ರೊಹಿಂಗ್ಯ ನಿರಾಶ್ರಿತರ ಮಾನವಹಕ್ಕು ಕಡೆಗಣಿಸಲು ಸಾಧ್ಯವಿಲ್ಲ: ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2017-10-13 14:29 GMT

ಹೊಸದಿಲ್ಲಿ,ಅ.13: ಮ್ಯಾನ್ಮಾರ್‌ನಿಂದ ವಲಸೆ ಬಂದಿರುವ ರೊಹಿಂಗ್ಯಾ ನಿರಾಶ್ರಿತರ ಮಾನವಹಕ್ಕುಗಳನ್ನು ಕಡೆಗಣಿಸಲು ಸಾಧ್ಯವಿಲ್ಲವೆಂದು ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿದೆ. ಆದರೆ ರೊಹಿಂಗ್ಯ ನಿರಾಶ್ರಿತರ ವಾಸ್ತವ್ಯದಿಂದಾಗಿ ರಾಷ್ಟ್ರೀಯ ಭದ್ರತೆಯ ಮೇಲಾಗುವ ಪರಿಣಾಮಗಳ ಬಗ್ಗೆ ಸಂತುಲಿತವಾದ ನಿಲುವನ್ನು ಸರಕಾರವು ತಳೆಯಬೇಕಾದ ಅಗತ್ಯವಿದೆಯೆಂದು ಅದು ಹೇಳಿದೆ.

 ಪ್ರಕರಣದ ಮುಂದಿನ ಆಲಿಕೆ ನವೆಂಬರ್ 21ರಂದು ನಡೆಯಲಿದ್ದು, ಆವರೆಗೆ ರೊಹಿಂಗ್ಯ ನಿರಾಶ್ರಿತರ ಗಡಿಪಾರು ಮಾಡದಂತೆ ಸುಪ್ರೀಂಕೋಟ್ರ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

  ಸರಕಾರವು ರೊಹಿಂಗ್ಯ ನಿರಾಶ್ರಿತರನ್ನು ಗಡಿಪಾರು ಮಾಡಬಾರದೆಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಒಂದು ವೇಳೆ ಅವರನ್ನು ಗಡಿಪಾರುಗೊಳಿಸುವ ಯಾವುದೇ ಪ್ರಕ್ರಿಯೆಯನ್ನು ಆರಂಭಿಸಿದಲ್ಲಿ ತನ್ನನ್ನು ಸಮೀಪಿಸುವಂತೆ ಅದು ಅರ್ಜಿದಾರರಿಗೆ ತಿಳಿಸಿದೆ.

 ಮ್ಯಾನ್ಮಾರ್‌ನಲ್ಲಿ ಸೇನೆಯ ದಮನಕಾರ್ಯಾಚರಣೆಯ ಬಳಿಕ ಆ ದೇಶದಿಂದ ಲಕ್ಷಾಂತರ ರೋಹಿಂಗ್ಯಾ ಮುಸ್ಲಿಮರು ಭಾರತ, ಬಾಂಗ್ಲಾ ಸೇರಿದಂತೆ ಇತರ ದೇಶಗಳಿಗೆ ವಲಸೆ ಹೋಗಿದ್ದಾರೆ. ಭಾರತದ ವಿವಿಧೆಡೆ ನೆಲೆಸಿರುವ ಕೆಲವು ರೋಹಿಂಗ್ಯರಿಗೆ ದೇಶದ ಹೊರಗಿರುವ ಉಗ್ರಗಾಮಿ ಸಂಘಟನೆಗಳ ಜೊತೆ ಸಂಪರ್ಕವಿರುವ ಸಾಧ್ಯತೆಯಿದೆಯೆಂದು ಆರೋಪಿಸಿ, ಭಾರತ ಸರಕಾರವು ಅವರನ್ನು ಗಡಿಪಾರು ಮಾಡಲು ನಿರ್ಧರಿಸಿದೆ.

