅನ್ನು ಪ್ರವೇಶಿಸಲು 16 ವರ್ಷಗಳೇ ಕಾಯಬೇಕಾಯಿತು. ಮೊಟ್ಟಮೊದಲ ಬಾರಿಗೆ 1963ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಲೋಹಿಯಾ ಸಂಸತ್ ಪ್ರವೇಶಿಸಿದರು. ತಡವಾಗಿ ಬಂದರೂ ದೃಢವಾಗಿ ತಮ್ಮ ಸಂಸದೀಯ ಚಟುವಟಿಕೆಗಳನ್ನು ಆರಂಭಿಸಿದ ಲೋಹಿಯಾ ಸಂಸತ್ತಿನ ಇತಿಹಾಸದಲ್ಲಿ ಕಂಡು-ಕೇಳರಿಯದ ಭಾಷಣವನ್ನು ಮಾಡಿದರು.
ವಿಶೇಷವಾಗಿ ಆಯವ್ಯಯ ಪತ್ರಗಳ ವಿಂಗಡಣೆಯಲ್ಲಿನ ಆಷಾಢಭೂತಿತನವನ್ನು, ಎಲ್ಲಕ್ಕಿಂತ ಹೆಚ್ಚಾಗಿ ಜನವಿರೋಧಿ ನಿಲುವನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಭಾರತದ ಪ್ರಧಾನಮಂತ್ರಿ ದಿನಕ್ಕೆ 25 ಸಾವಿರ ರೂ. ಖರ್ಚು ಮಾಡುತ್ತಿದ್ದರೂ ಶ್ರೀಸಾಮಾನ್ಯನಿಗೆ ಕೇವಲ ನಾಲ್ಕಾಣೆಯನ್ನು ಕೊಟ್ಟಿರುವುದು ಈ ದೇಶದ ಆರ್ಥಿಕ ನೀತಿಯ ದಿವಾಳಿತನವನ್ನು ತೋರಿಸುತ್ತದೆ ಎಂಬುದನ್ನು ಸಾಕ್ಷಾತ್ಕಾರ ಮಾಡಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
ಲೋಹಿಯಾರವರ ಆಯವ್ಯಯ ವಿಶ್ಲೇಷಣೆ ಪ್ರಪಂಚದ ಯಾವುದೇ ಸಂಸತ್‌ನಲ್ಲಿ ನಡೆದಂತಹ ಆರ್ಥಿಕ ವಿಶ್ಲೇಷಣೆಗಳಿಗೂ ಕಮ್ಮಿ ಇಲ್ಲ. ವಿತ್ತಮಂತ್ರಿಗಳಿಗೆ ಲೋಹಿಯಾ ಎತ್ತಿದ ಪ್ರಶ್ನೆಗಳಿಗೆ ಉತ್ತರವಿಲ್ಲದೆ ಕೈಕಟ್ಟಿಕುಳಿತುಕೊಳ್ಳುತ್ತಿದ್ದರು. ಇದು ಲೋಹಿಯಾರ ಸಾಮರ್ಥ್ಯಕ್ಕೆ ಕೈಗನ್ನಡಿಯಾದರೆ, ಭಾರತದ ಆರ್ಥಿಕ ನೀತಿಯ ಶೋಚನೀಯ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ.
ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಲೋಹಿಯಾ ಸಂಸತ್‌ನಲ್ಲಿ ಎತ್ತದ ಸಾಮಾಜಿಕ ವಿಷಯವೇ ಇಲ್ಲ. ಎಲ್ಲಕ್ಕಿಂತಲೂ ಹೆಚ್ಚಾಗಿ ಅದ್ಭುತ ಸಾಮರ್ಥ್ಯವಿರುವ ಸಂಸದೀಯ ಪಟುಗಳ ದೊಡ್ಡ ಸೈನ್ಯವನ್ನೇ ಕಟ್ಟಿಬೆಳೆಸಿದರು. ಮೊದಲಿಗರಾಗಿ ಜಾರ್ಜ್ ಫೆರ್ನಾಂಡಿಸ್, ಕಿಶನ್ ಪಟ್ನಾಯಕ್, ಶಾಂತವೇರಿ ಗೋಪಾಲಗೌಡ, ಜೆ.ಎಚ್.