ಗುಳೆ ಸಂಸ್ಕೃತಿಯ ಸಾಹಿತಿಗೆ ನೊಬೆಲ್ ಪ್ರಶಸ್ತಿ

Update: 2017-10-15 04:44 GMT

ನೊಬೆಲ್ ಪ್ರಶಸ್ತಿ ಸಮಿತಿ ಕಝುವೊ ಇಷಿಗುರೋನನ್ನು ಬೇರುಗಳನ್ನು ಕಳಚಿಕೊಂಡಿರುವ ಗುಳೆ ಲೇಖಕ ಎಂದೇನೂ ಕರೆದಿಲ್ಲ. ಜೇನ್ ಆಸ್ಟಿನ್, ಫ್ರಾಂಜ್ ಕಾಫ್ಕ, ಮತ್ತು ಮಾರ್ಸೆಲ್ ಪ್ರೊಸ್ಟ್ ಈ ಮೂವರು ಪ್ರಖ್ಯಾತ ಐರೋಪ್ಯ ಸಾಹಿತಿಗಳ ಮಿಶ್ರಪಾಕವೇ ಕಝುವೊ ಇಷಿಗುರೋನ ಸಾಹಿತ್ಯವೆಂದು ನೊಬೆಲ್ ಪ್ರಶಸ್ತಿ ಸಮಿತಿ ಸಾಹಿತಿ ಇಷಿಗುರೊನನ್ನು ಗುರುತಿಸಿದೆ.

ಮಾನವ ಕುಲದ ಜೀವಯಾನ; ಈ ಪಯಣದಲ್ಲಿನ ಹೋರಾಟ ಜಗತ್ತಿನ ಎಲ್ಲ ಸಾಹಿತ್ಯ ಮತ್ತು ಕಲೆಗಳ ಮೂಲವಸ್ತುವಾಗಿದೆ. ಯುದ್ಧ, ಜನಾಂಗೀಯ ಹಿಂಸೆ-ಕ್ರೌರ್ಯಗಳು, ಬಡತನ, ಹಲವು ಹನ್ನೊಂದು ಬಗೆಯ ಶೋಷಣೆಗಳು ಇತ್ಯಾದಿಗಳಿಂದ ಬಾಧಿತನಾದ ಮನುಷ್ಯ-ಬದುಕಬಹುದಾದ ಹಸಿರು ನೆಲೆಗಳನ್ನು ಅರಸಿ ನಡೆವ ಮಾನವ ಕುಲದ ಈ ಜೀವನ ಪಯಣ ಅನಾದಿ-ಅನಂತ. ಮಹಾಯುದ್ಧಗಳು, ಜನಾಂಗೀಯ ಪೂರ್ವಾಗ್ರಹಗಳ ಹಿಂಸಾಚಾರ ಮತ್ತು ಅನಾಗರಿಕ ನಡವಳಿಕೆಗಳಿಂದಾಗಿ ಈ ಜೀವಯಾನ ಈಚಿನ ಶತಮಾನಗಳಿಂದ ಹಿಡಿದು ಪ್ರಚಲಿತ ರೊಹಿಂಗ್ಯಾವರೆಗೆ ತೀವ್ರಗತಿಯಲ್ಲಿ ಸಾಗುತ್ತಲೇ ಇದೆ; ವಿಶ್ವಮಾನವ ಪ್ರಜ್ಞೆಯನ್ನು, ಮಾನವ ಅಂತಃಕರಣವನ್ನು ಘಾತಿಸುತ್ತಲೇ ಇದೆ.