ರೊಹಿಂಗ್ಯ ನಿರಾಶ್ರಿತರ ವಿಷಯವನ್ನು ರಾಷ್ಟ್ರೀಯ ಭದ್ರತೆ, ಆರ್ಥಿಕ ಹಿತಾಸಕ್ತಿ, ಕಾರ್ಮಿಕ ಹಿತಾಸಕ್ತಿ ಮತ್ತು ಮಕ್ಕಳು, ಮಹಿಳೆಯರು, ರೋಗಿಗಳು ಹಾಗೂ ಅಮಾಯಕ ವ್ಯಕ್ತಿಗಳ ಸಂರಕ್ಷಣೆ ಸೇರಿದಂತೆ ವಿವಿಧ ದೃಷ್ಟಿಕೋನಗಳಲ್ಲಿ ನೋಡಬೇಕಾದ ಅಗತ್ಯವಿದೆಯೆಂದು ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಪ್ರತಿಪಾದಿಸಿದೆ.

 ''ರೊಹಿಂಗ್ಯರ ವಿಷಯವಾಗಿ ನಾವು ಸಮತೋಲನದ ನಿಲುವನ್ನು ತಾಳಬೇಕಾಗಿದೆ. ಇದೊಂದು ಸಾಮಾನ್ಯ ಪ್ರಕರಣವಲ್ಲ. ಹಲವಾರು ಮಂದಿಯ ಮಾನವಹಕ್ಕುಗಳ ವಿಷಯವನ್ನು ಇದು ಒಳಗೊಂಡಿದೆ''ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ. ಅರ್ಜಿದಾರರ ಪರವಾಗಿ ಖ್ಯಾತ ನ್ಯಾಯವಾದಿ ಫಾಲಿ ಎಸ್.ನಾರಿಮನ್ ವಾದಿಸಿದ್ದರು.

ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ತುಷಾರ್ ಮೆಹ್ತಾ ಅವರು, ಆದೇಶವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬೀರುವುದರಿಂದ, ಅದನ್ನು ಲಿಖಿತವಾಗಿ ನೀಡದಂತೆ ನ್ಯಾಯಾಲಯವನ್ನು ಕೋರಿದರು.

  ರೊಹಿಂಗ್ಯ ನಿರಾಶ್ರಿತರ ಗಡಿಪಾರಿಗೆ ಸಂಬಂಧಿಸಿದ ವಿಷಯವು ತನ್ನ ಕಾರ್ಯಕಾರಿ ನೀತಿಯ ನಿರ್ಧಾರವಾಗಿದ್ದು, ಈ ವಿಷಯವಾಗಿ ನ್ಯಾಯಾಂಗವು ಮಧ್ಯಪ್ರವೇಶಿಸಕೂಡದೆಂದು ಕೇಂದ್ರ ಸರಕಾರ ವು ನ್ಯಾಯಾಲಯಕ್ಕೆ ಮನವಿ ಮಾಡಿದೆ.

ದೇಶಾದ್ಯಂತ ಅಂದಾಜು ಸುಮಾರು 40 ಸಾವಿರ ರೋಹಿಂಗ್ಯ ಮುಸ್ಲಿಮರಿದ್ದು. ಅವರು ಜಮ್ಮು, ಹೈದರಾಬಾದ್, ಹರ್ಯಾಣ, ಉತ್ತರಪ್ರದೇಶ, ದಿಲ್ಲಿ ಹಾಗೂ ರಾಜಸ್ಥಾನಗಳಲ್ಲಿರುವ ನಿರಾಶ್ರಿತ ಶಿಬಿರಗಳಲ್ಲಿ ವಾಸವಾಗಿದ್ದಾರೆ. ಅವರಲ್ಲಿ ಸುಮಾರು 15 ಸಾವಿರ ಮಂದಿಗೆ ಅಧಿಕೃತವಾಗಿ ನಿರಾಶ್ರಿತರ ಮಾನ್ಯತೆ ದೊರೆತಿದೆ. ಆದರೆ ಭಾರತ ಸರಕಾರವು ಎಲ್ಲಾ ರೋಹಿಂಗ್ಯರನ್ನು ದೆೀಶದಿಂದ ಗಡಿಪಾರು ಮಾಡಲು ಬಯಸಿದೆ.