ಪಟೇಲ್, ಜಗಳೂರು ಮುಹಮ್ಮದ್ ಇಮಾಮ್, ಶರದ್ ಯಾದವ್, ಲಾಲು ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್, ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ ಎಲ್ಲರಿಗಿಂತ ಮಿಗಿಲಾಗಿ ಮಧುಲಿಮಯೆ ಲೋಹಿಯಾ ನಂತರವೂ ಸಹ ಭಾರತದ ಸಂಸತ್ತಿನ ಘನತೆಯನ್ನು ಎತ್ತಿ ಹಿಡಿಯುವುದರಲ್ಲಿ ಮತ್ತು ಸಂಸದೀಯ ಚರ್ಚೆಗಳನ್ನು ಉನ್ನತ ಮಟ್ಟಕ್ಕೇರಿಸುವಲ್ಲಿ ಒಳ್ಳೆಯ ನಿದರ್ಶನಗಳಾಗಿದ್ದಾರೆ.
ಒಡಿಶಾದಲ್ಲಿ ಉಪವಾಸದಿಂದ ಸತ್ತ ಘಟನೆಯ ಬಗ್ಗೆ ಕಿಶನ್ ಪಟ್ನಾಯಕ್ ಅವರು ಎತ್ತಿದ ಸವಾಲುಗಳು, ಅಕ್ರಮಗಳ ವಿರುದ್ಧ, ತೆರಿಗೆಗಳ ವಿರುದ್ಧ ಸರಕಾರವನ್ನು ಕಟ್ಟಿಹಾಕಿದವರಲ್ಲಿ ಅವರೇ ಮೊದಲಿಗರು. ಬ್ಯಾಂಕ್ ಸ್ಕಾಮ್‌ಗಳು ಸೇರಿದಂತೆ ಇತ್ಯಾದಿ ಕರ್ಮಕಾಂಡಗಳ ಬಗ್ಗೆ ಜಾರ್ಜ್ ಫೆರ್ನಾಂಡಿಸ್ ನಡೆಸಿದ ಸಂಸದೀಯ ಚಟುವಟಿಕೆಗಳು ಭಾರತೀಯ ಇತಿಹಾಸದಲ್ಲೆ ಅಚ್ಚಳಿಯದ ಘಟನೆಗಳು.
ಒಮ್ಮೆ ಕಿಶನ್ ಪಟ್ನಾಯಕ್ ಅವರು ಮಾತೃಭಾಷಾ ನೀತಿಯ ಬಗ್ಗೆ ಒಂದು ಪ್ರಶ್ನೆ ಎತ್ತಿದಾಗ ಅಂದಿನ ವಿದ್ಯಾಮಂತ್ರಿ ಎಂ.ಸಿ.ಚಗ್ಲಾ ಆ ಪ್ರಶ್ನೆಯ ಔಚಿತ್ಯವನ್ನೇ ಪ್ರಶ್ನಿಸಿ ಸದನವೇ ಕಂಗಾಲಾಗುವಂತೆ ಮಾಡಿದರು. ಛಲಬಿಡದ ಕಿಶನ್ ಪಟ್ನಾಯಕ್ ಪ್ರಶ್ನೆಯ ಔಚಿತ್ಯವನ್ನು ಹುಡುಕುವ ಬದಲಾಗಿ, ಭಾರತದ ಸಂವಿಧಾನದ ಅಡಿಯಲ್ಲಿ ಪಕ್ಷಪಾತವಿಲ್ಲದೆ ಆಡಳಿತ ಕೊಡುವಂತಹ ಪ್ರತಿಜ್ಞಾವಿಧಿ ಸ್ವೀಕರಿಸಿದ ಹೈಕೋರ್ಟಿನ ನ್ಯಾಯಾಧೀಶರು ನಿವೃತ್ತಿಯ ಬಳಿಕ ತನ್ನ ಹುದ್ದೆಯ ಘನತೆಗೆ ಧಕ್ಕೆ ತರುವಂತಹ ರೀತಿಯಲ್ಲಿ ರಾಜಕೀಯಕ್ಕೆ ಪ್ರವೇಶಿಸಿ ಒಂದು ಪಕ್ಷ ಸೇರಿ ವಿದ್ಯಾಮಂತ್ರಿಯಾಗಿ ಇವರು ರಾಜಕೀಯ ಪದವಿಯನ್ನು ಹಿಡಿದಿರುವುದರ ಔಚಿತ್ಯ ಗಮನಿಸಬೇಕೆಂದು ಮಂತ್ರಿ ಚಗ್ಲಾ ಅವರಿಗೆ ತಿರುಗೇಟು ನೀಡಿದರು.
ಆಗ ಕಿಶನ್ ಪಟ್ನಾಯಕ್ ಆ ಸದನದ ಅತ್ಯಂತ ಕಿರಿಯ ಸದಸ್ಯನಾಗಿದ್ದರು. ಆದರೆ, ಮಂತ್ರಿ ಎಂ.ಸಿ.ಚಗ್ಲಾ ಸದನದ ಅತ್ಯಂತ ಹಿರಿಯ, ಗೌರವಾನ್ವಿತ ವ್ಯಕ್ತಿಗಳು ಎಂಬುದನ್ನು ಗಮನಿಸಬೇಕು. ಕಿಶನ್ ಪಟ್ನಾಯಕ್ ಅಂತಹ ಸನ್ನಿವೇಶದಲ್ಲಿದ್ದರೂ ಸಹ ಅತ್ಯಂತ ದಕ್ಷತೆ, ಧೈರ್ಯದಿಂದ ಸಂಸದೀಯ ಚರ್ಚೆಗಳಲ್ಲಿ ಭಾಗಿಯಾಗಿ ಅಭಿವ್ಯಕ್ತಿ ಸ್ವಾತಂತ್ರದ ಒಂದು ಒಳ್ಳೆಯ ಉದಾಹರಣೆಯಾಗಿದ್ದಾರೆ.