ಈ ವರ್ಷದ ನೊಬೆಲ್ ಸಾಹಿತ್ಯ ಪ್ರಶಸ್ತಿ ಇಂಥದೊಂದು ನೆನಪನ್ನು ಮತ್ತೆ ಹರಿತಗೊಳಿಸಿದೆ. ಈ ವರ್ಷದ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಪಾತ್ರನಾಗಿರುವ ಸಾಹಿತಿ ಕಝುವೊ ಇಷಿಗುರೊ ಇಂಥ ಒಂದು ಗುಳೆ ಸಂಸ್ಕೃತಿಗೆ ಸೇರಿದ ಲೇಖಕ. ತಾಯಿಬೇರುಗಳಿರುವ ಜನ್ಮಭೂಮಿಯನ್ನು ಮೇಲೆ ಹೇಳಿದಂಥ ಕಾರಣಗಳಿಂದಾಗಿ ತ್ಯಜಿಸಿ, ಅನ್ಯ ದೇಶಗಳಿಗೆ ಹೋಗಿ ನೆಲೆಸಿ ಪ್ರಸಿದ್ಧರಾದ ಇಂಥ ಗುಳೆ ಸಂಸ್ಕೃತಿಯ ಸಾಹಿತಿಗಳಿಗೆ ನೊಬೆಲ್ ಸಮಿತಿ ಪ್ರಶಸ್ತಿ ನೀಡುತ್ತಿರುವುದು ಆಕಸ್ಮಿಕವೂ ಅಲ್ಲ, ಇದೇ ಪ್ರಥಮವೂ ಅಲ್ಲ. ಈ ಹಿಂದೆ, ಸೋವಿಯತ್ ರಷ್ಯದಲ್ಲಿ ಕೂಡುದೊಡ್ಡಿ(ಕಾನ್ಸೆಂಟ್ರೇಷನ್ ಕ್ಯಾಂಪ್) ಶಿಕ್ಷೆ ಅನುಭವಿಸಿ ಅಮೆರಿಕದಲ್ಲಿ ನೆಲೆ ಕಂಡುಕೊಂಡ ಅಲೆಕ್ಸಾಂಡರ್ ಸೋಲ್ಜೆನಿಟ್ಸಿನರಂಥ ಸಾಹಿತಿಗಳಿಗೆ ಪ್ರಶಸ್ತಿ ನೀಡಿರುವ ಪೂರ್ವನಿದರ್ಶನಗಳಿವೆ.

 ‘ಅಹಂ’ ಇಲ್ಲದ ಕಲಾವಿದ, ಸಮಕಾಲೀನ ಸಾಹಿತ್ಯದ ಸುಪ್ರಸಿದ್ಧ ಲೇಖಕ ಎಂಬೆಲ್ಲ ಪ್ರಶಂಸೆಗಳಿಗೆ ಪಾತ್ರರಾಗಿರುವ ಕಝುವೊ ಇಷಿಗುರೊ ಜನಿಸಿದ್ದು ಜಪಾನಿನ ನಾಗಾಸಾಕಿಯಲ್ಲಿ, 1954ರ ನವೆಂಬರ್ 8ರಂದು. ನಾಗಾಸಾಕಿ ಒಂದು ರೇವುಪಟ್ಟಣ. ನಾಗಾಸಾಕಿ ಎಂದರೆ ನಮಗೆ ನೆನಪಾಗುವುದು ಎರಡನೆ ಮಹಾಯುದ್ಧದಲ್ಲಿ ಪರಮಾಣು ಬಾಂಬ್ ದಾಳಿಗೆ ತುತ್ತಾದ ಪಟ್ಟಣ. ಇಷಿಗುರೊ ಕುಟುಂಬ ಜಪಾನಿನಿಂದ ಇಂಗ್ಲೆಂಡಿಗೆ ಗುಳೆ ಹೋದದ್ದು 1960ರಲ್ಲಿ. ಅಂದರೆ ನಾಗಾಸಾಕಿ 1945ರಲ್ಲಿ ಮಹಾಯುದ್ಧದ ಬಾಂಬ್ ದಾಳಿಯಿಂದ ನಿರ್ನಾಮಗೊಂಡು ಮತ್ತೆ ಮರುಹುಟ್ಟುಪಡೆಯುತ್ತಿದ್ದ ಕಾಲಾವಧಿಯಲ್ಲಿ ಈ ಕುಟುಂಬ ಜಪಾನಿನಿಂದ ಕಾಲ್ತೆಗೆದಿರಬಹುದು, ಹೊಸ ಕನಸುಗಳನ್ನು ಅನ್ವೇಷಿಸುತ್ತಾ. ಆಗ ಕಝುವೊ ಇಷಿಗುರೊ ಐದು ವರ್ಷದ ಬಾಲಕ.

