ದಲಿತರಿಗೆ ಹಿಂಸೆಗಿಳಿಯಲು ಪ್ರೇರೇಪಿಸುತ್ತಿದ್ದಾರೆಯೇ?

Update: 2017-10-12 19:00 GMT

ಕಾನೂನುಗಳು, ನ್ಯಾಯಾಲಯಗಳು ದಲಿತರ ಮೇಲಿನ ದೌರ್ಜನ್ಯಗಳಿಗೆ ನ್ಯಾಯ ದೊರಕಿಸುವಲ್ಲಿ ವಿಫಲವಾಗುತ್ತಲೇ ಬಂದಿವೆ. ಬಹಿರಂಗವಾಗಿಯೇ ದಲಿತೇತರರ ಪರ ನಿಲ್ಲುವ ಕೆಲಸವನ್ನೂ ಮಾಡಿವೆ. ದಲಿತರು ಈಗೇನು ಮಾಡಬೇಕು? ಹೊಡೆಸಿಕೊಳ್ಳುವುದು ನಮ್ಮ ಹಿಂದಿನ ಜನ್ಮದ ಪಾಪಕರ್ಮದ ಪ್ರಾಯಶ್ಚಿತ ಎಂದು ಕೈಕಟ್ಟಿ ಕುಳಿತುಕೊಳ್ಳಬೇಕೇ?

ಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಗಮನಿಸಿದರೆ ಭಾರತದ ಭವಿಷ್ಯ ದಿನದಿಂದ ದಿನಕ್ಕೆ ಮತ್ತೆ ಪೇಶ್ವೆಗಳ ಕಾಲಕ್ಕೆ ದಾಪುಗಾಲಿಡುತ್ತಿದ್ದಂತೆ ಭಾಸವಾಗುತ್ತಿದೆ. ಸ್ವ್ವಾತಂತ್ರಗಳಿಸಿ 70 ವರ್ಷಗಳಾಗುತ್ತಿದ್ದರೂ, ಅಸ್ಪಶ್ಯತೆಯನ್ನು ಸಾಂವಿಧಾನಿಕವಾಗಿ ನಿಷೇಧಿಸಿ 67 ವರ್ಷಗಳಾಗಿದ್ದರೂ ದಲಿತೇತರರು ದಲಿತರ ಮೇಲೆ ದೌರ್ಜನ್ಯವನ್ನು ಎಗ್ಗಿಲ್ಲದಂತೆ ನಡೆಸುತ್ತಿರುವುದು ದಲಿತರು ತಿರುಗಿ ಬೀಳುವಂತೆ ಪದೇ ಪದೇ ಪ್ರಚೋದಿಸುತ್ತಿದ್ದಾರೆ. ಒಂದು ವರ್ಷದ ಹಿಂದೆ ಗುಜರಾತಿನ ಉನಾದಲ್ಲಿ ದನದ ಚರ್ಮ ಸುಲಿದಿದ್ದಕ್ಕೆ ದಲಿತರನ್ನು ಮಾರ ಣಾಂತಿಕವಾಗಿ ಥಳಿಸಲಾಗಿತ್ತು. ಅದಕ್ಕೆ ಪ್ರತಿರೋಧ ಒಡ್ಡಿದ ದಲಿತರು ‘‘ದನವನ್ನು, ದನದ ಬಾಲವನ್ನು ನೀವೇ ಇಟ್ಟುಕೊಳ್ಳಿ, ನಮಗೆ ಭೂಮಿ ಕೊಡಿ’’ ಎಂಬ ಹೋರಾಟ ರೂಪಿಸಿ ಅದು ಕರ್ನಾಟಕದವರೆಗೆ ಹಬ್ಬಿ ‘ಚಲೋ ಉಡುಪಿ’ಯಾಗಿ ಕಂಪಿಸಿತ್ತು. ಈಗ ಅದೇ ಗುಜರಾತಿನಲ್ಲಿ ದಲಿತ ಯುವಕ ಮೀಸೆ ಬಿಟ್ಟಿದ್ದಕ್ಕೆ ಥಳಿಸಲಾಗಿದೆ. ಇದನ್ನು ಪ್ರತಿರೋಧಿಸಿ ದಲಿತರು ಮೀಸೆ ಸೆಲ್ಫಿ ಆಂದೋಲನವನ್ನು ಆರಂಭಿಸಿದ್ದಾರೆ. ಅಸ್ಪಶ್ಯತೆ ಈ ದೇಶದ ಸವರ್ಣೀಯರ ಸಮಸ್ಯೆ. ಅದನ್ನು ಅವರೇ ಪರಿಹರಿಸಿಕೊಳ್ಳಬೇಕು ಎಂದು ಬಾಬಾಸಾಹೇಬ್ ಅಂಬೇಡ್ಕರ್‌ರವರು ಹೇಳಿದ್ದರು. ಅಸ್ಪಶ್ಯತೆ ದಲಿತೇತರರನ್ನು ರೋಗಗ್ರಸ್ತರನ್ನಾಗಿ ಮಾಡಿ ವೈರಸ್‌ಗಿಂತಲೂ ಹೆಚ್ಚು ಹಾನಿ ಮಾಡುತ್ತಿರುವುದನ್ನು ಅಂಬೇಡ್ಕರರು ಸ್ಪಷ್ಟವಾಗಿ ಗ್ರಹಿಸಿದ್ದರು. ಅಷ್ಟೇ ಅಲ್ಲದೆ ಇದು ಇಡೀ ದೇಶವನ್ನೇ ವಿನಾಶದ ಕಡೆಗೆ ಕೊಂಡೊಯ್ಯುವುದನ್ನು ಎಳೆ ಎಳೆಯಾಗಿ ತಮ್ಮ ಜಾತಿ ವಿನಾಶ ಕೃತಿಯಲ್ಲಿ ತಿಳಿಸಿದ್ದಾರೆ. ಆದರೆ ಈ ಎಚ್ಚರಿಕೆಯನ್ನು ದಲಿತೇತರರು ಗ್ರಹಿಸಿದಂತೆ ಕಾಣುತ್ತಲೇ ಇಲ್ಲ. ಅಸ್ಪಶ್ಯತೆ ಎಂಬುದು ತಮಗೆ ಅಂಟಿದ ರೋಗವೆಂಬುದನ್ನವರು ಅರಿಯಲು ಸಿದ್ಧರೇ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಬದಲಾಗಿ ಅಸ್ಪಶ್ಯತೆ ಆಚರಣೆ ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳುವ ಸಾಧನವೆಂದು ಬಗೆದಿದ್ದಾರೆ.