  ರೊಹಿಂಗ್ಯರನ್ನು ಗಡಿಪಾರು ಮಾಡುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಇಬ್ಬರು ನಿರಾಶ್ರಿತರು ಸುಪ್ರೀಂಕೋರ್ಟ್‌ನ ಮೆಟ್ಟಲೇರಿದ್ದರು. ಆದರೆ ಕೇಂದ್ರ ಸರಕಾರವು ರೊಹಿಂಗ್ಯರಿಗೆ ಐಸಿಸ್ ಹಾಗೂ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಜೊತೆ ನಂಟಿರುವುದಾಗಿ ಆರೋಪಿಸಿತ್ತು. ಒಂದು ವೇಳೆ ರೊಹಿಂಗ್ಯರಿಗೆ ಭಾರತದಲ್ಲಿ ನೆಲೆಸಲು ಅನುಮತಿ ನೀಡಿದಲ್ಲಿ ದೇಶದ ಜನತೆಗಾಗಿ ಇರುವ ನೈಸರ್ಗಿಕ ಸಂಪನ್ಮೂಲಗಳನ್ನು ಅವರು ಬಳಸಿಕೊಳ್ಳುವರು ಹಾಗೂ ಇದರಿಂದ ಸಾಮಾಜಿಕ ಉದ್ವಿಗ್ನತೆಗೆ ಕಾರಣವಾಗಲಿದೆ ಮತ್ತು ಕಾನೂನು ಮತ್ತು ಶಿಸ್ತು ಸಮಸ್ಯೆಗಳು ಉದ್ಭವಿಸಲಿವೆಯೆಂದು ಭಾರತ ಸರಕಾರ ವಾದಿಸಿತ್ತು.

ರೋಹಿಂಗ್ಯರನ್ನು ಗಡಿಪಾರು ಮಾಡುವ ಭಾರತ ಸರಕಾರದ ನಿರ್ಧಾರವು ಮಾನವೀಯ ಅನುಕಂಪ ರಹಿತವಾದುದೆಂದು ಅದು ಹೇಳಿದೆ.

ರೊಹಿಂಗ್ಯ ನಿರಾಶ್ರಿತರ ವಿಷಯವನ್ನು ರಾಷ್ಟ್ರೀಯ ಭದ್ರತೆ, ಆರ್ಥಿಕ ಹಿತಾಸಕ್ತಿ, ಕಾರ್ಮಿಕ ಹಿತಾಸಕ್ತಿ ಮತ್ತು ಮಕ್ಕಳು, ಮಹಿಳೆಯರು, ರೋಗಿಗಳು ಹಾಗೂ ಅಮಾಯಕ ವ್ಯಕ್ತಿಗಳ ಸಂರಕ್ಷಣೆ ಸೇರಿದಂತೆ ವಿವಿಧ ದೃಷ್ಟಿಕೋನಗಳಲ್ಲಿ ನೋಡಬೇಕಾದ ಅಗತ್ಯವಿದೆ. ರೊಹಿಂಗ್ಯರ ವಿಷಯವಾಗಿ ನಾವು ಸಮತೋಲನದ ನಿಲುವನ್ನು ತಾಳಬೇಕಾಗಿದೆ. ಇದೊಂದು ಸಾಮಾನ್ಯ ಪ್ರಕರಣವಲ್ಲ. ಹಲವಾರು ಮಂದಿಯ ಮಾನವಹಕ್ಕುಗಳ ವಿಷಯವನ್ನು ಇದು ಒಳಗೊಂಡಿದೆ. 

ಸುಪ್ರೀಂ ಕೋರ್ಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News