ಬಾಂಬ್ ದಾಳಿಯಿಂದ ನಿರ್ನಾಮಗೊಂಡ ಹಿರೊಶಿಮಾ, ನಾಗಾಸಾಕಿ ಮತ್ತು ಯುದ್ಧದಿಂದ ಜರ್ಝರಿತವಾದ ಜಪಾನಿನ ಕರಾಳ ಇತಿಹಾಸ ಯುದ್ಧೋತ್ತರ ಪೀಳಿಗೆಯ ಐದು ವರ್ಷದ ಬಾಲಕನ ಜಾಗೃತ ಮನಸ್ಸಿನಲ್ಲಿ ಅಲ್ಲವಾದರೂ ಸುಪ್ತ ಚಿತ್ತದಲ್ಲಿ ಅಚ್ಚೊತ್ತಿರುವುದು ಅಸಾಧ್ಯವೇನಲ್ಲ. ಕಝುವೊ ಇಷಿಗುರು ಕೆಂಟ್ ವಿಶ್ವವಿದ್ಯಾನಿಲಯದ ಪದವೀಧರ. ಸೃಜನಶೀಲ ಬರವಣಿಗೆಯಲ್ಲಿ ಸ್ನಾತಕೋತ್ತರ ಪದವಿಪಡೆದಿರುವ ಯಶಸ್ವೀ ಲೇಖಕ. ತತ್ತ್ವ ಶಾಸ್ತ್ರದ ಅಧ್ಯಯನ ಇಷಿಗುರೊಗೆ ಪ್ರಿಯವಾದ ವಿಷಯ. ಸೃಜನಶೀಲ ಲೇಖಕನಾಗಿ ಇಷಿಗುರೊ ಟೆಲಿ ನಾಟಕ, ಕಥೆ-ಕಾದಂಬರಿ, ಸಿನೆಮಾ ಚಿತ್ರ ಕಥೆ, ಭಾವಗೀತೆ ಹೀಗೆ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದವನು. ಕಳೆದ ವರ್ಷದ ನೊಬೆಲ್ ಪ್ರಶಸ್ತಿ ವಿಜೇತ ಗೀತ ರಚನಕಾರ ಬಾಬ್ ಡಿಲಾನ್‌ನಿಂದ ಸ್ಫೂರ್ತಿ ಪಡೆದವನು. ಕಾದಂಬರಿ ಅವನ ಸೃಜನಶೀಲ ಪ್ರತಿಭೆಗೆ ಒಗ್ಗಿಬಂದಿರುವ ಪ್ರಕಾರ. ಹೀಗಾಗಿ ಕಾದಂಬರಿಕಾರನಾಗಿಯೇ ಹೆಚ್ಚು ಖ್ಯಾತಿ ಪಡೆದವನು

‘ಆ್ಯನ್ ಆರ್ಟಿಸ್ಟ್ ಆಫ್ ದಿ ಫ್ಲೋಟಿಂಗ್ ವರ್ಲ್ಡ್’, ‘ದ ರಿಮೈನ್ಸ್ ಆಫ್ ದಿ ಡೇ,’ ‘ವೆನ್ ವಿ ಆರ್ ಆರ್ಫನ್ಸ್’, ‘ನೆವರ್ ಲೆಟ್ ಮಿ ಗೋ’- ಪಂಡಿತ ಪಾಮರರಿಬ್ಬರಿಂದಲೂ ಮೆಚ್ಚುಗೆಗೆ ಪಾತ್ರವಾಗಿರುವ ಕಝುವೊ ಇಷಿಗುರೋನ ಮಹತ್ವದ ಕಾದಂಬರಿಗಳು. ಕಾದಂಬರಿಗಳ ಈ ಶೀರ್ಷಿಕೆ ಗಳೇ ಮನುಷ್ಯ ಜೀವಯಾನದ ನೋವು ಹಾನಿಗಳನ್ನು, ಹಚ್ಚಹಸುರಿನ ಹೊಸ ಬದುಕನ್ನು ಅರಸುತ್ತ ಹೊರಡುವ ಪರ್ಯಟನ ಪ್ರವೃತ್ತಿಯನ್ನು, ಗುಳೇ ಸಂಸ್ಕೃತಿಯ ಹೋರಾಟಗಳನ್ನು ಧ್ವನಿಸುತ್ತಿರುವಂತೆ ಭಾಸವಾಗುತ್ತದೆ.

