ಹಿರಿಯ ನಾಗರಿಕರ ಬಗೆಹರಿಯದ ಸಮಸ್ಯೆಗಳು

Update: 2017-10-16 18:35 GMT

ಭಾಗ - 1

60+ ಭಾರತದ ಜನಸಂಖ್ಯೆಯಲ್ಲಿ ಅತ್ಯಂತ ವೇಗವಾಗಿ ಹೆಚ್ಚುತ್ತಿರುವ ವಯೋಮಾನದ ಘಟಕ; ಆದರೆ ಸರಕಾರದ/ಸಾರ್ವಜನಿಕ ನೀತಿ ಹಿರಿಯ ನಾಗರಿಕರ ಈ ಸಮುದಾಯವನ್ನು ಬಹಳಷ್ಟು ಕಡೆಗಣಿಸುತ್ತಿದೆ.

ಸಂವಿಧಾನದ 41ನೆ ಪರಿಚ್ಛೇದದ ಪ್ರಕಾರ ಹಿರಿಯರ ಆರೈಕೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ. ಈ ನಿರ್ದೇಶಕ ತತ್ವ ಹೀಗೆ ಹೇಳುತ್ತದೆ: ‘‘ತನ್ನ ಆರ್ಥಿಕ ಸಾಮರ್ಥ್ಯ ಮತ್ತು ಬೆಳವಣಿಗೆಯ ಸೀಮಿತ ಪರಿಧಿಯೊಳಗೆ ಸರಕಾರವು ನಾಗರಿಕರಿಗೆ ನೌಕರಿ, ಶಿಕ್ಷಣ ಮತ್ತು ನಿರುದ್ಯೋಗ ಪ್ರಕರಣಗಳಲ್ಲಿ ಸಾರ್ವಜನಿಕ (ಸರಕಾರಿ) ನೆರವು ಹಾಗೂ ಮುದಿತನ, ಅನಾರೋಗ್ಯ ಮತ್ತು ಅಸಾಮರ್ಥ್ಯ ಪ್ರಕರಣಗಳಲ್ಲಿ ಪರಿಣಾಮಕಾರಿ ವ್ಯವಸ್ಥೆಗಳನ್ನು ಮಾಡಬೇಕು.’’

62ರ ಹರೆಯದ ಕಸ್ತೂರಿದೇವಿ ರಾಜಸ್ಥಾನದ ಆಲ್ವಾರ್‌ಜಿಲ್ಲೆಯ ಬಲ್ಲಾನಾ ಎಂಬ ಹಳ್ಳಿಯಲ್ಲಿ ತನ್ನ ಇಬ್ಬರು ಸೊಸೆಯಂದಿರು ಮತ್ತು ಒಂಬತ್ತು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದಾಳೆ. ಆ ಮೂವರೂ ಮಹಿಳೆಯರು ವಿಧವೆಯರು. 2013ರಿಂದ ದೇವಿ, ತಿಂಗಳೊಂದರ 500 ರೂ. ಪಿಂಚಣಿ ಪಡೆಯುತ್ತಿದ್ದಾಳೆ. ಗ್ರಾಮೀಣ ಭಾರತದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವವರು ಎಂಬ ಅರ್ಹತೆ ಬರಬೇಕಾದರೆ ಇರಬೇಕಾದ ದಿನವೊಂದರ 32 ರೂ. ಆದಾಯದ ಅರ್ಧ ಮೊತ್ತ ಇದು (500 ರೂ.) 10 ಮಂದಿ ಭಾರತೀಯರಲ್ಲಿ ಸುಮಾರಾಗಿ ಒಬ್ಬರು 60 ವರ್ಷ ವಯಸ್ಸು ದಾಟಿದವರು. ಭಾರತದ ‘ಜನಸಂಖ್ಯಾ ಲಾಭ’ ಎಂಬ ಆರ್ಥಿಕ ಹೆಗ್ಗಳಿಕೆಯ ಗದ್ದಲದ ಮಧ್ಯೆ ಕಳೆದುಹೋಗುವ ಒಂದು ವಾಸ್ತವ ಇದು.

