ವಿದೇಶಕ್ಕೆ ತೆರಳುತ್ತೀರಾ? ಕ್ರೆಡಿಟ್ ಕಾರ್ಡ್ ಬಳಸುವಾಗ ಈ ಪ್ರಮುಖ ಅಂಶಗಳು ನೆನಪಿರಲಿ

Update: 2017-10-17 10:02 GMT

ವಿದೇಶ ಪ್ರಯಾಣ ಸಹಜವಾಗಿಯೇ ವೆಚ್ಚದಾಯಕವಾಗಿರುತ್ತದೆ. ವಿಮಾನದ ಟಿಕೆಟ್ ಮತ್ತು ಹೋಟೆಲ್ ಬುಕಿಂಗ್‌ನಂತಹ ಹೆಚ್ಚಿನ ಖರ್ಚುಗಳು ಸ್ವದೇಶದಲ್ಲಿಯೇ ಆಗುವುದರಿಂದ ಅವುಗಳ ಬಗ್ಗೆ ಹೆಚ್ಚಿನ ತಲೆಬಿಸಿ ಇರುವುದಿಲ್ಲ. ಆದರೆ ವಿದೇಶಗಳಲ್ಲಿ ಖರ್ಚು ಇಷ್ಟೇ ಆಗುತ್ತದೆ ಎನ್ನುವಂತಿಲ್ಲ. ಹೀಗಾಗಿ ನಗದು ಹಣವಿದ್ದರೂ ಕ್ರೆಡಿಟ್ ಕಾರ್ಡ್ ಬಳಕೆಯು ನಿಮ್ಮ ವಿದೇಶ ಪ್ರವಾಸವನ್ನು ಸುಗಮಗೊಳಿಸುತ್ತದೆ. ಹಣದ ನಿಖರ ಮೊತ್ತದ ಪರಿವರ್ತನೆಯ ಬಗ್ಗೆ ಚಿಂತಿಸಬೇಕಿಲ್ಲ. ಅಲ್ಲದೆ ನಗದು ಕಳೆದು ಹೋಗುವ ಅಥವಾ ಕಳ್ಳತನವಾಗುವ ಸಾಧ್ಯತೆಗಳಿರುವುದರಿಂದ ಕ್ರೆಡಿಟ್ ಕಾರ್ಡ್‌ನ್ನು ಜೊತೆಯಲ್ಲಿ ಒಯ್ಯುವುದು ಸುರಕ್ಷಿತವೂ ಹೌದು. ಕ್ರೆಡಿಟ್ ಕಾರ್ಡ್ ಕಳೆದುಹೋದರೆ ಕ್ರೆಡಿಟ್ ಕಾರ್ಡ್ ಕಂಪನಿಯನ್ನು ಸಂಪರ್ಕಿಸಿ ಅದನ್ನು ತಕ್ಷಣವೇ ಬ್ಲಾಕ್ ಮಾಡಿಸಬಹುದು.

ಅಂದ ಹಾಗೆ ವಿದೇಶ ಪ್ರವಾಸದ ವೇಳೆ ಕ್ರೆಡಿಟ್ ಕಾರ್ಡ್ ಒಯ್ಯುವವರು ಈ ಕೆಲವು ಮಾಹಿತಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು.

 ಎಲ್ಲಕ್ಕೂ ಮೊದಲು ನಿಮ್ಮ ಕ್ರೆಡಿಟ್ ಕಾರ್ಡ್ ಅಂತರರಾಷ್ಟ್ರೀಯ ಮಾನ್ಯತೆಯನ್ನು ಹೊಂದಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇಂದು ಹೆಚ್ಚಿನ ಕ್ರೆಡಿಟ್ ಕಾರ್ಡ್ ಗಳನ್ನು ವಿದೇಶಗಳಲ್ಲಿ ಸ್ವೀಕರಿಸಲಾಗುತ್ತದೆಯಾದರೂ ನೀವು ನಿಮ್ಮ ಬ್ಯಾಂಕಿನಲ್ಲಿ ಆ ಬಗ್ಗೆ ವಿಚಾರಿಸಿಕೊಳ್ಳುವುದು ಒಳ್ಳೆಯದು. ನಿಮ್ಮ ಬಳಿ ಬೇಸಿಕ್ ಕಾರ್ಡ್ ಇದ್ದರೆ ಅದನ್ನು ವಿದೇಶಗಳಲ್ಲಿ ಸ್ವೀಕರಿಸಲಾಗುವುದಿಲ್ಲ ಮತ್ತು ನೀವು ಹಣಕಾಸಿನ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳಬಹುದು.