ಎರಡು ವರ್ಷಗಳ ಹಿಂದೆ ಪುಣೆಯಲ್ಲಿ ಅಂಬೇಡ್ಕರರ ರಿಂಗ್‌ಟೋನ್ ಇಟ್ಟುಕೊಂಡದ್ದಕ್ಕಾಗಿ ದಲಿತ ಯುವಕನನ್ನು ಹೊತ್ತೊಯ್ದು ಕೊಲ್ಲಲಾಗಿತ್ತು. ಉತ್ತರ ಪ್ರದೇಶದಲ್ಲಿ ಚಿಮ್ಮಾ ಎಂಬ ದಲಿತನ ದೇವಸ್ಥಾನ ಪ್ರವೇಶ ನಿರಾಕರಿಸಿ ಜೀವಂತ ಸುಡಲಾಗಿತ್ತು. ನಮ್ಮದೇ ತುಮಕೂರಿನ ಗುಬ್ಬಿಯಲ್ಲಿ ಸುಳ್ಳು ಆರೋಪ ಹೊರಿಸಿ ಅಭಿಷೇಕನನ್ನು ಸಾಯುವಂತೆ ಥಳಿಸಿದ್ದರು. ಚಿಕ್ಕಬಳ್ಳಾಪುರದಲ್ಲಿ ಮುರಳಿ ಎಂಬ ಶಾಲಾ ಬಾಲಕನನ್ನು ಸಹ ಹೊಡೆದು ನೇಣು ಹಾಕಲಾಗಿತ್ತು. ಹೀಗೆ ಲೆಕ್ಕವಿಲ್ಲದಷ್ಟು ಬಾರಿ ಮನುಷ್ಯತ್ವವನ್ನು ಕಳೆದುಕೊಳ್ಳುತ್ತಿರುವ ದಲಿತೇತರರು ಪದೇ ಪದೇ ದಲಿತರನ್ನು ತಮ್ಮ ಗುಲಾಮರಂತೆ ಭಾವಿಸುತ್ತಾ ಗುಲಾಮತನದ ಪರಿಧಿಯನ್ನು ದಾಟಿದ ತಕ್ಷಣ ಸ್ವತಃ ಶಿಕ್ಷಿಸುವಂತಹ ದರ್ಪದ ಬದುಕು ಬಾಳುತ್ತಿದ್ದಾರೆ. ಆದರೆ ಮತ್ತೊಂದು ಕಡೆ ಇಷ್ಟು ದಿನಗಳು ತಮ್ಮ ಮೇಲೆ ಆಗುತ್ತಿದ್ದ ದೌರ್ಜನ್ಯಗಳನ್ನು ಕಾನೂನಾತ್ಮಕವಾಗಿ ಪರಿಹರಿಸಿಕೊಳ್ಳಲು ಶಾಂತಿ ಮಾರ್ಗದಲ್ಲಿ ನಡೆಯುತ್ತಿರುವ ದಲಿತರನ್ನು ಪದೇ ಪದೇ ಹಿಂಸಾತ್ಮಕತೆಯ ಕಡೆಗೆ ಪ್ರಚೋದಿಸುತ್ತಿದ್ದಾರೆ.

ಇಂದು ಹಿಂಸೆಯ ಬಗ್ಗೆ ಮಾತನಾಡುತ್ತಿರುವ ದಲಿತರ ಸಂಖ್ಯೆ ಕಡಿಮೆಯೇ ಇದೆ. ಭಾರತದ ಸಂವಿಧಾನದ ಮೇಲೆ ಬೆಟ್ಟದಷ್ಟು ಭರವಸೆಗಳನ್ನಿಟ್ಟುಕೊಂಡು ಆಸೆ ಕಣ್ಗಳಿಂದ ಕಾಯುತ್ತಿರುವವರು ಬಹಳಷ್ಟಿದ್ದಾರೆ. ಆದರೆ ಸಂವಿಧಾನವನ್ನು ಕಳೆದ 70 ವರ್ಷಗಳಿಂದಲೂ ಮೀರುತ್ತಿರುವ ಸವರ್ಣೀಯರ ದರ್ಪಕ್ಕೆ ಪೆಟ್ಟು ನೀಡಲು ದಲಿತರು ಉನಾ ಚಳವಳಿ, ಉಡುಪಿ ಚಲೋದಂತಹ ಚಳವಳಿಗಳನ್ನು ಹಮ್ಮಿಕೊಂಡಿದ್ದರು ಹಾಗೂ ಇತಿಹಾಸದುದ್ದಕ್ಕೂ ಪ್ರತಿರೋಧವನ್ನು ಒಡ್ಡುತ್ತಲೇ ಬರುತ್ತಿದ್ದಾರೆ. ಆದರೆ ದಲಿತರು ಎಂದಿಗೂ ಶಾಂತಿ ಮೀರಿ ಹಿಂಸೆಗಿಳಿಯುವ ಯೋಚನೆ ಮಾಡಿಲ್ಲ. ಕೆಲವೊಮ್ಮೆ ಯೋಚನೆ ಮಾಡಿದ್ದರೂ ಕಾರ್ಯಗತಗೊಳಿಸಿಲ್ಲ. ಆದರೆ ದಲಿತರ ಸೌಮ್ಯ ಪ್ರತಿರೋಧಕ್ಕೆ ಸೊಪ್ಪು ಹಾಕದ ದಲಿತೇತರರು ದಲಿತರು ರೊಚ್ಚಿಗೇಳುವುದನ್ನೇ ಬಯಸುತ್ತಿರುವಂತಿದೆ. ಆದ್ದರಿಂದಲೇ ಮೀಸೆ ಬೆಳೆಸಿದ್ದಕ್ಕೆ, ವಾಚ್ ಕಟ್ಟಿದ್ದಕ್ಕೆ, ನೆರಳು ಸೋಕಿದ್ದಕ್ಕೆ ದೈಹಿಕ ಹಲ್ಲೆ ನಡೆಸುತ್ತಿದ್ದಾರೆ.

