ಹಾಲಲದ್ದು ನೀರಲದ್ದು

Update: 2017-10-13 18:25 GMT

ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು.

ಎನಗೆ ನೀನಲ್ಲದೆ ಮತ್ತಾರೂ ಇಲ್ಲಯ್ಯಾ.

ಕೂಡಲಸಂಗಮದೇವಾ,

ಹಾಲಲದ್ದು, ನೀರಲದ್ದು.

- ಬಸವಣ್ಣ

ಬಸವಣ್ಣನವರ ಅತ್ಯಂತ ಜನಪ್ರಿಯ ವಚನವಿದು. ಮೇಲ್ನೋಟಕ್ಕೆ ಸಿಗುವ ಅರ್ಥ ಒಂದಾದರೆ ಒಳನೋಟಕ್ಕೆ ಸ್ಫುರಿಸುವ ಅರ್ಥ ಇನ್ನೊಂದಾಗಿದೆ. ‘ಕೂಡಲಸಂಗಮ ದೇವರೇ ನನ್ನ ತಂದೆ, ತಾಯಿ, ಬಂಧು ಮತ್ತು ಬಳಗ. ಕೂಡಲಸಂಗಮದೇವರಲ್ಲದೆ ನನಗೆ ಬೇರೆ ಯಾರೂ ಇಲ್ಲ’ ಎಂದು ಬಸವಣ್ಣನವರು ತಿಳಿಸುತ್ತಾರೆ ಎಂಬ ಭಾವನೆ ಮೊದಲ ಓದಿಗೆ ಬರುತ್ತದೆ.

