ಮೊದಲ ಏಕದಿನ: ಪಾಕ್‌ಗೆ ಜಯ

Update: 2017-10-14 18:22 GMT

ದುಬೈ, ಅ.14: ಬಾಬರ್ ಆಝಂ ಆಕರ್ಷಕ ಶತಕ ಹಾಗೂ ಶುಐಬ್ ಮಲಿಕ್ ಬಿರುಸಿನ ಅರ್ಧಶತಕದ ಕೊಡುಗೆಯ ನೆರವಿನಿಂದ ಪಾಕಿಸ್ತಾನ ತಂಡ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು 83 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ ಆಝಂ(103 ರನ್, 131 ಎಸೆತ) ಹಾಗೂ ಮಲಿಕ್(81 ರನ್, 61 ಎಸೆತ) ನೆರವಿನಿಂದ 6 ವಿಕೆಟ್‌ಗಳ ನಷ್ಟಕ್ಕೆ 292 ರನ್ ಗಳಿಸಿತು.

ಗೆಲ್ಲಲು ಕಠಿಣ ಸವಾಲು ಪಡೆದಿದ್ದ ಶ್ರೀಲಂಕಾ ತಂಡ ಪಾಕ್ ವೇಗಿಗಳಾದ ಹಸನ್ ಅಲಿ(3-36) ಹಾಗೂ ರುಮಾನ್ ರೇಯ್ಸ(3-49) ದಾಳಿಗೆ ಸಿಲುಕಿ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಟೆಸ್ಟ್ ಸರಣಿಯನ್ನು 0-2 ಅಂತರದಿಂದ ಸೋತಿರುವ ಪಾಕಿಸ್ತಾನ ತಂಡ ನಾಲ್ಕು ತಿಂಗಳ ಬಳಿಕ ಆಡಿರುವ ತನ್ನ ಮೊದಲ ಏಕದಿನ ಪಂದ್ಯದಲ್ಲಿ ಶುಭಾರಂಭ ಮಾಡಿತು. ಇಂಗ್ಲೆಂಡ್‌ನಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಬಳಿಕ ಪಾಕ್ ಯಾವುದೇ ಪಂದ್ಯವನ್ನು ಆಡಿಲ್ಲ.

ಶ್ರೀಲಂಕಾದ ಪರ ಅಗ್ರ ಕ್ರಮಾಂಕದಲ್ಲಿ ಲಹಿರು ತಿರಿಮನ್ನೆ(53) ಮಾತ್ರ ಒಂದಷ್ಟು ಹೋರಾಟ ನೀಡಿದರು. ಶ್ರೀಲಂಕಾ 132 ರನ್‌ಗೆ 7 ವಿಕೆಟ್ ಕಳೆದುಕೊಂಡಿತ್ತು. ಆಗ 8ನೆ ವಿಕೆಟ್‌ಗೆ 68 ರನ್ ಜೊತೆಯಾಟ ನಡೆಸಿದ ಅಕಿಲಾ ಧನಂಜಯ(ಅಜೇಯ 50) ಹಾಗೂ ಜೆಫ್ರಿ ವಾಂಡರ್‌ಸೆ(25) ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ನಿರೊಶನ್ ಡಿಕ್ವೆಲ್ಲಾ ಹಾಗೂ ದಿನೇಶ್ ಚಾಂಡಿಮಾಲ್‌ರನ್ನು ಸತತ ಓವರ್‌ನಲ್ಲಿ ಪೆವಿಲಿಯನ್‌ಗೆ ಕಳುಹಿಸಿದ ಎಡಗೈ ವೇಗಿ ರೇಯ್ಸೆ ಶ್ರೀಲಂಕಾಕ್ಕೆ ಆರಂಭಿಕ ಆಘಾತ ನೀಡಿದರು. ಪಾರ್ಟ್‌ಟೈಂ ಸ್ಪಿನ್ನರ್ ಮುಹಮ್ಮದ್ ಹಫೀಝ್ ನಾಯಕ ಉಪುಲ್ ತರಂಗ(18) ವಿಕೆಟ್‌ನ್ನು ಕಬಳಿಸಿದರು. ಎರಡು ಎಸೆತಗಳ ಅಂತರದಲ್ಲಿ ಕುಶಾಲ್ ಮೆಂಡಿಸ್ ಹಾಗೂ ಮಿಲಿಂದ ಸಿರಿವರ್ದನ ವಿಕೆಟ್‌ನ್ನು ಕಬಳಿಸಿರುವ ಮಧ್ಯಮ ವೇಗಿ ಅಲಿ ಶ್ರೀಲಂಕಾ 67 ರನ್‌ಗೆ 5 ವಿಕೆಟ್ ಕಳೆದುಕೊಳ್ಳಲು ಕಾರಣರಾದರು.

ಇದಕ್ಕೆ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ ಆರಂಭಿಕ ಆಟಗಾರ ಅಹ್ಮದ್ ಶೆಹಝಾದ್ ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. ಫಖ್ಹರ್ ಝಮಾನ್ ಹಾಗೂ ಆಝಂ 2ನೆ ವಿಕೆಟ್‌ಗೆ 75 ರನ್ ಸೇರಿಸಿ ತಂಡವನ್ನು ಆಧರಿಸಿದರು. ಎಡಗೈ ಬ್ಯಾಟ್ಸ್‌ಮನ್ ಝಮಾನ್ 42 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಇರುವ 45 ರನ್ ಗಳಿಸಿದರು.

ಆಝಂ ಹಾಗೂ ಮಲಿಕ್ ತಂಡಕ್ಕೆ ಆಧಾರವಾದರು. ಈ ಜೋಡಿ ನಾಲ್ಕನೆ ವಿಕೆಟ್‌ಗೆ 139 ರನ್ ಜೊತೆಯಾಟ ನಡೆಸಿತು. ಕೇವಲ 61 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ಗಳನ್ನೊಳಗೊಂಡ 81 ರನ್ ಗಳಿಸಿದ ಮಲಿಕ್ 47ನೆ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

128 ಎಸೆತಗಳಲ್ಲಿ ಶತಕ ಪೂರೈಸಿದ ಆಝಂ ಕೇವಲ 5 ಬೌಂಡರಿ ಬಾರಿಸಿದರು. ಕೊನೆಯ 10 ಓವರ್‌ಗಳಲ್ಲಿ 89 ರನ್ ಕಲೆ ಹಾಕಿದ ಪಾಕಿಸ್ತಾನ 6 ವಿಕೆಟ್‌ಗಳ ನಷ್ಟಕ್ಕೆ 292 ರನ್ ಗಳಿಸಿತು.

ಪಾಕಿಸ್ತಾನ-ಶ್ರೀಲಂಕಾ ನಡುವಿನ ಉಳಿದ ಪಂದ್ಯಗಳು ಅಬುಧಾಬಿ(ಅ.16,18) ಹಾಗೂ ಶಾರ್ಜಾದಲ್ಲಿ (ಅ.20 ಹಾಗೂ 23) ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News