ಮಹಾಡ್ ಕೆರೆ ಹೋರಾಟದಲ್ಲಿ ಸುಮಾರು ಹತ್ತು ಸಾವಿರ ಹೋರಾಟ ನಿರತರು ಅಂದು ಅಂಬೇಡ್ಕರರ ಅಪ್ಪಣೆಗೆ ಕಾದಿದ್ದರು. ತಮ್ಮನ್ನು ಥಳಿಸಿದ ಸವರ್ಣೀಯರ ವಿರುದ್ಧ ರಕ್ಷಣೆಗಾಗಿ ಪ್ರತಿ ಹಲ್ಲೆಗೆ ಸಿದ್ಧರಾಗಿದ್ದರು. ಬಹುಶಃ ಅಂದು ಅಂಬೇಡ್ಕರರು ಒಪ್ಪಿಗೆ ನೀಡಿದ್ದರೆ ಇತಿಹಾಸದ ಪುಟಗಳಲ್ಲಿ ಮತ್ತೊಂದು ಕೋರೆಗಾಂವ್ ದಾಖಲಾಗುತ್ತಿತ್ತೇನೋ? ಅಂಬೇಡ್ಕರರ ಸಂಯಮ ರಕ್ತಪಾತವನ್ನು ತಪ್ಪಿಸಿತ್ತು. ಇಂದು ಕೂಡ ದಲಿತರು ಸಂಯಮದಿಂದಲೇ ಸಹಿಸಿಕೊಂಡು ಬರುತ್ತಿದ್ದಾರೆ. ಆದರೆ ಅದೆಷ್ಟು ದಿನ? ತಾಳ್ಮೆಗೂ ಒಂದು ಕೊನೆ ಇರಬೇಕಲ್ಲವೆ? ಈ ತಾಳ್ಮೆಯನ್ನು ಮೀರುವ ತಾಕತ್ತು ದಲಿತರಿಗೂ ಇದೆಯಲ್ಲವೇ? ಉಸಿರ ಬಿಗಿ ಹಿಡಿದ ಜ್ವಾಲಾಮುಖಿ ಸಿಡಿಯಲೇಬೇಕು. ಆಗಾಗ ಸಿಡಿಯುತ್ತಲೇ ಇರಬೇಕು. ಹಾಗೆ ಸಿಡಿದೇ ತಾನೇ ಕೋರೆಗಾಂವ್ ಯುದ್ಧವಾಗಿದ್ದು! ದಲಿತೇತರ ಭಾರತ ದಲಿತ ಭಾರತದ ಮೇಲೆ ನಡೆಸಿದ ಮಾರಣಹೋಮಗಳನ್ನು ಸಹಿಸಿ ಸಹನೆಯಿಂದ ಕ್ಷಮಿಸಿ ಇನ್ನು ಮುಂದೆ ದೌರ್ಜನ್ಯ ಎಸಗಲಾರದು ಎಂದು ನಂಬುತ್ತಲೇ ಬಂದರು ದಲಿತರು. ಅದಕ್ಕೆ ನಮ್ಮ ಸರಕಾರಗಳು ಮಾಡಿದ ಕಾನೂನುಗಳೂ ಕಾರಣವಿರಬಹುದು. ಆದರೆ ಕಾನೂನುಗಳು, ನ್ಯಾಯಾಲಯಗಳು ದಲಿತರ ಮೇಲಿನ ದೌರ್ಜನ್ಯಗಳಿಗೆ ನ್ಯಾಯ ದೊರಕಿಸುವಲ್ಲಿ ವಿಫಲವಾಗುತ್ತಲೇ ಬಂದಿವೆ. ಬಹಿರಂಗವಾಗಿಯೇ ದಲಿತೇತರರ ಪರ ನಿಲ್ಲುವ ಕೆಲಸವನ್ನೂ ಮಾಡಿವೆ. ದಲಿತರು ಈಗೇನು ಮಾಡಬೇಕು? ಹೊಡೆಸಿಕೊಳ್ಳುವುದು ನಮ್ಮ ಹಿಂದಿನ ಜನ್ಮದ ಪಾಪಕರ್ಮದ ಪ್ರಾಯಶ್ಚಿತ ಎಂದು ಕೈಕಟ್ಟಿ ಕುಳಿತುಕೊಳ್ಳಬೇಕೇ?