ಇಂಥ ಭಾವನೆ ಮೂಡಲು ಕಾರಣವಿದೆ. ವೈದಿಕ ತತ್ತ್ವಜ್ಞಾನದಲ್ಲಿ ಬರುವ ಮುಕ್ತಿಯ ಪರಿಕಲ್ಪನೆಯು ಮಾನವರಿಗೆ ವ್ಯಷ್ಟಿಪ್ರಜ್ಞೆಯನ್ನು ಮೂಡಿಸುವಂಥದ್ದಾಗಿದೆ. ಮಾನವ ಸಮಷ್ಟಿಪ್ರಜ್ಞೆಯಿಂದ ದೂರವಾಗುತ್ತ ಏಕಾಂತದೆಡೆಗೆ ಸಾಗುವಂಥ ಸ್ಥಿತಿಯನ್ನು ಈ ಮುಕ್ತಿಭಾವ ತಂದಿಡುತ್ತದೆ. ಈ ಏಕಾಂತವು ಮನುಷ್ಯರಲ್ಲಿ ಅನಾಥ ಪ್ರಜ್ಞೆಯನ್ನು ಮೂಡಿಸುತ್ತದೆ. ಆಗ ದೇವರ ಜೊತೆ ಮಾತ್ರ ಸಂಬಂಧ ಬೆಳೆಸಿಕೊಳ್ಳುವಲ್ಲಿ ಮಾನವ ತಲ್ಲೀನನಾಗುತ್ತಾನೆ. ಜಗನ್ನಾಥನಾದ ದೇವರಲ್ಲೇ ಎಲ್ಲವನ್ನೂ ಕಾಣುತ್ತ ಕಾಣುತ್ತ ಅನಾಥಪ್ರಜ್ಞಾಪೀಡಿತನಾಗುತ್ತಾನೆ. ವೈದಿಕ ವರ್ಣಾಶ್ರಮ ಪದ್ಧತಿಯು ಮಾನವರಲ್ಲಿ ಇಂಥ ಅನಾಥ ಪ್ರಜ್ಞೆ ಮೂಡಿಸುವಂಥದ್ದಾಗಿದೆ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಆಶ್ರಮಗಳಲ್ಲಿ ಮೊದಲೆರಡು ಆಶ್ರಮಗಳು ಮನುಷ್ಯ ಮತ್ತು ಸಮಾಜದ ಸಂಬಂಧವನ್ನು ಉಳಿಸಿಕೊಂಡರೆ ಉಳಿದೆರಡು ಆಶ್ರಮಗಳು ಮನುಷ್ಯನನ್ನು ಒಂಟಿತನದ ಕಡೆಗೆ ಒಯ್ಯುತ್ತವೆ. ವಾನಪ್ರಸ್ಥಾಶ್ರಮದಲ್ಲಿ ವ್ಯಕ್ತಿಯು ಸಮಾಜದ ಜೊತೆ ಇದ್ದೂ ಇಲ್ಲದ ಹಾಗೆ ಇರುತ್ತಾನೆ. ಅಂದರೆ ನೀರಿನಲ್ಲಿ ಪದ್ಮಪತ್ರ ಇದ್ದಹಾಗೆ ಇರುತ್ತಾನೆ. ಸನ್ಯಾಸಾಶ್ರಮದಲ್ಲಿ ಒಣಗಿದ ಪದ್ಮಪತ್ರದ ಹಾಗೆ ಇರುತ್ತಾನೆ. ಆಗ ಆತ ಸಮಾಜದ ಜೊತೆ ಸಂಪೂರ್ಣವಾಗಿ ಸಂಬಂಧವನ್ನು ಕಳೆದುಕೊಂಡಿರುತ್ತಾನೆ. ಇಂಥ ಸಂದರ್ಭದಲ್ಲಿ ಕುಟುಂಬ ಮತ್ತು ಸಮಾಜ ನಿರರ್ಥಕವೆನಿಸುತ್ತವೆ. ಗಿಡ, ಮರ, ಬಳ್ಳಿ, ಪಶು, ಪಕ್ಷಿ, ನದಿ, ಸಮುದ್ರ, ಬೆಳಕು, ಬೆಳದಿಂಗಳಿಂದ ಕೂಡಿದ ಜಗತ್ತು ನೀರಸವೆನಿಸುತ್ತದೆ. ಹೀಗೆ ‘ವೈದಿಕ ಮುಕ್ತಿ’ ಎಂಬುದು ಬದುಕನ್ನು ನಿರಾಶಮಯವಾಗಿ ಕೊನೆಗೊಳಿಸುತ್ತದೆ. ಇಂಥ ವೈದಿಕ ಹಿನ್ನೆಲೆಯ ಮನಸ್ಥಿತಿಯುಳ್ಳವರಿಗೆ ‘ನೀನಲ್ಲದೆ ಮತ್ತಾರೂ ಇಲ್ಲಯ್ಯಾ’ ಎಂದು ಬಸವಣ್ಣನವರು ಹೇಳುವುದು ಅನಾಥಪ್ರಜ್ಞೆಯ ಪ್ರತೀಕ ಎಂದು ಅನಿಸುವುದು ಸ್ವಾಭಾವಿಕವಾಗಿದೆ. ಹೀಗೆ ಸಂಬಂಧ ಕಡಿದುಕೊಂಡು ದೇವರ ಧ್ಯಾನದಲ್ಲಿ ತಲ್ಲೀನವಾಗುವುದಕ್ಕೆ ನಾವು ಸಾಂಪ್ರದಾಯಿಕವಾಗಿ ‘ಆಧ್ಯಾತ್ಮಿಕ ಬದುಕು’ ಎಂದು ಕರೆಯುತ್ತೇವೆ. ಅಧ್ಯಾತ್ಮದ ಕಡೆಗೆ ವಾಲುವ ಅನೇಕರು ಸಾಂಸಾರಿಕ ಸಂಬಂಧಗಳನ್ನು ಕಡಿದುಕೊಳ್ಳುತ್ತ ಅಂತರ್ಮುಖಿ ಯಾಗುತ್ತಾರೆ. ಹೀಗೆ ಇದೊಂದು ಅಂತರ್ಮುಖಿ ವಚನ ಎಂದೇ ಅನೇಕರು ಅರ್ಥೈಸುತ್ತಾರೆ. ಆದರೆ ಇದು ದೃಢನಿರ್ಧಾರದ ಸಮಾಜಮುಖಿ ವಚನವಾಗಿದೆ.

