ಕುತ್ತಿಗೆ ನೋವೇ? ತಕ್ಷಣ ಶಮನಕ್ಕೆ ಇಲ್ಲಿದೆ ಮದ್ದು

Update: 2017-10-15 09:42 GMT

ತಂತ್ರಜ್ಞಾನವಿಂದು ನಮ್ಮ ಬದುಕನ್ನು ಸುಲಭವಾಗಿಸಿದೆ. ನಮ್ಮ ದಿನದ ಹೆಚ್ಚಿನ ಕೆಲಸಗಳನ್ನು ಕಂಪ್ಯೂಟರ್‌ಗಳೇ ಮಾಡುತ್ತವೆ. ಸ್ಮಾರ್ಟ್ ಫೋನ್ ಮತ್ತು ಲ್ಯಾಪ್‌ಟಾಪ್ ಗಳಿಂದಾಗಿ ಪ್ರಯಾಣದಲ್ಲಿದ್ದಾಗಲೂ ಕಾರ್ಯ ನಿರ್ವಹಿಸುವುದು ಸಾಧ್ಯವಾಗಿದೆ.

ಆದರೆ ತಂತ್ರಜ್ಞಾನವು ತನ್ನದೇ ಆದ ಸಮಸ್ಯೆಗಳನ್ನೂ ಹೊತ್ತು ತರುತ್ತದೆ. ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ಗಳನ್ನು ನಿರಂತರವಾಗಿ ದಿಟ್ಟಿಸಿ ನೋಡುವುದರಿಂದ ಕಣ್ಣುಗಳು ಶುಷ್ಕಗೊಳ್ಳುತ್ತವೆ ಮತ್ತು ದೃಷ್ಟಿಯು ಮಂದಗೊಳ್ಳುತ್ತದೆ. ಅಲ್ಲದೇ ಕುತ್ತಿಗೆಯ ಮೇಲೆಯೂ ಹೆಚ್ಚಿನ ಒತ್ತಡ ಬೀಳುತ್ತದೆ. ಪರಿಣಾಮವಾಗಿ ಕುತ್ತಿಗೆಯಲ್ಲಿ ನೋವು ಆರಂಭವಾಗುತ್ತದೆ. ಕೆಲವೊಮ್ಮೆ ಕುತ್ತಿಗೆಯನ್ನು ಅತ್ತಿತ್ತ ತಿರುಗಿಸಲೂ ಸಾಧ್ಯವಾಗುವುದಿಲ್ಲ.

ನಮ್ಮ ಕುತ್ತಿಗೆಯು ಮೇಲೆ ಕೆಳಗೆ, ಅತ್ತ ಇತ್ತ ಸುಲಭವಾಗಿ ಚಲಿಸುತ್ತದೆ. ಆದರೆ ಅದು ಸೆಳೆತ ಮತ್ತು ಒತ್ತಡಕ್ಕೂ ಪಕ್ಕಾಗುತ್ತದೆ. ಅದಕ್ಕೆ ನಮ್ಮ ಬೆನ್ನುಮೂಳೆಯಲ್ಲಿಯ ಏಳು ಕಶೇರುಕಗಳು ದೃಢತೆಯನ್ನು ನೀಡುತ್ತವೆ. ಈ ಕಶೇರುಕಗಳ ನಡುವೆ ಇರುವ ನಾರಿನಂತಹ ಮೃದ್ವಸ್ಥಿಗಳು ಶಾಕ್ ಅಬ್ಸಾರ್ಬರ್‌ನಂತೆ ಕೆಲಸ ಮಾಡುತ್ತವೆ.

