ತಾಜ್ ಮಹಲ್ ಜತೆಗೆ ರಾಷ್ಟ್ರಪತಿ ಭವನವನ್ನೂ ನಾಶಪಡಿಸಬೇಕು: ಆಝಂ ಖಾನ್

Update: 2017-10-17 08:00 GMT

ಹೊಸದಿಲ್ಲಿ, ಅ.17: ವಿಶ್ವದ ಅದ್ಭುತಗಳಲ್ಲೊಂದಾಗಿರುವ ಆಗ್ರಾದ ತಾಜ್ ಮಹಲ್ ಅನ್ನು ನಿರ್ಮಿಸಿದವರು ದ್ರೋಹಿಗಳು ಎಂದು ಹೇಳಿ ಬಿಜೆಪಿ ಶಾಸಕ ಸಂಗೀತ್ ಸೋಮ್ ವಿವಾದಕ್ಕೀಡಾಗಿರುವಂತೆಯೇ ಅವರಿಗೆ ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಕೂಡ ಸಾಥ್ ನೀಡಿದ್ದು ತಾಜ್ ಮಹಲ್ ನಂತೆ ಗುಲಾಮಗಿರಿಯನ್ನು ನೆನಪಿಸುವ ಸ್ಮಾರಕಗಳಾದ ರಾಷ್ಟ್ರಪತಿ ಭವನವನ್ನೂ ನಾಶಪಡಿಸಬೇಕು ಎಂದು ಹೇಳಿ ಬೆಂಕಿಗೆ ತುಪ್ಪ ಸುರಿದಿದ್ದಾರೆ.

‘‘ನಮ್ಮನ್ನು ಒಂದು ಕಾಲ ಗುಲಾಮಗಿರಿಗೆ ದೂಡಿ ನಮ್ಮನ್ನುಆಳಿದವರನ್ನು ನೆನಪಿಸುವ ಎಲ್ಲಾ ನಿರ್ಮಾಣಗಳನ್ನೂ ನಾಶಪಡಿಸಬೇಕು. ಇದನ್ನು ನಾನು ಹಿಂದೆಯೂ ಹೇಳಿದ್ದೇನೆ. ಸಂಸತ್ತು, ಕುತುಬ್ ಮಿನಾರ್, ರಾಷ್ಟ್ರಪತಿ ಭವನ್, ಕೆಂಪು ಕೋಟೆ, ತಾಜ್ ಮಹಲ್, ಎಲ್ಲ’’ ಎಂದು ಉತ್ತರ ಪ್ರದೇಶದ ಮಾಜಿ ಸಚಿವರೂ ಆಗಿರುವ ಖಾನ್ ಹೇಳಿದರು.

ಉತ್ತರ ಪ್ರದೇಶ ಸರಕಾರ ತನ್ನ ಪ್ರವಾಸೋದ್ಯಮ ಕೈಪಿಡಿಯಿಂದ ತಾಜ್ ಮಹಲ್ ಅನ್ನು ಕೈಬಿಟ್ಟ ನಂತರದ ಬೆಳವಣಿಗೆಯಲ್ಲಿ ಸೋಮ್ ಅವರ ಹೇಳಿಕೆ ಬಂದಿದ್ದರೆ ಈಗ ಅದರ ಬೆನ್ನಿಗೇ ಆಝಂ ಖಾನ್ ಅವರಿಂದ ಮೇಲಿನ ಮಾತುಗಳು ಸಾಕಷ್ಟು ಕುತೂಹಲ ಕೆರಳಿಸಿದೆ.

ಅತ್ತ ಎಐಎಂಐಎಂ ನಾಯಕ ಅಸಾಸುದ್ದೀನ್ ಉವೈಸಿ ಕೂಡ ಸೋಮ್ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ ‘‘ದ್ರೋಹಿಗಳು ಕೆಂಪು ಕೋಟೆಯನ್ನೂ ನಿರ್ಮಿಸಿದ್ದರು. ಅಲ್ಲಿಂದ ತ್ರಿವರ್ಣವನ್ನು ಹಾರಿಸುವುದನ್ನು ಮೋದಿ ನಿಲ್ಲಿಸುತ್ತಾರೇನು?’’ ಎಂದು ಪ್ರಶ್ನಿಸಿದ್ದರು.

ಮುಂದಿನ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ತ್ರಿವರ್ಣ ಧ್ವಜ ಅರಳಿಸಿ ದೇಶವನ್ನುದ್ದೇಶಿಸಿ ಕೆಂಪು ಕೋಟೆಯ ಬದಲು ದಿಲ್ಲಿಯ ನೆಹರೂ ಸ್ಟೇಟಿಯಂನಿಂದ ಭಾಷಣ ಮಾಡುತ್ತಾರೆಯೇ ಎಂದು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಕೂಡ ಪ್ರಶ್ನಿಸಿದ್ದಾರೆ.

‘‘ತಾಜ್ ಮಹಲ್ ಸುತ್ತ ವಿವಾದ ಹರಡಬೇಡಿ. ಅದು ನಮಗೆ ಸಾಕಷ್ಟು ಆದಾಯ ತರುತ್ತದೆ’’ ಎಂದು ಸಮಾಜವಾದಿ ಪಕ್ಷದ ಜೂಹಿ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News