ಸಮಷ್ಟಿಪ್ರಜ್ಞೆಯ ಬಸವಣ್ಣನವರು ತಂದೆ-ತಾಯಿ ಮತ್ತು ಬಂಧು-ಬಳಗದಲ್ಲಿ ದೇವರನ್ನು ಕಾಣುತ್ತಾರೆ. ಅಷ್ಟೇ ಅಲ್ಲ ಅವರ ಕಣ್ಣಿಗೆ ಬೀಳುವವರೆಲ್ಲರೂ ದೇವರಲ್ಲದೆ ಮತ್ತಾರೂ ಅಲ್ಲ! ಅವರು ಪ್ರತಿಯೊಬ್ಬರಲ್ಲಿಯೂ ದೇವರನ್ನೇ ಕಾಣುತ್ತಾರೆ. ಎಲ್ಲರ ಬಗ್ಗೆಯೂ ಗೌರವಭಾವ ತಾಳುತ್ತಾರೆ. ನಾವು ನಮ್ಮಾಳಗಿನ ದೇವರ ಕುರಿತು ಧ್ಯಾನಿಸುವಂತೆ ಮಾಡುತ್ತಾರೆ. ಹೀಗೆ ನಮ್ಮಾಳಗೂ ಹೊರಗೂ ದೇವರ ಪರಿಸರವನ್ನೇ ಸೃಷ್ಟಿಸುತ್ತಾರೆ. ಇಂಥ ಮನಸ್ಥಿತಿಯನ್ನು ಹೊಂದುವವರು ಯಾರನ್ನೂ ಹೊರಗಿನವರೆಂದು ಭಾವಿಸುವುದಿಲ್ಲ. ಬೇರೆ ಧರ್ಮದವರು, ಬೇರೆ ಜಾತಿಯವರು, ಸವರ್ಣೀಯರು ಮತ್ತು ಅಸ್ಪಶ್ಯರು ಎಂದು ಭೇದಭಾವ ಮಾಡುವುದಿಲ್ಲ. ಎಲ್ಲರನ್ನೂ ದೇವಸ್ವರೂಪಿಗಳೆಂದೇ ತಿಳಿಯುತ್ತಾರೆ. ಆ ಮೂಲಕ ಧರ್ಮ, ಜಾತಿ, ವರ್ಣ, ವರ್ಗ ಮತ್ತು ಲಿಂಗಭೇದಗಳ ಅಹಂಕಾರದಿಂದ ಮುಕ್ತರಾಗುತ್ತಾರೆ. ಮಾನವಪ್ರೇಮಭಾವದಿಂದ ಕಂಗೊಳಿಸುತ್ತಾರೆ.

ಹೀಗೆ ಎಲ್ಲರೂ ಕೂಡುವುದರಿಂದ ಸಂಗಮವಾಗಿ ಕೂಡಲಸಂಗಮದೇವ ನಮ್ಮ ಮನಸ್ಸಿನಲ್ಲಿ ಮೂಡುತ್ತಾನೆ. ಭಾವೈಕ್ಯದ ದೇವನಾಗಿ ನಮ್ಮಾಳಗೇ ಉಳಿಯುತ್ತಾನೆ. ಇಂಥ ವಿಶ್ವಭಾವೈಕ್ಯಕ್ಕಾಗಿ ಬಸವಣ್ಣನವರು ಎಂಥ ಸ್ಥಿತಿಯನ್ನೂ ಎದುರಿಸಲು ಸಿದ್ಧರಾಗಿದ್ದಾರೆ. ‘ಹಾಲಲದ್ದು ನೀರಲದ್ದು’ ಎಂದು ಹೇಳುವ ಮೂಲಕ ಲೋಕಕಲ್ಯಾಣದ ಮನಸ್ಸಿಗೆ ಸುಖ-ದುಃಖ ಸಮಾನವಾಗುತ್ತವೆ ಎಂಬುದನ್ನು ಮನಗಾಣಿಸುತ್ತಾರೆ. ಐಹಿಕ ಸುಖ ದುಃಖಗಳನ್ನು ಮೀರಿದ ಮಾನಸಿಕ ನೆಮ್ಮದಿ ನೀಡುತ್ತಾರೆ. ಇಂಥ ನೆಮ್ಮದಿಗಾಗಿ ಲೋಕದ ಜನಸಮುದಾಯ ಪರಿತಪಿಸುತ್ತಿದೆ.