ಕುತ್ತಿಗೆಯ ಮೂಲಕ ಹಲವಾರು ನರಗಳು ಹಾದು ಹೋಗುತ್ತವೆ. ಸ್ನಾಯುಗಳು ಸಂಕುಚಿತಗೊಂಡು ಮತ್ತೆ ವಿಕಸನಗೊಳ್ಳದಿದ್ದಾಗ ನಮ್ಮ ಕುತ್ತಿಗೆಯಲ್ಲಿ ನೋವು ಕಾಣಿಸಿಕೊ ಳ್ಳುತ್ತದೆ. ಕುತ್ತಿಗೆಯನ್ನು ಅನನುಕೂಲಕರ ಸ್ಥಿತಿಯಲ್ಲಿ ಬಳಸುವುದು ಅಥವಾ ಸುದೀರ್ಘ ಸಮಯದವರೆಗೆ ಅದು ಒಂದೇ ಸ್ಥಿತಿಯಲ್ಲಿರುವುದು ಇದಕ್ಕೆ ಕಾರಣವಾಗಿದೆ. ದಿಂಬಿನ ತೊಂದರೆಯೂ ಕುತ್ತಿಗೆ ನೋವನ್ನು ತರುತ್ತದೆ. ಪ್ರಯಾಣಿಸುವಾಗ ಅನಿರೀಕ್ಷಿತ ಜರ್ಕ್ ಅಥವಾ ಹೊಂಡಗುಂಡಿಗಳಿಂದ ಕೂಡಿದ ರಸ್ತೆಯೂ ಕುತ್ತಿಗೆ ನೋವನ್ನು ತರುತ್ತದೆ. ಕುತ್ತಿಗೆ ನೋವನ್ನು ನಿರ್ಲಕ್ಷಿಸುವಂತಿಲ್ಲ, ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ತಕ್ಷಣ ಪಡೆಯುವುದು ಅಗತ್ಯವಾಗಿದೆ. ಕುತ್ತಿಗೆ ನೋವಿಗಾಗಿಯೇ ಹಲವಾರು ಮುಲಾಮುಗಳು ಮತ್ತು ಮಾತ್ರೆಗಳಿವೆ. ಆದರೆ ಪ್ರಕೃತಿಯು ಇದಕ್ಕಾಗಿ ಎರಡು ಶಕ್ತಿಶಾಲಿ ಮದ್ದುಗಳನ್ನು ನೀಡಿದೆ. ಆಲಿವ್ ಎಣ್ಣೆ ಮತ್ತು ಉಪ್ಪಿನ ಮಿಶ್ರಣ ಕುತ್ತಿಗೆನೋವಿನ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ತಕ್ಷಣವೇ ಅದನ್ನು ಗುಣಪಡಿಸುತ್ತದೆ.

ಆಲಿವ್ ಎಣ್ಣೆ ಅಚ್ಚರಿ ಮೂಡಿಸುವಷ್ಟು ಅದ್ಭುತ ಗುಣಗಳನ್ನು ಹೊಂದಿದೆ. ಅದು ನಮ್ಮ ಶರೀರಕ್ಕೆ ಅತ್ಯಂತ ಆರೋಗ್ಯಕರ ಎಣ್ಣೆಯಾಗಿದೆ. ಅದು ನಮ್ಮ ಶರೀರದಲ್ಲಿ ಅತ್ಯಂತ ಪರಿಣಾಮಕಾರಿ ಕಾರ್ಯಗಳನ್ನು ಮಾಡುತ್ತದೆ. ನೋವಿರುವ ಜಾಗದಲ್ಲಿ ಈ ಎಣ್ಣೆಯನ್ನು ಹಚ್ಚಿದರೆ ನೋವು ಮಾಯವಾಗುತ್ತದೆ. ಆಸ್ಪಿರಿನ್‌ನಂತಹ ಔಷಧಿಗಳಲ್ಲಿರುವ ಉರಿಯೂತ ನಿವಾರಕ ಘಟಕಗಳು ಈ ಎಣ್ಣೆಯಲ್ಲಿವೆ. ಅದು ನಮ್ಮ ಶರೀರದಲ್ಲಿ ನೋವಿಗೆ ಕಾರಣ ವಾಗುವ ರಾಸಾಯನಿಕಗಳ ಉತ್ಪಾದನೆಯನ್ನು ತಡೆಯುತ್ತದೆ.