ದಲಿತರಿಗೆ ಭಾರತದ ಬಗ್ಗೆ ಅತೀವ ಪ್ರೀತಿಯಿದೆ. ಈ ದೇಶಕ್ಕಾಗಿಯೇ ಇಷ್ಟು ದಿನ ಎಲ್ಲವನ್ನೂ ಸಹಿಸಿಕೊಂಡು ಕುಳಿತುಕೊಂಡಿದ್ದಾರೆ. ಆದರೆ ಈ ಜಾತಿ ವೈರಸ್ ಈಗ ದೇಶವನ್ನೇ ನಾಶವಾಗಿಸುವತ್ತ ನಡೆದಿದೆ. ಅಂಬೇಡ್ಕರರು ಹೇಳಿದಂತೆ ಜಾತಿ ದೇಶವನ್ನು ಬಿಟ್ಟು ವಿದೇಶಗಳಿಗೆ ತೆರಳಿ ಅಲ್ಲೂ ರೋಗವನ್ನು ಹರಡಿ ಅಮೆರಿಕದಂತಹ ದೇಶದಲ್ಲಿಯೂ ಬೋಸ್ಟನ್ ಬ್ರಾಹ್ಮಣರನ್ನು ಸೃಷ್ಟಿಸಿದೆ. ಇದು ಹೀಗೇ ಮುಂದುವರಿದರೆ ಇಡೀ ಜಗತ್ತನ್ನೇ ಆವರಿಸಿ ನಮ್ಮ ದೇಶದ ವಿರುದ್ಧ ಎಲ್ಲರನ್ನೂ ನಿಲ್ಲಿಸುವುದರಲ್ಲಿ ಅನುಮಾನವೇ ಇಲ್ಲ. ಆ ಕಾರಣಕ್ಕಾಗಿ ಸರಕಾರ ದಲಿತರ ಮೇಲೆ ಅಮಾನವೀಯ ದೌರ್ಜನ್ಯಗಳನ್ನು ನಡೆಸುತ್ತಿರುವವರನ್ನು ಸದೆ ಬಡಿಯಲು ಮತ್ತಷ್ಟು ನಿರ್ದಾಕ್ಷಿಣ್ಯ ಕ್ರಮಗಳನ್ನು ಜಾರಿಗೊಳಿಸಬೇಕಿದೆ.

Writer - ವಿಕಾಸ್ ಆರ್.ಮೌರ್ಯ

contributor

Editor - ವಿಕಾಸ್ ಆರ್.ಮೌರ್ಯ

contributor

Similar News

ಜಗದಗಲ
ಜಗ ದಗಲ