ಜೀವಕಾರುಣ್ಯವಿಲ್ಲದೆ ದೈವತ್ವದ ಅರಿವಾಗುವುದಿಲ್ಲ. ನೆಮ್ಮದಿ ಸಿಗುವುದಿಲ್ಲ. ಅಂತೆಯೆ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಬಸವಣ್ಣನವರು ವ್ಯಷ್ಟಿಯಿಂದ ಸಮಷ್ಟಿಯವರೆಗೆ ಜೀವಕಾರುಣ್ಯದ ವಾತಾವರಣ ಸೃಷ್ಟಿಸುತ್ತಾರೆ. ವ್ಯಕ್ತಿಯು ಮೊದಲಿಗೆ ಸ್ವಾವಲಂಬಿಯಾಗಬೇಕು. ಹಾಗೆ ಸ್ವಾವಲಂಬಿಯಾಗುವುದರಲ್ಲಿ ಸಾಮಾಜಿಕ ಸಂಬಂಧದ ಸೆಲೆಗಳು ಇರಬೇಕು. ನಾವು ಸ್ವಾವಲಂಬಿಯಾಗುವುದು ನಮ್ಮಷ್ಟಕ್ಕೆ ನಾವು ಪ್ರಾಣಿಗಳ ಹಾಗೆ ಬದುಕುವುದಕ್ಕಲ್ಲ. ಸಾಮಾಜಿಕ ಕಾಳಜಿಯನ್ನು ದಾಸೋಹಂಭಾವದ ಮೂಲಕ ಕ್ರಿಯಾರೂಪಕ್ಕೆ ಇಳಿಸುವುದಕ್ಕಾಗಿ.

ಮೊದಲಿಗೆ ನಾವು ಕಾಯಕದ ಮೂಲಕ ಸ್ವತಂತ್ರವಾಗಿ ಬದುಕುವುದನ್ನು ಕಲಿಯ ಬೇಕು. ನಂತರ ಕಾಯಕದಿಂದ ಬಂದುದರಲ್ಲಿ ಕುಟುಂಬದ ನಿರ್ವಹಣೆ ಮಾಡುತ್ತಲೇ ಸಮಾಜಸೇವೆ ಮಾಡುವುದರಲ್ಲಿ ತಲ್ಲೀನವಾಗಬೇಕು. ಏಕೆಂದರೆ ಸಮಾಜವೆಂಬುದು ದೇವಸ್ವರೂಪವೇ ಆಗಿದೆ. ‘ತಂದೆ ನೀನು, ತಾಯಿ ನೀನು’ ಎಂದು ತಿಳಿಸುವ ಮೂಲಕ ಬಸವಣ್ಣನವರು ಕುಟುಂಬದಲ್ಲಿ ದೈವತ್ವವನ್ನು ಕಾಣುತ್ತಾರೆ. ‘ಬಂಧು ನೀನು ಬಳಗ ನೀನು’ ಎಂದು ಹೇಳುವ ಮೂಲಕ ನಮ್ಮ ಸಂಬಂಧಿಕರಲ್ಲಿ ದೈವತ್ವವನ್ನು ಕಾಣುತ್ತಾರೆ. ‘ಎನಗೆ ನೀನಲ್ಲದೆ ಮತ್ತಾರೂ ಇಲ್ಲಯ್ಯಾ’ ಎಂದು ಹೇಳುವಲ್ಲಿ ಇಡೀ ಸಮಾಜವನ್ನೇ ದೈವವಾಗಿ ಕಾಣುತ್ತಾರೆ. ಹೀಗೆ ಲೋಕಮಯವಾದ ದೇವರ ಜೊತೆ ಸಂಬಂಧವನ್ನು ಬಯಸುತ್ತಾರೆ. ಆ ಮೂಲಕ ಹಿಮಾಲಯದ ಅಥವಾ ಅರಣ್ಯದ ಏಕಾಂತವನ್ನು ತಿರಸ್ಕರಿಸುತ್ತಾರೆ.