ಕರ್ನಾಟಕದ ಮೇಲೆ ಲೋಹಿಯಾ ಪ್ರಭಾವ

1951ರ ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿ ಸಮಾಜವಾದಿ ಚಳವಳಿಗೆ ಕರ್ನಾಟಕವನ್ನು ಅಣಿ ಮಾಡಿಸಿದ ಲೋಹಿಯಾ ‘ಉಳುವವನೆ ಭೂ ಒಡೆಯ’ ಎಂದು ಅವರು ಕೊಟ್ಟ ಘೋಷವಾಕ್ಯ ಮುಂದೆ ಅವರೇ ಅನಾವರಣ ಮಾಡಿದ ‘ಭಾರತದ ರೈತ’ ಪ್ರಬಂಧಕ್ಕೂ ಮತ್ತು ಅವರು ಮುಂದೆ ರೂಪಿಸಿದ ಸಮಾಜವಾದಿ ಸಿದ್ಧಾಂತಕ್ಕೂ ಅಡಿಪಾಯವಾಯಿತು.
ಆ ಸತ್ಯಾಗ್ರಹದ ಮೂಲಕ ಇಡೀ ಶಿವಮೊಗ್ಗ ಜಿಲ್ಲೆಯ ತರುಣರ ಸಂಘ ಸಮಾಜವಾದಿ ಕಾರ್ಯಕ್ರಮಗಳನ್ನು ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಹರಡಿದರು. ಭಾರತದ ಸಂಸತ್ತಿನ ಬೆಳವಣಿಗೆಯಲ್ಲಿ ಮತ್ತೊಂದು ದಿಗ್ಗಜ ಎಂದು ನೆನಪಿಸಿಕೊಳ್ಳಬಹುದಾದ ಶಾಂತವೇರಿ ಗೋಪಾಲಗೌಡ ಸರಳತೆ, ನಿಷ್ಠುರತೆಗೆ ಮತ್ತು ಹೋರಾಟದ ಕೆಚ್ಚಿಗೆ ಲೋಹಿಯಾರ ಪ್ರತಿರೂಪದಂತೆ ಇದ್ದರು.
ಅವರ ಸ್ಫಟಿಕದಂತಹ ಪ್ರಾಮಾಣಿಕತೆ, ಕೆಚ್ಚೆದೆಯ ಧೈರ್ಯ ಮತ್ತು ಕಂಡ-ಕಂಡಲ್ಲಿ ಅನ್ಯಾಯವನ್ನು ಪ್ರತಿಭಟಿಸುವ ಅವರ ಜಾಯಮಾನ ಲೋಹಿಯಾರ ಮನ ಮೆಚ್ಚಿಸಿತ್ತು. ವಿಧಾನಸಭೆಯಲ್ಲಿ ಶಾಂತವೇರಿ ಗೋಪಾಲಗೌಡರು ಭಾಷಣಕ್ಕೆ ನಿಂತರೆ ನಿಶ್ಯಬ್ದವಾಗಿ ಕುಳಿತು ಇಡೀ ಸದನವೇ ಅವರ ಮಾತಿಗೆ ತಲೆದೂಗುತ್ತಿತ್ತು.