ನೊಬೆಲ್ ಪ್ರಶಸ್ತಿ ಸಮಿತಿ ಕಝುವೊ ಇಷಿಗುರೋನನ್ನು ಬೇರುಗಳನ್ನು ಕಳಚಿಕೊಂಡಿರುವ ಗುಳೆ ಲೇಖಕ ಎಂದೇನೂ ಕರೆದಿಲ್ಲ. ಜೇನ್ ಆಸ್ಟಿನ್, ಫ್ರಾಂಜ್ ಕಾಫ್ಕ, ಮತ್ತು ಮಾರ್ಸೆಲ್ ಪ್ರೊಸ್ಟ್ ಈ ಮೂವರು ಪ್ರಖ್ಯಾತ ಐರೋಪ್ಯ ಸಾಹಿತಿಗಳ ಮಿಶ್ರಪಾಕವೇ ಕಝುವೊ ಇಷಿಗುರೋನ ಸಾಹಿತ್ಯವೆಂದು ನೊಬೆಲ್ ಪ್ರಶಸ್ತಿ ಸಮಿತಿ ಸಾಹಿತಿ ಇಷಿಗುರೊನನ್ನು ಗುರುತಿಸಿದೆ. ಹೋಲಿಕೆಗೆ ಕೊಟ್ಟಿರುವ ಮೂವರೂ ಐರೋಪ್ಯ ಸಂಸ್ಕೃತಿಯ ಮಹಾನ್ ಲೇಖಕರೆಂದೇ ಸುಪ್ರಸಿದ್ಧರು. ಈ ಹೋಲಿಕೆಯ ಅಗತ್ಯ ಮತ್ತು ಔಚಿತ್ಯಗಳೇನೇ ಇರಲಿ, ಇದರಿಂದ ಇಷಿಗುರೋನ ಕೃತಿಗಳಿಗೆ ನ್ಯಾಯವನ್ನೊದಗಿಸಿದಂತಾಗಿದೆಯೇ ಎಂಬುದು ವಿಮರ್ಶಕ ವಲಯಗಳಲ್ಲಿ ಕೇಳಿ ಬರುತ್ತಿರುವ ಅಸಮಾಧಾನ.

ಐದು ವರ್ಷದ ಬಾಲಕನ ಮನಸ್ಸಿನಲ್ಲಿದ್ದಿರಬಹುದಾದ ಯುದ್ಧದ ವಿನಾಶಕಾರಿ ಪ್ರವೃತ್ತಿಗಳು ಹಾಗೂ ವಲಸೆಯ ಬದುಕಿನ ಕಷ್ಟಗಳು ಮಸುಕಾಗಿ ಐರೋಪ್ಯ ಬದುಕಿನ ದರ್ಶನವೊಂದು ಅವನ ಕೃತಿಗಳಲ್ಲಿ ಪ್ರಧಾನವಾಗಿ ಮೂಡಿದೆ ಎನ್ನುವ ಪ್ರತಿಪಾದನೆಯೂ ಇದೆ. ಇವೆರಡನ್ನು ಒಂದು ಕ್ಷಣ ಬದಿಗಿರಿಸಿದರೆ ಇಷಿಗುರೋನ ಕೃತಿಗಳ ಅವಲೋಕನ ನಿಜ ಕಾಣಲು ಸಹಾಯಕವಾದೀತು. ‘ಆ್ಯನ್ ಆರ್ಟಿಸ್ಟ್ ಆಫ್ ದಿ ಫ್ಲೋಟಿಂಗ್ ವರ್ಲ್ಡ್’ ಕಥಾನಕದ ಭೂಮಿಕೆ ಜಪಾನಿನ ಹೆಸರಿಲ್ಲದ ಒಂದು ನಗರವೇ ಆಗಿದೆ. ಈ ಕಾದಂಬರಿಯ ಕಾಲಮಾನವೂ 1945ರ ಶರಣಾಗತಿಯ ನಂತರ ಜಪಾನ್ ಪುನುರುಜ್ಜೀವನದ ಕಾಯಕದಲ್ಲಿ ತೊಡಗಿದ್ದ ಅವಧಿಯೇ ಆಗಿದೆ. ಇಂಗ್ಲೆಂಡಿಗೆ ವಲಸೆ ಹೋದ ಜಪಾನಿ ಕುಟುಂಬವೊಂದರ ಪ್ರಕ್ಷುಬ್ಧಕಾರಿ ಬದುಕು ‘ಎ ಪೇಲ್ ವ್ಯೆ ಆಫ್ ಹಿಲ್ಸ್’ ಕಾದಂಬರಿಯ ವಸ್ತು. ‘ದಿ ಅನ್‌ಕನ್ಸೊಲ್ಡ್’ ಕಾದಂಬರಿಯ ಕಥೆಯ ನೆಲೆಯೂ ಮಧ್ಯ ಯೂರೋಪಿನ ಹೆಸರಿಲ್ಲದ ಒಂದು ಪಟ್ಟಣವಾಗಿದೆ. ಇಲ್ಲಿನ ಮುಖ್ಯ ಪಾತ್ರಗಳೂ ಗುಳೆ ಬಂದವರು. ಹೆಸರಿಲ್ಲದ ಪಟ್ಟಣಗಳಿಗೆ ಅನಾಮಧೇಯರಾಗಿ ಬಂದು ಬದುಕನ್ನು ಅರಸುವ ಇಷಿಗುರೋನ ಪಾತ್ರಗಳು ಎರಡು ಮಹಾ ಯುದ್ಧಗಳ ನಂತರ ಶಾಂತಿನೆಮ್ಮದಿಗಳ ಅನ್ವೇಷಣೆಯಲ್ಲಿ ಗುಳೆ ಹೊರಟ ಜನರ ದಾರುಣ ಬದುಕನ್ನು ನೆನಪಿಸುತ್ತವೆ.

