ಫ್ರಾನ್ಸ್ ಗೆ ಹ್ಯಾಟ್ರಿಕ್ ಜಯ, ನಾಕೌಟ್ ನಲ್ಲಿ ಸ್ಪೇನ್ ಸವಾಲು

Update: 2017-10-14 18:07 GMT

ಗುವಾಹತಿ, ಅ.14: ಯುರೋಪ್ ಬಲಿಷ್ಠ ತಂಡ ಫ್ರಾನ್ಸ್ ಫಿಫಾ ಅಂಡರ್-17 ವಿಶ್ವಕಪ್‌ನ ಇ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಹೊಂಡುರಾಸ್ ತಂಡವನ್ನು 5-1 ಗೋಲುಗಳ ಅಂತರದಿಂದ ಮಣಿಸಿದೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನೊಂದಿಗೆ ಅಂತಿಮ-16ರ ಸುತ್ತಿಗೆ ಪ್ರವೇಶಿಸಿದೆ.

 ಹೊಂಡುರಾಸ್ ವಿರುದ್ಧ ಪಂದ್ಯಕ್ಕಿಂತ ಮೊದಲೇ ಫ್ರಾನ್ಸ್ ಅಂತಿಮ-16ರ ಸುತ್ತಿಗೆ ತಲುಪಿತ್ತು. ಇದೀಗ ಇ ಗುಂಪಿನಲ್ಲಿ ಆಡಿರುವ ಎಲ್ಲ ಮೂರು ಪಂದ್ಯಗಳನ್ನು ಜಯಿಸಿ ಒಟ್ಟು 9 ಅಂಕ ಕಲೆಹಾಕಿದೆ. ಫ್ರಾನ್ಸ್ ಅ.17 ರಂದು ನಡೆಯಲಿರುವ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಯುರೋಪ್‌ನ ಇನ್ನೊಂದು ಬಲಿಷ್ಠ ತಂಡ ಸ್ಪೇನ್ ಸವಾಲು ಎದುರಿಸಲಿದೆ.

ಹೊಂಡುರಾಸ್ ತಂಡ ತನ್ನ 3ನೆ ಲೀಗ್ ಪಂದ್ಯದಲ್ಲಿ ಸೋತ ಹೊರತಾಗಿಯೂ ಮೂರನೆ ಉತ್ತಮ ತಂಡವಾಗಿ ನಾಕೌಟ್‌ಗೆ ತಲುಪಿದೆ. ಹೊಂಡುರಾಸ್ 3 ಅಂಕ ಗಳಿಸಿ 3ನೆ ಸ್ಥಾನ ಪಡೆದಿದೆ.

 ಇಂದಿರಾಗಾಂಧಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 10ನೆ ನಿಮಿಷದಲ್ಲಿ ಗೋಲು ಬಾರಿಸಿದ ಕಾರ್ಲೊಸ್ ಮೆಜಿಯಾ ಹೊಂಡುರಾಸ್‌ಗೆ 1-0 ಮುನ್ನಡೆ ಸಾಧಿಸಿದರು. ನಾಲ್ಕು ನಿಮಿಷದ ಬಳಿಕ ಫಾನ್ಸ್‌ನ ವಿಲ್ಸನ್ ಇಸಿಡೊರ್ ಗೋಲು ಬಾರಿಸಿ 1-1 ರಿಂದ ಸಮಬಲ ಸಾಧಿಸಿದರು. ಅಲೆಕ್ಸ್ ಫ್ಲಿಪ್ಸ್ 23ನೆ ಹಾಗೂ 64ನೆ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ 3-1 ಮುನ್ನಡೆ ಒದಗಿಸಿಕೊಟ್ಟರು. ಟೂರ್ನಮೆಂಟ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿರುವ ಅಮೈನ್ ಗೌರಿ 86ನೆ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಮುನ್ನಡೆಯನ್ನು 4-1ಗೆ ಏರಿಸಿದರು. ಹೆಚ್ಚುವರಿ ಸಮಯದಲ್ಲಿ(90+6) ಫ್ರೀ-ಕಿಕ್‌ನ ಮೂಲಕ ಗೋಲು ದಾಖಲಿಸಿದ ಯಾಸಿನ್ ಆದಿಲ್ ಫ್ರಾನ್ಸ್ ತಂಡಕ್ಕೆ ಭರ್ಜರಿ ಜಯ ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News