ನಿಮ್ಮ ವಿದೇಶ ಪ್ರವಾಸ ಯೋಜನೆಯ ಬಗ್ಗೆ ನಿಮ್ಮ ಕ್ರೆಡಿಟ್ ಕಾರ್ಡ್ ಕಂಪನಿಗೆ ತಿಳಿಸಿ. ಇದರಿಂದ ನೀವು ವಿದೇಶಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಲು ನೆರವಾಗುವ ಜೊತೆಗೆ ನಿಮಗೆ ತಡೆರಹಿತ ಸೇವೆ ದೊರೆಯುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಮೂಲಕ ಎಂದೂ ಇಲ್ಲದ ದೊಡ್ಡಮೊತ್ತದ ಖರೀದಿ ಅಥವಾ ವಿದೇಶಗಳಲ್ಲಿ ವಹಿವಾಟು ನಡೆದರೆ ಕ್ರೆಡಿಟ್ ಕಾರ್ಡ್ ಕಂಪನಿಯು ನಿಮಗೆ ಕರೆ ಮಾಡುತ್ತದೆ. ನೀವು ನಿಮ್ಮ ವಿದೇಶ ಪ್ರವಾಸದ ಬಗ್ಗೆ ನಿಮ್ಮ ಬ್ಯಾಂಕಿಗೆ ಮಾಹಿತಿ ನೀಡಿರದಿದ್ದರೆ ನೀವು ಪ್ರವಾಸದಲ್ಲಿದ್ದೀರಿ ಎನ್ನುವುದನ್ನು ದೃಢೀಕರಿಸುವಂತೆ ಅದು ನಿಮಗೆ ಸೂಚಿಸಬಹುದು ಮತ್ತು ನಿಮ್ಮನ್ನು ಫೋನ್ ಮೂಲಕ ಸಂಪರ್ಕಿಸಲು ಸಾಧ್ಯವಾಗದಿದ್ದರೆ ಅದು ಸುರಕ್ಷತೆಯ ದೃಷ್ಟಿಯಿಂದ ವಿದೇಶಗಳಲ್ಲಿ ನಿಮಗೆ ವಹಿವಾಟಿನ ಅವಕಾಶವನ್ನು ನಿರಾಕರಿಸಬಹುದು.

ನಿಮ್ಮ ವೆಚ್ಚದ ಮಿತಿಯ ಬಗ್ಗೆ ಮೊದಲೇ ತಿಳಿದುಕೊಳ್ಳಿ. ವಿದೇಶ ಪ್ರಯಾಣಕ್ಕೆ ತೆರಳುವ ಮುನ್ನ ನಿಮ್ಮ ಕ್ರೆಡಿಟ್ ಕಾರ್ಡ್‌ನ ಮಿತಿಯನ್ನು ಪರಿಶೀಲಿಸಿ. ಅಂತರರಾಷ್ಟ್ರೀಯ ವಹಿವಾಟುಗಳು ದುಬಾರಿಯಾಗಿರುವುದರಿಂದ ನೀವು ಅಗತ್ಯವಾದರೆ ನಿಮ್ಮ ಕಾರ್ಡ್‌ನ ಮೂಲಕ ವೆಚ್ಚದ ಮಿತಿಯನ್ನು ಹೆಚ್ಚಿಸಿಕೊಳ್ಳಬೇಕಾಗಬಹುದು. ನಿಮ್ಮ ಕಾರ್ಡ್‌ನ ಮಿತಿ ಮುಗಿದರೆ ಅದರ ಮೂಲಕ ನಿಮ್ಮ ವಹಿವಾಟುಗಳು ನಿರಾಕರಿಸಲ್ಪಡುತ್ತವೆ.