ಸದಾ ರೈತರಪರ, ದಲಿತರ ಪರ ಮತ್ತು ಮಹಿಳೆಯರ ಪರವಾಗಿ ಗೋಪಾಲಗೌಡರು ರಾಜ್ಯ ಸರಕಾರವನ್ನು ಪದೇ ಪದೇ ಕಟ್ಟಿಹಾಕಿ ತೀವ್ರ ಮುಜುಗರಕ್ಕೆ ಸಿಲುಕಿಸುತ್ತಿದ್ದರು. ಭೂ ಸುಧಾರಣೆ ಪರ, ವೆೆುಸೂರು ದಸರಾ ವಿರೋಧ ಮಾಡಿ ಪ್ರಜಾತಂತ್ರ ಮತ್ತು ಸಮಾಜವಾದ ಎರಡನ್ನೂ ಒಟ್ಟೊಟ್ಟಿಗೆ ಕೊಂಡೊಯ್ಯುವ ಅನಿವಾರ್ಯತೆಯನ್ನು ಸರಕಾರದ ಕಿವಿಹಿಂಡಿ ಹೇಳುತ್ತಿದ್ದರು.
1967ರಲ್ಲಿ ಸೋಷಿಯಲಿಸ್ಟ್ ಉಮೇದುವಾರನಾಗಿ ಲೋಕಸಭೆ ಪ್ರವೇಶಿಸಿದ ಜೆ. ಎಚ್.ಪಟೇಲ್‌ರವರಂತೂ ಪಾರ್ಲಿಮೆಂಟಿನಲ್ಲಿ ಮೊತ್ತ ಮೊದಲಬಾರಿಗೆ ಕನ್ನಡದಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿ ರಾಷ್ಟ್ರದ ಗಮನ ಸೆಳೆದರು. ಅಷ್ಟು ಮಾತ್ರವಲ್ಲ, ಲೋಹಿಯಾರ ಮೆಚ್ಚುಗೆಗೂ ಪಾತ್ರರಾದರು.
ಅದೇ ಗರಡಿಯಲ್ಲಿ ತಯಾರಾದ ಕಾಗೋಡು ತಿಮ್ಮಪ್ಪ ಮತ್ತು ಎಸ್.ಬಂಗಾರಪ್ಪ ಮತ್ತು ಕೋಣಂದೂರು ಲಿಂಗಪ್ಪ, ದೇವರಾಜ ಅರಸು ಸರಕಾರದ ಆಡಳಿತ ಕರ್ನಾಟಕ ರಾಜ್ಯದ ಸುವರ್ಣಯುಗವನ್ನೇ ಅನಾವರಣಗೊಳಿಸುವುದಕ್ಕೆ ಸ್ಫೂರ್ತಿಯ ಸೆಲೆಯಾಗಿ ನಿಂತರು. ವಿದ್ಯಾರ್ಥಿಯಾಗಿದ್ದ ನನಗಂತೂ ಈ ಮೂವರು ವಿಧಾನಸಭೆಯಲ್ಲಿ ಮಾತನಾಡುತ್ತಿದ್ದರೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಅವರ ವಾದ-ವಿವಾದವನ್ನು ಆಲಿಸುವುದೇ ಒಂದು ರೋಚಕ ಅನುಭವ.

