ಟಿಯಾನ್‌ಜಿನ್ ಪ್ರಶಸ್ತಿ ಮುಡಿಗೇರಿಸಿದ ಶರಪೋವಾ

Update: 2017-10-15 16:08 GMT

ಟಿಯಾನ್‌ಜಿನ್(ಚೀನಾ),ಅ.15: ಐದು ಬಾರಿ ಗ್ರಾನ್ ಸ್ಲಾಮ್ ಜಯಿಸಿದ ರಷ್ಯಾದ ಮಾಜಿ ನಂ.1 ಆಟಗಾರ್ತಿ ಮರಿಯಾ ಶರಪೋವಾ ಇಂದು ಟಿಯಾನ್‌ಜಿನ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

  ಟಿಯಾನ್‌ಜಿನ್ ಪ್ರಶಸ್ತಿ ಗೆಲ್ಲುವುದರೊಂದಿಗೆ ಎರಡು ವರ್ಷಗಳ ಬಳಿಕ ಮೊದಲ ಬಾರಿ ಡಬ್ಲುಟಿಎ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಕಳೆದ ಎಪ್ರಿಲ್‌ನಲ್ಲಿ ಹದಿನೈದು ತಿಂಗಳ ನಿಷೇಧದಿಂದ ಹೊರಬಂದ ಬಳಿಕ ಶರಪೋವಾ ಪ್ರಥಮ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಶರಪೋವಾ ಅವರು ಇಂದು ನಡೆದ ಫೈನಲ್‌ನಲ್ಲಿ ಬೆಲಾರಸ್‌ನ ಆರ್ಯನ್ ಸಬೆಲೆಂಕಾ ಅವರನ್ನು 7-5, 7-6(8) ಅಂತರದಿಂದ ಮಣಿಸಿ ಪ್ರಶಸ್ತಿ ಎತ್ತಿದರು.

 ಶರಪೋವಾ ಅವರು 19ರ ಹರೆಯದ ಸಬೆಲೆಂಕಾ ವಿರುದ್ಧ ಜಯಿಸಿ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡರು.

30ರ ಹರೆಯದ ಶರಪೋವಾ ಅವರು 2015ರ ಮೇ ತಿಂಗಳಲ್ಲಿ ಕೊನೆಯ ಬಾರಿ ಇಟಲಿಯನ್ ಓಪನ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು.

 ಸೆಮಿಫೈನಲ್‌ನಲ್ಲಿ ಶರಪೋವಾ ಅವರು ಚೀನಾದ ಪೆಂಗ್ ಶುಯಿ ವಿರುದ್ಧ 6-3, 6-1 ಅಂತರದಲ್ಲಿ ಜಯ ಗಳಿಸಿ ಫೈನಲ್ ತಲುಪಿದ್ದರು.

 ಸಬೆಲೆಂಕಾ ಅವರು ಸೆಮಿಫೈನಲ್‌ನಲ್ಲಿ ಸಾರಾ ಇರಾನಿ ಅವರನ್ನು 6-1, 6-3 ಅಂತರದಲ್ಲಿ ಸೋಲಿಸಿ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News