‘ಸಿ’ ಗುಂಪಿನಲ್ಲಿ ಇರಾನ್ ಗೆ ಅಗ್ರಸ್ಥಾನ

Update: 2017-10-13 18:10 GMT

ಗೋವಾ, ಅ.13: ಕೋಸ್ಟರಿಕಾ ವಿರುದ್ಧ ಶುಕ್ರವಾರ ಇಲ್ಲಿ ನಡೆದ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ 2-0 ಗೋಲುಗಳ ಅಂತರದಿಂದ ಜಯ ಸಾಧಿಸಿರುವ ಇರಾನ್ ‘ಸಿ’ ಗುಂಪಿನಲ್ಲಿ ಅಗ್ರ ಸ್ಥಾನಕ್ಕೇರಿದೆ. ಮೂರು ಗ್ರೂಪ್ ಪಂದ್ಯಗಳಲ್ಲಿ ಕೇವಲ ಒಂದು ಅಂಕ ಗಳಿಸಿರುವ ಮಧ್ಯ ಅಮೆರಿಕ ತಂಡ ಕೋಸ್ಟರಿಕಾ ನಾಕೌಟ್ ಹಂತದಿಂದ ಹೊರ ನಡೆದಿದೆ.

 ಇರಾನ್ ಪರ ನಾಯಕ ಜಿ. ಮುಹಮ್ಮದ್ 25ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ ಮೂಲಕ ಗೋಲು ದಾಖಲಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. ನಾಲ್ಕು ನಿಮಿಷಗಳ ಬಳಿಕ ತಾಹಾ ಶರಿಯಾಟಿ ಇರಾನ್ ಮುನ್ನಡೆಯನ್ನು 2-0ಗೆ ಏರಿಸಿದರು.

ದ್ವಿತೀಯಾರ್ಧದ ಅಂತ್ಯಕ್ಕೆ 89ನೆ ನಿಮಿಷದಲ್ಲಿ ಬದಲಿ ಆಟಗಾರ ಮುಹಮ್ಮದ್ ಸರ್ದಾರಿ ಇರಾನ್ ಪರ ಮೂರನೆ ಗೋಲು ಬಾರಿಸಿದರು.

ಇರಾನ್ ನಾಯಕ ಮುಹಮ್ಮದ್ ಟೂರ್ನಮೆಂಟ್‌ನಲ್ಲಿ ಎರಡನೆ ಬಾರಿ ಹಳದಿ ಕಾರ್ಡ್ ಪಡೆದ ಹಿನ್ನೆಲೆಯಲ್ಲಿ ಅಂತಿಮ-16 ಸುತ್ತಿನಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.

ಜರ್ಮನಿ ನಾಕೌಟ್ ಗೆ ಲಗ್ಗೆ

ವಿಶ್ವಕಪ್‌ನ ‘ಸಿ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಗಿನಿಯಾ ವಿರುದ್ಧ 3-1 ಗೋಲುಗಳ ಅಂತರದಿಂದ ಜಯ ಸಾಧಿಸಿರುವ ಜರ್ಮನಿ ತಂಡ 17 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಅಂತಿಮ-16ರ ಸುತ್ತಿಗೆ ಲಗ್ಗೆ ಇಟ್ಟಿದೆ.

ಶುಕ್ರವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಜಾನ್ ಫಿಯೆಟ್ ಆರ್ಪ್ ಜರ್ಮನಿಗೆ ಮತ್ತೊಮ್ಮೆ ಆಸರೆಯಾದರು. 8ನೆ ನಿಮಿಷದಲ್ಲಿ ಗೋಲು ಬಾರಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. ನಿಕೊಲಸ್(62 ನೆ ನಿಮಿಷ) ಹಾಗೂ ಸೆಟಿನ್(90+2) ಪೆನಾಲ್ಟಿ ಕಾರ್ನರ್‌ನಲ್ಲಿ ಮತ್ತೊಂದು ಗೋಲು ಬಾರಿಸಿ ಜರ್ಮನಿಗೆ 3-1 ಅಂತರದ ಗೆಲುವು ತಂದರು.

 ಗಿನಿಯಾ ಪರ 26ನೆ ನಿಮಿಷದಲ್ಲಿ ಇಬ್ರಾಹಿಮಾ ಸೌಮ್ಹಾ ಸಮಾಧಾನಕರ ಗೋಲು ಬಾರಿಸಿದರು. ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಜರ್ಮನಿ ಒಟ್ಟು 6 ಅಂಕ ಗಳಿಸುವ ಮೂಲಕ ‘ಸಿ’ ಗುಂಪಿನಲ್ಲಿ ಎರಡನೆ ಸ್ಥಾನ ಪಡೆಯಿತು. 3 ಪಂದ್ಯಗಳಲ್ಲಿ ಕೇವಲ ಒಂದು ಅಂಕ ಗಳಿಸಿರುವ ಆಫ್ರಿಕದ ಗಿನಿಯಾ ತಂಡ ಟೂರ್ನಮೆಂಟ್‌ನಿಂದ ಹೊರ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News