ಈ ಅಪಾಯಕಾರಿ ಲಕ್ಷಣಗಳ ಬಗ್ಗೆ ಎಚ್ಚರ....ಅದು ಡೆಂಗ್ಯೂ ಆಗಿರಬಹುದು

Update: 2017-10-14 09:29 GMT

ಮಲೇರಿಯಾ, ಫ್ಲೂ ಇತ್ಯಾದಿಗಳು ಹಳೆಯ ಕಾಯಿಲೆಗಳಾಗಿದ್ದು, ಅವುಗಳಿಗೆ ನಾವು ಒಗ್ಗಿಕೊಂಡುಬಿಟ್ಟಿದ್ದೇವೆ. ವೈದ್ಯರಿಗೂ ಈ ರೋಗಗಳನ್ನು ಪತ್ತೆ ಹಚ್ಚುವುದು ಸುಲಭ. ಹೀಗಾಗಿ ಕಾಯಿಲೆಗಳು ಬಂದರೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ನಾಲ್ಕು ದಿನ ಆಸ್ಪತ್ರೆಯಲ್ಲಿ ಮಲಗಿ ಗುಣಮುಖರಾಗಿ ಮನೆಗೆ ಮರಳುತ್ತೇವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಾವಳಿಯೆಬ್ಬಿಸಿರುವ ಈ ಡೆಂಗ್ಯೂ ಕಾಯಿಲೆಯಿದೆಯಲ್ಲ....ಇದಕ್ಕೆ ನಿಜಕ್ಕೂ ಹೆದರ ಬೇಕಾಗಿದೆ. ನಮಗೆ ಡೆಂಗ್ಯೂ ಕಾಯಿಲೆ ಬಂದಿರುವುದು ಗೊತ್ತೇ ಆಗುವುದಿಲ್ಲ. ವೈದ್ಯರಿಗೂ ಇದನ್ನು ಆರಂಭದಲ್ಲಿಯೇ ಪತ್ತೆ ಹಚ್ಚಲು ಸಾಧ್ಯವಿಲ್ಲ. ಈ ಮಾರಕ ಕಾಯಿಲೆಗೆ ಸೂಕ್ತ ಸಮಯದಲ್ಲಿ ತಕ್ಕ ಚಿಕಿತ್ಸೆ ಪಡೆಯದಿದ್ದರೆ ಜೀವವೇ ಹೋಗಬಹುದು. ಚೇತರಿಸಿಕೊಂಡರೂ ದುಡಿದುಣ್ಣುವ ಶ್ರಮಜೀವಿಗಳು ಶ್ರಮದ ಕೆಲಸಗಳನ್ನು ಮಾಡಲು ಸಾಧ್ಯವಾಗದೆ ಕೂಳಿಗೂ ಪರದಾಡಬೇಕಾಗಬಹುದು. ದುರಂತವೆಂದರೆ ಡೆಂಗ್ಯೂ ಲಕ್ಷಣಗಳೇ ಹೆಚ್ಚಿನವರಿಗೆ ಗೊತ್ತಾಗುವುದಿಲ್ಲ. ಸಾಮಾನ್ಯ ಜ್ವರ, ಮೈಕೈ ನೋವು ಎಂದು ಕೊಂಡು ಮಾತ್ರೆಗಳನ್ನು ನುಂಗುವವರೇ ಹೆಚ್ಚು. ಪರಿಸ್ಥಿತಿ ಕೈಮೀರಿ ಆಸ್ಪತ್ರೆಗೆ ದಾಖಲಾದಾಗಲೇ ಇದು ಡೆಂಗ್ಯೂ ಎನ್ನುವುದು ಗೊತ್ತಾಗುತ್ತದೆ. ಹೀಗಾಗಿ ಈ ಮಾರಕ ಕಾಯಿಲೆಯ ಲಕ್ಷಣಗಳ ಬಗ್ಗೆ ಮಾಹಿತಿಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಏಡಿಸ್ ಎಜಿಪ್ಟಿ ಎಂಬ ಜಾತಿಗೆ ಸೇರಿದ ಹೆಣ್ಣುಸೊಳ್ಳೆ ಸಾಗಿಸುವ ವೈರಸ್ ಡೆಂಗ್ಯೂ ಜ್ವರಕ್ಕೆ ಕಾರಣವಾಗುತ್ತದೆ. ಈ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಏಡಿಸ್ ಎಜಿಪ್ಟಿ ಸೊಳ್ಳೆಯಿಂದ ಕಡಿತಕ್ಕೊಳಗಾದ ವ್ಯಕ್ತಿಗೆ ಡೆಂಗ್ಯೂ ಸೋಂಕು ತಗಲುತ್ತದೆ.

 ಗಂಟಲು ನೋವು, ಮೂಗಿನಲ್ಲಿ ಸೋರಿಕೆ, ನಿಶ್ಶಕ್ತಿ, ಸಣ್ಣ ಪ್ರಮಾಣದಲ್ಲಿ ಮೈಕೈ ನೋವು ಮತ್ತು ದೇಹದ ತಾಪಮಾನದಲ್ಲಿ ಏರಿಕೆ ಇವು ಸಾಮಾನ್ಯ ಜ್ವರದ ಲಕ್ಷಣಗಳಾಗಿವೆ. ಆದರೆ ಡೆಂಗ್ಯೂ ಜ್ವರದ ಲಕ್ಷಣಗಳು ವಿಭಿನ್ನವಾಗಿವೆ. ಡೆಂಗ್ಯೂ ಸೋಂಕಿಗೆ ಗುರಿಯಾದ ವ್ಯಕ್ತಿಯಲ್ಲಿ ದೇಹದ ತಾಪಮಾನ ತೀವ್ರವಾಗಿ ಏರುವುದರೊಂದಿಗೆ ವಿಪರೀತ ಸ್ನಾಯುನೋವು ಮತ್ತು ಸಂದುನೋವು ಕಾಣಿಸಿಕೊಳ್ಳುತ್ತದೆ. ದೇಹದ ತುಂಬೆಲ್ಲ ಗುಲಾಬಿ ಬಣ್ಣದ ದದ್ದುಗಳು ಉಂಟಾಗುತ್ತವೆ.

