ಭಾರತದ ಫುಟ್‌ಬಾಲ್‌ಗೊಬ್ಬ ದಾರ್ಶನಿಕ - ಉಮೇಶ್‌ಚಂದ್ರ ಮಜುಂದಾರ್

Update: 2017-10-15 04:58 GMT


ಫಿಫಾ ಯು 17 ರಾಷ್ಟ್ರೀಯ ಫುಟ್‌ಬಾಲ್ ಟೀಮ್ ಜಾಗತಿಕ ರಂಗದಲ್ಲಿ ತಮ್ಮ ಗುರುತು ಮೂಡಿಸಲು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ, ಫುಟ್‌ಬಾಲ್ ಕ್ರೀಡಾ ಜ್ಯೋತಿಗೆ ಮೊತ್ತಮೊದಲಾಗಿ ದೀಪ ಹಚ್ಚಿದ ದಂತಕಥೆಯನ್ನು ನಾವು ಸ್ಮರಿಸುವುದು ಅಗತ್ಯವಾಗಿದೆ.

ಫಿಫಾ ಯು - 17 ವಿಶ್ವಕಪ್ ಭಾರತದಲ್ಲಿ ನಡೆಯುತ್ತಿರುವ ವೇಳೆಯಲ್ಲಿ, ಈಗ ಎಲ್ಲರ ಗಮನ ದೇಶದ ಯುವ ಫುಟ್‌ಬಾಲ್‌ನ ಕಡೆಗೆ ಹೊರಳಿದೆ. ಆದರೆ ಇದರ ಬೀಜಗಳನ್ನು ಬಿತ್ತಿದವರು, 19ನೆ ಶತಮಾನದ ಅಂತ್ಯಭಾಗದಲ್ಲಿ ಓರ್ವ ದಾರ್ಶನಿಕ ಉಮೇಶಚಂದ್ರ ಮಜುಂದಾರ್ ಎಂದು ಜನಪ್ರಿಯರಾಗಿದ್ದ ದುಖೀರಾಮ್.

ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಭಾಗವಹಿಸದಂತೆ ಸುಮಾರು ಎರಡು ದಶಕಗಳ ಕಾಲ ಬ್ರಿಟಿಷರಿಂದ ನಿಷೇಧಿಸಲ್ಪಟ್ಟ ಬಳಿಕ, 1880ರ ದಶಕದಲ್ಲಿ ಭಾರತೀಯ ಫುಟ್‌ಬಾಲ್‌ಗೆ ಒಂದು ನವಜೀವನ ದೊರಕಿತು. ಇದು ಸಾಧ್ಯವಾದದ್ದು ಈ ಅವಧಿಯಲ್ಲಿ ಕೋಲ್ಕತಾ ಮತ್ತು ಸುತ್ತಮುತ್ತ ಹಲವು ಹೊಸ ಫುಟ್‌ಬಾಲ್ ಕ್ಲಬ್‌ಗಳ ಸ್ಥಾಪನೆಯಾದಾಗ. ಈ ಅವಧಿಯಲ್ಲಿ ಫುಟ್‌ಬಾಲ್ ರಂಗದಲ್ಲಿ ಹೊರಹೊಮ್ಮಿದ ಅತ್ಯಂತ ದೊಡ್ಡ ಕ್ಲಬ್ ಮೋಹನ್ ಬಾಗನ್ ಮತ್ತು ಅದರ ಯೋಜನೆಯ ಹಂತಗಳಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಂಡವರು ಉಮೇಶ್‌ಚಂದ್ರ ಮಜುಂದಾರ್.