 ಭಾರತದ 100 ಮಿಲಿಯ ಹಿರಿಯ ನಾಗರಿಕರಲ್ಲಿ ದೇವಿ ಒಬ್ಬಳು. ಈ 100 ಮಿಲಿಯ ಎಂಬುದು ವಿಶ್ವದ ಅತ್ಯಂತ ಹೆಚ್ಚು ಜನಸಂಖ್ಯೆಯ 15 ದೇಶಗಳಲ್ಲಿ ಒಂದು ದೇಶವಾಗಲು ಸಾಕಾಗುವ ಜನಸಂಖ್ಯೆ. ಹೀಗೆ ವೇಗವಾಗಿ ಜನಸಂಖ್ಯೆ ಹೆಚ್ಚುತ್ತಿರುವ ದೇಶಗಳಲ್ಲಿ ಈ ಸಂಖ್ಯೆ (100 ಮಿಲಿಯ) ಅತ್ಯಂತ ವೇಗವಾಗಿ ಹೆಚ್ಚಲಿರುವ ದೇಶ, ಭಾರತ.

2020 ಮತ್ತು 2050ರ ನಡುವೆ ಭಾರತದ ಒಟ್ಟಾರೆ ಜನಸಂಖ್ಯೆ ಶೇ. 55ರಷ್ಟು ಹೆಚ್ಚಾಗುವ ಸಾಧ್ಯತೆ ಇರುವಾಗ, ಅದರಲ್ಲಿ 60+ ಮತ್ತು 80+ ವಯೋಮಾನದ ಗುಂಪುಗಳ ಜನಸಂಖ್ಯೆ ಶೇ.326 ಮತ್ತು ಶೇ. 700ರಷ್ಟು ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

 ಆದರೂ, ದೇವಿಯ ಉದಾಹರಣೆಯಿಂದ ಸ್ಪಷ್ಟವಾಗುವಂತೆ, ಭಾರತದ ಹಿರಿಯ ನಾಗರಿಕರಲ್ಲಿ ಬಹುಪಾಲು ಮಂದಿ ಸರಕಾರ ನೀಡುವ ಅತ್ಯಲ್ಪ ಪಿಂಚಣಿಯ, ಅತ್ಯಲ್ಪ ನೆರವಿನ ಆಸರೆಯಲ್ಲಿ ಬದುಕುತ್ತಿದ್ದಾರೆ. ವಯಸ್ಸಾದವರನ್ನು ನೋಡಿಕೊಳ್ಳುವುದು, ಅವರ ಆರೈಕೆ ಮಾಡುವುದು ‘ಕುಟುಂಬ’ದ ಜವಾಬ್ದಾರಿ ಎಂಬ ಅಭಿಪ್ರಾಯ ಮುಂದುವರಿಯುತ್ತಿದೆ. ಚಿಕ್ಕದಾಗುತ್ತಿರುವ ಕುಟುಂಬದ ಗಾತ್ರ, ನೌಕರಿ ಹುಡುಕಿಕೊಂಡು ಕುಟುಂಬದ ಯುವ ಸದಸ್ಯರು ದೂರದ ಊರುಗಳಿಗೆ ವಲಸೆ ಹೋಗುವುದು ಮತ್ತು ಕುಟುಂಬದ ಒಳಗೆಯೇ ವಯಸ್ಸಾದ ಹಿರಿಯರನ್ನು ದುರುಪಯೋಗಪಡಿಸಿಕೊಳ್ಳುವುದು ಕುಟುಂಬವನ್ನು ಹಿರಿಯರ ಪಾಲಿಗೆ ಒಂದು ಆದರ್ಶ ನೆಲೆಯಾಗಿ, ಆಸರೆಯಾಗಿ ಉಳಿಸುತ್ತಿಲ್ಲವಾದರೂ ಕುಟುಂಬದವರೇ ಅವರ ಆರೈಕೆ ಮಾಡಬೇಕೆಂಬ ನಿಲುವು ಮುಂದುವರಿದಿದೆ.

