ವಾದ್ರಾಗೆ ವಿಮಾನ ಟಿಕೇಟು ಕಾಯ್ದಿರಿಸಿದ ವಿವಾದ: ಕಾಂಗ್ರೆಸ್ ಮೌನಕ್ಕೆ ಬಿಜೆಪಿ ಟೀಕೆ

Update: 2017-10-17 13:18 GMT

ಹೊಸದಿಲ್ಲಿ, ಅ.17: ತಲೆಮರೆಸಿಕೊಂಡಿರುವ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ಅಳಿಯ ರಾಬರ್ಟ್ ವಾದ್ರಾಗೆ ವಿಮಾನ ಟಿಕೇಟು ಕಾಯ್ದಿರಿಸಿದ ವರದಿ ಪ್ರಸಾರವಾದ ಬೆನ್ನಿಗೇ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮಾಡಿರುವ ಬಿಜೆಪಿ, ಈ ವಿಷಯದ ಬಗ್ಗೆ ಕಾಂಗ್ರೆಸ್ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದೆ.

 ಕಾಂಗ್ರೆಸ್‌ನ ಹಿರಿಯ ನಾಯಕರು ವಾದ್ರಾ ವಿಷಯದ ಬಗ್ಗೆ ಮೌನವಾಗಿರುವುದೇಕೆ. ರಾಬರ್ಟ್ ವಾದ್ರಾ ಹಾಗೂ ಸಂಜಯ್ ಭಂಡಾರಿ ನಡುವಿನ ಸಂಬಂಧದ ಕುರಿತು ಅವರು ಉತ್ತರಿಸಬೇಕಿದೆ ಎಂದು ಹಿರಿಯ ಬಿಜೆಪಿ ಮುಖಂಡೆ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದರು. ಈ ವಿಷಯದಲ್ಲಿ ಕಾಂಗ್ರೆಸ್ ಸಹಭಾಗಿಯೇ ಎಂಬ ಪ್ರಶ್ನೆ ಮೂಡಿದೆ. ವಿಷಯ ತಿಳಿದಿದ್ದೂ ಈ ಬಗ್ಗೆ ಮೌನಧೋರಣೆ ತಳೆದು ಪ್ರಕರಣವನ್ನು ಮರೆಮಾಚಲು ಅವರು ಪ್ರಯತ್ನಿಸಿದ್ದಾರೆಯೇ. ಕಾಂಗ್ರೆಸ್ ಮುಖಂಡರ ಮೌನವನ್ನು ಸಮ್ಮತಿ ಎಂದು ಅಥೈಸಬಹುದೇ ಎಂದವರು ಪ್ರಶ್ನಿಸಿದರು.

 2012ರ ಎಪ್ರಿಲ್‌ನಲ್ಲಿ ದಿಲ್ಲಿ ಮೂಲದ ಟ್ರಾವೆಲ್ ಏಜೆಂಟ್ ಒಬ್ಬರು ರಾಬರ್ಟ್ ವಾದ್ರಾ ಹೆಸರಲ್ಲಿ ಎರಡು ವಿಮಾನದ ಟಿಕೆಟನ್ನು ಮುಂಗಡ ಕಾಯ್ದಿರಿಸಿದ್ದು ಇದರ ಮೊತ್ತವನ್ನು ವಿವಾದಾಸ್ಪದ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿ ಪಾವತಿಸಿದ್ದ ಎಂದು ಸುದ್ದಿಸಂಸ್ಥೆಯೊಂದು ಸೋಮವಾರ ವರದಿ ಮಾಡಿತ್ತು. ಇದರಲ್ಲಿ ಒಂದು ಟಿಕೆಟ್ ಸ್ವಿಝರ್ಲಾಂಡಿನ ಪ್ರಮುಖ ವಾಣಿಜ್ಯ ನಗರ ಝೂರಿಚ್‌ಗೆ ಪ್ರಯಾಣಿಸಲು ಕಾಯ್ದಿರಿಸಲಾಗಿತ್ತು. ಸ್ವಿಸ್ ಸಂಸ್ಥೆ ‘ಪಿಲಾಟಸ್’ನೊಂದಿಗೆ ಜೆಟ್ ತರಬೇತಿ ವಿಮಾನ ಖರೀದಿಸಲು ನಡೆಸಲಾಗಿದ್ದ ಒಪ್ಪಂದದಲ್ಲಿ ಸಂಜಯ್ ಭಂಡಾರಿ ನಿರ್ವಹಿಸಿದ್ದ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News