ಮಜುಂದಾರ್ ಅವರ ಕಾಲದಲ್ಲಿ ಓರ್ವ ಪ್ರಸಿದ್ಧ ಸೆಂಟರ್ -ಹಾಫ್ ಆಗಿದ್ದರು. ಆದರೆ ಅವರು ಫುಟ್‌ಬಾಲ್ ಅಂಗಣದ ಹೊರಗೆ ನೀಡಿದ ಕೊಡುಗೆ ಹಾಗೂ ಸಾಧನೆಗಳಿಂದಾಗಿ ಅವರ ಫುಟ್‌ಬಾಲ್ ಜೀವನಕ್ಕೆ ಅಷ್ಟೊಂದು ಮಹತ್ವೆ ಸಿಕ್ಕಿಲ್ಲ. ಹೊಸ ಫುಟ್‌ಬಾಲ್ ಪ್ರತಿಭೆಗಳ ಹುಡುಕಾಟ ಅವರನ್ನು ಆ ಪ್ರದೇಶದ ಹಳ್ಳಿಗಳಿಗೆ ಮತ್ತು ಪಟ್ಟಣಗಳಿಗೆ ಕರೆದೊಯ್ದಿತು. 18ನೆ ಶತಮಾನದ ಕೊನೆಯ ಕೆಲವು ವರ್ಷಗಳಲ್ಲಿ ಅವರು ಎಲ್ಲರಿಗೂ ಪ್ರಮುಖ ಫುಟ್‌ಬಾಲ್ ಮೈದಾನಗಳಲ್ಲಿ, ತನ್ನ ಸೈಕಲ್‌ಗೆ ಒರಗಿನಿಂತು ಆಟವನ್ನು ತದೇಕ ಚಿತ್ತದಿಂದ ನೋಡುವ, ಒಂದು ತೀರ ಪರಿಚಿತ ಮುಖವಾಗಿದ್ದರು.

ಪರಿಣಾಮವಾಗಿ, ನಿರೀಕ್ಷಿತ ಫಲಿತಾಂಶ ದೊರಕಿತು. ಅವರ ಅತ್ಯುತ್ತಮ ಶಿಷ್ಯರಲ್ಲಿ ಇಬ್ಬರು ಸಹೋದರರಿದ್ದರು. ಶಿಬಿದಾಸ್ ಮತ್ತು ಬಿಚ್ಯೊದಾಸ್ ಭಾದುರಿ, ಇಬ್ಬರೂ ಕೂಡ ಮೋಹನ್‌ಬಾಗನ್‌ನ 1911ರ ಐಎಫ್‌ಎ ಟ್ರೋಫಿ ಗೆದ್ದ ತಂಡದ ಅತಿಮುಖ್ಯ ಆಟಗಾರರು. ಜಲ್‌ಪೈಗುರಿಯದ ಸೂರ್ಯಚಕ್ರಬರ್ತಿ, ಬಹ್ರಾಂಪುರ್‌ನ ಹಬ್ಲಾ ಭಟ್ಟಾಚಾರ್ಯ ಮತ್ತು ಪೊರ್ನಿಯಾದ ಸಮದ್, ಕೊಲ್ಕತಾದ ಹೊರಭಾಗದಿಂದ ಅವರು ಹುಡುಕಿ ತಂದ ಕೆಲವು ಅತಿಮುಖ್ಯ ಫುಟ್‌ಬಾಲ್ ತಾರೆಯರು.

ಅಂದಿನ ಕಾಲದಲ್ಲಿ ದೊಡ್ಡ ತಂಡಗಳ ಪರವಾಗಿ ಫುಟ್‌ಬಾಲ್ ಆಡುವುದರಿಂದ ಆಟಗಾರನಿಗೆ ಕೀರ್ತಿ ಬರುತ್ತಿತ್ತೇ ಹೊರತು ಆಟ ಆರ್ಥಿಕವಾಗಿ ಆಕರ್ಷಕವಾದ ಒಂದು ವೃತ್ತಿಯಾಗಿರಲಿಲ್ಲ. ಯುವ ಫುಟ್‌ಬಾಲ್ ಆಟಗಾರ ಹೆಚ್ಚಾಗಿ ಕಾಸಿನ ಕೊರತೆ ಎದುರಿಸುತ್ತಿದ್ದ್ದುದರಿಂದ ಯಾರಾದರೂ ಫುಟ್‌ಬಾಲ್ ಪ್ರೇಮಿ ಆಶ್ರಯದಾತ ಆಟಗಾರನಿಗೆ ಆಶ್ರಯ ನೀಡಬೇಕಾಗುತ್ತಿತ್ತು. ಉಮೇಶಚಂದ್ರ ಆಶ್ರಯದಾತನ ಪಾತ್ರವನ್ನು ನಿರ್ವಹಿಸುತ್ತಿದ್ದರು. 1930ರ ದಶಕದ ಕೋಮುಬಿಗಿತದ ನಡುವೆ ಆತ ಸಮದ್‌ಗೆ ಬಂಗಾಲಿ ಭಾಷೆ ಕಲಿಯಲು ಸಹಾಯ ಮಾಡಿದರು ಮತ್ತು ಸಂತೋಷ್ ಎಂಬ ಹೆಸರಿನಲ್ಲಿ ಅವನಿಗೆ ಒಂದು ಹಿಂದೂ ಕುಟುಂಬದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ಸಮದ್ 1930ರ ದಶಕದ ಅತ್ಯುತ್ತಮ ಭಾರತೀಯ ಫುಟ್‌ಬಾಲ್ ಆಟಗಾರನಾಗಿದ್ದ. ಹರಿದಾಸ್ ಎಂಬ ಹೆಸರಿನ ಒಬ್ಬ ಫುಟ್‌ಬಾಲ್ ಆಟಗಾರನಿಗೆ ಕ್ಷಯರೋಗ ಬಂದಾಗ ಮಜುಂದಾರ್ ಅವನಿಗೆ ಕುಡಿಯುವ ನೀರು ಒದಗಿಸಲು ಪ್ರತೀ ದಿನ ಬೆಳಗ್ಗೆ ಸುಮಾರು 15ಕಿ.ಮೀ. ದೂರ ಸೈಕಲ್ ತುಳಿಯುತ್ತಿದ್ದರು.