 ಬಹಳಷ್ಟು ಮಂದಿ ಹಿರಿಯರು, ವಯಸ್ಸಾದವರು, ಮುದುಕ, ಮುದುಕಿಯರು ಏಕಾಂಗಿಯಾಗಿ ಬದುಕುತ್ತಿದ್ದಾರೆ. ಇವರಲ್ಲಿ ಬಹುಸಂಖ್ಯಾತರು ಮಹಿಳೆಯರು ಮತ್ತು ಈ ಮಹಿಳೆಯರು ಅಪರಾಧ ಎಸಗುವವರಿಗೆ ಸುಲಭದ ಗುರಿಯಾಗಿದ್ದಾರೆ. ರೆಸಿಡೆನ್ಸಿಯಲ್ ಮನೆಗಳು ಇನ್ನೂ ಪ್ರಾಯೋಗಿಕವಾಗಿ ಸಾಧ್ಯವಾಗಿಲ್ಲ. ಆರ್ಥಿಕವಾಗಿ ಬಲಿಷ್ಠರಾದವರಿಗೆ ಮಾತ್ರ ಖಾಸಗಿ ಮನೆಗಳು ಲಭ್ಯವಾಗುತ್ತವೆ ಮತ್ತು ಸರಕಾರ ಕಟ್ಟಿಸಿಕೊಡುವ ಮನೆಗಳು ಬೆರಳೆಣಿಕೆಯಷ್ಟು ಮಾತ್ರ. ಮತ್ತು ಅವುಗಳು ಒಂದರಿಂದ ಒಂದು ತುಂಬ ದೂರದಲ್ಲಿರುತ್ತವೆ.

ವಯಸ್ಸಾಗುವಿಕೆ, ಮುದಿತನ ಕೇವಲ ಹಿರಿಯರ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲ. ಅದು ಸಮಾಜದಲ್ಲಿರುವ ಪ್ರತಿಯೊಬ್ಬರ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ದೇಶದಲ್ಲಿ ವಯಸ್ಸಾದವರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಸರಕಾರದ ನೀತಿಯಲ್ಲಿ ತುಂಬ ಮುಖ್ಯ ಇಂಗಿತಗಳಿರುತ್ತವೆ.

ಸಂಖ್ಯೆಗಳಲ್ಲಿ ಹಿರಿಯರು

 2011ರ ಜನಗಣತಿಯ ಅಂಕಿಸಂಖ್ಯೆಗಳ ಪ್ರಕಾರ, ಭಾರತದ ಒಟ್ಟು ಜನಸಂಖ್ಯೆಯ ಸುಮಾರು ಶೇ.9ರಷ್ಟು ಜನರು 60 ವರ್ಷ ಅಥವಾ 60ಕ್ಕಿಂತ ಹೆಚ್ಚು ವಯಸ್ಸಾದವರು. ಜಾಗತಿಕವಾಗಿ, ಹಿರಿಯರ ಪ್ರಮಾಣ ಶೇ. 12. 2050ರ ವೇಳೆಗೆ ಭಾರತದಲ್ಲಿ 60+ ವಯೋಮಾನದವರ ಸಂಖ್ಯೆ ದೇಶದ ಒಟ್ಟು ಜನಸಂಖ್ಯೆಯ ಶೇ. 19 ಆಗಲಿದೆ.

ಒಟ್ಟು ಜನಸಂಖ್ಯೆಯಲ್ಲಿ, ಶೇ. 10 ಅಥವಾ ಇದಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ರಾಜ್ಯಗಳಲ್ಲಿ ಅಗ್ರಸ್ಥಾನದಲ್ಲಿರುವ ರಾಜ್ಯಗಳೆಂದರೆ ಕೇರಳ, ಗೋವಾ, ತಮಿಳುನಾಡು, ಪಂಜಾಬ್ ಮತ್ತು ಹರ್ಯಾಣ. ಅದೇ ವೇಳೆ, ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ ಮತ್ತು ಅಸ್ಸಾಂ ರಾಜ್ಯಗಳಲ್ಲಿ 60 ಅಥವಾ 60ಕ್ಕಿಂತ ಹೆಚ್ಚು ವಯಸ್ಸಾದ ಜನರ ಪ್ರಮಾಣ ಅತ್ಯಂತ ಕಡಿಮೆ ಇದೆ.

