ಚುನಾವಣಾ ಆಯೋಗ ಒಂದು ಹಲ್ಲಿಲ್ಲದ ಹುಲಿ : ವರುಣ್ ಗಾಂಧಿ

Update: 2017-10-14 11:31 GMT

ಹೈದರಾಬಾದ್,ಅ.14 : ನಿಗದಿತ ಸಮಯದೊಳಗೆ ಚುನಾವಣಾ ವೆಚ್ಚ ಮಾಹಿತಿಯನ್ನು ಸಲ್ಲಿಸದ ಯಾವುದೇ ರಾಜಕೀಯ ಪಕ್ಷವನ್ನು ಅಮಾನ್ಯಗೊಳಿಸದೇ ಇರುವ ಚುನಾವಣಾ ಆಯೋಗ ಒಂದು ಹಲ್ಲಿಲ್ಲದ ಹುಲಿ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ. ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಅದೆಷ್ಟು ಹಣ ಖರ್ಚು ಮಾಡುತ್ತವೆಯೆಂದರೆ  ಬಡ ಜನರಿಗೆ  ಚುನಾವಣೆ ಸ್ಪರ್ಧಿಸುವ ಅವಕಾಶವೇ ಇರುವುದಿಲ್ಲ ಎಂದು  ಅವರು ಹೇಳಿದರು.

ಗುಜರಾತ್ ಅಸೆಂಬ್ಲಿ ಚುನಾವಣೆಯನ್ನು ಹಿಮಾಚಲ ಪ್ರದೇಶ ಚುನಾವಣೆ ಸಂದರ್ಭವೇ ನಡೆಸಬಾರದೆಂದು  ಚುನಾವಣಾ ಆಯೋಗವನ್ನು ಒತ್ತಾಯಿಸುತ್ತಿರುವ ಬಿಜೆಪಿ ವಿಪಕ್ಷಗಳಿಂದ ತರಾಟೆಗೊಳಗಾಗಿರುವಂತೆಯೇ ವರುಣ್ ಗಾಂಧಿ ಅವರ ಹೇಳಿಕೆ ಬಂದಿದೆ.

"ಚುನಾವಣಾ ಆಯೋಗವು  ಚುನಾವಣೆಯ ಮೇಲುಸ್ತುವಾರಿ ನಡೆಸಿ ನಿಯಂತ್ರಿಸುತ್ತದೆ ಎಂದು ಸಂವಿಧಾನದ 324ನೇ ವಿಧಿ ಹೇಳುವುದಾದರೂ  ನಿಜವಾಗಿಯೂ ಅದು ಹಾಗೆ ಮಾಡುತ್ತಿದೆಯೇ ?'' ಎಂದು ಅವರು ಪ್ರಶ್ನಿಸಿದರು. ಅವರು ಎನ್‍ಎಎಲ್‍ಎಸ್‍ಎಆರ್ ಕಾನೂನು ವಿಶ್ವವಿದ್ಯಾಲಯದಲ್ಲಿ "ಭಾರತದಲ್ಲಿ ರಾಜಕೀಯ ಸುಧಾರಣೆಗಳು,'' ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು.

"ಎಲ್ಲಾ ರಾಜಕೀಯ ಪಕ್ಷಗಳೂ ವಿಳಂಬವಾಗಿ ತಮ್ಮ ಚುನಾವಣಾ ವೆಚ್ಚದ ಬಗ್ಗೆ ಮಾಹಿತಿಯೊದಗಿಸುತ್ತವೆಯಾದರೂ ದಿವಂಗತ ಪಿ ಎ ಸಂಗ್ಮಾ ಅವರಿಗೆ ಸೇರಿದ ರಾಜಕೀಯ ಪಕ್ಷವೊಂದನ್ನು ಮಾತ್ರ  ಮಾಹಿತಿಯೊದಗಿಸದೇ ಇರುವುದಕ್ಕೆ  ಅಮಾನ್ಯಗೊಳಿಸಲಾಗಿತ್ತು. ಚುನಾವಣಾ ವೆಚ್ಚದ ವರದಿ ನೀಡಿದ ದಿನವೇ ಅಮಾನ್ಯ ಆದೇಶ ರದ್ದುಪಡಿಸಲಾಗಿತ್ತು,'' ಎಂದು ಉತ್ತರ ಪ್ರದೇಶದ ಸುಲ್ತಾನಪುರದ ಸಂಸದರಾಗಿರುವ ವರುಣ್ ಗಾಂಧಿ ಹೇಳಿದ್ದಾರೆ.

"ತಾಂತ್ರಿಕವಾಗಿ ಒಬ್ಬ ವಿಧಾನಸಭಾ ಅಭ್ಯರ್ಥಿ ರೂ. 20 ಲಕ್ಷದಿಂದ ರೂ. 28 ಲಕ್ಷದ ತನಕ ಖರ್ಚು ಮಾಡಬಹುದಾಗಿದ್ದರೆ ಹಾಗೂ  ಲೋಕಸಭಾ ಅಭ್ಯರ್ಥಿ ರೂ. 54 ಲಕ್ಷದಿಂದ ರೂ. 70 ಲಕ್ಷದಷ್ಟು ಖರ್ಚು ಮಾಡಬಹುದಾದರೂ ಪಕ್ಷಗಳು  ಲೆಕ್ಕವಿಲ್ಲದಷ್ಟು ಹಣ ಖರ್ಚು ಮಾಡುತ್ತವೆಯೆಂದು ಮತದಾರರಿಗೆ ತಿಳಿಸಲಾಗುವುದಿಲ್ಲ ಎಂದರು.

ರಾಜಕೀಯ ಪಕ್ಷಗಳು ಭವಿಷ್ಯದಲ್ಲಾದರೂ ಪಾರದರ್ಶಕತೆಯತ್ತ ಹೆಜ್ಜೆ ಹಾಕಬಹುದೆಂಬ ಆತ್ಮವಿಶ್ವಾಸವನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News