ಶಾಲೆಯ ಭೋಜನ ವಿರಾಮದಲ್ಲಿ ದುಡಿದೇ ಮಿಲಿಯಾಧೀಶನಾದ ಭಾರತೀಯ ಮೂಲದ ಬ್ರಿಟಿಷ್ ಯುವಕ

Update: 2017-10-17 11:07 GMT

ಶಾಲೆಗಳಲ್ಲಿ ಮಧ್ಯಾಹ್ನದ ಭೋಜನ ವಿರಾಮವೆಂದರೆ ಹೆಚ್ಚಿನ ಯುವಕಕರಿಗೆ ಹರಟೆ ಹೊಡೆಯುವ ಸಮಯ. ಆದರೆ 19ರ ಹರೆಯದ ಭಾರತೀಯ ಮೂಲದ ಲಂಡನ್ ನಿವಾಸಿ ಅಕ್ಷಯ ರುಪಾರೆಲಿಯಾ ತನ್ನ ಶಾಲೆಯ ಭೋಜನ ವಿರಾಮದ ಸಮಯವನ್ನು ತನ್ನ ವ್ಯವಹಾರಕ್ಕೆ ಬಳಸಿಕೊಂಡು ಇಂದು ಬ್ರಿಟನ್ನಿನ ಅತ್ಯಂತ ಕಿರಿಯ ಮಿಲಿಯಾಧೀಶರ ಸಾಲಿಗೆ ಸೇರಿದ್ದಾನೆ.

ಆಸ್ತಿ ಮಾರಾಟವನ್ನು ಅರೆಕಾಲಿಕ ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಂಡಿದ್ದ ಅಕ್ಷಯ ಅದಕ್ಕಾಗಿ ‘ಡೋರ್‌ಸ್ಟೆಪ್ಸ್ ಡಾಟ್ ಕೋ ಡಾಟ್ ಯುಕೆ ’ ಎಂಬ ವೆಬ್‌ಸೈಟ್ ರೂಪಿಸಿ ಕೊಂಡಿದ್ದ. ತಾನು ತರಗತಿಯಲ್ಲಿರುವಾಗ ತನ್ನ ಕಂಪನಿಯ ಸ್ವಿಚ್‌ಬೋರ್ಡ್‌ಗೆ ಬರುವ ಗ್ರಾಹಕರ ಕರೆಗಳಿಗೆ ಉತ್ತರಿಸಲು ಕಾಲ್ ಸೆಂಟರ್‌ವೊಂದರ ಸೇವೆಯನ್ನು ಪಡೆದು ಕೊಂಡಿದ್ದ. ಶಾಲೆಯ ಭೋಜನ ವಿರಾಮದ ಗಂಟೆ ಬಾರಿಸಿದ ತಕ್ಷಣ ಆತ ಗ್ರಾಹಕರಿಗೆ ಕರೆಗಳನ್ನು ಮಾಡುತ್ತಿದ್ದ. ತನ್ನ ಗೆಳೆಯರು ಆಟವಾಡುತ್ತಿದ್ದರೆ ಅಕ್ಷಯ ಮಾತ್ರ ಫೋನ್‌ನಲ್ಲಿ ತನ್ನ ಗ್ರಾಹಕರೊಂದಿಗೆ ವ್ಯವಹಾರಗಳನ್ನು ಕುದುರಿಸಲು ಈ ಸಮಯವನ್ನು ಬಳಸಿಕೊಳ್ಳು ತ್ತಿದ್ದ.

ಕೆಲವೇ ತಿಂಗಳುಗಳಲ್ಲಿ ಹೂಡಿಕೆದಾರರು ಅಕ್ಷಯನ ಕಂಪನಿಯಲ್ಲಿ ಶೇರುಗಳನ್ನು ಖರೀದಿಸಲಾರಂಭಿಸಿದ್ದರು. ಒಂದು ವರ್ಷವಾಗುವಾಗ ಕಂಪನಿಯ ವೌಲ್ಯ 12 ಮಿಲಿಯ ಪೌಂಡ್‌ಗಳಾಗಿದ್ದವು. ಅಕ್ಷಯ ಈವರೆಗೆ 100 ಮಿಲಿಯ ಪೌಂಡ್ ಮೌಲ್ಯದ ಮನೆಗಳನ್ನು ಮಾರಾಟ ಮಾಡಿದ್ದಾನೆ.