 ಸಾಮಾನ್ಯವಾಗಿ ಏಡಿಸ್ ಎಜಿಪ್ಟ್ ಸೊಳ್ಳೆಯು ಕಡಿದ 4ರಿಂದ 10 ದಿನಗಳಲ್ಲಿ ಸೋಂಕಿ ಗೊಳಗಾದ ವ್ಯಕ್ತಿಯಲ್ಲಿ 104/105 ಡಿಗ್ರಿ ಫ್ಯಾರನ್‌ಹೀಟ್(40 ಡಿಗ್ರಿ ಸೆಂಟಿಗ್ರೇಡ್) ನಷ್ಟು ತೀವ್ರ ಜ್ವರ ಕಾಣಿಸಿಕೊಳ್ಳುತ್ತದೆ. ಸಂದುಗಳಲ್ಲಿ, ಸ್ನಾಯುಗಳಲ್ಲಿ ಮತ್ತು/ಅಥವಾ ಮೂಳೆಗಳಲ್ಲಿ ನೋವು, ತೀವ್ರ ತಲೆನೋವು, ವಾಕರಿಕೆ, ವಾಂತಿ, ಹಸಿವು ಇಲ್ಲದಿರುವಿಕೆ, ಗ್ರಂಥಿಗಳ ಊತ ಇತ್ಯಾದಿ ಲಕ್ಷಣಗಳು ಕಂಡುಬರುತ್ತವೆ.

ಸಣ್ಣಮಕ್ಕಳಲ್ಲಿ ಈ ಲಕ್ಷಣಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ. ಆದರೆ ದೊಡ್ಡ ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಸೋಂಕಿನ ತೀವ್ರತೆಯನ್ನು ಅವಲಂಬಿಸಿ ಈ ಲಕ್ಷಣಗಳು ಮಧ್ಯಮದಿಂದ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ.

ಡೆಂಗ್ಯೂ ಜ್ವರ ಸಾಮಾನ್ಯವಾಗಿ 5ರಿಂದ 7 ದಿನಗಳ ಕಾಲವಿರುತ್ತದೆ. ಆದರೆ ಕೆಲವು ರೋಗಿಗಳಲ್ಲಿ 3 ಅಥವಾ 4ನೇ ದಿನಕ್ಕೆ ಜ್ವರ ಇಳಿಯುತ್ತದೆ ಮತ್ತು ಅದು ಪುನಃ ಬರಬಹುದು.

ಈ ಮೇಲಿನ ಯಾವುದೇ ಲಕ್ಷಣಗಳು ಕಂಡು ಬಂದರೆ ವಿಳಂಬಿಸದೆ ವೈದ್ಯರನ್ನು ಭೇಟಿಯಾಗಿ ಡೆಂಗ್ಯೂ ತಪಾಸಣೆಯನ್ನು ಮಾಡಿಕೊಳ್ಳಬೇಕು.

ಈ ಲಕ್ಷಣಗಳು ಕಂಡು ಬಂದ ನಂತರವೂ ನಿರ್ಲಕ್ಷಿಸಿದರೆ ಡೆಂಗ್ಯೂ ಅಪಾಯಕಾರಿ ಯಾಗಬಹುದು ಮತ್ತು ಜೀವಕ್ಕೇ ಬೆದರಿಕೆಯೊಡ್ಡಬಹುದು. ಈ ಕೆಳಗಿನ ಲಕ್ಷಣ ಗಳೊಂದಿಗೆ ರೋಗಿಯ ಸ್ಥಿತಿ ಇನ್ನಷ್ಟು ಹದಗೆಡಬಹುದು.

ತೀವ್ರ ಹೊಟ್ಟೆನೋವು, ಇಡೀ ಶರೀರದ ತುಂಬ ದದ್ದುಗಳು, ವಸಡುಗಳಲ್ಲಿ ರಕ್ತಸ್ರಾವ, ರಕ್ತವಾಂತಿ, ತ್ವರಿತ/ಕಷ್ಟದ ಉಸಿರಾಟ, ದಣಿವು, ರಕ್ತನಾಳಗಳಿಗೆ ಹಾನಿಯಿಂದಾಗಿ ವಿವಿಧ ಅಂಗಾಂಗಗಳಲ್ಲಿ ಬ್ಲಡ್ ಫ್ಲೂಯಿಡ್/ಪ್ಲಾಸ್ಮಾದ ಸೋರಿಕೆ, ಗಂಭೀರ ಅಂಗಾಂಗ ದೌರ್ಬಲ್ಯ ಮತ್ತು ವೈಫಲ್ಯ ಇವು ಡೆಂಗ್ಯೂ ಗಂಭೀರ ಹಂತವನ್ನು ತಲುಪಿವೆ ಎನ್ನುವುದರ ಲಕ್ಷಣಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News