ಉದ್ಧವ್‌ರದ್ದು ಕೊಳಕು ರಾಜಕೀಯ: ರಾಜ್ ಠಾಕ್ರೆ

Update: 2017-10-15 18:12 GMT

ಮುಂಬೈ, ಅ. 15: ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಶನ್ ನ ತನ್ನ ಆರು ಕಾರ್ಪೋರೇಟರ್‌ಗಳು ಶಿವಸೇನೆಗೆ ಸೇರಿದ ಎರಡು ದಿನಗಳ ಬಳಿಕ ಎಂಎನ್‌ಎಸ್‌ನ ವರಿಷ್ಠ ರಾಜ್ ಠಾಕ್ರೆ, ಶಿವಸೇನೆ ಕೊಳಕು ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ತನ್ನ ಸೋದರ ಸಂಬಂಧಿ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಕಟುವಾಗಿ ಟೀಕಿಸಿರುವ ರಾಜ್ ಠಾಕ್ರೆ, ಶಿವಸೇನೆ ಏನು ಮಾಡಿದೆ ಎಂಬುದನ್ನು ನೀವು ಎಂದಿಗೂ ಮರೆಯಬಾರದು ಎಂದಿದ್ದಾರೆ.

ತನ್ನ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ ಠಾಕ್ರೆ, ಶಿವಸೇನೆ ಕುದುರೆ ವ್ಯಾಪಾರದಲ್ಲಿ ತೊಡಗಿರುವುದರ ಬಗ್ಗೆ ಪ್ರತಿಕ್ರಿಯೆಸಲು ನನಗೆ ಎಂದಿಗೂ ಮನಸ್ಸು ಬಾರದು. ಹಣ ಹಸ್ತಾಂತರವಾಗುತ್ತಿರುವ ಬಗ್ಗೆ ನನಗೆ ಆಕ್ರೋಶವಿದೆ ಎಂದು ಹೇಳಿದ್ದಾರೆ.

“ಆದರೆ, ಏನೆಲ್ಲಾ ನಡೆದಿದೆಯೂ ಅದೆಲ್ಲವೂ ನನ್ನ ಸಮ್ಮತಿಯಿಂದಲೇ ನಡೆದಿದೆ ಎಂದು ಶಿವಸೇನೆ ಉದ್ದೇಶಪೂರ್ವಕವಾಗಿ ಸುದ್ದಿ ಹಬ್ಬಿಸುತ್ತಿದೆ. ನನ್ನ ಕಾರ್ಪೋರೇಟರ್‌ಗಳನ್ನು ಶಿವಸೇನೆಗೆ ಕಳುಹಿಸಲು ನಾನು ಬಯಸುತ್ತೇನೆಯೇ. ನಾನು ಕಳುಹಿಸುವುದಿದ್ದರೆ 7 ಮಂದಿಯನ್ನೂ ಕಳುಹಿಸುತ್ತಿದ್ದೆ. ಯಾಕೆ ಕೇವಲ 6 ಮಂದಿಯನ್ನು ಮಾತ್ರ ಕಳುಹಿಸಬೇಕಿತ್ತು” ಎಂದು ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.

 ತಾನು ರಾಜೀನಾಮೆ ನೀಡುವಾಗ ಶಿವಸೇನೆಯನ್ನು ಒಡೆಯಲು ಬಯಸಿಲ್ಲ ಎಂಬುದನ್ನು ನೆನಪಿಸಿಕೊಂಡ ರಾಜ್ ಠಾಕ್ರೆ, “ನಾನು ಶಿವಸೇನೆಗೆ ರಾಜೀನಾಮೆ ನೀಡುವಾಗ ಬಾಳಾ ಸಾಹೇಬ್‌ಗೆ ಮಾಹಿತಿ ನೀಡಿದ್ದೆ. ನಾನು ಉದ್ಧವ್‌ರ ಕೊಳಕು ರಾಜಕೀಯದ ಕಾರಣಕ್ಕೆ ಮಾತ್ರ ರಾಜೀನಾಮೆ ನೀಡಿದೆ. ನಾನು ರಾಜೀನಾಮೆ ನೀಡುವಾಗ ಪಕ್ಷವನ್ನು ಒಡೆಯಬಾರದು” ಎಂದು ನಿರ್ಧರಿಸಿದ್ದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News