ಬೂಕರ್ ಪ್ರಶಸ್ತಿ ಗೆದ್ದಿರುವ ‘ದಿ ರಿಮೈನ್ಸ್ ಆಫ್ ದಿ ಡೇ’ ಸಾಹಿತ್ಯ ಪ್ರಪಂಚದಲ್ಲಿ ಪರಮಾಶ್ಚರ್ಯದ ಅಲೆಗಳನ್ನು ಎಬ್ಬಿಸಿದ ಮಹತ್ವದ ಕಾದಂಬರಿ. ಇಂಗ್ಲೆಂಡಿನ ಬಾಣಸಿಗನೊಬ್ಬನ ಬದುಕನ್ನು ಕೇಂದ್ರವಾಗುಳ್ಳ ಈ ಕಾದಂಬರಿ, ವ್ಯಕ್ತಿಗತ ಬದುಕಿನ ದರ್ಶನಗಳನ್ನು ದಾಖಲಿಸುತ್ತಲೇ ಇಂಗ್ಲೆಂಡಿನ ರಾಜಕೀಯ ಬದುಕು-ಬಿಕ್ಕಟ್ಟುಗಳನ್ನು ನಿರೂಪಿಸುತ್ತದೆ, ವ್ಯಕ್ತಿ ಮತ್ತು ಸಮಷ್ಟಿಯ ನಡುವಣ ಸಂಬಂಧಗಳನ್ನೂ ಹಾಗೂ ಮಾನವ ಘನತೆಯ ಅಸ್ಮಿತೆಯನ್ನು ಕಾಪಾಡಿಕೊಳ್ಳುವಾಗಿನ ತುಮುಲಗಳನ್ನೂ ಮಾರ್ಮಿಕವಾಗಿ ಚಿತ್ರಿಸುತ್ತದೆ. ಇಂಗ್ಲಿಷ್ ಬಾಣಸಿಗನೊಬ್ಬನ ಕಥೆಯಾದರೂ ಮನುಷ್ಯನ ಸ್ಥಿತಿಗತಿ ಕುರಿತ ಕಾಳಜಿಯೇ ಕಾದಂಬರಿಯ ಮುಖ್ಯ ಕಳಕಳಿಯಾಗಿದೆ. ಬಾಣಸಿಗನ ವೈಯಕ್ತಿಕ ಬದುಕಿನ ವಿವರಗಳೊಂದಿಗೆ ಇಂಗ್ಲೆಂಡಿನ ರಾಜಕಾರಣ, ಚರ್ಚಿಲ್, ಹಿಟ್ಲರ್, ಜರ್ಮನಿಗಳ ಮನೋಗತಗಳು ಅವನ ನೋಟಗಳ ಮುಖೇನ ಓದುಗರಿಗೆ ಲಭ್ಯವಾಗುತ್ತದೆ.