ದೈವತ್ವದಿಂದ ಕೂಡಿದ ಸಂಬಂಧಗಳು ಮಾನವರ ಅಂತಃಕರಣದ ಮೇಲೆ ನಿಂತಿರುತ್ತವೆ. ಹೀಗೆ ಬದುಕುವಾತ ನಿತ್ಯಮುಕ್ತಿಯಿಂದ ಕೂಡಿದ ಲಿಂಗೈಕ್ಯಸ್ಥಿತಿಯಲ್ಲಿರು ತ್ತಾನೆ. ಸತ್ತಮೇಲೆ ಮುಕ್ತಿ ಎಂಬುದು ಬಸವತತ್ತ್ವಕ್ಕೆ ವಿರುದ್ಧವಾಗಿದೆ. ಸಮೂಹಪ್ರಜ್ಞೆ ಯಿಂದ ಬದುಕುತ್ತಲೇ ಜೀವನ್ಮುಕ್ತಿಯ ಆನಂದವನ್ನು ಪಡೆಯುವ ಕಲೆಯನ್ನು ಬಸವಣ್ಣನವರು ಕಲಿಸಿದ್ದಾರೆ.

ಬದುಕು ಆಕಸ್ಮಿಕವಿರಬಹುದು ಆದರೆ ಸಾವು ನಿಶ್ಚಿತವಾಗಿದೆ. ಅದಕ್ಕೆ ಹೆದರಬೇಕಾ ಗಿಲ್ಲ. ‘ಮರಣವೇ ಮಹಾನವಮಿ’ ಎಂದು ಬಸವಣ್ಣನವರೇ ಹೇಳಿದ್ದಾರೆ. ಆದರೆ ಇರುವಷ್ಟು ದಿನವೂ ಮಾನವರು ಕುಟುಂಬ ಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆಯೊಂದಿಗೆ ನೆಮ್ಮದಿಯಿಂದ ಬದುಕಬೇಕು. ಕಾಲಿಲ್ಲದವರಿಗೆ ಕಾಲಾಗಿ, ಕಣ್ಣಿಲ್ಲದವರಿಗೆ ಕಣ್ಣಾಗಿ, ಶಕ್ತಿ ಇಲ್ಲದವರಿಗೆ ಶಕ್ತಿಯಾಗಿ, ಹಸಿದವರಿಗೆ ಆಹಾರವಾಗಿ, ದುಃಖಿಗಳಿಗೆ ನೆಮ್ಮದಿಯಾಗಿ ಕುಟುಂಬ ಮತ್ತು ಸಮಾಜ ನಿಂತಾಗ ಮಾತ್ರ ಸುಂದರ ಸಮಾಜದ ನಿರ್ಮಾಣವಾಗುತ್ತದೆ. ಆಗ ಯಾರ ಸೇವೆ ಮಾಡಿದರೂ ದೇವರ ಸೇವೆಯೇ ಆಗುತ್ತದೆ.

***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News