ಸಂವಿಧಾನದ 41ನೆ ಪರಿಚ್ಛೇದದ ಪ್ರಕಾರ ಹಿರಿಯರ ಆರೈಕೆ ನೋಡಿಕೊಳ್ಳುವುದು ಸರಕಾರದ ಜವಾಬ್ದಾರಿ. ಈ ನಿರ್ದೇಶಕ ತತ್ವ ಹೀಗೆ ಹೇಳುತ್ತದೆ: ‘‘ತನ್ನ ಆರ್ಥಿಕ ಸಾಮರ್ಥ್ಯ ಮತ್ತು ಬೆಳವಣಿಗೆಯ ಸೀಮಿತ ಪರಿಧಿಯೊಳಗೆ ಸರಕಾರವು ನಾಗರಿಕರಿಗೆ ನೌಕರಿ, ಶಿಕ್ಷಣ ಮತ್ತು ನಿರುದ್ಯೋಗ ಪ್ರಕರಣಗಳಲ್ಲಿ ಸಾರ್ವಜನಿಕ (ಸರಕಾರಿ) ನೆರವು ಹಾಗೂ ಮುದಿತನ, ಅನಾರೋಗ್ಯ ಮತ್ತು ಅಸಾಮರ್ಥ್ಯ ಪ್ರಕರಣಗಳಲ್ಲಿ ಪರಿಣಾಮಕಾರಿ ವ್ಯವಸ್ಥೆಗಳನ್ನು ಮಾಡಬೇಕು.’’

ನಗಣ್ಯ ಆರ್ಥಿಕ ನೆರವು

ಗುಜರಾತಿನ ಪಂಚ್‌ಮಹಲ್ ಜಿಲ್ಲೆಯ ಖಾನ್‌ಪಟ್ಲ ಎಂಬ ಹಳ್ಳಿಯಲ್ಲಿ 65ರ ಹರೆಯದ ರಣ್‌ಚೊದ್‌ಭಾ ಮತ್ತು ಆತನ ಪತ್ನಿ 63ರ ಹರೆಯದ ಗಂಗಾಬೆನ್, ಕಳೆದ ಎರಡು ವರ್ಷಗಳಿಂದ ರಾಜ್ಯ ಸರಕಾರದ ಮುದಿತನ ಪಿಂಚಣಿಯ ಫಲಾನುಭವಿಗಳೆಂದು ಪಿಂಚಣಿ ಯೋಜನೆಯಲ್ಲಿ ದಾಖಲುಗೊಂಡಿದ್ದಾರೆ. ಇದರಿಂದ ಅವರು ತಿಂಗಳೊಂದರ ರೂ.400 ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ. ಆದರೆ ಸುಮಾರು ಒಂಬತ್ತು ತಿಂಗಳುಗಳಿಂದ ತಮಗೆ ಯಾವುದೇ ಪಿಂಚಣಿ ಮೊತ್ತ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಈ ವಿಳಂಬವೇನೂ ಹೊಸತಲ್ಲ ಎನ್ನುತ್ತಾರೆ ಅವರು. ಅದೇನಿದ್ದರೂ ಈ ನಗಣ್ಯ ಮೊತ್ತ, ಅತ್ಯಲ್ಪ ಪಿಂಚಣಿ ಅವರ ಕನಿಷ್ಠ ಆವಶ್ಯಕತೆಗಳನ್ನು ಕೂಡ ಪೂರೈಸಲು ಸಾಲದು.

ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದನ್ವಯ, 1995ರಿಂದ, ಭಾರತ ಸರಕಾರವು ಸಾಮಾಜಿಕ ಪಿಂಚಣಿ ನೀಡುತ್ತಿದೆ. 2007ರಲ್ಲಿ ಈ ಕಾರ್ಯಕ್ರಮವನ್ನು ಇಂದಿರಾ ಗಾಂಧಿ ನ್ಯಾಶನಲ್ ವೋಲ್ಡೇಜ್ ಪೆನ್ಶನ್ ಸ್ಕೀಮ್(ಐಜಿಎನ್‌ಒಎಪಿಎಸ್) ಎಂಬ ಹೊಸ ಯೋಜನೆಯ ಅಡಿಯಲ್ಲಿ ಪುನಾರಂಭಿಸಲಾಯಿತು. ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಿಗೆ ಸೇರಿದ ಹಿರಿಯರಿಗಾಗಿ ಈ ಯೋಜನೆಯನ್ನು ಪುನರ್‌ರಚಿಸಲಾಯಿತು. 60 ಅಥವಾ 60ಕ್ಕಿಂತ ಹೆಚ್ಚು ವಯಸ್ಸಿನ ಪ್ರತಿಯೊಬ್ಬ ವ್ಯಕ್ತಿಗೆ ಕೇಂದ್ರ ಸರಕಾರವು ಮಾಸಿಕ 200 ರೂ. ಹಾಗೂ 80ರ ಹರೆಯ ದಾಟಿದವರಿಗೆ ಮಾಸಿಕ 50 ರೂ.ಗಳಂತೆ ತನ್ನ ಪಾಲು ನೀಡುತ್ತದೆ. ರಾಜ್ಯ ಸರಕಾರಗಳು ಕನಿಷ್ಠ ಇಷ್ಟು ಮೊತ್ತವನ್ನಾದರೂ ಸೇರಿಸಿ ಪಿಂಚಣಿ ನೀಡಬೇಕೆಂದು ನಿರೀಕ್ಷಿಸಲಾಗಿದೆ.

2011ರ ನ್ಯಾಶನಲ್ ಪಾಲಿಸಿ ಫಾರ್ ಸೀನಿಯರ್ ಸಿಟಿಜನ್ಸ್‌ನ ಕರಡಿನಲ್ಲಿ ಐಜಿಎನ್‌ಒಎಪಿಎಸ್ ಅನ್ವಯ ರೂ. 1,000 ಮಾಸಿಕ ಪಿಂಚಣಿ ಎಂದು ಶಿಫಾರಸು ಮಾಡಬೇಕಾಗಿದೆ. ಈ ನೀತಿಯನ್ನು ಇನ್ನೂ ಅಂತಿಮಗೊಳಿ ಸಿಲ್ಲವಾದರೂ, ಕೆಲವು ರಾಜ್ಯಗಳು ಈಗಾಗಲೇ ಪಿಂಚಣಿಗೆ ತಮ್ಮ ಕೊಡುಗೆಯ ಪಾಲನ್ನು ಹೆಚ್ಚಿಸಿವೆ. ಒಟ್ಟಿನಲ್ಲಿ ದೇಶದ ಹೆಚ್ಚಿನ ರಾಜ್ಯಗಳಲ್ಲಿ ಪಿಂಚಣಿ ಮೊತ್ತ ಅತ್ಯಲ್ಪವಾಗಿದೆ. ಅಸ್ಸಾಂ ಮತ್ತು ನಾಗಾಲ್ಯಾಂಡ್‌ನಲ್ಲಿ ಇದು ರೂ. 200, ಮಿಜೋರಾಂನಲ್ಲಿ ರೂ.250, ಗುಜರಾತ್ ಮತ್ತು ಬಿಹಾರ್‌ನಲ್ಲಿ ರೂ. 400, ರಾಜಸ್ಥಾನ ಮತ್ತು ಪಂಜಾಬಿನಲ್ಲಿ ರೂ. 500 ಇದೆ. ಪರಿಣಾಮವಾಗಿ ಲಕ್ಷಗಟ್ಟಲೆ ಹಿರಿಯರು ತೀರ ಬಡತನದಲ್ಲಿ ಬದುಕುತ್ತಿದ್ದಾರೆ.

ಕೃಪೆ: hindustantimes

Writer - ಅಕ್ಷಿ ಚಾವ್ಲಾ

contributor

Editor - ಅಕ್ಷಿ ಚಾವ್ಲಾ

contributor

Similar News

ಜಗದಗಲ
ಜಗ ದಗಲ