ಪ್ರೊ.ಎಂ.ಡಿ.ನಂಜುಂಡಸ್ವಾಮಿ ಮತ್ತು ರೈತ ಚಳವಳಿ

ಇವೆಲ್ಲಕ್ಕಿಂತಲೂ ಹೆಚ್ಚಿನ ಪ್ರಭಾವವನ್ನು ಲೋಹಿಯಾ ಬೀರಿದ್ದು ಎಂದರೆ ಕರ್ನಾಟಕದಲ್ಲಿ ರೈತ ಚಳವಳಿಯ ಲಾಂಛನದಲ್ಲಿ. ಸಮಾಜವಾದಿ ಯುವಜನ ಸಭಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ಯುವಕರ ತಂಡ ನಂತರದ ದಿನಗಳಲ್ಲಿ ನವ ನಿರ್ಮಾಣ ಕ್ರಾಂತಿ ಎಂಬ ಹೆಸರಿನಲ್ಲಿ ಜೆಪಿ ಚಳವಳಿಗೆ ನೇರವಾಗಿ ಧುಮುಕಿತು. ತದನಂತರ ಶಿವಮೊಗ್ಗದ ಎನ್.ಡಿ.ಸುಂದರೇಶ್, ಕಡಿದಾಳು ಶಾಮಣ್ಣ ಇವರು ಸಿದ್ಧಮಾಡಿದ ರೈತ ಸಂಘದ ಭೂಮಿಕೆಗೆ ನೇರವಾಗಿ ಧುಮುಕಿದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅಂತೂ ರೈತಪರ ಹೋರಾಟಗಳಲ್ಲಿ ಮಲಗಿದ್ದ ಕರ್ನಾಟಕದ ರೈತರನ್ನು ಬಡಿದೆಬ್ಬಿಸಿದರು.
ರೈತ ಸಂಘ ಮನೆ-ಮನೆಯ ಮಾತಾಯಿತು. ಮನೆಗೊಬ್ಬ ಆಳನ್ನು ಚಳವಳಿಗೆ ಕಳುಹಿಸುತ್ತಿದ್ದ ರೈತರು ಪ್ರೊ.ನಂಜುಂಡಸ್ವಾಮಿ ನೇತೃತ್ವದ ಎಲ್ಲ ಹೋರಾಟಗಳಿಗೂ ಅಭೂತಪೂರ್ವ ಬೆಂಬಲವನ್ನು ನೀಡಿದರು. ಹೀಗಾಗಿ ರೈತಶಕ್ತಿಯನ್ನು ಬಗ್ಗುಬಡಿಯಲು ಸರಕಾರ ಕಂಡ-ಕಂಡಲ್ಲಿ ಗುಂಡಿಟ್ಟು ಗೋಲಿಬಾರ್ ಮೂಲಕ 139 ಮಂದಿ ರೈತರ ಬಲಿ ತೆಗೆದುಕೊಂಡಿತು. ರೈತರ ಮೇಲೆ ಬೀಸಿದ ಈ ಹಿಂಸೆಯ ಛಾಟಿ ರೈತರನ್ನು ಮತ್ತಷ್ಟು ಉಗ್ರಗೊಳಿಸಿ, ಇಡೀ ಪ್ರಪಂಚಕ್ಕೆ ಮಾದರಿಯಾದ ರೈತ ಚಳವಳಿಯನ್ನು ಕರ್ನಾಟಕ ಅನಾವರಣಗೊಳಿಸಿತು.
ರೈತರ ಶೋಷಣೆಯನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದ ಬಹುರಾಷ್ಟ್ರೀಯ ಕಂಪೆನಿಗಳಿಗೆ ಪ್ರೊ.ನಂಜುಂಡಸ್ವಾಮಿ ದುಸ್ವಪ್ನ ವಾದರು. ಜಿನೇವಾಕ್ಕೆ ರೈತರನ್ನು ಮೆರವಣಿಗೆ ತೆಗೆದುಕೊಂಡು ಹೋದ ಪ್ರೊ.ನಂಜುಂಡಸ್ವಾಮಿಯವರನ್ನು ಕಂಡು ಅಲ್ಲಿನ ‘ಡಬ್ಲೂಟಿಒ’ ಕಚೇರಿ ಪ್ರೊ.ಎಂ.ಡಿ.ಎನ್. ಅವರು ಜಿನೇವಾ ಬಿಡುವವರೆಗೂ ಅದರ ಕಚೇರಿಗೆ ಬೀಗ ಜಡಿದು ಮುಚ್ಚಿದ್ದರು.
1992ರಲ್ಲಿ ಕನಕಪುರದಲ್ಲಿ ನಡೆದ ಗ್ರಾನೈಟ್ ವಿರೋಧಿ ಚಳವಳಿ, ಕರ್ನಾಟಕದ ಉದ್ದಗಲಕ್ಕೂ ವ್ಯಾಪಿಸಿದ್ದ ಕರ ನಿರಾಕರಣೆ ಹೋರಾಟ, ಸಾಲ ನಿರಾಕರಣೆ ಮತ್ತು ಮರುಜಪ್ತಿ ಆಂದೋಲನ ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಬಹುದೊಡ್ಡ ಮರೆಯಲಾಗದ ವೆೆುಲುಗಲ್ಲುಗಳಾಗಿವೆ. ಈ ಚಳವಳಿಗಳಿಗೆ ನೇರ ಸ್ಫೂರ್ತಿ ಲೋಹಿಯಾರಿಂದ ಬಂತು ಎಂದರೆ ಅತಿಶಯೋಕ್ತಿ ಯಾಗಲಾರದು.

