ತೇಜಸ್ ಎಕ್ಸ್‌ಪ್ರೆಸ್ ಪ್ರಯಾಣಿಕರು ಅಸ್ವಸ್ಥರಾಗಲು ಕಲುಷಿತ ಆಹಾರ ಕಾರಣವಲ್ಲ : ತನಿಖಾ ವರದಿ
ಹೊಸದಿಲ್ಲಿ, ಅ.16: ತೇಜಸ್ ಎಕ್ಸ್‌ಪ್ರೆಸ್ ರೈಲಿನಲ್ಲಿ ರವಿವಾರ ಪ್ರಯಾಣಿಕರು ಅಸ್ವಸ್ಥರಾದ ಘಟನೆಗೆ ಕಲುಷಿತ ಆಹಾರ ಕಾರಣವಲ್ಲ ಎಂದು ರೈಲ್ವೇ ಇಲಾಖೆಯ ತನಿಖಾ ವರದಿಯಲ್ಲಿ ತಿಳಿಸಲಾಗಿದೆ.
ಹವಾನಿಯಂತ್ರಿತ ಬೋಗಿಯಲ್ಲಿ ಗಾಳಿ ಕಲುಷಿತಗೊಂಡ ಕಾರಣ ಇಬ್ಬರು ಮಕ್ಕಳು ವಾಂತಿ ಮಾಡಿಕೊಂಡರು. ವಾಂತಿಯ ದುರ್ವಾಸನೆ ಸುತ್ತಮುತ್ತ ಹಬ್ಬಿದ್ದು ಇದರಿಂದ ಇನ್ನೆರಡು ಮಕ್ಕಳು ವಾಂತಿ ಮಾಡಿದ್ದಾರೆ. ಇದು ವಾತಾವರಣವನ್ನು ಇನ್ನಷ್ಟು ಹದಗೆಡಿಸಿದ್ದು ಇತರ ಪ್ರಯಾಣಿಕರಿಗೆ ಹೊಟ್ಟೆ ತೊಳೆಸಿದ ಅನುಭವವಾಗಿ ಅಸ್ವಸ್ಥಗೊಂಡಿದ್ದಾರೆ ಎಂದು ಕೇಂದ್ರೀಯ ರೈಲ್ವೇಯ ತನಿಖಾ ತಂಡದ ವರದಿಯಲ್ಲಿ ತಿಳಿಸಲಾಗಿದೆ. 20 ಪ್ರಯಾಣಿಕರ ಜೊತೆ ಮಾತನಾಡಿ ಅವರ ಅನಿಸಿಕೆ ಆಧಾರದಲ್ಲಿ ಈ ವರದಿ ಸಿದ್ದಪಡಿಸಲಾಗಿದೆ.
ರೈಲಿನಲ್ಲಿ ಸರಬರಾಜು ಮಾಡಿದ ಆಹಾರವನ್ನು ತಾನೂ ಸೇವಿಸಿದ್ದು ಯಾವುದೇ ದುಷ್ಪರಿಣಾಮ ಉಂಟಾಗಿಲ್ಲ ಎಂದು ಇದೇ ರೈಲಿನಲ್ಲಿ ಸಂಚರಿಸುತ್ತಿದ್ದ ವೈದ್ಯ ಸಂಜಯ್ ಆರ್.ನಿಂಬಾಳ್ಕರ್ ತಿಳಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಪ್ರಯಾಣಿಕರಿಗೆ ಡಾ. ನಿಂಬಾಳ್ಕರ್ ರೈಲಿನಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದರು. ಪ್ರಯಾಣಿಕರಿಗೆ ಸರಬರಾಜು ಮಾಡಿದ್ದ ಆಮ್ಲೆಟ್‌ನ ಗುಣಮಟ್ಟದ ಬಗ್ಗೆ ಕೆಲವು ಪ್ರಯಾಣಿಕರು ದೂರಿದ್ದಾರೆ ಎಂದೂ ಸಮಿತಿಯ ವರದಿಯಲ್ಲಿ ತಿಳಿಸಲಾಗಿದೆ.