ಕೂಡಲೇ ದೇಶ ಬಿಟ್ಟು ತೆರಳಿ ಎಂದು ಪಾಕಿಸ್ತಾನದ ಸಚಿವನಿಗೆ ಹೇಳಿದ್ದ ಪ್ರಣವ್ ಮುಖರ್ಜಿ
ಹೊಸದಿಲ್ಲಿ, ಅ. 14: ಮುಂಬೈ ಭಯೋತ್ಪಾದಕ ದಾಳಿ ಬಗ್ಗೆ ಆಕ್ರೋಶಿತರಾದ ಆಗಿನ ವಿದೇಶಾಂಗ ವ್ಯವಹಾರಗಳ ಸಚಿವ ಹಾಗೂ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಪಾಕಿಸ್ತಾನದ ಸಚಿವ ಶಾ ಮಹ್ಮೂದ್ ಖುರೇಶಿಗೆ ಫೋನ್ ಕರೆ ಮಾಡಿ ಕೂಡಲೇ ಭಾರತದಿಂದ ತೆರಳುವಂತೆ ತಿಳಿಸಿದ್ದರು ಎಂದು ಪ್ರಣವ್ ಮುಖರ್ಜಿ ಅವರ ಆತ್ಮಹಚರಿತ್ರೆಯ ಮೂರನೆ ಸಂಪುಟ ದಿ ಕೊಲೀಶನ್ ಇಯರ್ಸ್ 1996-2012ರಲ್ಲಿ ಉಲ್ಲೇಖಿಸಲಾಗಿದೆ.
ಶುಕ್ರವಾರ ಬಿಡುಗಡೆಗೊಂಡ ಈ ಪುಸ್ತಕದಲ್ಲಿ ಖುರೇಶಿ ಅವರನ್ನು ಪಾಕಿಸ್ತಾನಕ್ಕೆ ಕರೆದೊಯ್ಯಲು ತನ್ನ ಹೆಲಿಕಾಪ್ಟರ್ ನೀಡುವುದಾಗಿ ಪ್ರಣವ್ ಮುಖರ್ಜಿ ಹೇಳಿದ್ದರು ಎಂದು ಬರೆಯಲಾಗಿದೆ.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರೆ ತಯ್ಯಿಬದ ಉಗ್ರರು ಮುಂಬೈಯಲ್ಲಿ ನಡೆಸಿದ ದಾಳಿಯಲ್ಲಿ ಕನಿಷ್ಠ 162 ಮಂದಿ ಮೃತಪಟ್ಟು 300 ಮಂದಿ ಗಾಯಗೊಂಡಿದ್ದರು. ಉಗ್ರರಲ್ಲಿ ಓರ್ವನಾದ ಅಜ್ಮಲ್ ಕಸಬ್ ಅನ್ನು ಪೊಲೀಸರು ಸೆರೆ ಹಿಡಿದಿದ್ದರು.
ನವೆಂಬರ್ 26ರಂದು ದಾಳಿ ಆರಂಭವಾದ ಬಳಿಕ ಮುಖರ್ಜಿ ಅವರು ಪತ್ರಿಕಾಗೋಷ್ಠಿಯಲ್ಲಿದ್ದ ತನ್ನ ಸೋದ್ಯೋಗಿ ಖುರೇಶಿಗೆ ಮಾಹಿತಿ ನೀಡಿದ್ದರು. ತಮಗೆ ಪರಿಚಯವಿದ್ದ ಪತ್ರಕರ್ತರೊಬ್ಬರ ಮೂಲಕ ಖುರೇಶಿಯ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಿದ್ದ ಅವರು, ಕೂಡಲೇ ತನ್ನೊಂದಿಗೆ ಮಾತನಾಡುವಂತೆ ಖುರೇಶಿಗೆ ತಿಳಿಸುವಂತೆ ಹೇಳಿದ್ದರು.
ಖುರೇಶಿ ಫೋನ್ ಮಾಡಿದಾಗ ವಿದೇಶಾಂಗ ಸಚಿವಾ ಲಯದ ಕಾರ್ಯದರ್ಶಿ ಸಿದ್ಧಪಡಿಸಿದ್ದ ಟಿಪ್ಪಣಿಯನ್ನು ಅವರು ಓದಿದ್ದರು.
ಸಚಿವರೇ, ಪ್ರಸಕ್ತ ಸನ್ನಿವೇಶದಲ್ಲಿ ನೀವು ಭಾರತದಲ್ಲಿ ನೆಲೆಸುವುದರಿಂದ ಯಾವುದೇ ಉದ್ದೇಶ ಈಡೇರಲಾರದು. ಕೂಡಲೇ ದೇಶ ಬೀಡಿ ಎಂದು ನಾನು ಸಲಹೆ ನೀಡುತ್ತೇನೆ. ನಿಮ್ಮನ್ನು ಪಾಕಿಸ್ತಾನಕ್ಕೆ ಹಿಂದಿರುಗಿಸಲು ನನ್ನ ಹೆಲಿಕಾಪ್ಟರ್ ಲಭ್ಯವಿದೆ. ನೀವು ತ್ವರಿತವಾಗಿ ನಿರ್ಧಾರ ತೆಗೆದುಕೊಂಡರೆ ಯೋಗ್ಯ ಎಂದು ಮುಖರ್ಜಿ ಟಿಪ್ಪಣಿಯಲ್ಲಿ ಹೇಳಿದ್ದರು ಎಂದು ಪುಸ್ತಕದಲ್ಲಿ ಬರೆಯಲಾಗಿದೆ.
ಆಗ ವಿರೋಧ ಪಕ್ಷವಾಗಿದ್ದ ಬಿಜೆಪಿ ಪಾಕಿಸ್ತಾನದ ವಿರುದ್ಧ ಯುಪಿಎ ಮೃದು ಧೋರಣೆ ತಾಳಿದೆ ಎಂದು ಟೀಕಿಸಿತ್ತು.