ಅಕ್ಷಯನ ವ್ಯವಹಾರ ಪರಿಕಲ್ಪನೆ ಎಷ್ಟೊಂದು ಯಶಸ್ವಿಯಾಗಿದೆಯೆಂದರೆ ಈ ವಾರ ಆತನ ಕಂಪನಿಯು ಬ್ರಿಟನ್ನಿನ 18ನೇ ಅತ್ಯಂತ ದೊಡ್ಡ ರಿಯಲ್ ಏಜೆನ್ಸಿಯ ಸ್ಥಾನವನ್ನು ಪಡೆದಿದೆ, ಅದೂ ಆರಂಭಗೊಂಡ ಕೇವಲ 16 ತಿಂಗಳುಗಳಲ್ಲಿ! ಇದೀಗ ಸ್ನೇಹಿತರು ಅಕ್ಷಯನನ್ನು ಬ್ರಿಟನ್ನಿನ ಬೃಹತ್ ಉದ್ಯಮಿ ಬ್ಯಾರನ್ ಶುಗರ್‌ಗೆ ಹೋಲಿಸಿ ‘ಅಲನ್ ಶುಗರ್’ ಎಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದಾರೆ.

ತನ್ನ ವ್ಯವಹಾರವನ್ನು ನಡೆಸಲು ಅಕ್ಷಯ್ ತನ್ನ ಬಂಧುಗಳಿಂದ 7,000 ಪೌಂಡ್ ಸಾಲವನ್ನು ಪಡೆದುಕೊಂಡಿದ್ದ. ಈಗಾಗಲೇ ಆತನ ಕೈಕೆಳಗೆ 12 ಜನರು ದುಡಿಯುತ್ತಿದ್ದು, ಶೇರುಗಳಿಗಾಗಿ ಹೂಡಿಕೆದಾರರು ಈಗಾಗಲೇ ಐದು ಲಕ್ಷ ಪೌಂಡ್‌ಗಳನ್ನು ನೀಡಿರುವು ದರಿಂದ ತನ್ನ ಸಿಬ್ಬಂದಿಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಲು ಸಜ್ಜಾಗಿದ್ದಾನೆ.

 ತನ್ನ ಕಂಪನಿಯ ಶೇರುಗಳ ಬಿಡುಗಡೆಯ ಮೂಲಕ ಐದು ಮಿಲಿಯ ಪೌಂಡ್‌ಗಳನ್ನು ಸಂಗ್ರಹಿಸಲು ಅಕ್ಷಯ್ ಮುಂದಾಗಿದ್ದು, ಬಿಟನ್‌ನಾದ್ಯಂತ ತನ್ನ ಏಜೆಂಟ್‌ರ ಜಾಲವನ್ನು ವಿಸ್ತರಿಸುತ್ತಿದ್ದಾನೆ.

ಆಕ್ಸ್‌ಫರ್ಡ್ ವಿವಿಯಲ್ಲಿ ಅರ್ಥಶಾಸ್ತ್ರ ಮತ್ತು ಗಣಿತ ವ್ಯಾಸಂಗದ ಅವಕಾಶ ಅಕ್ಷಯಗೆ ಸಿಕ್ಕಿತ್ತಾದರೂ ತನ್ನ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶದಿಂದ ಅದನ್ನು ಸದ್ಯಕ್ಕೆ ಮುಂದೂಡಿದ್ದಾನೆ. ತನ್ನ ವ್ಯವಹಾರದಲ್ಲಿಯ ಲಾಭದಿಂದ ಸ್ವತಃ ಮಾಸಿಕ 500 ಪೌಂಡ್ ಗಳನ್ನು ಸಂಬಳವಾಗಿ ಪಡೆದುಕೊಳ್ಳುತ್ತಿದ್ದ ಅಕ್ಷಯ ಇತ್ತೀಚಿಗೆ ಅದನ್ನು 1,000 ಪೌಂಡ್‌ಗಳಿಗೆ ಹೆಚ್ಚಿಸಿಕೊಂಡಿದ್ದಾನೆ ಮತ್ತು ತನ್ನ ಮೊದಲ ಕಾರನ್ನು ಖರೀದಿಸಲು ಅದರಲ್ಲೇ ಉಳಿತಾಯ ಮಾಡುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News