ಸ್ಥಳ ಮತ್ತು ಸ್ಥಾನ ಪಲ್ಲಟಗಳು ಅನುಭವಗಮ್ಯವಾಗುತ್ತವೆ. ವಿಮರ್ಶಕರು ಗಮನಿಸಿರುವಂತೆ ಇಷಿಗುರೋನ ಬಹುತೇಕ ಪಾತ್ರಗಳು ಸ್ಥಳಾಂತರ ಮತ್ತು ಸ್ಥಾನಪಲ್ಲಟಗಳ ನೋವನ್ನು ನುಂಗಿಕೊಂಡು ಹೊಸನೆಲೆಗಳಲ್ಲಿ ರಾಜಿಮಾಡಿಕೊಂಡು ಬದುಕುವ ಬವಣೆಯ ಪಾತ್ರಗಳೇ ಆಗಿವೆ. ತಾಯಿಬೇರುಗಳಿಂದ ಭಗ್ನಗೊಂಡು ಅನ್ಯನೆಲೆಗಳಲ್ಲಿ ಬದುಕನ್ನು ಕಟ್ಟಿಕೊಳ್ಳುವ ಜೀವಯಾನದ ಕಷ್ಟಸುಖಗಳು ಇಷಿಗುರೋನ ಕಾದಂಬರಿಗಳಲ್ಲಿ ಹಲವು ಬಗೆಗಳಲ್ಲಿ ಅಭಿವ್ಯಕ್ತಿ ಪಡೆದಿವೆ. ನೆನಪು, ಭೂತ ಮತ್ತು ವರ್ತಮಾನಗಳು ಇಷಿಗುರೊನ ಕಾದಂಬರಿಗಳಲ್ಲಿ ಹಾಸುಹೊಕ್ಕಾಗಿ ಹೆಣೆದುಕೊಂಡಿವೆ. ಇವುಗಳ ಹಾಸುಬೀಸುಗಳಲ್ಲೇ ಮಾನವ ಬದುಕಿನ ಹೋರಾಟದ ತುಣುಕುಗಳು ಒಂದಕ್ಕೊಂದು ಕೊಂಡಿಯಾಗಿ ಬದುಕಿನ ಕಥಾನಕದ ಬಟ್ಟೆ ನೇಯ್ದುಕೊಳ್ಳುವುದು, ಅರ್ಥಪೂರ್ಣವಾಗುವುದು ಇಷಿಗುರೋನ ಬರವಣಿಗೆಯ ವಿಶಿಷ್ಟ ಪರಿಯಾಗಿದೆ.

ವಿಮರ್ಶೆಯ ವಲಯದಲ್ಲಿ ಹೆಚ್ಚಿನ ಗಮನ ಸೆಳೆದ ಇಷಿಗುರೊನ ಇನ್ನೊಂದು ಮುಖ್ಯ ಕಾದಂಬರಿ, ‘ನೆವರ್ ಲೆಟ್ ಮಿ ಗೊ’. ಮನುಷ್ಯ ಮತ್ತು ತಂತ್ರಜ್ಞಾನಗಳ ನಡುವಣ ಸಂಬಂಧವನ್ನು ನವಿರಾಗಿ ವಿಡಂಬಿಸುವ ಈ ಕಾದಂಬರಿಯ ಪಾತ್ರಗಳು ಮಾನವ ತದ್ರೂಪಿಗಳೇ (ಕ್ಲೋನ್‌ಗಳು) ಆಗಿವೆ. ವೈಜ್ಞಾನಿಕ ಕಲ್ಪಿತ ಕಥೆಗಳ ಗುಣಗಳನ್ನೂ ಹೊಂದಿರುವ ಈ ಕಾದಂಬರಿಯಲ್ಲಿ ಇಷಿಗುರೊ, ವಿಜ್ಞಾನ ಮತ್ತು ತಂತ್ರಜ್ಞಾನಗಳು ಮಾನವ ಬದುಕಿನಲ್ಲಿ ಮೂಡಿಸಲಿರುವ ಹೊಸ ಭರವಸೆಗಳನ್ನೂ ಅಂತೆಯೇ ಅವು ತರುವ ವಿಪತ್ತುಗಳನ್ನೂ ಅಕ್ಕಪಕ್ಕದಲ್ಲಿಟ್ಟು ನಮ್ಮನ್ನು ಬೆಚ್ಚಿಬೀಳಿಸುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನಗಳಿಂದಾಗಿ ಮಾನವ ಜೀವನ ರೋಗಮುಕ್ತವಾಗುವ ಸಮಾಧಾನದ ಮಧ್ಯೆಯೇ ಅದೇ ವಿಜ್ಞಾನ-ತಂತ್ರಜ್ಞಾನಗಳು ತರುವ ವಿಪತ್ತುಗಳಿಂದಾಗಿ ಭೀತಿಹುಟ್ಟಿಸುವ ವಿಪರ್ಯಾಸ ಇಲ್ಲಿದೆ.