ಪ್ರೊ.ಬಿ.ಕೃಷ್ಣಪ್ಪ ಮತ್ತು ದಲಿತ ಚಳವಳಿ

ಸಮಾಜವಾದಿ ಯುವಜನಸಭಾದ ಗರಡಿಯಲ್ಲಿ ಪೈಲ್ವಾನರಾಗಿದ್ದ ಪ್ರೊ.ಬಿ.ಕೃಷ್ಣಪ್ಪ, ದೇವನೂರ ಮಹಾದೇವ ಮುಂತಾದ ಗೆಳೆಯರು ಸಮಾಜವಾದಿ ಚಳವಳಿ ತುರ್ತು ಪರಿಸ್ಥಿತಿಯ ಸನ್ನಿವೇಶದಲ್ಲಿ ಸ್ಥಗಿತಗೊಂಡಿದ್ದಾಗ ದಲಿತ ಬರಹಗಾರರ ಒಕ್ಕೂಟವನ್ನು ಸ್ಥಾಪಿಸುವ ಮೂಲಕ ‘ಸಮಾನತೆಗಾಗಿ ಸಾಮಾಜಿಕ ನ್ಯಾಯ’ ಎಂಬ ಘೋಷವಾಕ್ಯ ಕರ್ನಾಟಕದ ಉದ್ದಗಲಕ್ಕೂ ಹರಡಿ ಬೃಹದಾಕಾರದ ದಲಿತ ಚಳವಳಿಯನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದರೆ, ಅದರ ಸ್ಫೂರ್ತಿಯ ಸೆಲೆ ಲೋಹಿಯಾರ ಸಮಾಜವಾದಿ ಸಿದ್ಧಾಂತ. ಆನಂತರ ಉದಯಿಸಿದ ದಲಿತ ಸಂಘರ್ಷ ಸಮಿತಿ, ಮೀಸಲಾತಿ ಪರ ನಡೆಸಿದ ಹೋರಾಟಗಳು, ಅದೆಲ್ಲದಕ್ಕಿಂತ ಮುಖ್ಯ ಚಂದ್ರಗುತ್ತಿ ಬೆತ್ತಲೆಸೇವೆ ವಿರುದ್ಧ ಮತ್ತು ಸವದತ್ತಿಯ ದೇವದಾಸಿ ಪದ್ಧತಿಯ ವಿರುದ್ಧ ನಡೆಸಿದ ಹೋರಾಟಗಳು ನಿಜಕ್ಕೂ ಅವಿಸ್ಮರಣೀಯ. ರಾಷ್ಟ್ರಾದ್ಯಂತ ದಲಿತ ಚಳವಳಿ ನಡೆದರೂ ಮೂಢನಂಬಿಕೆ, ಮಹಿಳೆಯರ ಶೋಷಣೆಯ ವಿರುದ್ಧ, ವಿಶೇಷವಾಗಿ ವಿಚಾರವಾದದ ಪರ ನಿಂತಿದ್ದು ಕರ್ನಾಟಕದ ದಲಿತ ಚಳವಳಿ ಮಾತ್ರ.
ಕೇವಲ ಒಂದು ಟ್ರೇಡ್ ಯೂನಿಯನ್ ಆಗಿ ಪರ್ಯಾವಸಾನ ಹೊಂದದೆ ಮಾನವೀಯತೆಯ ಅತ್ಯದ್ಭುತ ವೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾದ ಕರ್ನಾಟಕದ ದಲಿತ ಸಂಘರ್ಷ ಸಮಿತಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರವಾದಕ್ಕಿಂತಲೂ ಏನೂ ಕಮ್ಮಿ ಇಲ್ಲದ ಲೋಹಿಯಾರ ಸಮಾಜವಾದ ಪಾತ್ರ ವಹಿಸಿದೆ.
(ಮುಂದುವರಿಯುವುದು)

Writer - ಪ್ರೊ.ರವಿವರ್ಮ ಕುಮಾರ್

contributor

Editor - ಪ್ರೊ.ರವಿವರ್ಮ ಕುಮಾರ್

contributor

Similar News

ಜಗದಗಲ
ಜಗ ದಗಲ