1955ರಲ್ಲಿ ಪ್ರಕಟವಾದ ಕೋಲ್ಕಟರ್ ಫುಟ್‌ಬಾಲ್ (ಕೋಲ್ಕತಾದ ಫುಟ್‌ಬಾಲ್) ಎಂಬ ಪ್ರಮುಖ ಪುಸ್ತಕದಲ್ಲಿ ಖ್ಯಾತ ಪತ್ರಕರ್ತ ರಖಲ್‌ಭಟ್ಟಾಚಾರ್ಯ, ಹೇಗೆ ಇತರ ಪುಟ್‌ಬಾಲ್ ಕ್ಲಬ್‌ಗಳು ಮೋಹನ್‌ಬಾಗನ್‌ನ ಪ್ರತಿಭೆಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದವು ಎಂಬುದನ್ನು ವಿವರಿಸಿದ್ದಾರೆ.

ಮೋಹನ್ ಬಾಗನ್ ಮಾರ್ಗದರ್ಶನದಲ್ಲಿ, ‘ಆರ್ಯನ್ಸ್’ ಎಂಬ ಫುಟ್‌ಬಾಲ್ ತಂಡ ಯುವ ಭಾರತೀಯ ಫುಟ್‌ಬಾಲ್ ಪ್ರತಿಭೆಗಳಿಗೆ ಬೆಳಕಿಗೆ ಬರಲು ಅತ್ಯಂತ ಹೆಚ್ಚು ಅವಕಾಶ ನೀಡಿದ ನೆಲೆಯಾಯಿತು. ಕೋಲ್ಕತಾ ಮೈದಾನದಲ್ಲಿ ಮೋಹನ್‌ಬಾಗನ್‌ನಿಂದ ಆಟ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡ ಹಲವು ಆಟಗಾರರು ಕ್ರಮೇಣ ಇನ್ನಷ್ಟು ಪ್ರಸಿದ್ಧ ಫುಟ್‌ಬಾಲ್‌ತಂಡಗಳಿಗೆ ವಲಸೆ ಹೋದರಾದರೂ, ಪೂರ್ಣದಾಸ್, ಪ್ರಕಾಶ್‌ಘೋಷ್, ಬಲೈದಾಸ್ ಚಟರ್ಜಿ, ರೂಪ್‌ಚಂದ್ ದಫಾದಾರ್ ಇವರೆಲ್ಲ ಮನೆ ಮಾತಾದರು. ಬಲೈದಾಸ್ ಚಟರ್ಜಿ 1948ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ಫುಟ್‌ಬಾಲ್ ಟೀಮ್‌ನ ಕೋಚ್ ಆಗಿ ಆಯ್ಕೆಗೊಂಡರು.