ಯುದ್ಧೋತ್ತರ ಜಗತ್ತಿನ ಎರಡು ಮುಖ್ಯ ಲಕ್ಷಣಗಳಾದ ಸ್ಥಳ ಮತ್ತು ಸ್ಥಾನ ಪಲ್ಲಟಗಳ ಪರಿಣಾಮಗಳು ಮತ್ತು ಗುಳೇ ಸಂಸ್ಕೃತಿಯ ಚಹರೆಗಳನ್ನು, ಇಂಥ ಸಂದರ್ಭ-ಸನ್ನಿವೇಶಗಳಲ್ಲಿ ಕಂಡು ಬರುವ ಮಾನವ ಸಂಬಂಧಗಳಲ್ಲಿನ ಬಿರುಕುಗಳನ್ನು ಮುಖ್ಯವಾಗಿ ಬಿಂಬಿಸುವ ಕಝುವೊ ಇಷಿಗುರೋನ ಕೃತಿಗಳನ್ನು ಸುಪ್ರಸಿದ್ಧ ಐರೋಪ್ಯ ಲೇಖಕರ ಮಿಶ್ರ ಪಾಕ ಎಂದು ವರ್ಣಿಸಿರುವುದರ ಔಚಿತ್ಯ ಪ್ರಶ್ನಾರ್ಹವಾದುದು. ಕಳೆದ ವರ್ಷ ಹಾಡುಗಾರ ಹಾಗೂ ಗೀತರಚನಾಕಾರನೊಬ್ಬನಿಗೆ ಕೊಟ್ಟನಂತರ ಉದ್ಭವಿಸಿದ ವಿವಾದದ ಹಿನ್ನೆಲೆಯಲ್ಲಿ, ನೊಬೆಲ್ ಸಮಿತಿಗೆ ಶ್ರೇಷ್ಠತೆಯೊಂದಿಗೆ ಗಂಟುಹಾಕುವ ಇಂಥದೊಂದು ಹೋಲಿಕೆ ಅನಿವಾರ್ಯವೆನ್ನಿಸಿರಬಹುದು. ಸ್ವಲ್ಪಮಟ್ಟಿಗೆ ಹಿಟ್ಲರ್‌ನಿಂದ ಪೀಡನೆಗೊಳಗಾದ ಯಹೂದಿ ಕೌಟುಂಬಿಕ ಹಿನ್ನೆಲೆಯುಳ್ಳ ಕಾಫ್ಕಾನ ಬರಹಗಳೊಂದಿಗೆ ಹೋಲಿಕೆಗೆ ಅವಕಾಶವಿದೆ. ಆದರೆ ಈ ಹೋಲಿಕೆಗಳನ್ನು ಮೀರಿ ನಿಲ್ಲುವ ಗುಳೆ ಸಂಸ್ಕೃತಿಯ ಅಸ್ಮಿತೆಯನ್ನು ಇಷಿಗುರೊನ ಕೃತಿಗಳಲ್ಲಿ ನಾವು ಕಾಣಬಹುದಾಗಿದೆ.

ಈ ವರ್ಷವೂ ನೊಬೆಲ್ ಸಾಹಿತ್ಯ ಪ್ರಶಸ್ತಿ ಸಮಿತಿಯ ಆಯ್ಕೆ ಚರ್ಚೆವಾದಗಳಿಗೆ ಆಸ್ಪದ ಮಾಡಿಕೊಟ್ಟಿರುವಂತಿದೆ. ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿ ಈ ವರ್ಷವೂ ಇಂಗ್ಲಿಷ್ ಅಥವಾ ಇಂಗ್ಲಿಷ್‌ನಲ್ಲಿ ಬರೆಯುವ ಲೇಖಕರಿಗೇ ಮಣೆಹಾಕಿದೆ ಎನ್ನುವ ಅಕ್ಷೇಪಣೆಯ ದನಿ ಕೇಳಿಬಂದಿದೆ. ಕಝುವೊ ಇಷಿಗುರೋ ಪ್ರಶಸ್ತಿಗೆ ಯೋಗ್ಯ ಎನ್ನುವುದರಲ್ಲಿ ಭಿನ್ನಾಭಿಪ್ರಾಯವಿಲ್ಲವಾದರೂ ಕೆನೆಡಾದ ಮಾರ್ಗರೆಟ್ ಅಟ್ವುಡ್, ಜಪಾನಿ ಕಾದಂಬರಿಕಾರ ಹರೂಕಿ ಮುರಾಕಮಿ, ಕೀನ್ಯಾದ ನುಗಿ ವಾ ಥಿಓಂಗೋ ಇವರುಗಳನ್ನು ಅಲಕ್ಷಿಸಲಾಗಿದೆ ಎಂಬುದು ಸಮಿತಿ ವಿರುದ್ಧ ಕೇಳಿಬಂದಿರುವ ದೂರು. ನೊಬೆಲ್ ಸಮಿತಿಯ ಆಯ್ಕೆ ಬಗ್ಗೆ ಹಿಂದೆಯೂ ಇಂಥ ದೂರುಗಳು ಕೇಳಿಬಂದದ್ದುಂಟು. ಇದು ಹೊಸದೇನಲ್ಲ. ಕಳೆದ ವರ್ಷ ಗಾಯಕ ಮತ್ತು ಗೀತರಚನಾಕಾರ ಬಾಬ್ ಡಿಲಾನ್‌ಗೆ, ಮತ್ತು ಅದರ ಹಿಂದಿನ ವರ್ಷ ಬೈಲೊರಷ್ಯಾದ ಪತ್ರಕರ್ತ ಸ್ವೆಟ್ಲಾನ ಅಲೆಕ್ಸಿವಿಚ್ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ ನೀಡಿದಾಗ ಸಾಹಿತ್ಯದ ಮುಖ್ಯ ವಾಹಿನಿಯ ಲೇಖಕರನ್ನು ಕಡೆಗಣಿಸಲಾಗಿದೆ ಎಂಬ ದೂರು ಕೇಳಿಬಂದುದನ್ನು ನೆನಪಿಸಿಕೊಳ್ಳಬಹುದು.