ಹೆಚ್ಚುವರಿ ಶುಲ್ಕಗಳ ಬಗ್ಗೆ ತಿಳಿದುಕೊಳ್ಳಿ. ಕ್ರೆಡಿಟ್ ಕಾರ್ಡ್‌ಗಳ ಮೂಲಕ ವಿದೇಶ ಗಳಲ್ಲಿ ವಹಿವಾಟು ನಡೆಸುವಾಗ ಕೆಲವು ಶುಲ್ಕಗಳು ಅನ್ವಯವಾಗುತ್ತವೆ. ಕೆಲವು ಕಾರ್ಡ್ ಗಳ ಮೇಲೆ ವಿದೇಶಗಳಲ್ಲಿಯ ಪ್ರತಿ ಖರೀದಿಗೂ ವಿದೇಶಿ ವಹಿವಾಟು ಶುಲ್ಕವನ್ನು ವಿಧಿಸಲಾಗುತ್ತದೆ. ಇದು ಸಾಮಾನ್ಯವಾಗಿ ವಹಿವಾಟಿನ ಮೊತ್ತದ ಶೇ.2.5ರಿಂದ ಶೇ.3.5 ರಷ್ಟಿರುತ್ತದೆ. ನಿಮ್ಮ ಕಾರ್ಡ್ ಇಂತಹ ಶುಲ್ಕಗಳಿಂದ ಮುಕ್ತವಾಗಿದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಿ. ಇಲ್ಲದಿದ್ದರೆ ನೀವು ವಿದೇಶಿ ವಹಿವಾಟು ಶುಲ್ಕರಹಿತ ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿಯನ್ನು ಸಲ್ಲಿಸಬಹುದು.

ನಿಮ್ಮ ಕ್ರೆಡಿಟ್ ಕಾರ್ಡ್‌ನ್ನು ಭಾರತೀಯ ಕರೆನ್ಸಿಯಲ್ಲಿ ನೀಡಲಾಗಿರುವುದರಿಂದ ವಿದೇಶಿ ವಿನಿಮಯ ಪರಿವರ್ತನೆ ಶುಲ್ಕವೂ ಇರುತ್ತದೆ. ವಿದೇಶಗಳಲ್ಲಿ ವಹಿವಾಟು ನಡೆಸುವಾಗ ಕರೆನ್ಸಿ ಪರಿವರ್ತನೆಯನ್ನು ಪ್ರಚಲಿತ ವಿನಿಮಯ ದರದಲ್ಲಿ ಮಾಡಲಾಗುತ್ತದೆ. ವಿದೇಶಗಳಲ್ಲಿ ಎಟಿಎಂಗಳ ಮೂಲಕ ಹಣವನ್ನು ಪಡೆಯಲು ಕ್ರೆಡಿಟ್ ಕಾರ್ಡ್ ಬಳಸಿದರೆ ನಿಮಗೆ ಆ ಮೊತ್ತದ ಮೇಲೆ ಶೇ.1ರಿಂದ ಶೇ.4ರಷ್ಟು ನಗದು ಸಾಲ ಶುಲ್ಕವನ್ನು ವಿಧಿಸಲಾಗುತ್ತದೆ.

ಕಾರ್ಡ್ ವಂಚನೆಗಳ ಬಗ್ಗೆ ಎಚ್ಚರಿಕೆಯಿರಲಿ. ಕ್ರೆಡಿಟ್ ಕಾರ್ಡ್‌ಗಳ ಕ್ಲೋನಿಂಗ್, ಅವುಗಳಲ್ಲಿಯ ಮಾಹಿತಿಗಳ ಕಳ್ಳತನ, ಮೋಸದ ವಹಿವಾಟು ಇವೆಲ್ಲ ಕೆಲವು ದೇಶಗಳಲ್ಲಿ ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಹೀಗಾಗಿ ವಿದೇಶಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸುವಾಗ ಇಂತಹ ವಂಚನೆಗಳ ಬಗ್ಗೆ ಎಚ್ಚರಿಕೆಯಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News