ಉಪ್ಪು, ವಿಶೇಷವಾಗಿ ಎಪ್ಸಮ್ ಸಾಲ್ಟ್ ಸಹಜ ನೋವು ನಿವಾರಕಗಳನ್ನೊಳಗೊಂಡಿದೆ. ಅದರಲ್ಲಿಯ ಮ್ಯಾಗ್ನೇಷಿಯಂ ಸಲ್ಫೇಟ್ ಶರೀರವು ನೋವಿನಿಂದ ಚೇತರಿಸಿಕೊಳ್ಳಲು ನೆರವಾಗುತ್ತದೆ. ಚರ್ಮದಲ್ಲಿ ಸೇರಿಕೊಳ್ಳುವ ಮ್ಯಾಗ್ನೇಷಿಯಂ ನೋವನ್ನು ಗುರುತಿಸುವ ಮಿದುಳಿನ ಸಾಮರ್ಥ್ಯವನ್ನು ತಗ್ಗಿಸುತ್ತದೆ. ವಿಷವಸ್ತುಗಳನ್ನು ಹೊರಹಾಕುವ ಅದು ಸ್ನಾಯುಗಳ ಚೇತರಿಕೆಯನ್ನು ಉತ್ತೇಜಿಸುವ ಪ್ರೋಟಿನ್‌ನ್ನು ಸೃಷ್ಟಿಸುತ್ತದೆ. ಆಲಿವ್ ಎಣ್ಣೆ ಮತ್ತು ಎಪ್ಸಮ್ ಲವಣಗಳ ಮಿಶ್ರಣ ಕುತ್ತಿಗೆ ನೋವಿನಿಂದ ಪಾರಾಗಲು ವರ್ಷಗಳಿಂದಲೂ ಬಳಕೆಯಾಗುತ್ತಿರುವ ಸುಲಭದ ಪರಿಹಾರವಾಗಿದೆ.

ಇವುಗಳನ್ನು ಕುತ್ತಿಗೆ ನೋವಿಗೆ ಮದ್ದನ್ನಾಗಿ ಹೇಗೆ ಬಳಸಬಹುದೆಂಬ ಮಾಹಿತಿ ಇಲ್ಲಿದೆ.

ಬೇಕಾಗುವ ವಸ್ತುಗಳು

ಆಲಿವ್ ಎಣ್ಣೆ 10 ಚಮಚ

ಎಪ್ಸ್‌ಂ ಸಾಲ್ಟ್ 5 ಚಮಚ

ಗಾಜಿನ ಜಾರೊಂದರಲ್ಲಿ ಇವೆರಡನ್ನೂ ಚೆನ್ನಾಗಿ ಮಿಶ್ರಗೊಳಿಸಿ ಬಳಿಕ ಗಾಳಿಯಾಡ ದಂತೆ ಮುಚ್ಚಳವನ್ನು ಹಾಕಿ ಅದನ್ನು ತಂಪಾಗಿರುವ ಒಣಜಾಗದಲ್ಲಿ ಇಡಿ. ಕೆಲವು ಗಂಟೆಗಳ ಬಳಿಕ ಅದು ತೆಳುಬಣ್ಣಕ್ಕೆ ತಿರುಗುತ್ತದೆ. 2-3 ನಿಮಿಷಗಳ ಕಾಲ ಈ ಮಿಶ್ರಣ ದಿಂದ ಕುತ್ತಿಗೆಯನ್ನು ಹಗುರವಾಗಿ ಮಸಾಜ್ ಮಾಡಿ. ಇದು ರಕ್ತ ಸಂಚಾರವನ್ನು ಹೆಚ್ಚಿಸಿ ನೋವನ್ನು ತಗ್ಗಿಸುತ್ತದೆ. ಜೊತೆಗೆ ಸ್ನಾಯುಗಳ ಬಿಗಿತನವನ್ನೂ ನಿವಾರಿಸುತ್ತದೆ. ಮಸಾಜ್‌ನ ಬಳಿಕ ಸ್ವಚ್ಛ ಬಟ್ಟೆಯಿಂದ ಆ ಜಾಗವನ್ನು ಒರೆಸಿ. ಅತ್ಯುತ್ತಮ ಪರಿಣಾಮಕ್ಕಾಗಿ 2-3 ದಿನಗಳ ಕಾಲ ಪ್ರತಿದಿನ ಈ ವಿಧಾನವನ್ನು ಅನುಸರಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News