ಬಾಬ್ ಡಿಲಾನ್ ಮತ್ತು ಅಲೆಕ್ಸಿವಿಚ್ ಅವರ ಆಯ್ಕೆ ಸಾಹಿತಿಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸುವ ನೊಬೆಲ್ ಸಂಪ್ರದಾಯದ ಉಲ್ಲಂಘನೆ ಎಂಬುದು ದಿಟವಾದರೂ ಇವರಿಬ್ಬರ ಅರ್ಹತೆಯನ್ನು ಅಲ್ಲಗಳೆಯಲಾಗದು. ಅಮೆರಿಕದ ಗಾಯಕ ಹಾಗೂ ಗೀತರಚನಾಕಾರ ಬಾಬಿ ಡಿಲಾನ್ ಅವರ ಆಯ್ಕೆಯಲ್ಲಿ ಕಥಾನಕದ ಹೊಸಬಗೆಯ ನಿರೂಪಣಾ ವಿಧಾನಗಳನ್ನು ಪುರಸ್ಕರಿಸುವ ಇಂಗಿತವಿದೆ. ಹಾಗೆಯೇ ಸೋವಿಯತ್ ಕಾಲಘಟ್ಟದ ಮೌಖಿಕ ಚರಿತೆಗಳನ್ನೂ ನಿರೂಪಿಸುವ ಪತ್ರಕರ್ತೆ ಸ್ವೆಟ್ಲಾನ ಅಲೆಕ್ಸಿವಿಚ್ ಆಯ್ಕೆಯಲ್ಲೂ ನೊಬೆಲ್ ಪ್ರಶಸ್ತಿಗೆ ಶಾಸ್ತ್ರೀಯ(ಕ್ಲಾಸಿಕಲ್) ಸಾಹಿತ್ಯದ ಜೊತೆಗೆ ಜನಪ್ರಿಯ ಕಥಾನಕಗಳ ಮಾದರಿಯನ್ನು ಪುರಸ್ಕರಿಸುವ ಸ್ಪಷ್ಟ ಸೂಚನೆಯನ್ನು ಕಾಣಬಹುದಾಗಿದೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ. ಕಝುವೊ ಇಷಿಗುರೊ ಆಯ್ಕೆಯಲ್ಲಿ, ‘ಪರಿಶುದ್ಧವಾದಿ’, ‘ಭಾವಾನಾತ್ಮಕ ಬೆಸುಗೆಯ ಶಕ್ತಿ’ ಎಂಬೆಲ್ಲ ವಿಶೇಷಣಗಳ ಅಳತೆಗೋಲಿನಿಂದ ಐರೋಪ್ಯ ಕ್ಲಾಸಿಕಲ್ ಸಾಹಿತ್ಯಪರಂಪರೆಗೆ ಭಡ್ತಿ ಪಡೆಯಲು ಅವನು ಅರ್ಹನಾದ ಸಾಹಿತಿ ಎಂಬ ಗಣನೆಯೂ ಇರಬಹುದು ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಇದನ್ನು ಕಳೆದ ವರ್ಷಗಳ ಆಯ್ಕೆಗೆ ಕಂಡುಬಂದ ವಿರೋಧವನ್ನು ತಣಿಸುವ ಪ್ರಯತ್ನವೆಂದು ವ್ಯಾಖ್ಯಾನಿಸುವುದು ಇಷಿಗುರೋನ ದೇಸಿಕಥನ ಪ್ರತಿಭೆಗೆ ಅಪಚಾರವೆಸಗಿದಂತೆ.

Writer - ಜಿ.ಎನ್.ರಂಗನಾಥ್ ರಾವ್

contributor

Editor - ಜಿ.ಎನ್.ರಂಗನಾಥ್ ರಾವ್

contributor

Similar News