ಮೇಲೆ ಹೆಸರಿಸಲಾದ ಎಲ್ಲ ಫುಟ್‌ಬಾಲ್ ಆಟಗಾರರನ್ನು ಅವರ ಹದಿಹರೆಯದ ವಯಸ್ಸಿನಲ್ಲೇ ಮಜುಂದಾರ್ ಗುರುತಿಸಿದ್ದರು. ಆದರೆ ಅವರ ಅಳಿಯ ಸಂತೋಷ್‌ಗೆ ಫುಟ್‌ಬಾಲ್ ತರಗತಿಗಳು ಚಿಕ್ಕ ಹುಡುಗನಾಗಿದ್ದಾಗಲೇ ಆರಂಭಗೊಂಡಿದ್ದವು. ಸಂತೋಷ್‌ಗೆ ಫುಟ್‌ಬಾಲ್‌ನ ಎಲ್ಲಾ ವಿಭಾಗಗಳಲ್ಲ್ಲೂ ಆಟವಾಡಲು ಕಲಿಸಿದ್ದರಿಂದ ಆತ ಗೋಲ್‌ಕೀಪರ್, ಸೆಂಟರ್-ಹಾಫ್ ಮತ್ತು ಲೆಫ್ಟ್ - ಔಟ್ ಆಗಿ ಪ್ರಮುಖ ಪಂದ್ಯಗಳಲ್ಲಿ ಆಡಿದ್ದರು. ಇದು ಇಂಡಿಯಾದ ಫುಟ್‌ಬಾಲ್ ಆಟಗಾರರಲ್ಲೇ ತುಂಬ ಅಪರೂಪದ ಒಂದು ಸಾಧನೆಯಾಗಿತ್ತು.

ಭಾರತದ ಮೊತ್ತಮೊದಲ ಫುಟ್‌ಬಾಲ್ ಕೋಚ್ ಮತ್ತು ಸ್ಕೌಟ್ ಎಂದು ಪರಿಗಣಿಸಲಾಗಿರುವ ಮಜುಂದಾರ್ ಬ್ರಿಟಿಷರ ಗೌರವಕ್ಕೆ ಕೂಡ ಪಾತ್ರರಾಗಿದ್ದರು. 1914ರಲ್ಲಿ ಬ್ರಿಟಿಷ್ ಸರಕಾರ ಕೋಲ್ಕತಾ ಫುಟ್‌ಬಾಲ್ ಲೀಗ್‌ನ ಎರಡನೆ ಡಿವಿಜನ್‌ನ ಒಂದು ಭಾಗವಾಗಲು ಎರಡು ಭಾರತೀಯ ಫುಟ್‌ಬಾಲ್ ಟೀಮ್‌ಗಳಿಗೆ ಅನುಮತಿ ನೀಡಿದಾಗ ಜನಪ್ರಿಯ ಮೋಹನ್ ಬಾಗನ್ ಜೊತೆಗೆ ಆರ್ಯನ್ಸ್ ತಂಡವನ್ನು ಲೀಗ್‌ನ ಒಳಗೆ ಸೇರಿಸಿಕೊಳ್ಳಲಾಯಿತು.

ದುಖೀರಾಮ್‌ನ ಕೊಡುಗೆ, ಪರಂಪರೆ ಕಾಲಕಳೆದಂತೆ ತನ್ನ ಪ್ರಭೆಯನ್ನು ಕಳೆದುಕೊಂಡಿದೆ.

ಫಿಫಾ ಯು 17 ರಾಷ್ಟ್ರೀಯ ಫುಟ್‌ಬಾಲ್ ಟೀಮ್ ಜಾಗತಿಕ ರಂಗದಲ್ಲಿ ತಮ್ಮ ಗುರುತು ಮೂಡಿಸಲು ಪ್ರಯತ್ನಿಸುತ್ತಿರುವ ಈ ಸಮಯದಲ್ಲಿ, ಫುಟ್‌ಬಾಲ್ ಕ್ರೀಡಾ ಜ್ಯೋತಿಗೆ ಮೊತ್ತಮೊದಲಾಗಿ ದೀಪ ಹಚ್ಚಿದ ದಂತಕಥೆಯನ್ನು ನಾವು ಸ್ಮರಿಸುವುದು ಅಗತ್ಯವಾಗಿದೆ.
ಕೃಪೆ: scroll.in

Writer - ಅತನು ಮಿತ್ರ

contributor

Editor - ಅತನು ಮಿತ್ರ

contributor

Similar News

ಜಗದಗಲ
ಜಗ ದಗಲ